ಮಹಾ ಥಾಯ್

ಇವಳ ಮೊಗದಲ್ಲಿ ವಿಶ್ವವನ್ನೇ ಗೆದ್ದುಬಿಡುವೆನೆಂಬ ವಿಶ್ವಾಸ. ಅದು ಬರೀ ವಿಶ್ವಾಸವಲ್ಲ. ಸತ್ಯ. ಹೌದು. ಯಾರೂ ಊಹಿಸಿರಲಿಲ್ಲ... ಈ ಹುಡುಗಿ ಒಂದು ದಿನ ವಿಶ್ವವನ್ನೇ ಜಯಿಸಿ ಬರುತ್ತಾಳೆ ಎಂದು. ಸದಾ ಸ್ಫೂರ್ತಿಯ ಚಿಲುಮೆಯಂತಿರುವ ಈಕೆ ಜಗತ್ತಿನ ಅತಿ ಚಿಕ್ಕ ವಯಸ್ಸಿನ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್. ವಿಶ್ವ ಬ್ಯಾಡ್ಮಿಂಟನ್ನ ಆಗಸದಲ್ಲಿ ಮಿನುಗುತ್ತಿರುವ ಹೊಸ ನಕ್ಷತ್ರ ರ್ಯಾಚನಾಕ್. ಥಾಯ್ಲೆಂಡಿನ ಪ್ರತಿಭೆ. ಬ್ಯಾಡ್ಮಿಂಟನ್ನ ವಿಶ್ವ ಕಿರೀಟ ಗೆದ್ದು ಆ ದೇಶಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾಳೆ.
ಬಡತನದಲ್ಲಿ ಅರಳಿದಳು...
ಈಕೆಯ ಹೆಸರು ರ್ಯಾಚನಾಕ್ ಇಂಟಾನನ್. ವಯಸ್ಸು 18. ಅದು 1998ನೇ ಇಸ್ವಿ. ತಂದೆ-ತಾಯಿ-ಮಗಳು-ಮತ್ತು ಮಗ... ಹೀಗೆ ಚಿಕ್ಕ ಕುಟುಂಬವಾಗಿದ್ದರೂ, ಬದುಕು ಮಾತ್ರ ಚೊಕ್ಕವಾಗಿರಲಿಲ್ಲ. ಮನೆಯಲ್ಲಿ ಬಡತನ. ಇದರಿಂದಾಗಿ, ಉತ್ತಮ ಉದ್ಯೋಗಕ್ಕಾಗಿ, ಜೀವನವನ್ನು ಸುಧಾರಿಸಿಕೊಳ್ಳಲಿಕ್ಕಾಗಿ ಊರೂರು ಅಲೆದಾಟ ಸಾಮಾನ್ಯವೇ ಆಗಿತ್ತು. ಕೊನೆಗೆ ಬ್ಯಾಂಕಾಕ್ಗೆ ಬಂದು ನೆಲೆಸಿತು ಈ ಕುಟುಂಬ. ಬಂಥೋಂಕ್ಯೂರ್ಡ್ ಎಂಬ ಬಿಸ್ಕತ್ತಿನ ಫ್ಯಾಕ್ಟರಿಯಲ್ಲಿ ಕೂಲಿಯಾಳುಗಳಾಗಿ ಕೆಲಸಕ್ಕೆ ಸೇರಿಕೊಂಡರು ಈ ದಂಪತಿ.
ದಾರಿ ತೋರಿದ ಬಿಸ್ಕೀಟ್
ಆಗ ರ್ಯಾಚನಾಕ್ಗೆ ಕೇವಲ 3 ವರ್ಷ. ಅಲ್ಲಿ, ಬಿಸ್ಕತ್ತಿನ ಫ್ಯಾಕ್ಟರಿಯಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಈ ಪುಟ್ಟ ಹುಡುಗಿಯ ಬಗ್ಗೆ ಎಲ್ಲರಿಗೂ ಭಯ. ಆ ಬಿಸಿ ವಾತಾವರಣದಲ್ಲಿ ಪುಟ್ಟ ಹುಡುಗಿ ಓಡಾಡುವುದು ಆಕೆಗೆ ಕ್ಷೇಮವಲ್ಲ ಎಂದು ಅಲ್ಲೇ ಪಕ್ಕದಲ್ಲಿನ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಆಡಲು ಬಿಡುತ್ತಿದ್ದರು. ಇಲ್ಲಿಂದ ಶುರುವಾಯಿತು... ರ್ಯಾಚನಾಕ್ಗೆ ಬ್ಯಾಡ್ಮಿಂಟನ್ನಿನ ನಂಟು. ಅಲ್ಲಿ ಅಧಿಕಾರಿಗಳು, ಅವರ ಮಕ್ಕಳು ಆಡುತ್ತಿದ್ದ ಬ್ಯಾಡ್ಮಿಂಟನ್ ನೋಡುತ್ತಾ ಆಟವನ್ನು ಕರಗತ ಮಾಡಿಕೊಂಡಳು. ಸ್ವಲ್ಪ ದೊಡ್ಡವಳಾದ ಮೇಲೆ ಪಕ್ವ ಪಟುವಾದಳು. ಅವಕಾಶ ಸಿಕ್ಕಾಗಲೆಲ್ಲಾ ಫ್ಯಾಕ್ಟರಿಯ ಅಧಿಕಾರಿಗಳ ಹಾಗೂ ಅವರ ಮಕ್ಕಳ ಜೊತೆ ಆಡುತ್ತಿದ್ದ ರ್ಯಾಚನಾಕ್ 13-14ನೇ ವಯಸ್ಸಿನ ಹೊತ್ತಿಗೆ ರಾಕೆಟ್ ಬೀಸುವುದರಲ್ಲಿ ನಿಪುಣಳಾಗಿದ್ದಳು.
ಈ ಕಾರಣದಿಂದಲೇ ಆಕೆ ಅಲ್ಲಿ ಫ್ಯಾಕ್ಟರಿಯ ಟೌನ್ಶಿಪ್ನಲ್ಲಿ ಹೆಸರು ಮಾಡಿದಳು. ಆಕೆಯ ಪ್ರತಿಭೆಯನ್ನು ಗುರುತಿಸಿದ್ದ ಫ್ಯಾಕ್ಟರಿಯ ಅಧಿಕಾರಿ ವರ್ಗ, ನಗರಮಟ್ಟದಲ್ಲಿ ನಡೆಯುತ್ತಿದ್ದ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ರ್ಯಾಚನಾಕ್ ತಮ್ಮ ಫ್ಯಾಕ್ಟರಿಯನ್ನು ಪ್ರತಿನಿಧಿಸುವ ಅವಕಾಶ ನೀಡಿದರು. ಇದು ರ್ಯಾಚನಾಕ್ ಜೀವನದ ದಿಕ್ಕನ್ನು ಬದಲಿಸಿತು. ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳಲಿ, ಅಲ್ಲಿ ಆಕೆಗೊಂದು ಪ್ರಶಸ್ತಿಯೋ, ಪದಕವೋ ಸಿಕ್ಕೇ ಸಿಗುತ್ತಿತ್ತು. ಪಾಲಕರ ಪ್ರೋತ್ಸಾಹವೂ ಸಿಕ್ಕಿತು. ಕೆಲವರು ನೆರವಿನ ಹಸ್ತ ಚಾಚಿದರು. ಆಕೆ ಕೋಚಿಂಗ್ ತೆಗೆದುಕೊಂಡು ಬ್ಯಾಡ್ಮಿಂಟನ್ನಲ್ಲಿ ನಿಧಾನವಾಗಿ ಪ್ರಬುದ್ಧತೆ ಪಡೆಯುತ್ತಾ ಸಾಗಿದಳು. ಆದರೂ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ಗೆದ್ದ ನಗದನ್ನೆಲ್ಲ ತಾಯಿಗೆ ತಂದುಕೊಟ್ಟಳು ಈಕೆ. ಈ ಕಾರಣಕ್ಕಾಗಿಯೇ ಬ್ಯಾಡ್ಮಿಂಟನ್ನನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಳು. ಅಂತೂ ಇಂತೂ ಮನೆಯಲ್ಲಿನ ತಾಪತ್ರಯಗಳೇ ಈಕೆಯನ್ನು ಕೊನೆಗೊಂದು ದಿನ ವಿಶ್ವಮಟ್ಟಕ್ಕೆ ಬೆಳೆಯುವಂತೆ ಮಾಡಿತು.
ಕಿರಿಯ ಸಾಧಕಿ
2009ರಲ್ಲಿ ತನ್ನ 14ನೇ ವಯಸ್ಸಿನಲ್ಲಿ, ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಗೆಲ್ಲುವ ಮೂಲಕ ಹೆಸರು ಮಾಡಿದ ಈಕೆ, 2010ರಲ್ಲಿ ಮತ್ತೆ ಅದೇ ಚಾಂಪಿಯನ್ಶಿಪ್ ಅನ್ನು ಬಾಚಿಕೊಂಡಳು. 2011ರಲ್ಲಿ ಮತ್ತೆ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್. 16ನೇ ವಯಸ್ಸಿಗೇ ಶ್ರೇಷ್ಠ ಮಹಿಳಾ ಅಥ್ಲೀಟ್ ಎಂಬ ಗೌರವ ಸಿಕ್ಕಿತು.
ವಿಶ್ವ ಗೆದ್ದರೂ ಬದುಕು ಬದಲಾಗಿಲ್ಲ
ಈಗ ವಿಶ್ವ ಚಾಂಪಿಯನ್ ಆದ ಮೇಲೆ ಈಕೆಯ ಜೀವನವೇನಾದರೂ ಬದಲಾಗಿದೆಯಾ ಅಂತ ಕೇಳಿದರೆ, ಇಲ್ಲ ಎನ್ನುತ್ತಾಳೆ. ಈಗವಳಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಮನೆಯಿಂದ ಹೊರಹೋದರೆ, ಆಕೆಯ ಆಟೋಗ್ರಾಫ್ಗಾಗಿ, ಆಕೆಯೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕಾಗಿ ಮುಗಿಬೀಳುತ್ತಾರೆ. ಅಷ್ಟು ಬಿಟ್ಟರೆ, ಮತ್ತೇನೂ ಹೆಚ್ಚಿನ ಬದಲಾವಣೆ ಇಲ್ಲ ಎನ್ನುತ್ತಾಳೆ ಆಕೆ. ವಿಶ್ವ ಚಾಂಪಿಯನ್ ಆದ ಥಾಯ್ಲೆಂಡ್ನ ಮೊದಲ ಕ್ರೀಡಾಳು ಈಕೆ. ಪ್ರಧಾನಿ ಹಾಗೂ ಅವರ ಕಚೇರಿಯ ಸಿಬ್ಬಂದಿ ಈಕೆಯನ್ನು ಕರೆಸಿ ಸನ್ಮಾನಿಸಿದರು. ಆ ವೇಳೆಯಲ್ಲಿ ಪ್ರಧಾನಿಯ ಕುರ್ಚಿಯಲ್ಲಿ ಕೂರುವ ಅವಕಾಶವೂ ಈಕೆಗೆ ಸಿಕ್ಕಿತ್ತು.
ಭಲೇ, ರ್ಯಾಚನಾಕ್!
ಐಬಿಎಲ್ಗೆ ಆಬ್ಸೆಂಟ್!
ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿಯರ ಬಗ್ಗೆ ರ್ಯಾಚನಾಕ್ಗೆ ಅಪಾರ ಗೌರವ. ಇತ್ತೀಚೆಗೆ, ಥಾಯ್ಲೆಂಡ್ನ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಿಕೊಂಡಳು. 'ಭಾರತದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ವಿಶ್ವದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ್ತಿಯರು' ಎಂದಳು. ಸಿಂಧು ವಿರುದ್ಧ ವಿಶ್ವಬ್ಯಾಡ್ಮಿಂಟನ್ ಸೆಮಿಫೈನಲ್ನಲ್ಲಿ ಗೆಲುವು ಕಂಡಿದ್ದು ಹೆಚ್ಚು ಖುಷಿಕೊಟ್ಟಿತ್ತಂತೆ. ಆದರೆ, ಈ ಬಾರಿಯ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ (ಐಬಿಎಲ್) ರ್ಯಾಚನಾಕ್ ಭಾಗವಹಿಸಿಲ್ಲ. ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಬೆನ್ನಲ್ಲೇ ಈ ಐಬಿಎಲ್ ಶುರುವಾಗಿದ್ದರಿಂದ ಆಕೆ ಕೊಂಚ ವಿಶ್ರಾಂತಿ ಬಯಸಿದ್ದಾಳೆ.
- ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


