ಕ್ರೀಡೆ

ಮರೆಯದ ಆಟ!

ಮರೆಯದ ಆಟ!
Published On :

1. ದೇವರ ವಿದಾಯ
ಸುಮಾರು ಕಾಲು ಶತಮಾನ ಕ್ರಿಕೆಟ್ ದಿಗ್ಗಜನಾಗಿ ಮೆರೆದ ಭಾರತದ ಮೇರು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬ್ಯಾಟು ಬದಿಗಿಟ್ಟಿದ್ದು ಒಂದು ಸಾರ್ವಕಾಲಿಕ ನೋವು. ಅಂಥ ದುರಂತ ಪರ್ವ ಯಾವಾಗ ಬರುತ್ತದೆ ಎಂಬ ಆತಂಕ ಎಲ್ಲರೆದೆಯಲ್ಲೂ ಇತ್ತು. ಆದರೆ, ಅದು '2013'ರಲ್ಲೇ ಘಟಿಸಿತು. ಭೂಮಂಡಲದ ಸಮಸ್ತ ಕ್ರಿಕೆಟ್ ಪ್ರೇಮಿಗಳಿಗೆ ಇದು ದೊಡ್ಡ ಕಹಿಸುದ್ದಿ. ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ವೀರ, ವೆಸ್ಟ್‌ಇಂಡೀಸ್ ವಿರುದ್ಧದ ಮುಂಬೈ ಟೆಸ್ಟ್‌ನಲ್ಲಿ 200ನೇ ಪಂದ್ಯವನ್ನಾಡಿ ಪರಮನೆಂಟಾಗಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ. ವಿದಾಯದ ಸಂದರ್ಭದಲ್ಲಿ ಸಚಿನ್ ಆಡಿದ ಮಾತುಗಳೂ ಎಲ್ಲ ಕಣ್ಣನ್ನು ನೆನೆಸಿವೆ. ಅಂಥ ದಿನವನ್ನು ಮರೆಯಲಾದೀತೆ?

2. ಮರ್ರೆಯಲಾಗದ ವಿಜಯ
ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದ ಆ್ಯಂಡಿ ಮರ್ರೆ 77 ವರ್ಷಗಳ ನಂತರ ಇಂಗ್ಲೆಂಡ್‌ಗೆ ಈ ಗೌರವ ತಂದುಕೊಟ್ಟರು. ಇದೂ ದೊಡ್ಡ ಐತಿಹಾಸಿಕವೇ. ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೋವಾಕ್ ಜೋಕೊವಿಚ್‌ರನ್ನು ಸೋಲಿಸಿದ ಮರ್ರೆ ಟ್ರೋಫಿಗೆ ಮುತ್ತಿಕ್ಕಿದಾಗ ವಿಶ್ವದೆಲ್ಲೆಡೆಯಿಂದ ಚಪ್ಪಾಳೆ ಕೇಳಿಬಂತು. 'ಫೈನಲ್ ಪಂದ್ಯದಲ್ಲಿ ಸೋತಿದ್ದರೆ, ಯಾವ ರೀತಿಯ ಅಭಿಪ್ರಾಯಗಳು ಬರುತ್ತವೆ ಮತ್ತು ಗೆದ್ದ ನಂತರ ಈಗ ಯಾವ ರೀತಿಯ ಪ್ರತಿಕ್ರಿಯೆಗಳು ಬಂದಿವೆ ಎಂಬುದು ನನಗೆ ಮೊದಲೇ ಗೊತ್ತಿತ್ತು' ಎಂದರು ಮರ್ರೆ.

3. ತಪ್ಪೊಪ್ಪಿಕೊಂಡ ಆರ್ಮ್‌ಸ್ಟ್ರಾಂಗ್
ನಿರಂತರವಾಗಿ ಉದ್ದೀಪನ ಮದ್ದು ಸೇವಿಸಿದ ಆರೋಪವನ್ನು ತಳ್ಳಿಹಾಕುತ್ತಾ ಬಂದಿದ್ದ ಅಮೆರಿಕದ ಸೈಕ್ಲಿಂಗ್ ತಾರೆ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್, ವೃತ್ತಿ ಜೀವನದುದ್ದಕ್ಕೂ ಉದ್ದೀಪನ ಮದ್ದು ಸೇವಿಸಿರುವ ಕುರಿತು ತಪ್ಪೊಪ್ಪಿಕೊಂಡಿದ್ದು 2013ರ ಆರಂಭದಲ್ಲಿ. ಇದೂ ದೊಡ್ಡ ಶಾಕ್. 'ಉದ್ದೀಪನ ಔಷಧಿ ತೆಗೆದುಕೊಳ್ಳದೆ ಸೆವೆನ್ ಟೂರ್ ದಿ ಫ್ರಾನ್ಸ್ ಪ್ರಶಸ್ತಿಯನ್ನು ಗೆಲ್ಲುವುದು ಸಾಧ್ಯವೇ ಇರಲಿಲ್ಲ. ಉದ್ದೀಪನ ಮದ್ದು ಸೇವಿಸಿದ್ದು ನಿಜ' ಎಂದು ಜನವರಿಯಲ್ಲಿ ನೀಡಿದ ಸಂದರ್ಶನದಲ್ಲಿ ಆರ್ಮ್‌ಸ್ಟ್ರಾಂಗ್ ಒಪ್ಪಿಕೊಂಡಿದ್ದರು.

4. ಪ್ರೇಯಸಿ ಕೊಂದ ಪಿಸ್ಟೋರಿಯಸ್
ಕ್ರೀಡಾಲೋಕವೇ ಬೆಚ್ಚಿಬೀಳುವಂಥ ಘಟನೆಯನ್ನು ದಕ್ಷಿಣ ಆಫ್ರಿಕದ ಒಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಹೊರಗೆಡವಿದ್ದೂ ಇದೇ ವರ್ಷ. ಒಂದು ಕಾಲು ಕಳೆದುಕೊಂಡರೂ, ಒಲಿಂಪಿಕ್ಸ್‌ನಲ್ಲಿ ಸಹಜ ಅಥ್ಲೀಟ್‌ಗಳೊಂದಿಗೆ ಭಾಗವಹಿಸಿದ್ದ ಪಿಸ್ಟೋರಿಯಸ್ ತನ್ನ ಪ್ರೇಯಸಿ ರೀವಾ ಸ್ಟೀಂಕಾಂಪ್‌ರನ್ನು ವ್ಯಾಲೆಂಟೇನ್ಸ್ ಡೇ ದಿನವೇ ಗುಂಡಿಟ್ಟು ಹತ್ಯೆ ಮಾಡಿದ್ದರು. 'ನನ್ನ ಪ್ರೇಯಸಿಯ ಹತ್ಯೆಯ ಘಟನೆಯಿಂದ ನಾನು ಸಂಪೂರ್ಣವಾಗಿ ಅವಮಾನಿತನಾಗಿದ್ದೇನೆ. ನನ್ನನ್ನು ನಂಬಿದ್ದ ರೀವಾ ಕಳೆದುಕೊಂಡಿದ್ದು ನಷ್ಟವೇ ಸರಿ' ಎಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಸಂದರ್ಭ ಪಿಸ್ಟೋರಿಯಸ್ ಹೇಳಿಕೊಂಡರು.

5. ಮಿಂಚಿದ ಲಿಸಿಕಿ
ಹೆಚ್ಚು ಜನಪ್ರಿಯತೆಯಿಲ್ಲದ ಜರ್ಮನಿಯ ಸಬಿನೆ ಲಿಸಿಕಿ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡು ಅಚ್ಚರಿ ಮೂಡಿಸಿದರು. ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮತ್ತು ಹಾಲಿ ರನ್ನರ್ ಅಪ್ ಆ್ಯಗ್ನಿಸ್ಕಾ ರಾಂಡ್ವಾಂಸ್ಕಾರನ್ನು ಪರಾಭವಗೊಳಿಸಿದ್ದು ಈ ಅಚ್ಚರಿಗೆ ಕಾರಣ. ಆದರೆ, ಪ್ರಶಸ್ತಿ ಗೆದ್ದು ಕೆಲವೇ ದಿನಗಳಲ್ಲಿ ಗಾಯದ ಕಾರಣ ಟೆನಿಸ್‌ಗೆ ವಿದಾಯ ಹೇಳಿದ್ದ ಲಿಸಿಕಿ ಮತ್ತೊಂದು ಅಚ್ಚರಿಗೂ ಅವಕಾಶ ಕೊಟ್ಟರು.

6. ಫರ್ಗ್ಯುಸನ್ ನಿವೃತ್ತಿ
ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೆಜರ್ ಅಲೆಕ್ಸ್ ಫರ್ಗ್ಯುಸನ್ ನಿವೃತ್ತಿ ಘೋಷಣೆ ಹೊಸ ಸುದ್ದಿಯಾಗಿರಲಿಲ್ಲ. ಆದರೆ, ಫುಟ್ಬಾಲ್ ತಂಡವೊಂದರ ಮ್ಯಾನೆಜರ್ ಆಗಿ ಅವರು ಮಾಡಿದ ಅದ್ಭುತ ಸಾಧನೆ ಇಂಗ್ಲೆಂಡ್ ಫುಟ್ಬಾಲ್ ವಲಯವನ್ನು ಸ್ತಬ್ಧಗೊಳಿಸಿತ್ತು. 26 ವರ್ಷಗಳ ದೀರ್ಘ ಕಾಲ ಮ್ಯಾಂಚೆಸ್ಟರ್ ತಂಡಕ್ಕೆ ಫರ್ಗ್ಯುಸನ್ ಸೇವೆ ಸಲ್ಲಿಸಿದ್ದರು. ಫರ್ಗ್ಯುಸನ್ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ತಂಡ 1,500 ಪಂದ್ಯಗಳನ್ನಾಡಿತ್ತು. ಉತ್ತರ ಇಂಗ್ಲೆಂಡ್ ಕ್ಲಬ್‌ಗಳಲ್ಲಿ 13 ಲೀಗ್ ಪ್ರಶಸ್ತಿ, 2 ಯೂರೋಪ್ ಕಪ್, ಐದು ಎಫ್‌ಎ ಕಪ್ ಹಾಗೂ 4 ಲೀಗ್ ಕಪ್‌ಗಳನ್ನು ಗೆದ್ದುಕೊಂಡಿತ್ತು.

7. ಮಾರಿಯಾನೋ ನಿವೃತ್ತಿ
ಅಮೆರಿಕದ ಮಹಾನ್ ಬೇಸ್‌ಬಾಲ್ ತಾರೆ ಮಾರಿಯಾನೋ ರಿವೇರಾ 19 ವರ್ಷ ಪ್ರಮುಖ ಲೀಗ್‌ಗಳಲ್ಲಿ ಅಮೋಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಅಮೆರಿಕನ್ನರಿಗಷ್ಟೇ ಅಲ್ಲ, ಜಗತ್ತಿನ ಹಲವರಿಗೆ ದುಃಖದ ಸಂಗತಿ. ಅಮೆರಿಕದ ಪನಾಮಾದಲ್ಲಿ ಕಡುಬಡತನದಲ್ಲಿ ಬೆಳೆದು ಬಂದಿದ್ದ ರಿವೇರಾ ಬೇಸ್‌ಬಾಲ್‌ನ ಮಹಾನ್ ತಾರೆಯಾಗಿ ಮಿನುಗಿದ್ದು ಒಂದು ಸಾಹಸಗಾಥೆಯೇ ಸರಿ.

8. ತವರನ್ನು ರಂಜಿಸಿದ್ದ ಎಲೆನಾ
ಮಾಸ್ಕೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪೋಲ್ ವಾಲ್ಟ್ ವಿಭಾಗದಲ್ಲಿ 3ನೇ ಬಾರಿಗೆ ಪ್ರಶಸ್ತಿ ಗೆದ್ದ ಎಲೆನಾ ಇಸಿನ್‌ಬಯೆವಾ, ಅವರು ತವರಿನ ಅಭಿಮಾನಿಗಳನ್ನು ರಂಜಿಸಿದ್ದರು. ಎರಡು ಬಾರಿ ಒಲಿಂಪಿಯನ್ ಚಾಂಪಿಯನ್ ಎನಿಸಿದ್ದ ಎಲೆನಾ 4.89 ಮೀಟರ್ ಎತ್ತರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದರು. 'ನಾನು ಪೊಲ್ ವಾಲ್ಟ್ ರಾಣಿ. ಪ್ರೇಕ್ಷಕರು ನನ್ನವರು' ಎಂದು ಈ ಸಂದರ್ಭದಲ್ಲಿ 31 ವರ್ಷದ ಎಲೆನಾ ತಿಳಿಸಿದ್ದರು.

9. ಹೆಚ್ಚು ಮೊತ್ತಕ್ಕೆ ಬೇಲ್ ಸೇಲ್
ಇಂಗ್ಲೆಂಡ್ ಫುಟ್ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ರಿಯಲ್ ಮ್ಯಾಡ್ರಿಡ್ ತಂಡ ಗಾರೆತ್ ಬೇಲ್‌ರನ್ನು ಖರೀದಿಸಿತು. ಇದು ವಿಶ್ವ ಫುಟ್ಬಾಲ್‌ನಲ್ಲೇ ದೊಡ್ಡ ಮೊತ್ತದ ದಾಖಲೆ. 100 ಮಿಲಿಯನ್ ಯುರೋಗಳಿಗೆ ಖರೀದಿಯಾಗಿದ್ದ ಬೇಲ್ ಹೊಸ ದಾಖಲೆ ಬರೆದರು. 2009ರಲ್ಲಿ ಅದೇ ತಂಡ ಕ್ರಿಸ್ಟಿಯಾನೋ ರೂನಾಲ್ಡೋ ಅವರಿಗೆ ನೀಡಿದ್ದ 94 ಮಿಲಿಯನ್ ಯುರೋ ದಾಖಲೆ ಮೊತ್ತವನ್ನೂ ಅಳಿಸಿ ಹಾಕಿತ್ತು.

10. ಕುಸ್ತಿ ಒಲಿಂಪಿಕ್ಸ್‌ನಿಂದ ನಾಪತ್ತೆ
ಪ್ರಾಚೀನ ಕ್ರೀಡೆಗಳಲ್ಲೊಂದಾದ ಕುಸ್ತಿಯನ್ನು ಒಲಿಂಪಿಕ್ಸ್‌ನಿಂದ ಕೈಬಿಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಘೋಷಿಸಿದ್ದು, ವಿಶ್ವ ಕುಸ್ತಿಯಲ್ಲಿ ತೀವ್ರ ಕಳವಳ ಉಂಟುಮಾಡಿತು. ಆದರೆ, ನಂತರ ಸ್ಕ್ವಾಷ್‌ನೊಂದಿಗೆ ನಡೆದ ಸ್ಪರ್ಧೆಯಲ್ಲಿ ಜಯ ಕಾಣುವಲ್ಲಿ ಯಶಸ್ವಿಯಾದ ಕುಸ್ತಿ ಮತ್ತೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.