ಕ್ರೀಡೆ

ಸಚಿನ್ ಶತಕದಲ್ಲೂ ಮುಂಬೈಗೆ ಹಿನ್ನಡೆ

ಸಚಿನ್ ಶತಕದಲ್ಲೂ ಮುಂಬೈಗೆ ಹಿನ್ನಡೆ
Published On :

ಮುಂಬೈ: ಸಚಿನ್ ತೆಂಡೂಲ್ಕರ್ ಅವರ ಅಜೇಯ ಶತಕದಿಂದಾಗಿ ಆತಿಥೇಯ ಮುಂಬೈ ತಂಡ, ಇತರೆ ಭಾರತ ತಂಡದ ವಿರುದ್ಧ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿತು. ಹರ್ಭಜನ್ ಸಿಂಗ್ ಪಡೆ ನೀಡಿದ್ದ 526 ರನ್‌ಗಳ ಮೊತ್ತವನ್ನು ದಾಟಲು ಮುಂಬೈಗೆ ಸಾಧ್ಯವಾಗಲಿಲ್ಲವಾದರೂ, ಪಂದ್ಯದ ಮೂರನೇ ದಿನವಾದ ಶುಕ್ರವಾರ ದಿಟ್ಟತನದ ಹೋರಾಟವನ್ನು ಅಭಿಷೇಕ್ ನಾಯರ್ ಬಳಗ ನೀಡಿತು.
ಮೊದಲ ಇನಿಂಗ್ಸ್‌ನಲ್ಲಿ ಇತರೆ ಭಾರತ ನೀಡಿದ್ದ 526 ರನ್‌ಗಳ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದಿದ್ದ ಮುಂಬೈ, ಗುರುವಾರ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತ್ತು. ಶುಕ್ರವಾರ, ಈ ಮೊತ್ತಕ್ಕೆ 254 ರನ್ ಪೇರಿಸುವಷ್ಟರಲ್ಲಿ ಮುಂಬೈ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.  ಮುಂಬೈ ಇನಿಂಗ್ಸ್‌ನ ನಂತರ, ತನ್ನ ಇನಿಂಗ್ಸ್ ಆರಂಭಿಸಿದ ಇತರೆ ಭಾರತ, ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಮುರಳಿ ವಿಜಯ್ (18) ಹಾಗೂ ಶ್ರೀಶಾಂತ್ (7) ಕ್ರೀಸ್‌ನಲ್ಲಿದ್ದಾರೆ.
ಮಿಂಚಿದ ಸಚಿನ್: ಶುಕ್ರವಾರದ ದಿನದಾಟದಲ್ಲಿ ಸಚಿನ್ ಅಕ್ಷರಶಃ ಮಿಂಚಿದರು. ಶುಕ್ರವಾರ ಇನಿಂಗ್ಸ್ ಆರಂಭಿಸಿದ್ದ ಅಜಿಂಕ್ಯ ರಹಾನೆ ಹಾಗೂ ಠಾಕೂರ್ ಅವರ ಜೋಡಿ, ಇನಿಂಗ್ಸ್‌ಗೆ ಕೇವಲ 15 ರನ್ ಸೇರಿಸುವಷ್ಟರಲ್ಲಿ ಠಾಕೂರ್ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್‌ಗೆ ಕಾಲಿಟ್ಟ ಸಚಿನ್ ತೆಂಡೂಲ್ಕರ್, ಎದುರಾಳಿ ಬೌಲರ್‌ಗಳ ಬೆವರು ಹರಿಸಿದರು. ಒಟ್ಟು 18 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 197 ಎಸೆತಗಳಲ್ಲಿ 140 ರನ್ ಗಳಿಸಿದ ಅವರು, ಇನಿಂಗ್ಸ್‌ನ ಕೊನೆಯವರೆಗೂ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ವಿರುದ್ಧ ಶೀಘ್ರದಲ್ಲೇ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೂ ಮುನ್ನ ಸಚಿನ್ ಶತಕ ಗಳಿಸುವ ಮೂಲಕ ಕಾಂಗರೂ ಪಡೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಕ್ರೀಸ್‌ನಲ್ಲಿದ್ದಷ್ಟೂ ಕಾಲ, ಇತರೆ ಭಾರತ ತಂಡದ ಬೌಲರ್‌ಗಳನ್ನು ದಂಡಿಸಿದ ಸಚಿನ್‌ಗೆ ಚವಾಣ್ ಬಿಟ್ಟರೆ ಬೇರ್ಯಾರೂ ಹೆಚ್ಚು ಸಾಥ್ ನೀಡಲಿಲ್ಲ. ವೈಯಕ್ತಿಕವಾಗಿ 49 ರನ್ ಗಳಿಸಿದ ಚವಾಣ್, ಸಚಿನ್ ಅವರೊಂದಿಗೆ 7ನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವಾಡಿದರು. ಆದರೆ, ಇನಿಂಗ್ಸ್‌ನ 100ನೇ ಓವರ್‌ನಲ್ಲಿ ಚವಾಣ್ ವಿಕೆಟ್ ಉರುಳಿದ ಮೇಲೆ ಸಚಿನ್‌ಗೆ ಕ್ರೀಸ್‌ನಲ್ಲಿ ಉತ್ತಮ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಮುಂಬೈನ ಮೊದಲ ಇನಿಂಗ್ಸ್ 409 ರನ್‌ಗಳಿಗೆ ನಿಂತಿತು.


ಸ್ಕೋರ್ ಬೋರ್ಡ್


ಇತರೆ ಭಾರತ ಪ್ರಥಮ ಇನಿಂಗ್ಸ್ 526
ಮುಂಬೈ ಪ್ರಥಮ ಇನಿಂಗ್ಸ್ 409/10 (ಗುರುವಾರ ದಿನಾಂತ್ಯಕ್ಕೆ 155/2)
ರಹಾನೆ ಎಲ್‌ಬಿಡಬ್ಲ್ಯೂ ಬಿ ಹರ್ಭಜನ್ 83, ಠಾಕುರ್ ಸಿ ತಿವಾರಿ ಬಿ ಪಾಂಡೆ 4, ತೆಂಡುಲ್ಕರ್ ಅಜೇಯ 140, ಶರ್ಮಾ ಸಿ ಓಜಾ ಬಿ ಹರ್ಭಜನ್ 0, ನಾಯರ್ ಸಿ ವಿಜಯ್ ಬಿ ಮಿಥುನ್ 1, ಚವಾಣ್ ಸಿ ಸಾಹಾ ಬಿ ಮಿಥುನ್ 49, ಕುಲ್ಕರ್ಣಿ ಸಿ ವಿಜಯ್ ಬಿ ಓಜಾ 10, ಖಾನ್ ಸಿ ಮಿಥುನ್ ಬಿ ಹರ್ಭಜನ್ 8, ದಾಬೋಲ್ಕರ್ ಎಲ್‌ಬಿಡಬ್ಲ್ಯೂ ಬಿ ಓಜಾ 0 ಇತರೆ 28
ವಿಕೆಟ್ ಪತನ: 3-161, 4-234, 5-254, 6-257, 7-360, 8-399, 9-409, 10-409.
ಬೌಲಿಂಗ್: ಶ್ರೀಶಾಂತ್ 21-3-80-1, ಪಾಂಡೆ 24-6-76-2, ಮಿಥುನ್ 21-1-73-2, ಓಜಾ 26.1-1-103-2, ಹರ್ಭಜನ್ 21-4-64-3, ತಿವಾರಿ 1-1-0-0     
ಇತರೆ ಭಾರತ ದ್ವಿತೀಯ ಇನಿಂಗ್ಸ್ 27/1
ಧವನ್ ಸಿ ನಾಯರ್ ಬಿ ಕುಲ್ಕರ್ಣಿ 0, ವಿಜಯ್ ಅಜೇಯ 18, ಶ್ರೀಶಾಂತ್ ಅಜೇಯ 7, ಇತರೆ 2; ವಿಕೆಟ್ ಪತನ: 1-0.
ಬೌಲಿಂಗ್: ಕುಲ್ಕರ್ಣಿ 3-1-10-1, ನಾಯರ್ 2-0-17-0     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.