ಕ್ರೀಡೆ

ಡ್ರಾನಲ್ಲೂ ನಗೆ ಬೀರಿದ ಬಜ್ಜಿ ಪಡೆ

Published On :

ಮುಂಬೈ: ವಾಸೀಂ ಜಾಫರ್ ಅವರ ಶತಕದ ಸಹಾಯದಿಂದ ಇತರೆ ಭಾರತ ವಿರುದ್ಧ ನಡೆಯುತ್ತಿದ್ದ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ತಂಡ, ದಿಟ್ಟತನದ ಹೋರಾಟ ತೋರಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಗೆಲುವಿಗಾಗಿ ಒಟ್ಟು 507 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದಿದ್ದ ಮುಂಬೈ ಪಂದ್ಯದ ಕೊನೆಯ ದಿನವಾದ ಭಾನುವಾರ ಮುಂಬೈ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದ್ದರೂ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಹಿನ್ನೆಲೆಯಲ್ಲಿ ಇತರೆ ಭಾರತ ತಂಡ ಪಂದ್ಯದಲ್ಲಿ ಜಯಶಾಲಿಯಾಗಿದ್ದು, ಈ ಮೂಲಕ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇದಕ್ಕೂ ಮುನ್ನ, ತನ್ನ ದ್ವಿತೀಯ ಇನಿಂಗ್ಸ್ ಮುಂದುವರೆಸಿದ್ದ ಇತರೆ ಭಾರತ, 5 ವಿಕೆಟ್ ನಷ್ಟಕ್ಕೆ 389 ರನ್ ಪೇರಿಸಿದ ನಂತರ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಶನಿವಾರ ದಿನಾಂತ್ಯಕ್ಕೆ ಇತರೆ ಭಾರತ, 4 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತ್ತು.
ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರೂ, ಕಪ್ ಅನ್ನು 26ನೇ ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಇತರೆ ಭಾರತ ತಂಡ, ಶನಿವಾರವೇ ಪಂದ್ಯದಲ್ಲಿ ಮುಂಬೈ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಶನಿವಾರದ ದಿನದಾಟದಲ್ಲಿ ಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ಆಂಬಟಿ ರಾಯುಡು, ಭಾನುವಾರವೂ ಅಜೇಯರಾಗಿ ಉಳಿದರಲ್ಲದೇ, ಒಟ್ಟು 156 ರನ್‌ಗಳನ್ನು ಗಳಿಸಿ, ಉತ್ತಮ ಪ್ರದರ್ಶನ ನೀಡಿದರು. ಅವರ ಭರ್ಜರಿ ಇನಿಂಗ್ಸ್‌ನಲ್ಲಿ 12 ಬೌಂಡರಿ, 4 ಸಿಕ್ಸರ್‌ಗಳು ಸೇರಿದ್ದವು.
ಅವರಿಗೆ ಕ್ರೀಸ್‌ನಲ್ಲಿ ಉತ್ತಮವಾಗಿ ಬೆಂಬಲ ನೀಡಿದ್ದು ರೈನಾ. ಇವರಿಬ್ಬರೂ 5ನೇ ವಿಕೆಟ್‌ಗೆ 118 ರನ್‌ಗಳ ಜೊತೆಯಾಟವಾಡಿತು. 5 ಬೌಂಡರಿ, 3 ಸಿಕ್ಸರ್‌ಗೊಂದಿಗೆ ವೈಯಕ್ತಿಕ 71 ರನ್ ಗಳಿಸಿದ ರೈನಾ, ಇನಿಂಗ್ಸ್‌ನ 107ನೇ ಓವರ್‌ನಲ್ಲಿ ಥರ್ಡ್ ಮ್ಯಾನ್‌ಗೆ ಕ್ಯಾಚ್ ನೀಡುವ ಮೂಲಕ, ಸ್ಪಿನ್ನರ್ ವಿಶಾಲ್ ಧೋಬೋಲ್ಕರ್ ಅವರಿಗೆ ವಿಕೆಟ್ ಒಪ್ಪಿಸಿದರು. ಔಟಾದರು. ಅವರ ನಂತರ, ಬಂದ ವೃದ್ಧಿಮಾನ್ ಸಾಹಾ 20 ರನ್ ಗಳಿಸಿ, ಅಜೇಯರಾಗಿ ಉಳಿದರು. ತಂಡದ ಮೊತ್ತ 209 ರನ್ ಸೇರಿಸಿದಾಗ, ಇತರೆ ಭಾರತ ತಂಡದ ನಾಯಕ ಹರ್ಭಜನ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ವಾಸೀಂ ಶತಕ: ಆನಂತರ, ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡ 36 ರನ್‌ಗಳ ಅಲ್ಪ ಮೊತ್ತಕ್ಕೇ ಆರಂಭಿಕ ತಾರೆ ಅವರನ್ನು ಕಳೆದುಕೊಂಡಿತು. ಮತ್ತೊಬ್ಬ ಆರಂಭಿಕ ವಾಸೀಂ ಜಾಫರ್ ಅವರನ್ನು ಸೇರಿಕೊಂಡ, ಅಜಿಂಕ್ಯ ರಹಾನೆ 2ನೇ ವಿಕೆಟ್‌ಗೆ 53 ರನ್ ಸೇರಿಸಿದರು. ತಂಡದ ಮೊತ್ತ 89 ರನ್ ಆಗಿದ್ದಾಗ, ರಹಾನೆ ವಿಕೆಟ್ ಒಪ್ಪಿಸಿ ಹೊರನಡೆದರು. ಆನಂತರ, ಬಂದ ರೋಹಿತ್ ಶರ್ಮಾ, ವಾಸೀಂ ಜೊತೆ 3ನೇ ವಿಕೆಟ್‌ಗೆ ಕೇವಲ 15 ರನ್ ಸೇರಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು.
ಅವರ ನಂತರ, ಕ್ರೀಸ್‌ಗೆ ಬಂದದ್ದು ನಾಯಕ ಅಭಿಷೇಕ್ ನಾಯರ್. ಆದರೆ, 19 ರನ್‌ಗಳ ಜೊತೆಯಾಟ ಆಡುವಷ್ಟರಲ್ಲಿ ನಾಯರ್ ಸಹಾ ವಿಕೆಟ್ ಒಪ್ಪಿಸಿ, ಕ್ರೀಸ್‌ನಿಂದ ಹೊರನಡೆದರು. ಅವರ ನಂತರ, ಬಂದ ಚವಾಣ್, ಜಾಫರ್ ಅವರೊಂದಿಗೆ ತಂಡದ ಮೊತ್ತಕ್ಕೆ ದಿನಾಂತ್ಯದವರೆಗೂ 37 ರನ್ ಸೇರಿಸಿದರು.
ಇಷ್ಟರಲ್ಲಿ ಪಂದ್ಯ ಡ್ರಾಗೊಳ್ಳುವುದು ನಿಶ್ಚಿತವಾಗಿದ್ದರಿಂದ ದಿನದ ಅಂತಿಮ ತಾಸಿನಲ್ಲಿ ಮೂರು ಓವರ್‌ಗಳು ಮುಗಿದ ಮೇಲೆ ಉಭಯ ತಂಡಗಳ ನಾಯಕರು ಪಂದ್ಯವನ್ನು ಮುಗಿಸಲು ಒಮ್ಮತದ ಅಭಿಪ್ರಾಯ ಕೈಗೊಂಡರು. ಈ ಹಿನ್ನೆಲೆಯಲ್ಲಿ, ಪಂದ್ಯವನ್ನು ಇನಿಂಗ್ಸ್‌ನ 54ನೇ ಓವರ್ ಮುಗಿದ ಮೇಲೆ ನಿಲ್ಲಿಸಲಾಯಿತು.
141 ಎಸೆತೆಗಳನ್ನು ಎದುರಿಸಿದ ಜಾಫರ್ 101 ರನ್ ಗಳಿಸಿ, 12 ರನ್ ಗಳಿಸಿದ್ದ ಚವಾಣ್ ಜೊತೆಯಲ್ಲಿ ಅಜೇಯರಾಗಿ ಉಳಿದರು.
ಇತರೆ ಭಾರತ ತಂಡದ ನಾಯಕ ಹರ್ಭಜನ್ ಸಿಂಗ್ ಅವರು 2 ವಿಕೆಟ್ ಪಡೆದರು. ಇನ್ನು, ಪ್ರಗ್ನಾನ್ ಓಜಾ, ಸುರೇಶ್ ರೈನಾ ತಲಾ ಒಂದೊಂದು ವಿಕೆಟ್ ಪಡೆದರು.
ಇತರೆ ಭಾರತ ಪ್ರಥಮ ಇನಿಂಗ್ಸ್ 526/10
ಮುಂಬೈ ಪ್ರಥಮ ಇನಿಂಗ್ಸ್ 409/10
ಇತರೆ ಭಾರತ ದ್ವಿತೀಯ ಇನಿಂಗ್ಸ್ 389/5 ಡಿ. (ಶನಿವಾರ ಅಂತ್ಯಕ್ಕೆ 296/4)
ರಾಯುಡು ಅಜೇಯ 156, ರೈನಾ ಸಿ ರಹಾನೆ ಬಿ ದಾಬೋಲ್ಕರ್ 71, ವೃದ್ಧಿಮಾನ್ ಸಾಹಾ ಅಜೇಯ 20, ಇತರೆ 20.
ವಿಕೆಟ್ ಪತನ: 5-352
ಬೌಲಿಂಗ್: ಕುಲ್ಕರ್ಣಿ 17-6-35-1, ನಾಯರ್ 9-3-28-0, ಖಾನ್ 14-6-33-0, ಠಾಕುರ್ 12-1-44-1-, ಚವಾಣ್ 38-4-126-0-, ದಾಬೋಲ್ಕರ್ 25-1-97-2, ಶರ್ಮಾ 5-0-21-0
ಮುಂಬೈ ದ್ವಿತೀಯ ಇನಿಂಗ್ಸ್ 160/4ಜಾಫರ್ ಅಜೇಯ 101, ತಾರೆ ಸಿ ಧವನ್ ಬಿ ಹರ್ಭಜನ್ 11, ರಹಾನೆ ಸಿ ವಿಜಯ್ ಬಿ ಹರ್ಭಜನ್ 25, ಶರ್ಮಾ ಸಿ ಮಿಥುನ್ ಬಿ ಓಜಾ 1, ನಾಯರ್ ಸಿ ಸಾಹಾ ಬಿ ರೈನಾ 2, ಚವಾಣ್ ಅಜೇಯ 12, ಇತರೆ 8.
ವಿಕೆಟ್ ಪತನ: 1-36, 2-89, 3-104, 4-123
ಬೌಲಿಂಗ್: ಶ್ರೀಶಾಂತ್ 6-2-7-0, ಪಾಂಡೆ 3-2-8-0, ಓಜಾ 12-0-45-1, ಹರ್ಭಜನ್ 16-1-38-2, ಮಿಥುನ್ 2-0-14-0, ರೈನಾ 7-1-14-1, ತಿವಾರಿ 4-1-17-0, ರಾಯುಡು 3-0-10-0, ವಿಜಯ್ 1-0-1-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.