ಕ್ರೀಡೆ

ವಿಂಡೀಸ್‌ಗೆ 48 ರನ್‌ಗಳ ಗೆಲುವು

Published On :

ಮುಂಬೈ: ಕರಾರುವಾಕ್ ಬೌಲಿಂಗ್ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡವನ್ನು 159 ರನ್‌ಗಳಿಗೆ ಆಲೌಟ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಸೋಮವಾರ ನಡೆದ ಮಹಿಳಾ ವಿಶ್ವಕಪ್‌ನ ಸೂಪರ್ ಲೀಗ್ ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್, 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 207 ರನ್ ಪೇರಿಸಿತ್ತು.
ಈ ಗೆಲುವಿನ ಮೂಲಕ, ಈ ಬಾರಿಯ ಮಹಿಳಾ ವಿಶ್ವಕಪ್ ಗೆಲ್ಲುವ ಎರಡು ಫೇವರಿಟ್ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಗೆ ವೆಸ್ಟ್ ಇಂಡೀಸ್ ಸೆಡ್ಡು  ಹೊಡೆದಿದೆ.
ಟಾಸ್ ಗೆದ್ದಿದ್ದ ನ್ಯೂಜಿಲೆಂಡ್, ಮೊದಲು ವಿಂಡೀಸರನ್ನು ಬ್ಯಾಟಿಂಗ್‌ಗೆ ಇಳಿಸಿತು. ಆದರೆ, ಈ ನಿರ್ಧಾರ ಅದಕ್ಕೆ ದುಬಾರಿಯಾಗಿ ಪರಿಣಮಿಸಿತು. 50 ಓವರ್‌ಗಳಲ್ಲಿ 207 ರನ್ ಕಲೆಹಾಕಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಪೇರಿಸಿದ ಸಾಧನೆಯನ್ನು ಕೆರಿಬಿಯನ್ನರ ತಂಡ ಮಾಡಿತು. 2009ರ ಮಹಿಳಾ ವಿಶ್ವಕಪ್‌ನಲ್ಲಿ ವಿಂಡೀಸ್ ತಂಡ, ನ್ಯೂಜಿಲೆಂಡ್ ವಿರುದ್ಧ 136 ರನ್ ಗಳಿಸಿತ್ತು. ಅದೇ ಮೊತ್ತ ಇದುವರೆಗೆ ವಿಂಡೀಸ್ ತಂಡ, ಕಿವೀಸ್ ವಿರುದ್ಧ ಗಳಿಸಿದ್ದ ದೊಡ್ಡ ಮೊತ್ತವಾಗಿತ್ತು.
ಸೋಮವಾರದ ಪಂದ್ಯದಲ್ಲಿ ವಿಂಡೀಸ್ ಪರ ಮೊದಲು ಬ್ಯಾಟಿಂಗ್‌ಗೆ ಇಳಿದ ಆರಂಭಿಕರಾದ ಮೆಕ್‌ಲಾರೆನ್, ತಂಡದ ಮೊತ್ತ ಕೇವಲ 4 ರನ್ ಆಗಿದ್ದಾಗ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ, ಬಂದ ಮೂರನೇ ಕ್ರಮಾಂಕದ ಟೇಲರ್, ಮತ್ತೊಬ್ಬ ಆರಂಭಿಕ ಆಟಗಾರ್ತಿ ಕಿಸಿಯಾ ಎ. ನೈಟ್ ಅವರ ಜೊತೆ ಸೇರಿ 2ನೇ ವಿಕೆಟ್‌ಗೆ 34 ರನ್ ಸೇರಿಸಿದರು. 10ನೇ ಓವರ್‌ನಲ್ಲಿ ಕಿಸಿಯಾ ಔಟಾದ ನಂತರ ಬಂದ, ಕಿಶೋನಾ ಎ. ನೈಟ್ ಹಾಗೂ ಟೇಲರ್ ಇಬ್ಬರೂ 37 ರನ್ ಸೇರಿಸಿದರು.
19ನೇ ಓವರ್‌ನಲ್ಲಿ ಕಿಶೋನಾ ಔಟಾದ ಮೇಲೆ, ವಿಂಡೀಸ್ ತಂಡ ಟೇಲರ್, ಅಗುಲೇರಿಯಾ ಹಾಗೂ ಡಾಟಿನ್ ಅವರ ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಆನಂತರ, ಡೇಲೇ ಅವರ 37 ರನ್ ಹಾಗೂ ಅನಿಸಾ ಮಹಮ್ಮದ್ ಅವರ 31 ರನ್‌ಗಳ ನೆರವಿನಿಂದಾಗಿ ವಿಂಡೀಸ್, 50 ಓವರ್‌ಗಳಲ್ಲಿ 207 ರನ್‌ನ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಆರಂಭದಿಂದಲೂ ಎಡವುತ್ತಾ ಸಾಗಿತು. ಕೇವಲ 6 ರನ್ ಮೊತ್ತಕ್ಕೇ ಆರಂಭಿಕ ಆಟಗಾರ್ತಿ ಮೆಕೇ ಅವರನ್ನು ಕಳೆದುಕೊಂಡ ನ್ಯೂಜಿಲೆಂಡ್‌ಗೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಬೇಟ್ಸ್ ಹಾಗೂ ಮೂರನೇ ಕ್ರಮಾಂಕದ ಮೆಕ್‌ಗ್ಲಾಶನ್ 2ನೇ ವಿಕೆಟ್‌ಗೆ 30 ರನ್ ಸೇರಿಸಿತು.
8ನೇ ಓವರ್‌ನಲ್ಲಿ ಮೆಕ್‌ಗ್ಲಾಶನ್ ಔಟಾದ ಮೇಲೆ, ಕ್ರೀಸ್‌ಗೆ ಆಗಮಿಸಿದ ಡಿವೈನ್ ಅವರು ಆರಂಭಿಕ ಆಟಗಾರ್ತಿ ಬೇಟ್ಸ್ ಅವರೊಂದಿಗೆ, ಕೇವಲ 11 ರನ್‌ಗಳ ಜೊತೆಯಾಟವಾಡಿದರು. 10ನೇ ಓವರ್‌ನಲ್ಲಿ ಡಿವೈನ್ ಔಟಾದ ಮೇಲೆ, ಮೈದಾನಕ್ಕಿಳಿದ ಪರ್ಕಿನ್ಸ್, ಬೇಟ್ಸ್ ಜೊತೆಗೂಡಿ 4ನೇ ವಿಕೆಟ್‌ಗೆ 29 ರನ್ ಸೇರಿಸಿದರು. ಆದರೆ, 19ನೇ ಓವರ್‌ನಲ್ಲಿ ಪರ್ಕಿನ್ಸ್ ಅವರು ರನೌಟ್ ಆಗುವ ಮೂಲಕ ಈ ಜೋಡಿ ಮುರಿದುಬಿತ್ತು.
ಆನಂತರ ಬಂದ ಬ್ರೌನಿ ಸಹ ಹೆಚ್ಚು ಹೊತ್ತು ಆಡಲಿಲ್ಲ. ವೈಯಕ್ತಿಕವಾಗಿ ಕೇವಲ 4 ರನ್ ಗಳಿಸಿದ ಅವರು, ಇನಿಂಗ್ಸ್‌ನ 21ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ ತಂಡದ ಮೊತ್ತ 83 ರನ್. ಇದೇ ಮೊತ್ತಕ್ಕೆ ಬೇಟ್ಸ್ ಅವರೂ ಔಟಾದಾಗ, ಕಿವೀಸ್‌ನ ನಿಜವಾದ ಸಂಕಷ್ಟ ಆರಂಭವಾಯಿತು.
ಈ ಸಂದರ್ಭದಲ್ಲಿ, ಕಿವೀಸ್ ತಂಡಕ್ಕೆ ನೆರವಾಗಿದ್ದು ಪ್ರೀಸ್ಟ್. ಆರಂಭಿಕ ಆಟಗಾರ್ತಿ ಬೇಟ್ಸ್ ಔಟಾದ ಮೇಲೆ ಕ್ರೀಸ್‌ಗೆ ಆಗಮಿಸಿದ್ದ ಬ್ರಾಡ್‌ಮೋರ್ ಅವರೊಂದಿಗೆ ಇನಿಂಗ್ಸ್ ಕಟ್ಟಲು ಸಜ್ಜಾದ ಅವರಿಗೆ  ಬ್ರಾಡ್‌ಮೋರ್ ಅವರಿಂದ ಉತ್ತಮ ಸಾಥ್ ಸಿಗಲಿಲ್ಲ.
7ನೇ ವಿಕೆಟ್‌ಗೆ ಕೇವಲ 18 ರನ್ ಜೊತೆಯಾಟವಾಡಿದ ನಂತರ, ಬ್ರಾಡ್‌ಮೋರ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ, ಪ್ರೀಸ್ಟ್‌ಗೆ ಕೊಂಚ ಬೆಂಬಲ ಸಿಕ್ಕಿದ್ದು, ಬ್ರಾಡ್‌ಮೋರ್ ಅವರ ನಂತರ ಬಂದಿದ್ದ ನೀಲ್‌ಸೆನ್. 8ನೇ ವಿಕೆಟ್‌ಗೆ ಈ ಜೋಡಿ 34 ರನ್ ಸೇರಿಸಿತು. ಇನಿಂಗ್ಸ್‌ನ 39ನೇ ಓವರ್‌ನಲ್ಲಿ ನೀಲ್‌ಸೆನ್ ಅವರು ಔಟಾದ ಮೇಲೆ, ಕಿವೀಸ್ ನಿಗದಿತ ಅಂತರದಲ್ಲಿ ಅವರ ನಂತರ ಬಂದಿದ್ದ ತಹಾಹು ಅವರನ್ನೂ ಕಳೆದುಕೊಂಡಿತು. ಏಕಾಂಗಿ ಹೋರಾಟ ನಡೆಸುತ್ತಿದ್ದ ಪ್ರೀಸ್ಟ್ ಸಹಾ, ತಂಡದ ಮೊತ್ತ 159 ರನ್ ಆಗಿದ್ದಾಗ ರನೌಟ್ ಆದರು. ಈ ಮೂಲಕ, ಕಿವೀಸ್‌ನ ಇನಿಂಗ್ಸ್ ಅಂತ್ಯಗೊಂಡಿತು.


ಸಂಕ್ಷಿಪ್ತ ಸ್ಕೋರ್



ವೆಸ್ಟ್ ಇಂಡೀಸ್: 207/9 (50 ಓವರ್)
ವೆಸ್ಟ್ ಇಂಡೀಸ್: 207/9 (50 ಓವರ್)
ಬೌಲಿಂಗ್: ನೀಲ್‌ಸೆನ್ 27/3, ರುಕ್ 32/2
ನ್ಯೂಜಿಲೆಂಡ್: 159/10 (44.3 ಓವರ್)
ಪ್ರೀಸ್ಟ್ 36 (65), ಬೇಟ್ಸ್ 30 (44)
ಬೌಲಿಂಗ್: ಸ್ಮಾರ್ಟ್ 39/3, ಡಾಟಿನ್ 11/2
ಪಂದ್ಯಶ್ರೇಷ್ಠ: ಅಸಿನಾ ಮಹಮ್ಮದ್ (ವೆಸ್ಟ್ ಇಂಡೀಸ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.