ರಸೂಲ್ ದಾಳಿಗೆ ಕಂಗೆಟ್ಟ ಕಾಂಗರೂ ಪಡೆ
ಚೆನೈ: ಪ್ರಸಕ್ತ ರಣಜಿ ಋತುವಿನಲ್ಲಿ ಗಮನ ಸೇಳೆಯುವ ಪ್ರದರ್ಶನ ನೀಡಿದ್ದ ಜಮ್ಮು ಮತ್ತು ಕಾಶ್ಮಿರದ ಆಲ್ರೌಂಡರ್ ಪರ್ವೆಜ್ ರಸೂಲ್, ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊನಚಾದ ಬೌಲಿಂಗ್ ದಾಳಿ ನಡೆಸಿ ಕಾಂಗರೂ ಪಡೆ ಕಂಗೆಡುವಂತೆ ಮಾಡಿದ್ದಾರೆ.
ಭಾರತ ವಿರುದ್ಧ ಫೆ.22 ರಿಂದ ಆರಂಭವಾಗಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ತಯಾರಿ ನಡೆಸುತ್ತಿರುವ ಆಸೀಸ್ ತಂಡ, ಮಂಗಳವಾರ ಆರಂಭವಾದ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾಂಗರೂ ಪಡೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಎಡ್ ಕೊವನ್ ಹಾಗೂ ಖವಾಜ ಮೊದಲ ವಿಕೆಟ್ಗೆ 77ರನ್ ಕಲೆ ಹಾಕಿದರು. ಈ ಮೂಲಕ ಆಸೀಸ್ ತಂಡ ಉತ್ತಮ ಮೊತ್ತವನ್ನು ದಾಖಲಿಸುವ ಸೂಚನೆ ನೀಡುತ್ತಿದ್ದಂತೆ, 32ರನ್ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಖವಾಜ ಅವರ ವಿಕೆಟ್ ಕಳೆದುಕೊಂಡಿತು. ಈ ವೇಳೆ ದಾಳಿಗಿಳಿದ ಸರಬ್ಜಿತ್ ಲಡ್ಡಾ ಅವರ ಎಸೆತದಲ್ಲಿ ಕೇದರ್ ಜಾದವ್ಗೆ ಕ್ಯಾಚ್ ನೀಡುವ ಮೂಲಕ ಹೊರ ನಡೆದರು.
ನಂತರ ಕೊವನ್ ಜೊತೆಗೂಡಿದ ವೇಡ್ ತಂಡಕ್ಕೆ 32ರನ್ಗಳ ಜತೆಯಾಟ ನೀಡಿದರು. ಈ ವೇಳೆ 58 ರನ್ಗಳಿಸಿ ಕ್ರಿಸ್ನಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಕಂಡ ಕೊವನ್, ಸ್ಪಿನ್ನರ್ ಪರ್ವೆಜ್ ರಸೂಲ್ ಅವರ ಎಸೆತದಲ್ಲಿ ಪಾರ್ಥೀವ್ ಪಟೇಲ್ಗೆ ಕ್ಯಾಚ್ ನೀಡಿದರು.
ನಂತರ ಬಂದ ಸ್ಟೀವ್ ಸ್ಮಿತ್, ವೇಡ್ ಜತೆಗೂಡಿ 58 ರನ್ಗಳ ಜತೆಯಾಟ ನೀಡಿದರು. ಈ ಜೋಡಿ ಉತ್ತಮ ಪ್ರದರ್ಶನ ನೀಡುವಂತೆ ಕಂಡು ಬಂದಿತು. ಆದರೆ 35 ರನ್ಗಳಿಸಿದ್ದ ವೇಡ್ ರಸೂಲ್ ಎಸೆತದಲ್ಲಿ ಮಕ್ವಾನ ಅವರಿಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಮಿಲಿಯನ್ ಡಾಲರ್ ಆಟಗಾರ ಮ್ಯಾಕ್ಸ್ವೆಲ್ ಬಿನ್ನಿ ಎಸೆತದಲ್ಲಿ ಪಟೇಲ್ಗೆ ಕ್ಯಾಚ್ ನೀಡಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು.
ಹೆನ್ರಿಕ್ಯೂಸ್ ಕೂಡ ಕೇವಲ 16 ರನ್ಗಳಿಸಿ ಲಡ್ಡಾ ಎಸೆತದಲ್ಲಿ ಉತ್ತಪ್ಪಗೆ ಕ್ಯಾಚ್ ನೀಡಿ ಹೊರ ನಡೆದರು. ಈ ವೇಳೆ 41ರನ್ಗಳಿಸಿ ರಕ್ಷಣಾತ್ಮಕವಾಗಿ ಆಡುತ್ತಿದ್ದ ಸ್ಟೀವ್ ಸ್ಮಿತ್ ಕೂಡ ರಸೂಲ್ ಎಸೆತದಲ್ಲಿ ಮನ್ದೀಪ್ ಸಿಂಗ್ಗೆ ಕ್ಯಾಚ್ ನೀಡಿದರು.
ನಂತರ ಬಂದ ಎಲ್ಲಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ದಿನಾಂತ್ಯಕ್ಕೆ 88.3 ಓವರ್ಗಳನ್ನಾಡಿದ ಕಾಂಗರೂ ಪಡೆ 241 ರನ್ಗಳಿಗೆ ಸರ್ವಪತನ ಕಂಡಿತು.
28.3 ಓವರ್ಗಳನ್ನು ಮಾಡಿದ ಪರ್ವೆಜ್ ರಸೂಲ್, ಒಂಬತ್ತು ಮೇಡನ್ ಓವರ್ಗಳನ್ನು ಮಾಡಿ 45 ರನ್ಗಳನ್ನು ನೀಡಿ ಆಸೀಸ್ನ 7 ವಿಕೆಟ್ ಪಡೆದು ಕಾಂಗರುಗಳಿಗೆ ಮಾರಕವಾಗಿ ಪರಿಣಮಿಸಿದರು.
ಆಸೀಸ್ ಬೌಲರ್ಗಳಿಗೆ ಪರೀಕ್ಷೆ: ಎರಡು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ನಾಳೆ ಕಾಂಗರೂ ಪಡೆ ಅಧ್ಯಕ್ಷರ ಇಲೆವೆನ್ ತಂಡಕ್ಕೆ ಬೌಲಿಂಗ್ ಮಾಡಲಿದ್ದು, ಆಸೀಸ್ನ ವೇಗದ ಹಾಗೂ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಪರೀಕ್ಷೆಯೊಡ್ಡಲಿದೆ. ಭಾರತದ ಸ್ಪಿನ್ ವಾತಾವರಣಕ್ಕೆ ಆಸೀಸ್ನ ಸ್ಪಿನ್ನರ್ಗಳು ಹೇಗೆ ಉಪಯೋಗಿಸಿಕೊಳ್ಳುವರು ಹಾಗೂ ವೇಗಿಗಳು ಹೇಗೆ ದಾಳಿ ನಡೆಸುವರು ಎಂಬುದು ನಾಳಿನ ದಿನದಾಟದಲ್ಲಿ ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ.
ಇನ್ನು ಆಸೀಸ್ ತಂಡದ ಪ್ರಮುಖ ಆಟಗಾರರಾದ ನಾಯಕ ಮೈಕಲ್ ಕ್ಲಾರ್ಕ್, ಡೇವಿಡ್ ವಾರ್ನರ್, ಶೇನ್ ವಾಟ್ಸನ್, ಮಿಚ್ಚೆಲ್ ಸ್ಟಾರ್ಕ್ ಅವರು ಇನ್ನಷ್ಟೇ ತಂಡವನ್ನು ಸೇರಿಕೊಳ್ಳಬೇಕಿದ್ದು, ಈ ಆಟಗಾರರಲ್ಲಿ ಅನೇಕರು ಭಾರತದಲ್ಲಿ ಈ ಹಿಂದೆ ಆಡಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಈ ಅಭ್ಯಾಸ ಪಂದ್ಯ ಕಾಂಗರೂ ಪಡೆಯ ಯುವ ಆಟಗಾರರಿಗೆ ಬಹಳ ಮಹತ್ವವಾಗಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 241/10 (88.3 ಓ.)
ಎಡ್ ಕೊವನ್ 58
ಸ್ಮಿತ್ 41
ಬೌಲಿಂಗ್: ರಸೂಲ್ 45/7, ಲಡ್ಡಾ 90/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

