2020ರ ಒಲಿಂಪಿಕ್ಸ್ನಿಂದ ಕುಸ್ತಿಗೆ ಗುಡ್ಬೈ: ಐಒಸಿ ನಿರ್ಧಾರ
ನವದೆಹಲಿ: 2020ರಲ್ಲಿ ನಡೆಯುವ ಒಲಿಂಪಿಕ್ಸ್ ಪಂದ್ಯಾವಳಿ ಸೇರಿದಂತೆ, ಮುಂದೆ ನಡೆಯುವ ಎಲ್ಲಾ ಒಲಿಂಪಿಕ್ಸ್ ಪಂದ್ಯಾವಳಿಗಳಿಂದ ಕುಸ್ತಿ ಕ್ರೀಡೆಯನ್ನು ಕೈಬಿಡುವ ಮಹತ್ವದ ನಿರ್ಧಾರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಕೈಗೊಂಡಿದೆ.
ಲುಸಾನ್ನೆಯಲ್ಲಿ ಬುಧವಾರ ನಡೆದ ಐಒಸಿ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಒಲಿಂಪಿಕ್ಸ್ನ ಪುರಾತನ ಕ್ರೀಡೆಗಳಲ್ಲೊಂದಾದ ಕುಸ್ತಿಯನ್ನು 'ಒಲಿಂಪಿಕ್ಸ್ ಪ್ರಮುಖ ಕ್ರೀಡೆಗಳ ಪಟ್ಟಿ'ಯಿಂದ ಕೈಬಿಡಲು ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಸಭೆಯಲ್ಲಿ, ಮಾಡರ್ನ್ ಪೆಂಟಾತ್ಲಾನ್ ಕ್ರೀಡೆಯನ್ನು ಉಳಿಸಿಕೊಳ್ಳುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಲ್ಲಿ ಒಟ್ಟು 26 ಕ್ರೀಡೆಗಳು ಇವೆ. ಇವುಗಳಲ್ಲಿ ಒಂದು ಕ್ರೀಡೆಯನ್ನು ತೆಗೆದು ಹಾಕಿದರೆ, ಆ ಜಾಗಕ್ಕೆ ಹೊಸ ಆಟವನ್ನು ಸೇರ್ಪಡಿಸುವ ಇರಾದೆಯನ್ನು ಐಒಎ ಹೊಂದಿತ್ತು ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ, ಕುಸ್ತಿಯನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ಹೇಳಿವೆ. 1896ರಲ್ಲಿ ಅಥೆನ್ಸ್ನಲ್ಲಿ ನಡೆದಿದ್ದ ಆಧುನಿಕ ಒಲಿಂಪಿಕ್ಸ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕುಸ್ತಿ ಕ್ರೀಡೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಫ್ರೀ ಸ್ಟೈಲ್ ಹಾಗೂ ಗ್ರೆಗೋ-ರೋಮನ್ಗಳ ಸಂಯುಕ್ತ ರೂಪವಾಗಿ ಕುಸ್ತಿ ಕ್ರೀಡೆಯ ಸ್ವರೂಪವನ್ನು ಸಿದ್ಧಪಡಿಸಲಾಗಿತ್ತು. ಕಳೆದ ವರ್ಷ ನಡೆದಿದ್ದ ಲಂಡನ್ ಒಲಿಂಪಿಕ್ಸ್ನ ಕುಸ್ತಿ ವಿಭಾಗದಲ್ಲಿ ಒಟ್ಟು 344 ಅಥ್ಲೀಟ್ಗಳು ಪಾಲ್ಗೊಂಡಿದ್ದರು.
ಪೂರಕ ಪಟ್ಟಿಯಲ್ಲಿ ಸ್ಥಾನ: ಇದೀಗ, ಒಲಿಂಪಿಕ್ಸ್ನಿಂದ ಹೊರಹಾಕಲ್ಪಟ್ಟಿರುವ ಕುಸ್ತಿ ಕ್ರೀಡೆಯು, ಈ ಹಿಂದೆ ಒಲಿಂಪಿಕ್ಸ್ನ ಪ್ರಮುಖ ಕ್ರೀಡೆಗಳ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿರುವ ಕ್ರೀಡೆಗಳುಳ್ಳ ಪೂರಕ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಹಿಂದೆ, ಬೇಸ್ಬಾಲ್-ಸಾಫ್ಟ್ಬಾಲ್ (ಸಂಯುಕ್ತ ರೂಪ), ಕರಾಟೆ, ಸ್ಕ್ವಾಷ್, ರೋಲರ್ ಸ್ಪೋರ್ಟ್ಸ್, ಸ್ಪೋರ್ಟ್ಸ್ ಕ್ಲೈಂಬಿಂಗ್, ವೇಕ್ ಬೋರ್ಡಿಂಗ್ ಹಾಗೂ ವುಷು ಕ್ರೀಡೆಗಳನ್ನು ಒಲಿಂಪಿಕ್ಸ್ನಿಂದ ಕೈಬಿಡಲಾಗಿತ್ತು. ಇದೀಗ, ಈ ಪಟ್ಟಿಗೆ ಕುಸ್ತಿಯೂ ಸೇರಲಿದೆ.
ಏನಿದು ಪೂರಕ ಪಟ್ಟಿ?: ಒಲಿಂಪಿಕ್ಸ್ನಿಂದ ತೆಗೆದು ಹಾಕಲ್ಪಡುವ ಕ್ರೀಡೆಗಳು ಒಲಿಂಪಿಕ್ಸ್ ಪೂರಕ ಕ್ರೀಡೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಪ್ರತಿಬಾರಿ ಒಲಿಂಪಿಕ್ಸ್ ಪಂದ್ಯಾವಳಿಗೂ ಮುನ್ನ, ಪೂರಕ ಪಟ್ಟಿಯಲ್ಲಿನ ಕ್ರೀಡೆಗಳ ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕ್ರೀಡೆಯನ್ನು ಒಲಿಂಪಿಕ್ಸ್ಗೆ ಸೇರಿಸಲು ಅರ್ಜಿ ಸಲ್ಲಿಸಬಹುದು. ಯಾವ ಸಂಸ್ಥೆಯ ಅರ್ಜಿ ಐಒಸಿಯಿಂದ ಆ ಅರ್ಜಿ ಪುರಸ್ಕೃತಗೊಳ್ಳುತ್ತದೆಯೋ, ಆ ಕ್ರೀಡೆ, ಆ ವರ್ಷ ನಡೆಯುವ ಒಲಿಂಪಿಕ್ಸ್ನ ಪ್ರಮುಖ ಕ್ರೀಡೆಗಳ ಪಟ್ಟಿಯಲ್ಲಿ ಸ್ಥಾನಪಡೆಯುತ್ತದೆ.
ಗಾಲ್ಫ್, ರಗ್ಬಿ ಸೇರ್ಪಡೆ: 2016ರಲ್ಲಿ ರಿಯೋ ಡಿ ಜುನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಗೆ ಈಗಾಗಲೇ ಗಾಲ್ಫ್ ಹಾಗೂ ರಗ್ಬಿ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ನಿರ್ಧಾರದ ಹಿಂದಿನ ಆಧಾರಗಳು: ಒಲಿಂಪಿಕ್ಸ್ನಲ್ಲಿ ಯಾವುದೇ ಕ್ರೀಡೆಯನ್ನು ನಿಷೇಧಿಸಲು ಕೆಲವೊಂದು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಟೆಲಿವಿಷನ್ ರೇಟಿಂಗ್, ಟಿಕೆಟ್ ಮಾರಾಟ, ಉದ್ದೀಪನಾ ಮದ್ದು ನಿಷೇಧ ನಿಯಮಗಳು ಹಾಗೂ ನಿರ್ದಿಷ್ಟ ಕ್ರೀಡಾವಿಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಇರುವ ಕ್ರೀಡಾಳುಗಳ ಸಂಖ್ಯೆ ಸೇರಿದಂತೆ ಹನ್ನೆರಡಕ್ಕಿಂತಲೂ ಹೆಚ್ಚುಮಾನದಂಡಗಳನ್ನು ಆಧರಿಸಿ ಈ ಕುರಿತಂತೆ ಕ್ರೀಡೆಯೊಂದರ ನಿಷೇಧ ಕುರಿತಂತೆ ನಿರ್ಣಯ ಕೈಗೊಳ್ಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

