ಕ್ರೀಡೆ

ನೀರಸ ಡ್ರಾನಲ್ಲಿ ಅಭ್ಯಾಸ ಪಂದ್ಯ ಅಂತ್ಯ

Published On :

ಚೆನೈ: ಫೆ.22ರಿಂದ ಆರಂಭವಾಗಲಿರುವ ಭಾರತಚ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ, ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ  ನೀರಸ ಡ್ರಾನಲ್ಲಿ ಅಂತ್ಯ ಕಂಡಿದೆ.
ಎರಡುದಿನಗಳ ಅಭ್ಯಾಸ ಪಂದ್ಯ ಬುಧವಾರ ಡ್ರಾನಲ್ಲಿ ಅಂತ್ಯಗೊಂಡಿದ್ದರೂ ಮೊದಲ ಇನಿಂಗ್ಸ್ ಮುನ್ನಡೆಯಿಂದಾಗಿ ಕಾಂಗರೂಪಡೆ ಮೇಲುಗೈ ಸಾಧಿಸಿತು.
ಮಂಗಳವಾರ ಅಧ್ಯಕ್ಷರ ಇಲೆವೆನ್ ತಂಡದ ಆಫ್ ಸ್ಫಿನ್ನರ್ ಪರ್ವೆಜ್ ರಸೂಲ್ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ್ದ ಕಾಂಗರೂ ಪಡೆ, ಕೇವಲ 241 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಎರಡನೇ ದಿನ ಬೌಲಿಂಗ್ ಆರಂಭಿಸಿದ ಆಸೀಸ್ ಪಡೆ ಉತ್ತಮ ಮರು ಹೋರಾಟ ನಡೆಸಿತು. ಆಸೀಸ್ ತಂಡ ಸಂಘಟಿತ ಬೌಲಿಂಗ್ ದಾಳಿ ನಡೆಸಿ ಅಧ್ಯಕ್ಷರ ಇಲೆವೆನ್ ತಂಡವನ್ನು 230 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ.
ಬುಧವಾರ ಬ್ಯಾಟಿಂಗ್ ಆರಂಭಿಸಿದ ಅಧ್ಯಕ್ಷರ ಇಲೆವೆನ್ ತಂಡ ಆಸೀಸ್ ಬೌಲಿಂಗ್ ಮುಂದೆ ಮಂಕಾದಂತೆ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಭಿನವ್ ಮುಕುಂದ್ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ 37 ರನ್‌ಗಳ ಆರಂಭ ನೀಡಿದರು.
ಈ ವೇಳೆ ಲಿಯೊನ್ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ನೀಡುವ ಮೂಲಕ ಉತ್ತಪ್ಪ 24ರನ್‌ಗಳಿಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ಮನ್‌ದೀಪ್ ಸಿಂಗ್ ಕೇವಲ 3ರನ್‌ಗಳಿಸಿ ಹೆನ್ರಿಕ್ಯೂಸ್ ಎಸೆತದಲ್ಲಿ ಕೀಪರ್ ವೇಡ್‌ಗೆ ಕ್ಯಾಚ್ ನೀಡಿದರು.
ನಂತರ 21 ರನ್‌ಗಳಿಸಿದ್ದ ನಾಯಕ ಮುಕುಂದ್ ಹೆನ್ರಿಕ್ಯೂಸ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ ಕಣಕ್ಕಿಳಿದ ಅಂಬಟಿ ರಾಯುಡು ಉತ್ತಮ ಬ್ಯಾಟಿಂಗ್ ನಡೆಸಿದರು.
ಇತ್ತೀಚಿನ ಇರಾನಿ ಟ್ರೋಫಿಯ ಎರಡನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ರಾಯುಡು ಕಾಂಗರೂ ಬೌಲರ್‌ಗಳಿಗೆ ತಕ್ಕಮಟ್ಟಿನ ಪ್ರತಿರೋಧ ನೀಡಿದರು. 150 ಎಸೆತಗಳನ್ನು ಎದುರಿಸಿದ ರಾಯುಡು 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಅಮೂಲ್ಯ 87ರನ್‌ಗಳಿಸಿದರು.
ಆದರೆ ನಂತರದ ಬ್ಯಾಟ್ಸ್‌ಮನ್‌ಗಳಿಗೆ ಕ್ರಿಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ.ಜಾದವ್ ಕೇವಲ 1 ರನ್‌ಗಳಿಸಿದರೆ, ಪಟೇಲ್ 23ರನ್‌ಗಳಿಸಿದರು. ಬಿನ್ನಿ ಕೇವಲ 5ರನ್‌ಗಳ ಸಂಪಾದನೆ ನಿರಾಸೆ ಮೂಡಿಸಿತು. ಈ ವೇಳೆ ಬಂದ ಆಲ್ರೌಂಡರ್ ರಸೂಲ್ 54 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ ಉಪಯುಕ್ತ 36ರನ್ ಗಳಿಸಿದರು.
ಅಂತಿಮವಾಗಿ ದಿನದಾಟದಲ್ಲಿ 68.3 ಓವರ್‌ಗಳನ್ನಾಡಿದ ಅಧ್ಯಕ್ಷರ ಇಲವೆನ್ ತಂಡ 230ರನ್‌ಗಳಿಸಿ ಸರ್ವಪತನ ಕಂಡಿತು.
ಹಿಡಿತ ಸಾಧಿಸಿದ ಬೌಲರ್‌ಗಳು: ಅಭ್ಯಾಸ ಪಂದ್ಯದಲ್ಲಿ ಕಾಂಗರೂಗಳ ಬೌಲರ್‌ಗಳು ಉತ್ತಮವಾಗಿಯೇ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಉತ್ತಮ ತಯಾರಿಯ ಸೂಚನೆ ನೀಡಿದ್ದಾರೆ. ಲಿಯೊನ್ 3 ವಿಕೆಟ್ ಪಡೆಯುವ ಮೂಲಕ ಸ್ಪಿನ್ನಿಂಗ್ ಪಿಚ್‌ನಲ್ಲಿ ಒಗ್ಗಿಕೊಂಡಿದ್ದಾರೆ. ಇನ್ನು ಪ್ರಮುಖ ನಾಲ್ಕು ವಿಕೆಟ್ ಪಡೆದ ಹೆನ್ರಿಕ್ಯೂಸ್, ಉಪಖಂಡಗಳಲ್ಲೂ ತಮ್ಮ ವೇಗದ ಬೌಲಿಂಗ್‌ನಿಂದ ಉತ್ತಮ ಪ್ರದರ್ಶನ ನೀಡಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸಮಾದಾನ ತಂದಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 241/10
ಅಧ್ಯಕ್ಷರ ಇಲೆವೆನ್ ಪ್ರಥಮ ಇನಿಂಗ್ಸ್ 230/10
ಅಂಬಟಿ ರಾಯುಡು 87
ಪರ್ವೆಜ್ ರಸೂಲ್ 36
ರಾಬಿನ್ ಉತ್ತಪ್ಪ 24
ಬೌಲಿಂಗ್: ಹೆನ್ರಿಕ್ಯೂಸ್ 12/4, ಲಿಯೊನ್ 69/3
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 15/0
ಖವಾಜ ಅಜೇಯ 1
ಬೌಲಿಂಗ್: ಶಮಿ 9/0, ಅವಾನ 4/0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.