ರಾಬಿನ್ ಆರ್ಭಟಕ್ಕೆ ಗೋವಾ ತತ್ತರ
ಗೋವಾ: ಪ್ರಸಕ್ತ ರಣಜಿ ಋತುವಿನಲ್ಲಿ ಸಾಧಾರಣ ಪ್ರದರ್ಶನ ನೀಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯನ್ನು ಗೆಲುವಿನ ಮೂಲಕ ಆರಂಭಿಸಿದೆ. ಗುರುವಾರ ನಡೆದ ಗೋವಾ ವಿರುದ್ಧದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಉತ್ತಮವಾಗಿ ಬೌಲಿಂಗ್ ಆರಂಭಿಸಿತು.
ಗೋವಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕಾಮತ್ ಹಾಗೂ ಬಿಸ್ಲಾ ಜೋಡಿ ಬೇಗನೆ ಮುರಿದು ಬಿತ್ತು. ಮೊದಲ ಓವರ್ನ ಐದನೇ ಎಸೆತದಲ್ಲಿ ಬಿಸ್ಲಾ ಅವರು ಮಿಥುನ್ ಎಸೆತದಲ್ಲಿ ಎಲ್ಬಿ ಬಲೆಗೆ ಬೀಳುವ ಮೂಲಕ ಆಘಾತ ನೀಡಿದರು.
ನಂತರ ಬಂದ ಆಸ್ನೋಡ್ಕರ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 29 ರನ್ಗಳಿಸಿದರು. ಈ ವೇಳೆ ಅಪ್ಪಣ್ಣ ಎಸೆತದಲ್ಲಿ ಕೀಪರ್ ಅವಿನಾಶ್ಗೆ ಕ್ಯಾಚ್ ನೀಡಿದ ಆಸ್ನೋಡ್ಕರ್ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಪಿಂಟೊ ಕೇವಲ 9 ರನ್ಗಳಿಸಿ ಅಪ್ಪಣ್ಣ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಈ ವೇಳೆಗೆ ಗೋವಾ ತಂಡ 65 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಕಾಮತ್ ಹಾಗೂ ರವಿಕಾಂತ್ ಶುಕ್ಲಾ ತಂಡಕ್ಕೆ 81ರನ್ಗಳ ಜತೆಯಾಟ ನೀಡಿದರು.
ಈ ವೇಳೆ ನಾಯರ್ ಎಸೆತದಲ್ಲಿ ಶುಕ್ಲಾ ಬೌಲ್ಡ್ ಆಗುವ ಮೂಲಕ ಈ ಉತ್ತಮ ಜೋಡಿ ಮುರಿದು ಬಿತ್ತು. ನಂತರ ಬಂದ ಕಿನಾನ್ ವಾಜ್ 9 ರನ್ಗಳಿಸಿ ಅಪ್ಪಣ್ಣ ಎಸೆತದಲ್ಲಿ ಕೀಪರ್ ಅವಿನಾಶ್ಗೆ ಕ್ಯಾಚ್ ನೀಡಿದರು.
ನಂತರ ಬಂದ ಸುನಿಲ್ ದೇಸಾಯ್ ಹಾಗೂ ಆರಂಭಿಕ ಕಾಮತ್ ಜತೆಗೂಡಿದರು ಈ ಜೋಡಿ ಉತ್ತಮ ಪ್ರದರ್ಶನ ನೀಡುವ ಸೂಚನೆ ಕಾಣುತ್ತಿರುವ ವೇಳೆ ಉತ್ತಮ ಇನಿಂಗ್ಸ್ ಕಟ್ಟಿದ್ದ ಕಾಮತ್ ಮಿಥುನ್ ಎಸೆತದಲ್ಲಿ ನಿನಾನ್ಗೆ ಕ್ಯಾಚ್ ನೀಡಿದರು.
ಈ ಮೊದಲು ಕಾಮತ್ 112 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಾಯದಿಂದ 110ರನ್ಗಳಿಸಿದ್ದರು. ನಂತರ ಜತೆಯಾದ ದೇಸಾಯ್ ಹಾಗೂ ಡಿಸೋಜಾ 107 ರನ್ಗಳ ಉತ್ತಮ ಜತೆಯಾಟ ನೀಡಿದರು.
ಈ ವೇಳೆ 54 ರನ್ ಗಳಿಸಿದ್ದ ಡಿಸೋಜಾ ಹಾಗೂ 62 ರನ್ ಗಳಿಸಿದ್ದ ದೇಸಾಯ್ ಇಬ್ಬರೂ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ರನೌಟ್ ಆದರು. ಅಂತಿಮವಾಗಿ ಗೋವಾ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 318ರನ್ ಕಲೆಹಾಕಿತು.
ಗೋವಾ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ.ಎಲ್ ರಾಹುಲ್ 4 ರನ್ ಗಳಿಸಿ ಗವಾಸ್ ಎಸೆತದಲ್ಲಿ ಶುಕ್ಲಾಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ನಂತರ ಬಂದ ಗಣೇಶ್ ಸತೀಶ್ ಆರಂಭಿಕ ರಾಬಿನ್ ಉತ್ತಪ್ಪ ಅವರ ಜತೆಗೂಡಿ 214 ರನ್ಗಳ ಅದ್ಭುತ ಜತೆಯಾಟ ನೀಡಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಈ ವೇಳೆ ಪಿಂಟೊ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಮುಂದಾದ ಗಣೇಶ್ ಬಿಸ್ಲಾ ಅವರ ಸ್ಟಂಪ್ಗೆ ಬಲಿಯಾದರು. ನಂತರ ಬಂದ ಮನಿಷ್ ಪಾಂಡೆ ಶೂನ್ಯ ಸಂಪಾದನೆಯೊಂದಿಗೆ ಔಟಾಗುವ ಮೂಲಕ ಆತಂಕ ಮೂಡಿಸಿದರು.
ಅಂತಿಮವಾಗಿ ನಾಯರ್ ಹಾಗೂ ಬಿನ್ನಿ ಅಜೇಯ 52 ರನ್ ಜತೆಯಾಟ ನೀಡುವ ಮೂಲಕ ಇನ್ನು 21 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಉತ್ತಪ್ಪ ಆರ್ಭಟ: ಬೃಹತ್ ಮೊತ್ತವನ್ನು ಮುಂದಿಟ್ಟುಕೊಂಡು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಿರೀಕ್ಷತ ಆರಂಭ ಸಿಗಲಿಲ್ಲ. ಆದರೆ ಆರಂಭಿಕರಾಗೆ ಕಣಕ್ಕಿಳಿದಿದ್ದ ರಾಬಿನ್ ಉತ್ತಪ್ಪ ಯಾವುದೇ ಒತ್ತಡಕ್ಕೆ ಸಿಲುಕದೆ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ಎದುರಾಳಿ ಬೌಲರ್ಗಳನ್ನು ಚೆಂಡಾಡುವ ಮೂಲಕ ಕರ್ನಾಟಕ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.
118 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ 16 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನೊಂದಿಗೆ 169ರನ್ಗಳನ್ನು ಬಾರಿಸಿ, ತಂಡವನ್ನು ಸುಭದ್ರ ಸ್ಥಿತಿಗೆ ತಂದು ನಿಲ್ಲಿಸಿದರು. ಇನಿಂಗ್ಸ್ನ 39.1ನೇ ಓವರ್ನಲ್ಲಿ ಜಕಾಟಿ ಎಸೆತದಲ್ಲಿ ಡಿಸೋಜಾ ಅವರಿಗೆ ಕ್ಯಾಚ್ ನೀಡುವ ಮೂಲಕ ಉತ್ತಪ್ಪ ತಮ್ಮ ಆಕರ್ಷಕ ಇನಿಂಗ್ಸ್ ಅಂತ್ಯಗೊಳಿಸಿದರು.
ಸಂಕ್ಷಿಪ್ತ ಸ್ಕೋರ್
ಗೋವಾ 318/8 (50 ಓವರ್)
ಕಾಮತ್ 110 (112), ದೇಸಾಯ್ 62 (46), ಡಿಸೋಜಾ 54 (38)
ಬೌಲಿಂಗ್: ಅಪ್ಪಣ್ಣ 56/3, ಮಿಥುನ್ 66/2
ಕರ್ನಾಟಕ 319/4 (46.3 ಓವರ್)
ಉತ್ತಪ್ಪ 169 (118), ಗಣೇಶ್ 61 (85), ನಾಯರ್ ಅಜೇಯ 32 (31)
ಬೌಲಿಂಗ್: ಪಿಂಟೊ 35/2, ಗವಾಸ್ 68/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

