ಇಂದಿನಿಂದ ದ್ವಿತೀಯ ಅಭ್ಯಾಸ ಪಂದ್ಯ
ಚೆನ್ನೈ: ಫಾರ್ಮ್ ಇಲ್ಲದ ಕಾರಣದಿಂದಾಗಿ, ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶದಿಂದ ವಂಚಿತವಾಗಿರುವ ಗೌತಮ್ ಗಂಭೀರ್ ಅವರಿಗೆ, ಶನಿವಾರದಿಂದ ಆರಂಭಗೊಳ್ಳಲಿರುವ ಆಸೀಸ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.
ಕಳೆದ ಮೂರು ವರ್ಷಗಳಿಂದ ಒಂದು ಶತಕವನ್ನೂ ದಾಖಲಿಸಿದೇ ಇದ್ದ, ಗೌತಮ್ ಗಂಭೀರ್, ಬಿಸಿಸಿಐ ಆಯ್ಕೆ ಮಂಡಳಿ ಹಿಂಬಡ್ತಿ ನೀಡಿ, ಭಾರತ ಎ ತಂಡದ ನಾಯಕನ ಸ್ಥಾನವನ್ನು ನೀಡಿದ್ದಾರೆ. ಈ ಮೊದಲು ಭಾರತ ಎ ತಂಡದ ನಾಯಕರಾಗಿದ್ದ ಶಿಖರ್ ಧವನ್ ಅವರನ್ನು ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಸ್ಥಾನಕ್ಕೆ ತಂದು ಕೂರಿಸಲಾಗಿದೆ.
ಇದೀಗ, ಭಾರತ ಎ ತಂಡದ ಚುಕ್ಕಾಣಿ ಹಿಡಿದಿರುವ ಗಂಭೀರ್ ಅವರೇ ಇಡೀ ತಂಡದ ಸ್ಟಾರ್ ಅಟ್ರಾಕ್ಷನ್ ಆಗಿದ್ದಾರೆ. ತಂಡದ ಬ್ಯಾಟಿಂಗ್ ಕ್ರಮಾಂಕ ಇವರ ಆಗಮನದಿಂದ ಬಲಿಷ್ಠವಾಗಿದೆ ಎಂದೇ ಹೇಳಬಹುದು. ಆದರೆ, ಈ ಅನಿಸಿಕೆ ನಿಜ ಎನಿಸಿಕೊಳ್ಳುವುದು, ಬಿಡುವುದು ಗಂಭೀರ್ ಅವರ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.
ಅತ್ತ, ಆಸ್ಟ್ರೇಲಿಯಾ ತಂಡ ಇತ್ತೀಚೆಗೆ ತನ್ನ ಅಭ್ಯಾಸ ಪಂದ್ಯವನ್ನು ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಅದು ತನ್ನ ಪ್ರದರ್ಶನವನ್ನು ಕಾಯ್ದುಕೊಳ್ಳದೇ ಇದ್ದರೂ, ಕಳೆಪ ಪ್ರದರ್ಶನವನ್ನೇನೂ ನೀಡಿಲ್ಲ. ಇದು ಆ ತಂಡದ ಆತ್ಮವಿಶ್ವಾಸಕ್ಕೆ ಕುಂದಾಗದಂತೆ ಮಾಡಿರಲೂಬಹುದು.
ಅದೂ ಅಲ್ಲದೇ, ಭಾರತದ ನೆಲದಲ್ಲಿ ಆಸೀಸ್ ಆಡಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ (ಅಧ್ಯಕ್ಷರ ಇಲೆವೆನ್ ವಿರುದ್ಧದ ಪಂದ್ಯ) ನಾಯಕ ಮೈಕಲ್ ಕ್ಲಾರ್ಕ್ ಅವರು ತಂಡಕ್ಕೆ ಆಗಮಿಸಿರಲಿಲ್ಲ. ಇದೀಗ, ಭಾರತ ಎ ತಂಡದ ವಿರುದ್ಧದ ಪಂದ್ಯಕ್ಕೆ ಅವರು ಆಗಮಿಸಿದ್ದಾರೆ. ಇದು ಆಸೀಸ್ಗೆ ಬಲ ತಂದಿರುವುದರಲ್ಲಿ ಸಂಶಯವಿಲ್ಲ. ಅವರ ಜೊತೆ ಆಲ್ರೌಂಡರ್ ಶೇನ್ ವ್ಯಾಟ್ಸನ್ ಸಹ ತಂಡದ ಪ್ರಮುಖರಲ್ಲೊಬ್ಬರು.
ಅಧ್ಯಕ್ಷರ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯವೂ ಇದೇ ಕ್ರೀಡಾಂಗಣದಲ್ಲೇ ನಡೆದಿತ್ತು. ಹಾಗಾಗಿ, ಈ ಪಿಚ್ನ ಪರಿಚಯ ಆಸೀಸ್ ತಂಡಕ್ಕೆ ಈಗಾಗಲೇ ಆಗಿದೆ. ಇನ್ನು, ತಂಡದಲ್ಲಿ ಮೂವರು ಪ್ರಮುಖ ಬೌಲರ್ಗಳಿಗೆ ಈ ಪಿಚ್ ಮಾಹಿತಿ ಹೆಚ್ಚು ಉಪಯೋಗಕ್ಕೆ ಬರಲಿದೆ.
ಇನ್ನು, ಭಾರತ ಎ ತಂಡದ ಬ್ಯಾಟಿಂಗ್ ರೋಹಿತ್ ಶರ್ಮಾ, ಮನೋಜ್ ತಿವಾರಿ ಹಾಗೂ ಅಜಿಂಕ್ಯ ರಹಾನೆ ಅವರ ಮೇಲೆ ಅವಲಂಬಿಸಿದೆ ಎನ್ನಲಡ್ಡಿಯಿಲ್ಲ. ಇವರಲ್ಲದೇ, ಜೀವನ್ಜೋತ್ ಸಿಂಗ್ ಸೇರಿದಂತೆ ತಂಡದಲ್ಲಿ ಕೆಲವು ಹೊಸ ಮುಖಗಳೂ ಇವೆ. 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 995 ರನ್ ಗಳಿಸಿರುವ ಜೀವನ್ಜೋತ್ ಸಿಂಗ್, ಭಾರತ ತಂಡಕ್ಕೆ ಉತ್ತಮ ಆಸರೆಯಾಗಬಲ್ಲರು. ಇವರ ಜೊತೆಗೆ, ರಣಜಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದ್ವಿತೀಯ ಬ್ಯಾಟ್ಸ್ಮನ್ ಆಗಿರುವ ಅಭಿಷೇಕ್ ನಾಯರ್ ಅವರೂ ತಂಡದಲ್ಲಿದ್ದಾರೆ. ಅವರೊಬ್ಬ ಬೌಲರ್ ಕೂಡಾ ಆಗಿದ್ದು, ಈ ಬಾರಿಯ ರಣಜಿ ಫೈನಲ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು.
ಒಟ್ಟಿನಲ್ಲಿ ಇಂಡಿಯಾ ಇಲೆವೆನ್ ತಂಡ ಯಾವ ರೀತಿಯಲ್ಲಿ ಆಸೀಸ್ ತಂಡವನ್ನು ಎದುರಿಸಲಿದೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳು ಆಸಕ್ತಿಯನ್ನು ಕೆರಳಿಸಿರುವುದು ಸುಳ್ಳಲ್ಲ.
ತಂಡಗಳು
ಭಾರತ ಎ: ಗೌತಮ್ ಗಂಭೀರ್ (ನಾಯಕ), ಜೀವನ್ಜೋತ್ ಸಿಂಗ್, ರೋಹಿತ್ ಶರ್ಮಾ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಸಿ. ಗೌತಮ್, ರಾಕೇಶ್ ಧ್ರುವ್, ಜಲಜ್ ಸೆಕ್ಸೇನಾ, ಮನ್ಪ್ರೀತ್ ಗೋನಿ, ವಿನಯ್ ಕುಮಾರ್, ಧವಳ್ ಕುಲಕರ್ಣಿ, ಅಶೋಕ್ ಮನೇರಿಯಾ, ಅಭಿಷೇಕ್ ನಾಯರ್.
ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ಎಡ್ವರ್ಡ್ ಕೋವನ್, ಫಿಲಿಪ್ ಹ್ಯೂಸ್, ಶೇನ್ ವ್ಯಾಟ್ಸನ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್, ಮ್ಯಾಥ್ಯೂ ವೇಡ್, ಗ್ಲೆನ್ ಮ್ಯಾಕ್ಸ್ವೆಲ್, ಮೋಸೆಸ್ ಹೆನ್ರಿಕ್ಯೂಸ್, ಮಿಚೆಲ್ ಜ್ಯಾಕ್ಸನ್ ಬರ್ಡ್, ಕ್ಸೇವಿಯರ್ ಡೊಹರ್ಟಿ, ನಥಾನ್ ಲಿಯಾನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

