ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಇಂಗ್ಲೆಂಡ್
ಮುಂಬೈ: ಈ ಬಾರಿಯ ಮಹಿಳಾ ವಿಶ್ವಕಪ್ ಗೆಲ್ಲಲಾಗದಿದ್ದರೂ, ಪಂದ್ಯಾವಳಿಯಲ್ಲಿ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಕಡೆಗೂ ಸಫಲವಾದ ಆಂಗ್ಲರ ಪಡೆ, ಒಂದು ಸಮಾಧಾನದ ನಿಟ್ಟುಸಿರಿನೊಂದಿಗೆ ಈ ಬಾರಿಯ ಚಾಂಪಿಯನ್ಷಿಪ್ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.
ಪಂದ್ಯಾವಳಿಯ ಮೂರನೇ ಸ್ಥಾನಕ್ಕಾಗಿ, ಶುಕ್ರವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ಗಳ ಜಯ ಸಂಪಾದಿಸಿತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದರೆ, ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 47 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ಗೆ ಆರಂಭಿಕರಾದ ಮೆಕೇ ಹಾಗೂ ಬೇಟ್ಸ್ ಇಬ್ಬರೂ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟಿದ್ದರು. ಇನಿಂಗ್ಸ್ನ 12ನೇ ಓವರ್ನಲ್ಲಿ ಈ ಜೋಡಿ ಮುರಿದ ಮೇಲೆ ಕ್ರೀಸ್ಗೆ ಕಾಲಿಟ್ಟ ಸ್ಯಾಟರ್ವೇಟ್, ಮೆಕೇ ಅವರೊಂದಿಗೆ ಸೇರಿ 2ನೇ ವಿಕೆಟ್ಗೆ 34 ರನ್ ಸೇರಿಸಿದರು. 22ನೇ ಓವರ್ನಲ್ಲಿ ಮೆಕೇ ಔಟಾದರು. ಆನಂತರ, ಅವರ ಜಾಗಕ್ಕೆ ಬಂದ ಡಿವೈನ್ ಜೊತೆಗೂಡಿದ ಸ್ಯಾಟರ್ವೇಟ್, 3ನೇ ವಿಕೆಟ್ಗೆ 19 ರನ್ ಸೇರಿಸಿದರು.
28ನೇ ಓವರ್ನಲ್ಲಿ ಡಿವೈನ್ ಔಟಾದ ಮೇಲೆ ಕ್ರೀಸ್ಗೆ ಆಗಮಿಸಿದ ಮೆಕ್ಗ್ಲೆಶಾನ್, ಸ್ಯಾಟರ್ವೇಟ್ಗೆ ಹೆಚ್ಚು ಬೆಂಬಲ ನೀಡಲಿಲ್ಲ. ವೈಯಕ್ತಿಕವಾಗಿ ಕೇವಲ 1 ರನ್ ಗಳಿಸಿದ ಅವರು, ಔಟಾಗಿ ಹೊರನಡೆದರು. ಅವರ ನಂತರ ಬಂದ ಪರ್ಕಿನ್ಸ್, ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದರು. ಅವರ ಹಾಗೂ ಸ್ಟಾಟರ್ವೇಟ್ ಜುಗಲ್ಬಂದಿಯಲ್ಲಿ ತಂಡದ ಮೊತ್ತಕ್ಕೆ 58 ರನ್ ಹರಿದುಬಂದವು. 43ನೇ ಓವರ್ನಲ್ಲಿ ಪರ್ಕಿನ್ಸ್ ವಿಕೆಟ್ ಬಿತ್ತು. ಆನಂತರ, ಬಂದ ಪ್ರೀಸ್ಟ್ ಕೇವಲ 15 ರನ್ ಗಳಿಸಿ ಔಟಾದರು. ಆಗ, ತಂಡದ ಮೊತ್ತ 184 ರನ್. ಅದೇ ಮೊತ್ತಕ್ಕೆ, ಅದುವರೆಗೂ ಕ್ರೀಸ್ನಲ್ಲಿದ್ದ ಸ್ಯಾಟರ್ವೇಟ್ ಸಹ ವಿಕೆಟ್ ಒಪ್ಪಿಸಿ ಹೊರನಡೆದರು. 95 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ 85 ರನ್ ಗಳಿಸಿದ ಅವರ ಇನಿಂಗ್ಸ್ ಇನಿಂಗ್ಸ್ನ 47ನೇ ಓವರ್ನಲ್ಲಿ ಅಂತ್ಯಗೊಂಡಿತು.
ಪ್ರೀಸ್ಟ್ ಹಾಗೂ ಸ್ಯಾಟರ್ವೇಟ್ ನಂತರ, ಇನಿಂಗ್ಸ್ ಜವಾಬ್ದಾರಿಯನ್ನು ಕ್ರಮವಾಗಿ ಹೊತ್ತಿದ್ದು ಬ್ರೌನಿ ಹಾಗೂ ದೂಲನ್. ಈ ಜೋಡಿ, 8ನೇ ವಿಕೆಟ್ಗೆ 36 ರನ್ ಸೇರಿಸಿತು. ಇನಿಂಗ್ಸ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ದೂಲನ್ ಔಟಾದರು. ಅಂತಿಮವಾಗಿ, ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಸೇರಿಸಿತು. 27 ರನ್ ಗಳಿಸಿದ ನ್ಯೂಜಿಲೆಂಡ್ ಅಜೇಯರಾಗಿ ಉಳಿದರು.
ಎಡ್ವರ್ಡ್ಸ್ ಶತಕ: ನ್ಯೂಜಿಲೆಂಡ್ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಬೆಂಗಾವಲಾಗಿ ನಿಂತರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ವ್ಯಾಟ್ ಅವರು ವೈಯಕ್ತಿಕವಾಗಿ ಕೇವಲ 5 ರನ್ ಗಳಿಸಿ ಔಟಾದರೂ, ಧೃತಿಗೆಡದೇ ಕ್ರೀಸ್ನಲ್ಲಿ ಗಟ್ಟಿಯಾಗಿ ಬೇರೂರಿ, ಕಿವೀಸ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿದ ಎಡ್ವರ್ಡ್ಸ್, ಇನಿಂಗ್ಸ್ ಅಂತ್ಯದವರೆಗೂ ಅಜೇಯರಾಗಿ ಉಳಿದರು.
ಅವರು ಎದುರಿಸಿದ ಒಟ್ಟು 121 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ, 106 ರನ್ ಗಳಿಸಿದ ಅವರು ಆಂಗ್ಲರ ಜಯದ ರೂವಾರಿ ಎನಿಸಿಕೊಂಡರು. ಅವರಿಗೆ, ಮಧ್ಯಮ ಕ್ರಮಾಂಕದ ಗ್ರೀನ್ವೇ (31) ಅವರಿಂದ ಉತ್ತಮ ಬೆಂಬಲ ದೊರಕಿತ್ತು. ಇತರ ಬ್ಯಾಟರ್ಗಳಾದ ಟೇಲರ್ (28), ಬ್ರಿಂಡಲ್ (27) ಅವರೂ ಉತ್ತಮ ಕಾಣಿಕೆ ನೀಡಿದರು. ಆದರೆ, ಇವರೆಲ್ಲರ ವಿಕೆಟ್ಗಳು ಉರುಳಿದ ಮೇಲೆ ತಂಡದ ಅಂತಿಮ ಕ್ರಮಾಂಕದ ಬ್ಯಾಟರ್ಗಳಿಂದ ಎಡ್ವರ್ಡ್ಸ್ಗೆ ಯಾವುದೇ ಅಂಥಾ ನೆರವು ದೊರೆಯಲಿಲ್ಲ. ಆದರೂ, ತಂಡವನ್ನು ಜಯದ ದಡ ಸೇರಿಸುವಲ್ಲಿ ಎಡ್ವರ್ಡ್ಸ್ ಸಫಲರಾದರು. 47 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದ ಇಂಗ್ಲೆಂಡ್, ಜಯ ಸಾಧಿಸಿ, ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 220/8 (50 ಓವರ್)
ಸ್ಯಾಟರ್ವೇಟ್ 85 (95), ಮೆಕೇ 30 (62)
ಬೌಲಿಂಗ್: ಕೋಲ್ವಿನ್ 31/3, ಬ್ರಿಂಡಲ್ 38/2
ಇಂಗ್ಲೆಂಡ್: 222/6 (50 ಓವರ್)
ಎಡ್ವರ್ಡ್ಸ್ ಅಜೇಯ 106 (121), ಗ್ರೀನ್ವೇ 31 (47)
ಬೌಲಿಂಗ್: ದೂಲನ್ 50/3, ರುಕ್ 20/2
ಪಂದ್ಯಶ್ರೇಷ್ಠ: ಚಾರ್ಲೋಟ್ ಎಡ್ವರ್ಡ್ಸ್ (ಇಂಗ್ಲೆಂಡ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

