ಶ್ರೀಲಂಕಾ ವನಿತೆಯರಿಗೆ ಜಯದ 'ದಕ್ಷಿಣೆ'
ಕಟಕ್: ಮಹಿಳಾ ವಿಶ್ವಕಪ್ನ ಐದನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 88 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 40.1 ಓವರ್ಗಳಲ್ಲಿ 156 ರನ್ ಪೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡಿತು.
ಟಾಸ್ ಗೆದ್ದಿದ್ದ ಶ್ರೀಲಂಕಾ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಅದರ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಯಶೋದಾ ಮೆಂಡಿಸ್ ಹಾಗೂ ವೀರಕ್ಕೋಡಿ ಅವರು ತಂಡದ ಮೊತ್ತ 14 ರನ್ ಆಗುವಷ್ಟರಲ್ಲಿ ಪೆವಿಲಿಯನ್ಗೆ ಮರಳಿದರು. ಆನಂತರ, ಜೊತೆಯಾದ ಜಯಾಗನಿ ಹಾಗೂ ರಾಸಂಗಿಕಾ ಇಬ್ಬರೂ, 3ನೇ ವಿಕೆಟ್ಗೆ 68 ರನ್ ಸೇರಿಸಿದರು.
ಇನಿಂಗ್ಸ್ನ 22ನೇ ಓವರ್ನಲ್ಲಿ ರಾಸಂಗಿಕಾ ಅವರ ವಿಕೆಟ್ ಬಿದ್ದ ಹಿನ್ನೆಲೆಯಲ್ಲಿ, ಕ್ರೀಸ್ಗೆ ಬಂದ ಸಿರಿವರ್ಧನೆ, ಮೂರನೇ ಕ್ರಮಾಂಕದ ಜಯಾಗನಿ ಅವರ ಜೊತೆ ಸೇರಿ 4ನೇ ವಿಕೆಟ್ಗೆ 84 ರನ್ಗಳ ಅಭಿದಾನ ನೀಡಿದರು. 41ನೇ ಓವರ್ನಲ್ಲಿ ವೈಯಕ್ತಿಕವಾಗಿ 43 ರನ್ ಗಳಿಸಿದ್ದ ಸಿರಿವರ್ಧನೆ, ಲೆಟ್ಸೋಲೋ ಅವರ ಬೌಲಿಂಗ್ನಲ್ಲಿ ಔಟಾದರು.
ಅವರ ನಂತರ ಬಂದ ಕೌಶಲ್ಯಾ ಅವರು ಉತ್ತಮವಾಗಿ ಆಡಿದರು. ಆದರೆ, ಅವರು ಕ್ರೀಸ್ಗೆ ಹೊಂದಿಕೊಳ್ಳುವ ಮೊದಲೇ ಜಯಾಗನಿ ಅವರು ಔಟಾದರು. ಅವರ ಜಾಗಕ್ಕೆ ಬಂದಿದ್ದು ವೀರಕ್ಕೋಡಿ. ಕೌಶಲ್ಯಾ ಅವರೊಂದಿಗೆ ವೀರಕ್ಕೋಡಿ ಹೆಚ್ಚು ಆಡಲಿಲ್ಲ. 46ನೇ ಓವರ್ನಲ್ಲಿ ಅವರು ಔಟಾದ ನಂತರ, ಬಂದ ಸೇನಾವಿರತ್ನ ಅವರು ಕೌಶಲ್ಯ ಅವರೊಂದಿಗೆ ರನ್ ಪೇರಿಸಲು ಶುರುವಾದರು. ಇನಿಂಗ್ಸ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಕೌಶಲ್ಯ ಅವರು ಔಟಾಗುವುದರೊಂದಿಗೆ ಲಂಕಾದ ಇನಿಂಗ್ಸ್ ಸಹ ಅಂತ್ಯಗೊಂಡಿತು. ಅಂತಿಮವಾಗಿ, ಲಂಕಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಪೇರಿಸಿತು.
ಲಂಕಾ ನೀಡಿದ್ದ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭವೇನೂ ಉತ್ತಮವಾಗಿರಲಿಲ್ಲ. ಆರಂಭಿಕರಾದ ಪೊಟ್ಜೀಟರ್ ಅವರ ವಿಕೆಟ್ ತಂಡದ ಮೊತ್ತತ ಕೇವಲ 15 ರನ್ ಆಗಿದ್ದಾಗಲೇ ಉರುಳಿತು. ಆನಂತರ, ಮೂರನೇ ಕ್ರಮಾಂಕದ ಬ್ಯಾಟರ್ ಡು ಪ್ರೀಜ್ ಹಾಗೂ ಮತ್ತೊಬ್ಬ ಆರಂಭಿಕ ಆಟಗಾರ್ತಿ ತ್ರಿಷಾ ಚೆಟ್ಟಿ ಇಬ್ಬರೂ ತಂಡದ ಮೊತ್ತಕ್ಕೆ ಕೇವಲ 15 ರನ್ ಸೇರಿಸುವಷ್ಟರಲ್ಲಿ ಡು ಪ್ರೀಜ್ ವಿಕೆಟ್ ಚೆಲ್ಲಿದರು.
ಆನಂತರ, ಚೆಟ್ಟಿಗೆ ಜೊತೆಯಾಗಿದ್ದು ಬ್ರಿಟ್ಸ್. ಆದರೆ, ಈ ಜೋಡಿಯೂ ಕ್ರೀಸ್ನಲ್ಲಿ ಹೆಚ್ಚು ಬಾಳಲಿಲ್ಲ. 13ನೇ ಓವರ್ನಲ್ಲಿ ಚೆಟ್ಟಿ ಔಟಾಗುವ ಮೂಲಕ ಈ ಜೋಡಿಯೂ ಮುರಿಯಿತು. ಆನಂತರ, ದಕ್ಷಿಣ ಆಫ್ರಿಕಾಕ್ಕೆ ಬೆಂಬಲವಾಗಿ ಯಾವೊಬ್ಬ ಬ್ಯಾಟರ್ಗಳೂ ನಿಲ್ಲಲಿಲ್ಲ. ಆದರೆ, ಮಧ್ಯಮ ಕ್ರಮಾಂಕದ ಫ್ರಿಟ್ಸ್ ಮಾತ್ರ ಕೊಂಚ ಕೆಚ್ಚೆದೆಯ ಆಟ ಪ್ರದರ್ಶಿಸಿದರು. ಒಟ್ಟು 74 ಎಸೆತಗಳನ್ನು ಎದುರಿಸಿದ ಅವರು, 7 ಬೌಂಡರಿಗಳುಳ್ಳ 54 ರನ್ ಗಳಿಸಿದರಲ್ಲದೇ, ತಂಡದ ಗೆಲುವಿಗಾಗಿ ಶ್ರಮಿಸಿದರು. ಆದರೆ, 37ನೇ ಓವರ್ನಲ್ಲಿ ಕೌಶಲ್ಯಾ ಅವರ ಕೈಯ್ಯಲ್ಲಿ ರನೌಟ್ ಆಗುವ ಮೂಲಕ ಅವರ ಹೋರಾಟ ಅಂತ್ಯಗೊಂಡಿತು.
ಫ್ರಿಟ್ಸ್ ಔಟಾದ ಮೇಲೆ, ಯಾರೊಬ್ಬರೂ ಬಲವಾಗಿ ಬ್ಯಾಟ್ ಬೀಸಲೇ ಇಲ್ಲ. ಕೊನೆಯ ಹಂತದ ಬ್ಯಾಟರ್ಗಳಾದ ಟ್ರಯಾನ್, ಲ್ಯೂಸ್, ಲೌಬ್ಸರ್, ಲೆಟ್ಸೊಲೋ ಅವರುಗಳು ಕೇವಲ ಒಂದಂಕಿ ರನ್ ಗಳಿಸಿ, ವಿಕೆಟ್ ಒಪ್ಪಿಸಿದರು. ಅಂತಿಮವಾಗಿ, 40.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ, ಕೇವಲ 156 ರನ್ ಮಾತ್ರ ಗಳಿಸುವಲ್ಲಿ ಶಕ್ತವಾಯಿತು.
8.1 ಓವರ್ ಮಾಡಿದ ಸಿರಿವರ್ಧನೆ 32 ರನ್ ನೀಡಿದ ನಾಲ್ಕು ವಿಕೆಟ್ ಕಬಳಿಸಿ, ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೇ, ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 244/7 (50 ಓವರ್)
ರಾಸಂಗಿಕಾ 52 (107),
ಸಿರಿವರ್ಧನೆ 44 (65)
ಬೌಲಿಂಗ್: ಲೆಟ್ಸಾಲೋ 36/2,
ಟ್ರಯಾನ್ 46/2
ದಕ್ಷಿಣ ಆಫ್ರಿಕಾ: 156/10 (40.1 ಓವರ್)
ಫ್ರಿಟ್ಸ್ 54 (74),
ವ್ಯಾನ್ ನೀಕೆರ್ಕ್ 26 (41)
ಬೌಲಿಂಗ್: ಸಿರಿವರ್ಧನೆ 20/4, ವೀರಕ್ಕೋಡಿ 15/2
ಪಂದ್ಯಶ್ರೇಷ್ಠ: ಸಿರಿವರ್ಧನೆ (ಶ್ರೀಲಂಕಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

