ಈ ಬಾರಿಯ ಪ್ರಶಸ್ತಿ ಯಾರ ಮಡಿಲಿಗೆ ?

ಮುಂಬೈ: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಹಾಗೂ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶ ಪಡೆದಿರುವ ವೆಸ್ಟ್ ಇಂಡೀಸ್ ತಂಡಗಳು, ಭಾನುವಾರ ನಡೆಯಲಿರುವ ಮಹಿಳಾ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಪರಸ್ಪರ ಸೆಣೆಸಲಿವೆ.
ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾಕ್ಕೆ ಫೈನಲ್ ಪಂದ್ಯ ಸೇಡಿನ ಪಂದ್ಯವೂ ಆಗಿದ್ದು, ಇದರ ಜೊತೆಗೆ ಕಪ್ ಗೆದ್ದು ತಮ್ಮ ದೇಶದ ಜನತೆಗೆ ಸಿಹಿ ಸುದ್ದಿ ನೀಡುವ ಕಾತುರವಿದೆ. ಆದರೆ, ಕೆರಿಬಿಯನ್ನರ ಎದುರಿನ ಈ ಪಂದ್ಯದಲ್ಲಿ ಜಯ ಗಳಿಸುವುದು ಆಸೀಸ್ ಪಾಲಿಗೆ ಅಷ್ಟು ಸುಲಭವಾಗಿಲ್ಲ. ಏಕೆಂದರೆ, ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ವೆಸ್ಟ್ ಇಂಡೀಸ್ ತಂಡವೂ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದು, ಪ್ರಶಸ್ತಿಯನ್ನು ಅಷ್ಟು ಸುಲಭವಾಗಿ ಅದು ಆಸೀಸ್‌ಗೆ ಬಿಟ್ಟುಕೊಡಲಾರದು. ಅಲ್ಲದೇ, ತನ್ನ ಉತ್ತಮ ಪ್ರದರ್ಶನದಿಂದಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ನಂಥ ಬಲಿಷ್ಠ ತಂಡವನ್ನೇ ಹಿಂದಿಕ್ಕಿ ಫೈನಲ್ ಪ್ರವೇಶಿಸಿರುವ ವಿಂಡೀಸ್, ಸದ್ಯಕ್ಕಂತೂ ಉತ್ಸಾಹ ಚಿಲುಮೆ. ಹೀಗೆ, ಪ್ರತಿಭೆ ಹಾಗೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿರುವ ತಂಡವನ್ನು ಮಣಿಸಲು ಆಸೀಸ್ ಮಾತ್ರವಲ್ಲ ಯಾವುದೇ ತಂಡಕ್ಕೆ ಅಷ್ಟು ಸುಲಭದ ವಿಷಯವಲ್ಲ.
ಅಲ್ಲದೇ, ಆಸ್ಟ್ರೇಲಿಯಾ ತಂಡದಲ್ಲೂ ಕೆಲವು ಸಮಸ್ಯೆಗಳಿವೆ. ಫೈನಲ್ ಪಂದ್ಯದಲ್ಲಿ ಅದನ್ನು ಮೀರಿ ಆ ತಂಡ ಪ್ರದರ್ಶನ ನೀಡಬೇಕಿದೆ. ಆ ತಂಡದ ಪ್ರಮುಖವಾದ ದೌರ್ಬಲ್ಯವೆಂದರೆ, ಅದರ ಬ್ಯಾಟರ್‌ಗಳು ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳದಿರುವುದು. ಆರಂಭಿಕರಾದ ಮೆಗ್ ಲ್ಯಾನಿಂಗ್ ಹಾಗೂ ರಾಚೆಲ್ ಹೇನ್ಸ್ ಇಬ್ಬರೂ ತಂಡದ ಇನಿಂಗ್ಸ್‌ಗೆ ಭದ್ರ ಬುನಾದಿಯನ್ನು ಹಾಕುವಲ್ಲಿ ಪದೇ ಪದೇ ವಿಫಲವಾಗಿರುವುದು ಒಂದು ಪ್ರಮುಖ ಸಮಸ್ಯೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ಆರಂಭಿಕ ಜೋಡಿ, ಮೊದಲ ವಿಕೆಟ್‌ಗೆ 55 ರನ್ ಕಲೆಹಾಕಿದ್ದು ಬಿಟ್ಟರೆ, ಮಿಕ್ಕೆಲ್ಲಾ ಪಂದ್ಯಗಳಲ್ಲಿ ಅವರು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಲ್ಯಾನಿಂಗ್ ಅವರು 112 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹೇನ್ಸ್ ಅವರು 71 ರನ್ ಗಳಿಸಿದ್ದರು. ಆದರೆ ಇವರಿಬ್ಬರೂ ಒಟ್ಟಾಗಿ ತಂಡಕ್ಕೆ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದ್ದು ಕೇವಲ ಒಂದು ಬಾರಿ ಮಾತ್ರ. ಫೈನಲ್ ಪಂದ್ಯದಲ್ಲಿ ಈ ಇಬ್ಬರೂ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿ, ಮೊದಲ ವಿಕೆಟ್‌ಗೆ ಒಂದು ಭರ್ಜರಿ ಮೊತ್ತ ಪೇರಿಸಿದರೆ, ಆಸೀಸ್‌ಗೆ ಹೆಚ್ಚು ಶಕ್ತಿ ತುಂಬಿದಂತಾಗುತ್ತದೆ.
ಇನ್ನು, ಆಸೀಸ್ ತಂಡದ ಬೌಲಿಂಗ್ ವಿಭಾಗದಲ್ಲಿ ಜೂಡಿ ಫೀಲ್ಡ್ಸ್, ವೇಗಿ ಮೆಗಾನ್ ಶುಟ್, ಹಾಲಿ ಫರ್ಲಿಂಗ್ ಇದ್ದಾರೆ. ಅದರಲ್ಲೂ ಮೆಗಾನ್ ಅವರು ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ 13 ವಿಕೆಟ್ ಗಳಿಸಿ, ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರೆಲ್ಲರ ಜೊತೆಯಲ್ಲಿ, ಎಲೀಸ್ ಪೆರ್ರಿ ಸಹಾ ಇದ್ದಾರೆ.
ಅತ್ತ, ವೆಸ್ಟ್ ಇಂಡೀಸ್ ಬಳಗವಂತೂ ಫೈನಲ್ ಪಂದ್ಯದ ಬಗ್ಗೆ ಸಾಕಷ್ಟು ಪುಳಕಿತಗೊಂಡಿದೆ. ಭಾನುವಾರದ ಫೈನಲ್ ಪಂದ್ಯ ಗೆದ್ದರೆ, ಅದು ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಎತ್ತಿಕೊಳ್ಳುವುದರಲ್ಲದೇ, ಚರಿತ್ರಾರ್ಹ ಸಾಧನೆ ಮಾಡಲಿದೆ. ಈ ಹಿಂದಿನ ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟು ಐದು ಬಾರಿ ಆಸೀಸ್ ತಂಡವನ್ನು ಎದುರಿಸಿರುವ ವೆಸ್ಟ್ ಇಂಡೀಸ್, ನಾಲ್ಕು ಬಾರಿ ಸೋಲು ಕಂಡಿತ್ತು. ಆದರೂ, ಈ ಬಾರಿಯ ವಿಶ್ವಕಪ್‌ನಲ್ಲಿ ಫೈನಲ್‌ಗೂ ಮುನ್ನ ಆಡಿದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಆಸೀಸ್ ತಂಡವನ್ನು ಮಣಿಸಿರುವುದು ವಿಂಡೀಸ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಇನ್ನು, ತಂಡದಲ್ಲಿ ಸ್ಟೆಫಾನಿ ಟೇಲರ್ ಅವರೇ ಪ್ರಮುಖ ಆಟಗಾರರಾಗಿದ್ದಾರೆ. ಪಂದ್ಯಾವಳಿಯಲ್ಲಿ ಇದುವರೆಗೂ ಒಟ್ಟು 309 ರನ್ ಗಳಿಸಿರುವ ಅವರು ಉತ್ತಮ ಬ್ಯಾಟ್ಸ್‌ವುಮನ್. ಅಲ್ಲದೇ, ಉತ್ತಮವಾಗಿ ಬೌಲ್ ಕೂಡ ಮಾಡಬಲ್ಲ ಸ್ಟೆಫಾನಿ ಅವರು, ಫೈನಲ್ಸ್‌ನಲ್ಲಿ ಕೆಲವು ವಿಕೆಟ್ ಉರುಳಿಸಿದರೆ, ತಂಡಕ್ಕೆ ಮತ್ತಷ್ಟು ಅನುಕೂಲ.
ಇವರ ಜೊತೆಯಲ್ಲಿ ತಂಡದ ಮತ್ತೊಂದು ಪ್ರಮುಖ ಶಕ್ತಿ - ಡೀನ್‌ಡ್ರಾ ಡಾಟಿನ್. ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ ಶತಕ ಗಳಿಸಿದ ವಿಶ್ವದಾಖಲೆಯ ಗರಿ ಹೊಂದಿರುವ ಡಾಟಿನ್, ಆಸೀಸ್ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ 60 ಎಸೆತಗಳಲ್ಲಿ 67 ರನ್ ಗಳಿಸಿದ್ದರು. ಇವರು ವೆಸ್ಟ್ ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಶಕ್ತಿ ಎಂದರೆ ತಪ್ಪಾಗಲಾರದು. ಇನ್ನು, ಬೌಲಿಂಗ್ ವಿಭಾಗದಲ್ಲಿ ಶ್ಯಾನೆಲ್ ಡೆಲೇ, ಟ್ರೆಮೇನ್ ಸ್ಮಾರ್ಟ್ ಅವರು ಪಂದ್ಯಾವಳಿಯಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರೊಂದಿಗೆ, ಸ್ಪಿನ್ನರ್ ಅನಿಸಾ ಮಹಮ್ಮದ್ ಅವರ ಕೈಚಳಕವನ್ನೂ ಭಾನುವಾರದ ಪಂದ್ಯದಲ್ಲಿ ವಿಂಡೀಸ್ ಬಳಗ ನಿರೀಕ್ಷಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


