ಉದ್ಯಾನ ನಗರಿಯಲ್ಲಿ ಧೋನಿ ಬಳಗ

ಬೆಂಗಳೂರು: ಮುಂದಿನ ವಾರ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್ ತಂಡದ ಮೂರು ದಿನಗಳ ಅಭ್ಯಾಸ ಶಿಬಿರ ಶನಿವಾರ ಬೆಂಗಳೂರಿನಲ್ಲಿ ಆರಂಭಗೊಂಡಿತು. ಈ ಶಿಬಿರದಲ್ಲಿ ಸಚಿನ್ ತೆಂಡೂಲ್ಕರ್ ಅವರೂ ಪಾಲ್ಗೊಂಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಿದ ನಂತರ, ಸಚಿನ್ ಅವರು ಪಾಲ್ಗೊಳ್ಳುತ್ತಿರುವ ಮೊದಲ ಟೆಸ್ಟ್ ಸರಣಿಯಿದು.
ಶನಿವಾರ ಬೆಳಗ್ಗೆಯಿದ ಸುಮಾರು 3 ಗಂಟೆಗಳ ಕಾಲ ಅಭ್ಯಾಸ ನಡೆಸಿದ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ್, ಪ್ರಗ್ಯಾನ್ ಓಜಾ ಹಾಗೂ ಆರ್. ಅಶ್ವಿನ್ ಅವರೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ಸಚಿನ್ ತೆಂಡೂಲ್ಕರ್ ಅವರಿಗೆ ವಿರಾಟ್ ಕೊಹ್ಲಿ ಸಾಥ್ ನೀಡಿದರು. ವಿರಾಟ್ ಎಸೆತಗಳಿಗೆ ತೆಂಡೂಲ್ಕರ್ ಸುಮಾರು 45 ನಿಮಿಷ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು.
ಸುಮಾರು ಎರಡು ತಿಂಗಳುಗಳ ನಂತರ ಟೀಂ ಇಂಡಿಯಾದೊಂದಿಗೆ ಭಾಗವಹಿಸಿದ್ದ ಸಚಿನ್, ತದೇಕಚಿತ್ತರಾಗಿ ಅಭ್ಯಾಸ ನಡೆಸುತ್ತಿದ್ದರು. ಆದಷ್ಟೂ ಬೇಸಿಕ್ ವಿಷಯಗಳಿಗೆ ಹೆಚ್ಚು ಗಮನಕೊಟ್ಟು ಅಭ್ಯಾಸ ನಡೆಸುತ್ತಿದ್ದ ಅವರು, ವಿರಾಟ್ ಎಸೆತಗಳಿಗೆ ಅಳೆದೂ ತೂಗಿ ಬ್ಯಾಟ್ ಬೀಸುತ್ತಿದ್ದರು. ಅತ್ಯಂತ ಗಾಂಭೀರ್ಯದಿಂದ ಇದ್ದರೂ, ಸಚಿನ್ ಹೆಚ್ಚು ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಇತ್ತೀಚೆಗೆ ನಡೆದ ರಣಜಿ ಪಂದ್ಯಾವಳಿಯಲ್ಲಿ ಮುಂಬೈ ಪರ ಎರಡು ಬಾರಿ ಶತಕ ದಾಖಲಿಸಿದ್ದ ಸಚಿನ್ ತೆಂಡೂಲ್ಕರ್ ಅವರು, ಆಸೀಸ್ ವಿರುದ್ಧದ ಟೆಸ್ಟ್ನಲ್ಲೂ ಉತ್ತಮವಾಗಿ ಆಡುವ ಆಸ್ಥೆ, ಅವರ ಅಭ್ಯಾಸದಲ್ಲಿ ಎದ್ದುಕಾಣುತ್ತಿತ್ತು.
ತಂಡದಲ್ಲಿನ ಹೊಸ ಮುಖ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಇಬ್ಬರೂ ನೆಟ್ನಲ್ಲಿ 'ಹೈ ಅಲ್ಟಿಟ್ಯೂಡ್ ಮಾಸ್ಕ್' ಉಪಯೋಗಿಸಿ, ಅಭ್ಯಾಸ ನಡೆಸಿದರು. ಸಾಮಾನ್ಯವಾಗಿ ಪರ್ವತಾರೋಹಿಗಳು ಇಂಥಾ ಮಾಸ್ಕ್ಗಳನ್ನು ಉಪಯೋಗಿಸುತ್ತಾರೆ. ಈ ಮಾಸ್ಕ್ಗಳನ್ನು ಧರಿಸಿ ಆಡುವುದರಿಂದ ಇದು ಶ್ವಾಸಕೋಶಗಳಲ್ಲಿ ಗಾಳಿಯ ಸಂಚಾರವನ್ನು ಸಾಮಾನ್ಯ ಸ್ಥಿತಿಗಿಂತಲೂ ಉತ್ತಮಪಡಿಸುತ್ತದೆ ಅಲ್ಲದೇ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇನ್ನು, ವೀರೇಂದ್ರ ಸೆಹ್ವಾಗ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜಾ ಅವರೂ ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಟೆನಿಸ್ ಬಾಲ್ಗಳ ಉಪಯೋಗ: ಏತನ್ಮಧ್ಯೆ, ಅಭ್ಯಾಸಕ್ಕಾಗಿ ಟೆನಿಸ್ ಬಾಲ್ಗಳನ್ನೂ ಉಪಯೋಗಿಸಿಕೊಳ್ಳಲಾಯಿತು. ತಂಡದ ವೇಗದ ಬೌಲಿಂಗ್ ಕೋಚ್ ಜೋ ಡೇವ್ಸ್ ಅವರು, ಟೆನಿಸ್ ಚೆಂಡುಗಳನ್ನು ಉಪಯೋಗಿಸಿ, ಬ್ಯಾಟ್ಸ್ಮನ್ಗಳಿಗೆ ತರಬೇತಿ ನೀಡಿದರು. ಆಸೀಸ್ ತಂಡದ ಶಾಟ್-ಪಿಚ್ ಎಸೆತಗಳನ್ನು ಎದುರಿಸಲು ಅನುಕೂಲವಾಗುವಂತೆ ಈ ತಂತ್ರವನ್ನು ಡೇವ್ಸ್ ಅಳವಡಿಸಿದ್ದರು.
ವಿಶೇಷ ತರಬೇತಿ: ಟೀಂ ಇಂಡಿಯಾ ತರಬೇತುದಾರ ಡಂಕನ್ ಫ್ಲೆಚರ್ ಅವರು, ಮತ್ತೊಂದು ರೀತಿಯ ಅಭ್ಯಾಸವನ್ನು ರೂಪಿಸಿದ್ದಾರೆ. ಈ ಪ್ರಕಾರ, ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಸುಮಾರು 15 ಮಂದಿ ಹೊಸ ಬೌಲರ್ಗಳಿಂದ ಬೌಲ್ ಮಾಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಹದಿನೈದು ಜನ ಬೌಲರ್ಗಳು ಸಂಪೂರ್ಣ ಹೊಸ ಮುಖಗಳಾಗಿದ್ದು ಅವರು ಎಸೆಯುವ ಬೌಲಿಂಗ್ಗೆ ಭಾರತೀಯ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಮಾಡಬೇಕಿದೆ. ಈ ಶಿಬಿರ ನಡೆಯುವ ಮೂರು ದಿನಗಳೂ ಇದೇ ರೀತಿ ಬ್ಯಾಟಿಂಗ್ ತಯಾರಿ ನಡೆಯಲಿದೆ. ಈ ಹೊಸ ಮುಖಗಳು, ಅಪ್ಪಟ ಕ್ರಿಕೆಟ್ ಪ್ರತಿಭೆಗಳಾಗಿದ್ದು ಇವರ ಗುಂಪಿನಲ್ಲಿ 15 ವೇಗಿಗಳು ಹಾಗೂ ಆರು ಸ್ಪಿನ್ನರ್ಗಳು ಇದ್ದಾರೆ. ಮುಂಬೈ, ಚೆನ್ನೈ ಹಾಗೂ ಮೊಹಾಲಿಗಳಿಂದ ಈ ಕ್ರಿಕೆಟಿಗರನ್ನು ಕರೆಸಿರುವ ಫ್ಲೆಚರ್, ಅವರಿಗೂ ತಮ್ಮ ಪ್ರತಿಭೆ ತೋರಲು ಒಂದು ಅವಕಾಶ ಕಲ್ಪಿಸಿದ್ದಾರೆ.
ಸಂದೀಪ್ ಪ್ಲಾನ್: ವಿವಿಧ ರಾಜ್ಯಗಳಿಂದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಕರೆತಂದು ಒಂದು 'ನೆಟ್ ಬೌಲರ್ಗಳ ಪಡೆ'ಯನ್ನು ರೂಪಿಸಿ, ಅವತರ ನೆರವಿನಿಂದ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುವುದು ಹಾಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರ ಐಡಿಯಾ ಎಂದು ಹೇಳಲಾಗಿದೆ. ಇದರಿಂದ, ಇದುವರೆಗೂ ಗೊತ್ತಿರದ ಶೈಲಿಯ ಬೌಲಿಂಗ್ಗಳಿಗೆ ಬ್ಯಾಟ್ ಬೀಸುವುದು ಬ್ಯಾಟ್ಸ್ಮನ್ಗಳಿಗೆ ಅಭ್ಯಾಸವಾಗುತ್ತದೆ. ಅಭ್ಯಾಸದ ವೇಳೆ, ಟೀಂ ಇಂಡಿಯಾ ಬೌಲರ್ಗಳ ಜಾಗವನ್ನು 'ನೆಟ್ ಬೌಲರ್ಗಳು' ತುಂಬುವುದರಿಂದ, ಬೌಲರ್ಗಳಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ಸಮಯಾವಕಾಶವೂ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


