ಕ್ರೀಡೆ

ತಿವಾರಿ ಶತಕ; ಭಾರತದ ದೊಡ್ಡ ಸವಾಲು

Published On :

ಚೆನ್ನೈ: ಮನೋಜ್ ತಿವಾರಿ ಅವರ ಆಕರ್ಷಕ ಶತಕದ ನೆರವಿನೊಂದಿಗೆ ಭಾರತ ಎ ತಂಡ, ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 451 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಪಂದ್ಯದ ಮೊದಲ ದಿನವಾದ ಶನಿವಾರ ದಿನಾಂತ್ಯಕ್ಕೆ ಭಾರತ ಎ, ತನ್ನ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತ್ತು. ಭಾನುವಾರ ತನ್ನ ಇನಿಂಗ್ಸ್ ಮುಂದುರೆಸಿದ ಭಾರತ ಎ, 451 ರನ್‌ಗಳಿಗೆ ಆಲೌಟ್ ಆಯಿತು.
 ಈ ಮೊತ್ತವನ್ನು ಬೆನ್ನಟ್ಟಿದ ಆಸೀಸ್, ದಿನಾಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಒಟ್ಟು 320 ರನ್‌ಗಳ ಹಿನ್ನಡೆ ಹೊಂದಿರುವ ಆಸೀಸ್ ಕೈಯ್ಯಲ್ಲಿ ಇನ್ನೂ ಆರು ವಿಕೆಟ್‌ಗಳಿವೆ.
ಶನಿವಾರ ದಿನಾಂತ್ಯದ ವೇಳೆಗೆ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದಿದ್ದ ಮನೋಜ್ ತಿವಾರಿ ಹಾಗೂ ಕರ್ನಾಟಕದ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಇಬ್ಬರೂ ಭಾನುವಾರ ಇನಿಂಗ್ಸ್ ಮುಂದುವರಿಸಿದರು.
ಆದರೆ, ತಂಡದ ಮೊತ್ತಕ್ಕೆ ಕೇವಲ 8 ರನ್ ಸೇರಿಸುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು. ವೈಯಕ್ತಿಕವಾಗಿ 38 ರನ್ ಗಳಿಸಿದ್ದ ಗೌತಮ್, ಇನಿಂಗ್ಸ್‌ನ 94ನೇ ಓವರ್‌ನಲ್ಲಿ ಸಿಡ್ಲ್ ಬೌಲಿಂಗ್‌ನಲ್ಲಿ ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿ ಹೊರನಡೆದರು. ಅವರ ನಂತರ, ಕ್ರೀಸ್‌ಗೆ ಕಾಲಿಟ್ಟಿದ್ದು ಜಲಜ್ ಸೆಕ್ಸೇನಾ.
ನಿಧಾನಗತಿಯ ಬ್ಯಾಟಿಂಗ್‌ಗೆ ಮುಂದಾದ ಅವರು ತಿವಾರಿಗೆ ಉತ್ತಮ ಸಾಥ್ ನೀಡುವ ಕಾಯಕದಲ್ಲೇ ಅವರು ನಿರತರಾದರು. ಇನಿಂಗ್ಸ್‌ನ ಕೊನೆಯವರೆಗೂ ಅಜೇಯರಾಗಿ ಉಳಿದ ಸೆಕ್ಸೇನಾ, 106 ಎಸೆತಗಳಲ್ಲಿ ಗಳಿಸಿದ್ದು ಮೂರು ಬೌಂಡರಿ ಸೇರಿದಂತೆಕೇವಲ 30 ರನ್ ಗಳಿಸಿದರಾದರೂ, ವಿಕೆಟ್ ಕಳೆದುಕೊಳ್ಳದೇ ಆಡುತ್ತಾ, ಬಿರುಸಾಗಿ ಬ್ಯಾಟ್ ಬೀಸುತ್ತಿದ್ದ ತಿವಾರಿಗೆ ಬೆಂಬಲವಾಗಿ ನಿಂತಿದ್ದ ಅವರ ಆಟ ಸಮಯೋಚಿತವಾಗಿತ್ತು.
ಅತ್ತ, ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಮಿಂಚಿನ ಆಟವಾಡಿದ ತಿವಾರಿ ಶತಕ ಪೂರೈಸಿದರು. ಭಾರತದ ಮೊತ್ತವೂ 400 ರನ್‌ಗಳ ಗಡಿ ದಾಟಿತು. ವೈಯಕ್ತಿಕವಾಗಿ 129 ರನ್ ಗಳಿಸಿದ ತಿವಾರಿ, ಇನಿಂಗ್ಸ್‌ನ 119ನೇ ಓವರ್‌ನಲ್ಲಿ ಲಿಯಾನ್ ಎಸೆತದಲ್ಲಿ ಡೊಹರ್ಟಿಗೆ ಕ್ಯಾಚ್ ನೀಡಿ ಹೊರನಡೆದರು.
ತಿವಾರಿ ನಂತರ ಬಂದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಪೈಕಿ ಯಾರೊಬ್ಬರೂ ಗಟ್ಟಿಯಾಗಿ ನಿಲ್ಲಲಿಲ್ಲ. ತಿವಾರಿ ವಿಕೆಟ್ ಉರುಳಿದ ನಂತರ, ಭಾರತದ ವಿಕೆಟ್‌ಗಳು ನಿಗದಿತ ಅಂತರದಲ್ಲಿ ಬೀಳುತ್ತಾ ಹೋದವು. ಧ್ರುವ್ (21), ವಿನಯ್ ಕುಮಾರ್ (0), ಎಂ.ಎಸ್. ಗೋನಿ (2), ಧವಳ್ ಕುಲಕರ್ಣಿ (1) ಎಲ್ಲರೂ ಲಗುಬಗೆಯಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದವರೇ. 129ನೇ ಓವರ್‌ನಲ್ಲಿ ಧವಳ್ ವಿಕೆಟ್ ಉರುಳುವುದರೊಂದಿಗೆ ಭಾರತದ ಇನಿಂಗ್ಸ್ ಅಂತ್ಯಗೊಂಡಿತು.
ಆಸೀಸ್ ಉತ್ತಮ ಆರಂಭ: ಭಾರತ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸೀಸ್ ಪರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶೇನ್ ವ್ಯಾಟ್ಸನ್ ಹಾಗೂ ಎಡ್ವರ್ಡ್ ಕೋವನ್, ತಂಡಕ್ಕೆ ಉತ್ತಮ ಆರಂಭ ನೀಡಿದರು. ಪರಿಸ್ಥಿತಿಯ ಒತ್ತಡದ ಸ್ಪಷ್ಟ ಅರಿವಿದ್ದ ಇಬ್ಬರೂ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು. ಮೊದಲ 11 ಓವರ್‌ಗಳಲ್ಲಿ ಆಸೀಸ್, ತನ್ನ ಮೊದಲ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 50 ರನ್ ಗಳಿಸಿದ್ದ ಆಸೀಸ್‌ನ ಆರ್ಭಟ, 22ನೇ ಓವರ್‌ವರೆಗೂ ಹಾಗೇ ಮುಂದುವರೆದಿತ್ತು. ಇಷ್ಟರಲ್ಲಿ ವ್ಯಾಟ್ಸನ್ ಹಾಗೂ ಕೋವನ್ ಇಬ್ಬರೂ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.
23ನೇ ಓವರ್‌ನಿಂದ ಭಾರತೀಯ ಬೌಲರ್‌ಗಳ ಮ್ಯಾಜಿಕ್ ಶುರುವಾಯಿತು. 23ನೇ ಓವರ್‌ನ 4ನೇ ಎಸೆತದಲ್ಲಿ ಕೋವನ್ ಅವರ ವಿಕೆಟ್ ಪಡೆಯುವಲ್ಲಿ ಧ್ರುವ್ ಯಶಸ್ವಿಯಾದರು. ಆನಂತರ, ಮತ್ತೆ ದಾಳಿಗಿಳಿದ ಧ್ರುವ್, 24ನೇ ಓವರ್‌ನಲ್ಲಿ ಮತ್ತೊಬ್ಬ ಆರಂಭಿಕ ವ್ಯಾಟ್ಸನ್ ಅವರ ವಿಕೆಟ್ ಅನ್ನೂ ಉರುಳಿಸಿದರು. ಈ ಎರಡೂ ವಿಕೆಟ್‌ಗಳು ಒಂದರ ಹಿಂದೊಂದರಂತೆ ಬಿದ್ದಿದ್ದರಿಂದ ಭಾರತೀಯ ಬೌಲರ್‌ಗಳ ನಿಯಂತ್ರಣಕ್ಕೆ ಸಿಗದೇ ಸಾಗುತ್ತಿದ್ದ ಆಸೀಸ್ ಇನಿಂಗ್ಸ್‌ಗೆ ಮೂಗುದಾರ ಹಾಕಿದಂತಾಯಿತು.
ಈ ಸಂದರ್ಭದಲ್ಲಿ ಇನಿಂಗ್ಸ್‌ನ ಜವಾಬ್ದಾರಿ ಹೊತ್ತ ಮೂರನೇ ಕ್ರಮಾಂಕದ ಹ್ಯೂಸ್ ಹಾಗೂ ಉಸ್ಮಾನ್ ಖವಾಜಾ ಇಬ್ಬರನ್ನೂ ಜಲಜ್ ಸೆಕ್ಸೇನಾ ಅವರು ಕ್ರೀಸ್‌ನಲ್ಲಿ ತಳವೂರುವ ಮೊದಲೇ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಹೀಗೆ, ಏಳು ಓವರ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಆಸೀಸ್ ಇನಿಂಗ್ಸ್ ಸಂಕಷ್ಟದಲ್ಲಿ ಸಿಲುಕಿತು. ಆಗ, ಇನಿಂಗ್ಸ್ ಭಾರ ಹೊತ್ತಿದ್ದು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಹಾಗೂ ಹೆನ್ರಿಕ್ಯೂಸ್. ಈ ಇಬ್ಬರೂ ದಿನಾಂತ್ಯದ ಹೊತ್ತಿಗೆ ತಂಡದ ಮೊತ್ತಕ್ಕೆ 4 ರನ್ ಸೇರಿಸಿ ಅಜೇಯರಾಗಿ ಉಳಿದಿದ್ದರು. ಮ್ಯಾಥ್ಯೂ ವೇಡ್ ಒಂದು ರನ್ ಗಳಿಸಿದ್ದರೆ, ಹೆನ್ರಿಕ್ಯೂಸ್ ಇನ್ನೂ ಖಾತೆ ತೆರೆದಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.