ಮೆಲ್ಬರ್ನ್: ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಬೆಲಾರಸ್ನ ವಿಕ್ಟೋರಿಯಾ ಅಜರೆಂಕಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೋಮವಾರ ನಡೆದ ಪ್ರೀ ಕ್ವಾರ್ಟರ್ ಹಂತದ ಪಂದ್ಯದಲ್ಲಿ ಅವರು ರಷ್ಯಾದ ಎಲಿನಾ ವೆಸ್ನಿನಾ ಅವರನ್ನು 6-1, 6-1 ನೇರ ಸೆಟ್ಗಳಲ್ಲಿ ಸೋಲಿಸಿ, ಎಂಟರ ಘಟ್ಟಕ್ಕೆ ಪದಾರ್ಪಣೆ ಮಾಡಿದರು.
ಸೋಮವಾರ ನಡೆದ ಮತ್ತೊಂದು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ರಷ್ಯಾದ ಸ್ವೇತ್ಲಾನಾ ಕುಸ್ನೆತ್ಸೋವಾ ಅವರು ಡೆನ್ಮಾರ್ಕ್ನ ಕ್ಯಾರೋಲಿನ್ ವಾವ್ಸಿಂಕಾ ಅವರನ್ನು 6-2, 2-6, 7-5 ಸೆಟ್ಗಳ ಅಂತರದಲ್ಲಿ ಸೋಲಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ ಹಾಗೂ ಕ್ಯಾರೋಲಿನ್ ವಾವ್ಸಿಂಕಾ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಸುಲಭ ಜಯ: ವಿಶ್ವದ ಅಗ್ರ ಟೆನಿಸ್ ಆಟಗಾರ್ತಿಯಾಗಿರುವ ಬೆಲಾರಸ್ನ ವಿಕ್ಟೋರಿಯಾ ಅಜರೆಂಕಾ ಅವರಿಗೆ ತಮ್ಮ ಎದುರಾಳಿ ಎಲಿನಾ ವೆಸ್ನಿನಾ ಅವರನ್ನು ಸೋಲಿಸಲು ಕಷ್ಟವೆನಿಸಲಿಲ್ಲ. ಪಂದ್ಯದ ಆರಂಭದಿಂದಲೇ ತಾವು ಅತ್ಯುತ್ತಮ ಫಾರ್ಮ್ನಲ್ಲಿರುವುದನ್ನು ಸಾಬೀತುಪಡಿಸಿದ ಅವರು ವೆಸ್ನಿನಾ ಅವರಿಗೆ ಸವಾಲೆಸೆದರು. ಅಜರೆಂಕಾದ ಈ ಆರ್ಭಟದ ಎದುರು ಮಂಕಾಗಿ ಕಂಡ ವೆಸ್ನಿನಾ, ಪಂದ್ಯದಲ್ಲಿ ಅವರಿಗೆ ಪ್ರತಿರೋಧ ತೋರುವ ಸಾಹಸವನ್ನೇ ಮಾಡಲಿಲ್ಲ. ಹೀಗೇ ಸಾಗಿದ ಮೊದಲ ಸೆಟ್ನಲ್ಲಿ ಅಜರೆಂಕಾ ಅವರು 6-1ರ ಸುಲಭ ಜಯ ದಾಖಲಿಸಿದರು.
ಮುಂದಿನ ಸೆಟ್ನಲ್ಲೂ ಇದು ಪುನರಾವರ್ತನೆಯಾಯಿತು. ಪ್ರಥಮ ಸೆಟ್ನ ಗೆಲುವಿನಿಂದ ಕೊಂಚ ಪ್ರೇರಿತರಾದರಂತೆ ಕಂಡುಬಂದ ಅಜರೆಂಕಾ, ಮತ್ತೆ ಮತ್ತೆ ವೆಸ್ನಿನಾ ಮೇಲೆ ಮುಗಿಬಿದ್ದರು. ಈ ಹಂತದಲ್ಲಿ ವೆಸ್ನಿನಾ ಮಾಡಿದ ತಪ್ಪುಗಳು ಅಜರೆಂಕಾಗೆ ವರದಾನವಾಗಿ ಪರಿಣಮಿಸಿದವು. ಕೇವಲ 33 ನಿಮಿಷಗಳಲ್ಲೇ ಮುಕ್ತಾಯಗೊಂಡ ಈ ಸೆಟ್ನಲ್ಲಿ ಅಜರೆಂಕಾ 6-1ರ ಅಂತರದಲ್ಲಿ ಜಯ ಸಾಧಿಸಿ, ಪಂದ್ಯದಲ್ಲಿಯೂ ಜಯಭೇರಿ ಬಾರಿಸಿದರು.