ನವದೆಹಲಿ: ಈ ಬಾರಿಯು ಮುಂಬೈ ತಂಡ ತನ್ನ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶನ ನೀಡಿದ್ದು, ರಣಜಿ ಇತಿಹಾಸದಲ್ಲಿ 44ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ. ಮುಂಬೈ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ ತಂಡದ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಿತು.
ಮುಂಬೈ ತಂಡವು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದರಾದರೂ, ಮೊದಲ ದಿನ ಭಾರಿ ಕುಸಿತ ಕಂಡಿತು. ಮೊದಲ ದಿನಾಂತ್ಯಕ್ಕೆ ಕೇವಲ 199 ರನ್‌ಗಳಿಸಿ ತಮ್ಮ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡಕ್ಕೆ ಆಸರೆಯಾಗಿ ನಿಂತವರು ನಾಯಕ ಅಜಿತ್ ಅಗರ್ಕರ್ ಹಾಗೂ ತಾರೆ. ಈ ಜೋಡಿ ಎರಡನೇ ದಿನ ವಿಕೆಟ್ ಕಳೆದುಕೊಳ್ಳದೇ ತಂಡದ ಮೊತ್ತವನ್ನು 380ರ ವರೆಗೆ ಕೊಂಡೊಯ್ಯಿತು.
ನಂತರ ಎರಡನೇ ಹಾಗೂ ಮೂರನೇ ದಿನ ಮಳೆಯ ಕಾರಣ ಪಂದ್ಯ ನಡೆಯಲಿಲ್ಲ. ಐದನೇ ದಿನ ಮತ್ತೇ ಬ್ಯಾಟಿಂಗ್ ನಡೆಸಿದ ಮುಂಬೈ 454ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಐದನೇ ದಿನ ತಮ್ಮ ಮೊದಲ ಇನಿಂಗ್ಸ್ ಆರಂಭಿಸಿದ ಸರ್ವಿಸಸ್ ತಂಡ ಮೂರು ವಿಕೆಟ್ ಕಳೆದುಕೊಂಡು 164 ರನ್‌ಗಳಸಿತು. ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಸ್ನೈನ್(64) ಹಾಗೂ ಯಶ್‌ಪಾಲ್ ಸಿಂಗ್ (43) ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆರನೇ ದಿನ ಬ್ಯಾಟಿಂಗ್ ಮುಂದುವರೆಸಿದ ಈ ಜೋಡಿ ಕೇವಲ 22 ರನ್‌ಗಳಿಸಲಷ್ಟೇ ಶಕ್ತವಾಯಿತು. ತಂಡದ ಮೊತ್ತ 186 ರನ್ ಆಗಿದ್ದಾಗ 58 ರನ್‌ಗಳಿಸಿದ್ದ ಯಶ್‌ಪಾಲ್ ಸಿಂಗ್ ತಾಕುರ್ ಎಸೆತದಲ್ಲಿ ಕೀಪರ್ ತಾರೆಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ 74 ರನ್‌ಗಳಿಸಿದ್ದ ಸ್ವೈನ್ ದಾಬೋಲ್ಕರ್ ಎಸೆತದಲ್ಲಿ ಜಾಫರ್‌ಗೆ ಕ್ಯಾಚ್ ನೀಡಿದಾಗ ತಂಡದ ಮೊತ್ತ 195 ಆಗಿತ್ತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪಲಿವಾಲ್ 11 ರನ್‌ಗಳಿಸಿ ಕುಲ್ಕರ್ಣಿ ಎಸೆತದಲ್ಲಿ ಬೌಲ್ಡ್ ಆದರೆ, ಸರಬ್ಜಿತ್ ಸಿಂಗ್ 11 ರನ್‌ಗಳಿಸಿ ತಾಕುರ್ ಎಸೆತದಲ್ಲಿ ತಾರೆಗೆ ಕ್ಯಾಚ್ ನೀಡಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೆಡ್ ನಡಿಸಿದರೆ ಹೊರತು ಕ್ರೀಸ್‌ನಲ್ಲಿ ನಿಂತು ಆಡಲಿಲ್ಲ.
ಮುಂಬೈ ತಂಡದ ಪರ 33 ರನ್‌ಗಳಿಗೆ 5 ವಿಕೆಟ್ ಕಬಳಿಸಿದ ಕುಲ್ಕರ್ಣಿ ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ತಾಕುರ್ 3 ವಿಕೆಟ್ ಪಡೆದರೆ, ದಾಬೋಲ್ಕರ್ ಹಾಗೂ ಚವಾಣ್ ತಲಾ 1 ವಿಕೆಟ್ ಪಡೆದರು.
ಮುಂದುವರಿದ ಮುಂಬೈ ಯಾತ್ರೆ: ದೇಶಿಯ ಪಂದ್ಯಾವಳಿಯಲ್ಲಿ ಮುಂಬೈ ತಂಡ ಇತರೆ ತಂಡಗಳಿಗಿಂತ ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಬಾರಿಯ ರಣಜಿ ಋತುವಿನಲ್ಲಿ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಮುಂಬೈ ತಂಡ ರಣಜಿ ಇತಿಹಾಸದಲ್ಲಿ 44ನೇ ಬಾರಿಗೆ ಅಂತಿಮ ಘಟ್ಟಕ್ಕೆ ಕಾಲಿಟ್ಟ ಸಾಧನೆ ಮಾಡಿದೆ.
ಇದರ ಜತೆಗೆ 39 ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಮುಂಬೈ ತಂಡ, ಅಂತಿಮ ಘಟ್ಟದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಈ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ತಮ್ಮ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂಬೈ ಕಾತುರದಿಂದ ಕಾಯುತ್ತಿದ್ದು, ಇತ್ತ ಸೌರಾಷ್ಟ್ರ ತಂಡ 75 ವರ್ಷಗಳ ನಂತರ ರಣಜಿ ಪಂದ್ಯಾವಳಿಯಲ್ಲಿ ಅಂತಿಮ ಘಟ್ಟಕೆ ಕಾಲಿಟ್ಟಿದೆ.