

ಆ ಹುಡುಗ ಬ್ಯಾಟ್ ಹಿಡಿದಾಗ ಕೇವಲ 5 ವರ್ಷ. ಹಾಗಂತ ಆತನಿಗೇನೂ ಕ್ರಿಕೆಟ್ ಗೀಳು ಇರಲಿಲ್ಲ. ಆದರೆ, ಆತನನ್ನು ಓರ್ವ ಕ್ರಿಕೆಟ್ ಪಟುವನ್ನಾಗಿಸುವುದು ಆತನ ತಂದೆ-ತಾಯಿಯ ಕನಸಾಗಿತ್ತು. ಆ ಕನಸಿಗೊಂದು ಅಡ್ಡಗಾಲೆಂದರೆ ಅವರ ಕುಟುಂಬದ ದುರ್ಬಲವಾದ ಆರ್ಥಿಕ ಶಕ್ತಿ. ಆದರೆ, ಹುಡುಗನ ತಾಯಿಯ ಹಾರೈಕೆ, ತಂದೆಯ ಪರಿಶ್ರಮಗಳ ನೆರವಿನಿಂದ ಆ ಹುಡುಗ ಓರ್ವ ಕ್ರಿಕೆಟಿಗನಾಗಿ ಬೆಳೆದ. ಹಾಗೆ ಪ್ರವರ್ಧನಮಾನಕ್ಕೆ ಬಂದ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಭರವಸೆ ಮೂಡಿಸಿದ್ದಾನೆ. ಆತನ ಹೆಸರು ಚೇತೇಶ್ವರ ಪೂಜಾರ. ರಾಹುಲ್ ದ್ರಾವಿಡ್‌ನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಪೂಜಾರ ಅವರ ಜೀವನ ಮಾತ್ರ ನೋವು- ಕಷ್ಟಗಳ ಸಮ್ಮಿಶ್ರಣ.
ಗುಜರಾತ್‌ನ ಪ್ರಮುಖ ನಗರಗಳಲ್ಲೊಂದಾದ ರಾಜ್‌ಕೋಟ್. ಭಾರತೀಯ ಕ್ರಿಕೆಟ್ ರಂಗದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿರುವ ಸೌರಾಷ್ಟ್ರದ ಒಂದು ಪ್ರಮುಖ ಜಿಲ್ಲಾ ಕೇಂದ್ರ. ಇಲ್ಲಿ ವಾಸವಾಗಿದ್ದ ಅರವಿಂದ್ ಪೂಜಾರ ಹಾಗೂ ರೀನಾ ಬೆನ್ ದಂಪತಿಯ ಮುದ್ದು ಮಗನಾಗಿ ಬೆಳೆದ ಚೇತೇಶ್ವರ ಪೂಜಾರಗೆ ಆಗಿನ್ನೂ ಐದರ ಹರೆಯ. ಆತನನ್ನು ಹೇಗಾದರೂ ಮಾಡಿ ಓರ್ವ ಕ್ರಿಕೆಟಿಗನನ್ನಾಗಿಸಬೇಕೆಂಬುದು ಆತನ ತಂದೆಯ ಕನಸು. ಅರವಿಂದ್ ಅವರ ತಂದೆ ಓರ್ವ ಕ್ರಿಕೆಟ್ ಆಟಗಾರರೇ. ಬ್ರಿಟಿಷರ ಕಾಲದಲ್ಲೇ ಅವರು ಅಂದಿನ ದಾಗ್ಭಾಂದ್ರಾ ಕ್ರಿಕೆಟ್ ತಂಡದಲ್ಲಿ ಅವರು ಆಡಿದ್ದರು. ಅವರ ನೆರಳಿನಲ್ಲೇ ಕ್ರಿಕೆಟಿಗರಾಗಿ ರೂಪುಗೊಂಡಿದ್ದ ಅರವಿಂದ್, ಮುಂದೆ ಸೌರಾಷ್ಟ್ರ ತಂಡದಲ್ಲಿ ಆಡಿದ್ದುಂಟು. ಆದರೆ, ಅವರ ತಂದೆಯಾಗಲೀ ಅವರಾಗಲೀ ಅವರು ದುಡ್ಡಿನ ಮುಖ ನೋಡಿರಲಿಲ್ಲ. ಆ ಕಾಲವೂ ಹಾಗೇ ಇತ್ತು. ಆಗೆಲ್ಲಾ ಕ್ರಿಕೆಟ್ ಅಂದರೆ ಕಾಂಚಾಣ ಸುರಿಯುವ ಕ್ರೀಡೆಯಾಗಿರಲಿಲ್ಲ. ಹಾಗಾಗಿ, ರೇಲ್ವೇ ಇಲಾಖೆಯಲ್ಲಿ ಕ್ಲಾರ್ಕ್ ಆಗಿ ಜೀವನ ನಡೆಸುತ್ತಾ ಸಾಗಿದವರು ಅವರು. ಆದರೆ, 90ರ ದಶಕದಿಂದೀಚೆಗೆ ಭಾರತದಲ್ಲಿ ಕ್ರಿಕೆಟ್ ಬೆಳೆದ ಪರಿಯನ್ನು ನೋಡಿ ಚೇತೇಶ್ವರ ಪೂಜಾರನನ್ನು ಕ್ರಿಕೆಟಿಗರನನ್ನಾಗಿ ರೂಪಿಸಲು ತೀರ್ಮಾನಿಸಿದರು. ಒಂದು ರೀತಿಯಲ್ಲಿ ಇಲ್ಲಿಂದ ಶುರುವಾಯ್ತು ಪೂಜಾರ ಅವರ ಕ್ರಿಕೆಟ್ ಜೀವನ. ಅರವಿಂದ್ ಅವರ ಆಸೆಗೆ ಬೆಂಬಲವಾಗಿ ನಿಂತದ್ದು ರೀನಾ ಬೆನ್. ಅವರ ಮಹಾ ದೈವ ಭಕ್ತೆ. ಎಂದು ಚೇತೇಶ್ವರನ್ನು ಓರ್ವ ಕ್ರಿಕೆಟಿಗನನ್ನಾಗಿ ಮಾಡಲು ಅವರಿಬ್ಬರೂ ನಿರ್ಧರಿಸಿದರೋ, ಅಂದೇ ರೀನಾ ಬೆನ್ ಅವರ ಪೂಜೆ, ಪುನಸ್ಕಾರ, ಪ್ರಾರ್ಥನೆ, ಉಪವಾಸ, ವ್ರತಗಳು ಆರಂಭವಾದವು.ಅತ್ತ, ಅರವಿಂದ್ ಮಗನಿಗಾಗಿ ಹಣ ಹೊಂದಿಸಲು ಶ್ರಮಿಸಿದರು. ಸಾಲ-ಸೋಲ ಮಾಡಿ ಮಗನನ್ನು ಕ್ರಿಕೆಟ್ ಕೋಚಿಂಗ್ ಕ್ಯಾಂಪ್‌ಗೆ ಸೇರಿಸಿದರು. ಓದಿನ ಜೊತೆಗೆ ಕ್ರಿಕೆಟ್ ಆತನ ಅಭ್ಯಾಸ ಒಂದು ಅಂಗವಾಗಿ ಬೆಳೆಯಿತು.
ಆದರೆ, ವಿಧಿ ಇದಕ್ಕೆ ಅಡ್ಡಗಾಲು ಹಾಕಿತು. ಅರವಿಂದ್ ಅವರ ಇಡೀ ಕುಟುಂಬ ಅದೊಂದು ದಿನ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು. ಆ ಸಂದರ್ಭದಲ್ಲಿ, ಅನಿವಾರ್ಯವಾಗಿ ರಾಜ್‌ಕೋಟ್ ತೊರೆದ ಆ ಕುಟುಂಬ ಕೆಲ ವರ್ಷಗಳ ಕಾಲ ಅರವಿಂದ್ ಅವರ ಹುಟ್ಟೂರಾದ ಒಂದು ಹಳ್ಳಿಗೆ ಬಂದು ನೆಲೆಸಿತು. ಈ ದಿನಗಳಲ್ಲಿ ಚೇತೇಶ್ವರನ ಕ್ರಿಕೆಟ್ ಕೋಚಿಂಗ್ ನಿಂತಿತ್ತು. ಆದರೆ, ಆ ತಾಯಿಯ ವ್ರತ, ಪೂಜೆ, ಉಪವಾಸಗಳು ನಿಂತಿರಲಿಲ್ಲ. ತಂದೆಯ ಕನಸು ಬತ್ತಿ ಹೋಗಿರಲಿಲ್ಲ. ಕೆಲ ವರ್ಷಗಳ ನಂತರ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ಆ ಕುಟುಂಬ ಪುನಃ ರಾಜ್‌ಕೋಟ್‌ಗೆ ಬಂದು ನೆಲೆಸಿತು. ಹಾಗೆ ಬಂದ ಮೇಲೆ ಅರವಿಂದ್ ಮಾಡಿದ ಮೊದಲ ಕೆಲಸ ಮಗನನ್ನು ಮತ್ತೆ ಕ್ರಿಕೆಟ್ ಕೋಚಿಂಗ್ ಕ್ಯಾಂಪ್‌ಗೆ ಸೇರಿಸಿದ್ದು.
ಹಾಗಂತ, ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿರಲಿಲ್ಲ. ಕುಂಟುತ್ತಾ ಸಾಗುತ್ತಿದ್ದರೂ ಅರವಿಂದ್-ರೀನಾ ಬೆನ್ ಮಾತ್ರ ತಮ್ಮ ಮಗನ ಭವಿಷ್ಯಕ್ಕಾಗಿ ತಮ್ಮೆಲ್ಲಾ ಸುಖ-ಸಂತೋಷಗಳನ್ನು ತ್ಯಾಗ ಮಾಡಿದ್ದರು. ಲೆಕ್ಕಾಚಾರದ ಜೀವನ ಸಾಗಿಸುತ್ತಿದ್ದರು.
ಅತ್ತ, ಚೇತೇಶ್ವರನೂ ಅಷ್ಟೇ. ಅವರಿಟ್ಟಿದ್ದ ನಂಬಿಕೆಗೆ ಮೋಸ ಮಾಡಲಿಲ್ಲ. ಹಂತ ಹಂತವಾಗಿ ಬೆಳೆದ. 14ರ ವಯೋವುತಿಯ ಕ್ರಿಕೆಟ್ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ದೊಡ್ಡ ಮೊತ್ತ ಸ್ಕೋರ್ ಮಾಡತೊಡಗಿದ.
ತನ್ನ ಪ್ರತಿಭೆಯಿಂದ ಪ್ರವರ್ಧಮಾನಕ್ಕೆ ಬಂದ ಆತ ರಣಜಿಗೆ ಪ್ರವೇಶ ಪಡೆದ. ಇಲ್ಲಿಯೂ ಹೊಸ ಎತ್ತರಗಳನ್ನು ಮುಟ್ಟಿದ. 2004ರ ಹೊತ್ತಿಗೆ ಆ ಹುಡುಗ ಆಡಿದ ಯಾವ ಪಂದ್ಯದಲ್ಲೂ ಆತ 50 ರನ್‌ಗಿಂತ ಕಡಿಮೆ ಹೊಡೆದದ್ದಿಲ್ಲ. ಆದರೆ, ವಿಧಿಯಾಟ ಮತ್ತೆ ದಾಳ ಉರುಳಿಸಿತು. ಮಗ ಏರಲಿರುವ ಹೊಸ ಎತ್ತರಗಳನ್ನು ನೋಡಲು ಆ ತಾಯಿಗೆ ಆಯುಷ್ಯವಿರಲಿಲ್ಲ. 2006ರಲ್ಲಿ ಅವರು ಕ್ಯಾನ್ಸರ್‌ನಿಂದ ನಿಧನರಾದರು. ಚೇತೇಶ್ವರ ಆತ್ಮಶಕ್ತಿಯೇ ಉಡುಗಿಹೋಗಿತ್ತು.
ಆದರೆ, ಆತ ಧೃತಿಗೆಡಲಿಲ್ಲ. ತಾಯಿಯ ಪ್ರಾರ್ಥನೆಯ ಕೆಲಸವೂ ಸೇರಿದಂತೆ ಅಡುಗೆ, ಮುಂತಾದ ಎಲ್ಲಾ ವಿಷಯಗಳಲ್ಲಿ ರೀನಾ ಬೆನ್ ಅವರ ಸ್ಥಾನವನ್ನು ತಂದೆ ಅರವಿಂದ್ ತುಂಬಿದರು. ಮಗನಲ್ಲಿ ಸ್ಥೈರ್ಯ ತುಂಬಿದರು. ಇದು ಚೇತೇಶ್ವರ ದಿಕ್ಕನ್ನೇ ಬದಲಿಸಿತು. 2006ರಲ್ಲಿ ಅಂಡರ್ 19 ವಿಶ್ವಕಪ್‌ನಲ್ಲಿ ಆಡಿದ ಚೇತೇಶ್ವರ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗೌರವಕ್ಕೆ ಪಾತ್ರರಾದರು. ಸೌರಾಷ್ಟ್ರದ ತಂಡದ ಪರವಾಗಿಯೂ ದ್ವಿಶತಕ ಚಚ್ಚಿದರು. ಅಲ್ಲಿಂದ ಇಲ್ಲಿಯವರೆಗೂ ಅವರು ಸಾಧನೆ ಹಾದಿಯಲ್ಲೇ ಸಾಗಿ ಬಂದಿದ್ದಾರೆ. ಈ ಬಾರಿಯ ರಣಜಿಯಲ್ಲೂ ಮಿಂಚಿದ್ದಾರೆ. ಟೀಂ ಇಂಡಿಯಾದಲ್ಲೂ ಸ್ಥಾನ ಪಡೆಯುವ ಮಟ್ಟಕ್ಕೆ ಅವರ ಸಾಧನೆ ಅವರನ್ನು ಬೆಳೆಸಿದೆ. ಟೀಂ ಇಂಡಿಯಾಕ್ಕೆ ಆಯ್ಕೆಯಾದಾಗ ಅದನ್ನು ನೋಡಿ ಖುಷಿ ಪಡಲು ಆಕೆಯ ತಾಯಿ ಇರಲಿಲ್ಲ. ಆದರೆ, ಅವರ ಆಶೀರ್ವಾದ ನನ್ನನ್ನು ಸದಾ ಕಾಯುತ್ತೆ ಅಂತಾರೆ ಅವರು. ಕಳೆದ ವರ್ಷಾಂತ್ಯಕ್ಕೆ ನಡೆದ ನ್ಯೂಜಿಲೆಂಡ್-ಭಾರತ ಟೆಸ್ಟ್ ಸರಣಿಯಲ್ಲಿ ಆಡಿದ ಅವರು, ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯೆಂದೇ ಬಿಂಬಿತರಾದರು. ಮುಂದೆ ಅವರು ರಾಹುಲ್ ದ್ರಾವಿಡ್ ಸ್ಥಾನ ತುಂಬುತ್ತಾರೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸುತ್ತದೆ. ಆದರೆ, ಅವರ ಸತತ ಪರಿಶ್ರಮಕ್ಕೆ ತಡೆಯೊಡ್ಡುವ ಧೈರ್ಯವನ್ನು ಕಾಲ ಮಾಡಲಾರದಷ್ಟೇ. <
= ಚೇತನ್ ಓ.ಆರ್.