ಕ್ರೀಡೆ

ಧWON

ಧWON
Published On :

ಬಾಲ್ ಇರುವುದೇ ಬೌಂಡರಿಗೆ ಅಟ್ಟುವುದಕ್ಕೆ. ಈ ಮೂಲ ಸಿದ್ಧಾಂತವನ್ನೇ ವೀರೇಂದ್ರ ಸೆಹ್ವಾಗ್ ಮರೆತಾಗ, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ- ಸೆಹ್ವಾಗ್ ಸ್ಥಾನ ತುಂಬವವರಾರು?

ಶಿಖರ್ ಧವನ್!
ಈಗ ಆ ಸ್ಥಾನವನ್ನು ಆಕ್ರಮಣಕಾರಿಯಾಗಿಯೇ ಶಿಖರ್ ಧವನ್ ತುಂಬುತ್ತಿದ್ದಾರೆ. ವಿಶೇಷವೆಂದರೆ, ಧವನ್ ಕೂಡ ದೆಹಲಿಯ ಆಟಗಾರ. ಹಲವು ವರ್ಷ ಬೆಂಚ್ ಕಾಯಿಸಿದ್ದ, ಒಂದು ಹಂತದಲ್ಲಿ ಕ್ರಿಕೆಟ್ ಬಿಡಲು ನಿರ್ಧರಿಸಿದ್ದ ಧವನ್ ತಮಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ದೊರೆತ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡರು. ಮೊಹಾಲಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ವೇಗದ ಶತಕ (85 ಬಾಲ್‌ಗೆ 100 ರನ್) ದಾಖಲಿಸಿದ ಕೀರ್ತಿಗೆ ಪಾತ್ರರಾದರು. ಅಷ್ಟೇ ಅಲ್ಲದೆ, ಮೊದಲ ಟೆಸ್ಟ್ ಪಂದ್ಯದಲ್ಲೇ ಅತಿ ಹೆಚ್ಚು ರನ್ (187) ಬಾರಿಸಿದ ಭಾರತೀಯ ಆಟಗಾರನೆಂಬ ಗರಿಯೂ ಮುಡಿಗೇರಿತು. ಇದಕ್ಕೂ ಮೊದಲು ಆ ದಾಖಲೆ ಒಡೆಯರಾಗಿದ್ದು ಲಾಲಾ ಅಮರನಾಥ್. ಇವರು 1933ರಲ್ಲಿ ಕಾನ್ಪುರ್ ಟೆಸ್ಟ್‌ನ ತಮ್ಮ ಮೊದಲ ಪಂದ್ಯದಲ್ಲಿ 156 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದ ಆ ಪಂದ್ಯದಲ್ಲಿ ಧವನ್ ಮತ್ತು ಮುರುಳಿ ವಿಜಯ್ ನಡುವಿನ ಆಟ ಭಾರತದ ಪರವಾಗಿ ಅನೇಕ ದಾಖಲೆಗಳನ್ನು ಸೃಷ್ಟಿಸಿತ್ತು.
ಶತಕ ದಾಖಲಿಸಿದ ಬಳಿಕ ಸ್ಟೈಲಿಶ್ ಆಗಿ ಮೀಸೆ ತಿರುವುದರ ಫೋಟೋ ಮರುದಿನ ಪತ್ರಿಕೆಗಳ ರಾರಾಜಿಸಿ, ಕ್ರಿಕೆಟ್ ಪ್ರೇಮಿಗಳಿಗೆ ಆರಾಧಿಸಲು ಮತ್ತೊಬ್ಬ ಹೀರೋ ಸಿಕ್ಕಿದ್ದ. ಹೊಡಿ ಬಡಿ ಆಟಕ್ಕೆ ಭಾರತದಲ್ಲಿ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಶ್ರೀಕಾರ ಹಾಕಿದರೆ, ವೀರೇಂದ್ರ ಸೆಹ್ವಾಗ್ ಆ ಶೈಲಿಗೆ ಮತ್ತೊಂದು ತಿರುವು ನೀಡಿದರು. ಆದರೆ, ಧವನ್ ಮಾತ್ರ ಹೊಡಿ ಬಡಿ ಆಟವನ್ನು ಅದರ 'ಶಿಖರ'(ಠಜಛ್ಞ)ಕ್ಕೊಯ್ದರು.
ಮೊನ್ನೆಯಷ್ಟೇ ಇಂಗ್ಲೆಂಡಿನಲ್ಲಿ ಮುಕ್ತಾಯವಾದ, 'ಮಿನಿ ವಿಶ್ವಕಪ್‌' ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಅತ್ಯಧಿಕ ರನ್ (363) ಗಳಿಸಿದ ಧವನ್ ಐಸಿಸಿ ನೀಡುವ ಚಿನ್ನದ ಬ್ಯಾಟ್ ತಮ್ಮದಾಗಿಸಿಕೊಂಡರು. ಟ್ರೋಫಿಯ ಐದು ಪಂದ್ಯಗಳಿಂದ 90.75 ಸರಾಸರಿಯಲ್ಲಿ ರನ್ ಗುಡ್ಡೆ ಹಾಕಿದ್ದರು. ಐಪಿಎಲ್ ಪಂದ್ಯಗಳಲ್ಲಿ ಧವನ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಶಿಖರ್ ಧವನ್ ಅವರ ಆಟದ ಶೈಲಿಯನ್ನು ವಿಶ್ಲೇಷಿಸುವುದಾದರೆ, ಧವನ್ ಕಟ್ ಮತ್ತು ಫುಲ್ ಶಾಟ್‌ಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸುತ್ತಾರೆ. ಮಾರ್ಕ್ಸ್ ಟ್ರೆಸ್ಕೋಥಿಕ್ ಹಾಗೂ ಹರ್ಷಲ್ ಗಿಬ್ಸ್ ಅವರ ಬ್ಯಾಟಿಂಗ್ ಶೈಲಿ ಮಿಕ್ಸ್ ಮಾಡಿದಂತಿದೆ. ಧವನ್ ಅವರ ಪಾದದ ಚಲನೆ ಮತ್ತು ಟೈಮಿಂಗ್ ಟ್ರೆಸ್ಕೋಥಿಕ್ ಆಟಕ್ಕೆ ಹೋಲಿಕೆಯಾದರೆ, ಅತ್ಯಂತ ನಿಖರವಾಗಿ ಮತ್ತು ಆತ್ಮವಿಶ್ವಾಸದಿಂದ ಬಾರಿಸುವ ಹೊಡೆತಗಳು ಗಿಬ್ಸ್ ಅವರನ್ನುನೆನಪಿಸುತ್ತವೆ. ಈಗ ಧವನ್, ಹೊರ ದೇಶಗಳ ವೇಗದ ಪಿಚ್‌ಗಳಲ್ಲಿ ಆಡುತ್ತಿರುವ ಆಟ ಮತ್ತು ಸಾಗುತ್ತಿರುವ ವೇಗವನ್ನು ಗಮನಿಸಿದರೆ, 2015ರ ವಿಶ್ವಕಪ್ ಪಂದ್ಯಾವಳಿಗೆ ಭಾರತಕ್ಕೆ ಮತ್ತೊಬ್ಬ ದೇವರು ಸಿಗುವುದರಲ್ಲಿ ಸಂದೇಹವೇ ಇಲ್ಲ. ಯಾಕೆಂದರೆ, ಮುಂದಿನ ವಿಶ್ವಕಪ್ ಪಂದ್ಯಾವಳಿ ವೇಗದ ಬೌಲರ್‌ಗಳ ಸ್ವರ್ಗವಾಗಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಎಂಬುದನ್ನು ನೆನಪಿಡಿ.

ಹೆಂಡ್ತಿ 10 ವರ್ಷ ಸೀನಿಯರ್!
ನಮಗೆ 'ಕ್ರಿಕೆಟ್ ದೇವರು' ಸಚಿನ್ ಮತ್ತು ಅಂಜಲಿ ಅವರ ವಯಸ್ಸಿನ ಅಂತರದ ಬಗ್ಗೆ ಗೊತ್ತೇ ಇದೆ. ಶಿಖರ್ ಧವನ್ ಅವರ ವೈವಾಹಿಕ ಬದುಕು ಕೂಡ ಈ ವಿಚಾರದಲ್ಲಿ ಅಚ್ಚರಿ.
ಧವನ್‌ಗಿಂತ ಪತ್ನಿ ಆಯೆಶಾ 10 ವರ್ಷ ದೊಡ್ಡವರು! ಆಯೆಶಾ ಮುಖರ್ಜಿಗೆ ಇದು ಎರಡನೇ ಮದುವೆ. ಈ ಮೊದಲು ವಿವಾಹವಾಗಿದ್ದ ಆಯೆಶಾಗೆ 12 ಮತ್ತು 8 ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಧವನ್ ಇವರನ್ನು ಸ್ವಂತ ಮಕ್ಕಳಂತೆ ಸಾಕುತ್ತಿದ್ದಾರೆ!

ಟ್ಯಾಟೂಪ್ರಿಯ ದಂಪತಿ
ಧವನ್ ಮತ್ತು ಆಯೆಶಾ ಇಬ್ಬರೂ ಟ್ಯಾಟೂಪ್ರಿಯರು. ಆಯೆಶಾ ತಮ್ಮ ಬಲಗೈ ಮೇಲೆ 'ಓಂ' ಎಂದು, ಎಡಗೈ ಮತ್ತು ಬೆನ್ನ ಮೇಲೂ ದೊಡ್ಡ ಚಿತ್ರಗಳನ್ನು ಹಾಕಿಸಿಕೊಂಡಿದ್ದಾರೆ. ಶಿಖರ್ ಧವನ್ ಒಟ್ಟು 5 ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಐದರಲ್ಲಿ ಒಂದು ಹುಲಿಯ ಚಿತ್ರ, ಇನ್ನೊಂದು ತಮ್ಮ ಪತ್ನಿಯ ಹೆಸರಿದೆ.

ಲವ್ವು ಹೇಗಾಯ್ತು?
2011ರಲ್ಲಿ ಧವನ್ ಮತ್ತು ಆಯೆಶಾ ಫೇಸ್‌ಬುಕ್‌ನಲ್ಲಿ ಫ್ರೆಂಡಾದರಂತೆ. ಇವರನ್ನು ಪರಸ್ಪರ ಪರಿಚಯ ಮಾಡಿಕೊಟ್ಟಿದ್ದು ಸ್ಪಿನ್ನರ್ ಹರ್ಭಜನ್ ಸಿಂಗ್. ಹೀಗೆ ಆರಂಭವಾದ ಪರಿಚಯ ಮೊದಲು ಸ್ನೇಹವಾಗಿ, ನಂತರ ಪ್ರೇಮವಾಗಿ ಪರಿವರ್ತನೆಯಾಯಿತು. ಶಿಖರ್ ಧವನ್ ಆಡುವ ಪಂದ್ಯಗಳಿಗೆಲ್ಲ ಆಯೆಶಾ ಹಾಜರಾಗಿ, ಹುರಿದುಂಬಿಸಿದರು. ಅಂದಹಾಗೆ, ಈ ಇಬ್ಬರೂ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಯೆಶಾ ಬಾಕ್ಸರ್ ಕೂಡ ಹೌದು. ಇಬ್ಬರೂ ಈಜು, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಹಾಗೂ ಇತರೆ ಕ್ರೀಡೆಗಳನ್ನು ಇಷ್ಟಪಡುತ್ತಾರೆ.

- ಶೋಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.