ಆರ್ಟಿಐ ಅಂಡರ್

ನಮ್ಮ ಕ್ರೀಡಾಕ್ಷೇತ್ರ ರಾಜಕಾರಣಿಗಳ ಕೈಗೊಂಬೆಯಾಗಿದೆ. ಹೀಗಾಗಿ, ದೇಶದ ಕ್ರೀಡಾಡಳಿತದಲ್ಲಿ ಪಾರದರ್ಶಕತೆ ತರಲು ಕೇಂದ್ರ ಕ್ರೀಡಾ ಸಚಿವಾಲಯ, ಕ್ರೀಡಾ ಮಸೂದೆ ಜಾರಿಗೆ ಚಿಂತಿಸುತ್ತಿದೆ. ಈ ಬಗ್ಗೆ ಉದ್ಭವಿಸಿದ ವಿವಾದ ಎಲ್ಲರಿಗೂ ಗೊತ್ತಿದೆ. ಪ್ರಸ್ತುತ ಇದಕ್ಕಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಬರಬೇಕು ಎಂಬುದು.
ಆದರೆ, ಬಿಸಿಸಿಐ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಬಿಸಿಸಿಐ ಒಪ್ಪದಿರಲು ಕಾರಣಗಳೇನು? ಒಂದು ವೇಳೆ ಬಿಸಿಸಿಐ ಆರ್ಟಿಐನಡಿ ಬಂದರೆ ಅದರ ಯಾವ ರಹಸ್ಯಗಳು ಬಯಲಾಗುತ್ತವೆ? ಹಾಗೇನಾದರೂ ಬಿಸಿಸಿಐ ಆರ್ಟಿಐನಡಿ ಬಂದರೆ, ಅದರ ಹೊಣೆಗಾರಿಕೆ ಹೆಚ್ಚಲಿದೆಯೇ ಎಂಬ ಪ್ರಶ್ನೆಗಳ ಕುರಿತು ಇಲ್ಲೊಂದು ವಿಶ್ಲೇಷಣೆ.
ಬಿಸಿಸಿಐ ಏಕೆ ಒಪ್ಪೋದಿಲ್ಲ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ಹಕ್ಕು ಕಾಯ್ದೆಯ ಕಲಂ 2 (ಎಚ್) ಪ್ರಕಾರ, ಬಿಸಿಸಿಐ ಪ್ರಾಥಮಿಕವಾಗಿ ಖಾಸಗಿ, ಟ್ರಸ್ಟ್, ಸ್ವಾಯತ್ತ ಮತ್ತು ಶಾಸನಬದ್ಧವಲ್ಲದ ಸಂಸ್ಥೆ. ಹೀಗಾಗಿ ಇದು ಯಾವುದೇ ಸದಸ್ಯ ಅಥವಾ ಸಾರ್ವಜನಿಕರಿಗೆ ತನ್ನ ಯಾವುದೇ ಮಾಹಿತಿಯನ್ನು ನೀಡಲು ಅರ್ಹವಾಗಿರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ಬಿಸಿಸಿಐ ಪ್ರಾಥಮಿಕವಾಗಿ ಹೇಳಿಕೊಂಡಿದೆ.
ಅಲ್ಲದೆ ಫೆಬ್ರುವರಿ 2005ರಲ್ಲಿ ನಡೆದ 'ಝೀ ಟೆಲಿಫಿಲ್ಮ್ಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದಲ್ಲಿ, ಸಂವಿಧಾನದ 12ನೇ ಕಲಂ ಪ್ರಕಾರ ಬಿಸಿಸಿಐ ಸರ್ಕಾರದ ಅಧೀನ ಸಂಸ್ಥೆಯಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನೇ ಬಿಸಿಸಿಐ ಈಗ ಬಂಡವಾಳವಾಗಿಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಬಿಸಿಸಿಐನ ಇನ್ನೊಂದು ವಾದವೆಂದರೆ, ಕ್ರಿಕೆಟ್ ರಾಷ್ಟ್ರೀಯ ಕ್ರೀಡೆಯಾಗಿ, ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಿಲ್ಲ ಎಂಬುದು.
ಕ್ರೀಡಾ ಸಂಸ್ಥೆಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಬರಬೇಕಾದರೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆ ಸಂಸ್ಥೆ ಸರ್ಕಾರದಿಂದ ನಿಧಿಯನ್ನು ಪಡೆಯುತ್ತಿರಬೇಕು. ಆದರೆ, ಬಿಸಿಸಿಐ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ನೆರವನ್ನು ಪಡೆಯುತ್ತಿಲ್ಲ.
ಮುಚ್ಚುಮರೆ ವಿಚಾರ
ಬಿಸಿಸಿಐ ಹುಟ್ಟಿನಿಂದಲೂ ರಹಸ್ಯವಾಗಿಯೇ ವರ್ತಿಸುತ್ತಿದೆ. ಅಣುಸ್ಥಾವರಗಳು ತಮ್ಮ ರಹಸ್ಯಗಳನ್ನು ಹೇಗೆ ಕಾಪಾಡಿಕೊಳ್ಳುತ್ತವೋ ಹಾಗೆ. ಸಂಸ್ಥೆಗೆ ಚುನಾವಣೆ ನಡೆದಾಗ ಮತಗಳ ಪಟ್ಟಿ ಮತ್ತು ಪ್ರಾತಿನಿಧಿಕ ಮತಗಳ ವಿವರ, ಆಡಳಿತ ಮಂಡಳಿಯ ನಿರ್ಧಾರಗಳಾದ ಟಿವಿ ಹಕ್ಕುಗಳ ನೀಡಿಕೆ ಹಾಗೂ ಲಾಭಪ್ರದ ಗುತ್ತಿಗೆಗಳು, ಲಾಭ ಮತ್ತು ನಷ್ಟದ ಬಗೆಗಿನ ಆಯವ್ಯಯ ಸೇರಿದಂತೆ ಇತರ ವಿಷಯಗಳನ್ನು ಅದು ಆರ್ಟಿಐನಿಂದ ಮುಚ್ಚಿಡಲು ಬಯಸುತ್ತದೆ.
ಬಿಸಿಸಿಐ ತನ್ನ ಗಳಿಕೆಯಲ್ಲಿ ಎಷ್ಟು ಹಣವನ್ನು ಕ್ರಿಕೆಟ್ನ ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ಬಳಸುತ್ತಿದೆ ಎಂಬುದು ಅಲ್ಲಿನ ಸಮಿತಿಗಳು ಮತ್ತು ಉಪ ಸಮಿತಿಗಳಿಗಷ್ಟೇ ಗೊತ್ತು. ಆದರೆ, ಜನರಿಗಂತೂ ಗೊತ್ತಿಲ್ಲ. ಬಿಸಿಸಿಐನ ತೀರ್ಮಾನಗಳೂ ಅಷ್ಟೇ ನಿಗೂಢ. ಅಲ್ಲದೆ, ಸದಸ್ಯರನ್ನು ಆಯ್ಕೆ ಮಾಡುವಾಗ ನಿಜವಾಗಿ ಯಾವ ಮಾನದಂಡ ಅನುಸರಿಸುತ್ತದೆ ಎಂಬುದೂ ಚಿದಂಬರ ರಹಸ್ಯವೇ. ಹೀಗಾಗಿ ಬಿಸಿಸಿಐ, ಆರ್ಟಿಐ ಅಡಿ ಬಂದರೆ ಪಾರದರ್ಶಕತೆ ಸಾಧ್ಯವಾಗುತ್ತದೆ.
ಹೊಣೆ ಹೆಚ್ಚುತ್ತಾ?
ಕ್ರಿಮಿಗಳನ್ನು ಕೊಲ್ಲಲು ಸೂರ್ಯನ ಬೆಳಕೇ ದೊಡ್ಡ ಔಷಧಿಯಂತೆ. ಹಾಗೆಯೇ ಬಿಸಿಸಿಐ ಆರ್ಟಿಐ ಅಡಿಯಲ್ಲಿ ಬಂದರೆ ಭಾರತ ಕ್ರಿಕೆಟ್ ಆಡಳಿತದಲ್ಲಿ ಕೆಲವು ರೋಗಗಳಂತೂ ಗುಣವಾಗುತ್ತವೆ. ಸರಳವಾಗಿ ಹೇಳಬೇಕೆಂದರೆ, ಬಿಸಿಸಿಐನೊಳಗಿರುವ ಹಕ್ಕು ಪ್ರತಿಪಾದಕರು ಮತ್ತು ಷೇರುದಾರರು, ಸದಸ್ಯ ಸಂಸ್ಥೆಗಳು ಮತ್ತು ಸಾರ್ವಜನಿಕರು ಬಿಸಿಸಿಐನಿಂದ ತಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ, ಇದರಿಂದ ಸಂಸ್ಥೆಯನ್ನು ನಡೆಸುತ್ತಿರುವ ಪ್ರಬಲ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಇದು ಗಂಡಾಂತರ ತಂದೊಡ್ಡಲಿದೆ. ಹಣಕಾಸಿನ ಅವ್ಯವಹಾರದ ಆರೋಪ ಹೊತ್ತಿರುವವರು ಈಗ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ, ಆರ್ಟಿಐನಡಿ ಬಂದರೆ, ಇದರ ಮಾಹಿತಿಯನ್ನು ಪಡೆಯಲು ಅನುಕೂಲವಾಗಲಿದೆ.
ಬಿಸಿಸಿಐ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮಂತ ಮತ್ತು ಪ್ರಭಾವಿ ಕ್ರಿಕೆಟ್ ಮಂಡಳಿ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾದ ಐಸಿಸಿಗಿಂತಲೂ ಇದು ಪ್ರಬಲ. ಇಂಥ ಸಂಸ್ಥೆಯೊಂದು ಪಾರದರ್ಶಕವಾಗಿರದಿದ್ದರೆ ಅದನ್ನು ನಂಬುವುದು ಹೇಗೆ. ಭಾರತದಲ್ಲಿ ಆಧುನಿಕ ಕ್ರಿಕೆಟ್ ಆಡಳಿತದಲ್ಲಿ ಹಿತಾಸಕ್ತಿಗಳ ತಾಕಲಾಟ ಒಂದು ದೊಡ್ಡ ಪೀಡೆಯಾಗಿ ಪರಿಣಮಿಸಿದೆ. ಎನ್. ಶ್ರೀನಿವಾಸನ್, ಕೆ. ಶ್ರೀಕಾಂತ್, ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ ಸೇರಿದಂತೆ ಇತರರು ಇದಕ್ಕೆ ಇತ್ತೀಚಿನ ಉದಾಹರಣೆ.
ಕ್ರೀಡಾ ಮಸೂದೆ ತಡೆ?
ಹೊಸದಾಗಿ ಜಾರಿಗೆ ಬರುತ್ತಿರುವ ರಾಷ್ಟ್ರೀಯ ಕ್ರೀಡಾ ಮಸೂದೆಯ ಪ್ರಕಾರ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಕ್ರೀಡಾ ಸಂಸ್ಥೆಗಳು ಮಾತ್ರ ಭಾರತವನ್ನು ಪ್ರತಿನಿಧಿಸುವ ಹಕ್ಕು ಹೊಂದಿರುತ್ತವೆ. ಕ್ರೀಡಾ ಮಸೂದೆಯ ಕಲಂ 'ಎಚ್' ಬಿಸಿಸಿಐ ದೇಶವನ್ನು ಪ್ರತಿನಿಧಿಸದಂತೆ ತಡೆಯಲಿದೆ. ಮಸೂದೆಯ 9ನೇ ಅಧ್ಯಾಯ ಆರ್ಟಿಐ ಬಗ್ಗೆ ಮತ್ತು ನೀತಿ ಸಂಹಿತೆ ಬಗ್ಗೆ ಇರುವ 4ನೇ ಅಧ್ಯಾಯ ಬಿಸಿಸಿಐಗೆ ಮಾರಕವಾಗಿ ಪರಿಣಮಿಸಲಿವೆ.
ಹೀಗಾಗಿ ಕ್ರೀಡಾ ಮಸೂದೆ ಅಂತಿಮವಾಗಿ ಸಂಸತ್ತಿನಲ್ಲಿ ಪಾಸ್ ಆದ ನಂತರ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಅಡ್ಡಿ ಉಂಟಾಗಲಿದೆ. ಆದರೆ, ಈ ಕುರಿತು ಬಿಸಿಸಿಐ ಅಧಿಕಾರಿಗಳನ್ನು ಕೇಳಿದರೆ ತುಟಿ ಪಿಟಕ್ ಎನ್ನುವುದಿಲ್ಲ. ಹೀಗಾಗಿ ಬರುವ ದಿನಗಳಲ್ಲಿ ಬಿಸಿಸಿಐ ಸಮಸ್ಯೆಯ ಕೂಪದಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ.
ಸಂತೋಷ್ ಹೆಗ್ಡೆ ಕಳವಳ
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಾವು ನೀಡಿದ ತೀರ್ಪನ್ನು ಬಿಸಿಸಿಐ ದುರುಪಯೋಗಪಡಿಸಿಕೊಳ್ಳಬಾರದು ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಕಾರಣ ಕ್ರಿಕೆಟ್ ಪಂದ್ಯಾವಳಿಯೊಂದರ ಪ್ರಸಾರದ ಹಕ್ಕುಗಳಿಗೆ ಸಂಬಂಧಿಸಿದಂತೆ ಝೀ ಟೆಲಿಫಿಲ್ಮ್ಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಬಿಸಿಸಿಐ ಪರ ವಕೀಲರು ಪ್ರಸಾರದ ಹಕ್ಕುಗಳಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲು ನಮ್ಮದು ಸಾರ್ವಜನಿಕ ಸಂಸ್ಥೆಯಲ್ಲ ಎಂದು ವಾದಿಸಿದ್ದರು. ಈ ವಾದವನ್ನು ನ್ಯಾ. ಸಂತೋಷ್ ಹೆಗ್ಡೆ ಅವರನ್ನೊಳಗೊಂಡಿದ್ದ ನ್ಯಾಯಪೀಠ ಒಪ್ಪಿತ್ತು. ಝೀ ವಾಹಿನಿ ಮತ್ತು ಇತರರಿಗೆ ಹಿನ್ನಡೆ ಉಂಟಾಗಿತ್ತು.
- ಮಲ್ಲಿಕಾರ್ಜುನ ಕರಿಯಪ್ಪನವರ
mallu_bk@rediffmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


