ಕ್ರೀಡೆ

ಬಾಜಿ ಚರಿತ್ರೆ

ಬಾಜಿ ಚರಿತ್ರೆ
Published On :

ಅಂತೂ ಇಂತೂ ಐಪಿಎಲ್ ಮುಗಿದಿದೆ. ಭಾರತದ ಅರ್ಥ ವ್ಯವಸ್ಥೆಯ ಅಣಕದ ಸೂಚ್ಯಂಕ ಜಗಜ್ಜಾಹೀರಾಗಿದೆ. ಸೀಮಾರೇಖೆಯನ್ನು ದಾಟಿದ ಚೆಂಡುಗಳ ಹೈಲೈಟ್ ಅನ್ನು ಮತ್ತೆ ಮತ್ತೆ ನೋಡಿ ಆನಂದಿಸುತ್ತಿದ್ದೆವು ನಾವು, ಸೀಮಾರೇಖೆಯನ್ನು ದಾಟಿ ಬಂದ ಚೀನಾ, ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡ ಸುದ್ದಿ ಕೇಳುಗರಿಲ್ಲದೆ ಸೊರಗಿಹೋಯಿತು. ಫೈನಲ್ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಎದುರು ಮುಗ್ಗರಿಸಿತು. ಮುಂಬೈ ಗೆಲ್ಲುತ್ತದೆಂದು ಬಾಜಿ ಕಟ್ಟಿದ್ದ ದಾಳದ ಮನಗಳು ಕುಣಿದು ಕುಪ್ಪಳಿಸಿದ್ದರೆ, ಬಾಜಿ ಸೋತವರ ಮನದಾಳದಿಂದ ಬಂದ ಮಾತು ಇದೆಲ್ಲವೂ ಫಿಕ್ಸಿಂಗ್!
ಹೌದು, ಬೆಟ್ಟಿಂಗ್ ಫಿಕ್ಸಿಂಗ್‌ಗಳ ಹೊಸ ರೂಪಗಳು ಕೋಟ್ಯಂತರ ರು.ಗಳಲ್ಲಿ ಈ ಬಾರಿಯ ಐಪಿಎಲ್ ಅನ್ನು ದಾಳವಾಗಿಸಿಕೊಂಡವು. 'ಮಾಡಿಕೊಳ್ಳಲಿ ಬಿಡಿ, ತಪ್ಪೇನು?' ಎಂಬ ಸಮರ್ಥನೆ ಕೆಲವರದ್ದು. ಜೂಜುಕೋರರನ್ನು ಕೇಳಿ ನೋಡಿ, ಮಹಾಭಾರತದ ಧರ್ಮರಾಯ ಜೂಜಾಡುತ್ತಿರಲಿಲ್ಲವೆ? ಅತಿರಥ- ಮಹಾರಥರನ್ನು ಹೊಂದಿದ್ದ 11 ಅಕ್ಷೋಹಿಣಿ ಸೈನ್ಯದ ಒಡೆಯ ದುರ್ಯೋಧನ, ಕೇವಲ 7 ಅಕ್ಷೋಹಿಣಿ ಸೈನ್ಯದ ಪಾಂಡವರೆದುರು ಪರಾಭವಗೊಂಡನಲ್ಲ, ಅಲ್ಲಿ ಫಿಕ್ಸಿಂಗ್ ನಡೆದಿರಲಿಲ್ಲವೆ?
ಕುರುಕ್ಷೇತ್ರ ಯುದ್ಧಕ್ಕೆ ಸ್ವಲ್ಪ ದಿನ ಮೊದಲು ಕರ್ಣನನ್ನು ರಹಸ್ಯವಾಗಿ ಭೇಟಿ ಮಾಡಿದ್ದ ಕುಂತಿ ಆತನ ಜನ್ಮ ವೃತ್ತಾಂತದ ಯಾರ್ಕರ್ ಎಸೆದು, ಒಮ್ಮೆ ಬಿಟ್ಟ ಬಾಣವನ್ನು ಮರಳಿತೊಡದಂತೆ ಮಾತು ಪಡೆದಿದ್ದು ಫಿಕ್ಸಿಂಗ್ ಅಲ್ಲವೇನು? ಕೌರವನ ಪಕ್ಷ ಸೇರಿದ್ದ ಹೊಡೆಬಡಿಯ ವೀರ ಬಲರಾಮನನ್ನು ಶ್ರೀಕೃಷ್ಣ ತನ್ನ ಮಾಯಾವಿದ್ಯೆಯಿಂದ ಗೋಹತ್ಯಾ ದೋಷಕ್ಕೆ ಗುರಿಮಾಡಿ ತೀರ್ಥಯಾತ್ರೆಗೆ ಕಳಿಸಿ ಯುದ್ಧದಲ್ಲಿ ಭಾಗವಹಿಸದಂತೆ ಮಾಡಿದ್ದು, ಸ್ವಯಂ ನಿವೃತ್ತಿ ಮಾಡಿಸಿದ್ದು ಫಿಕ್ಸಿಂಗ್ ಆಗುವುದಿಲ್ಲವೇನು? ಅಭಿಮನ್ಯುವಿನ ಸಾವಿಗೆ ಕಾರಣನಾದ ಜಯದ್ರಥನನ್ನು ಸೂರ್ಯ ಮುಳುಗುವುದರೊಳಗಾಗಿ ಕೊಲ್ಲಬೇಕಾಗಿದ್ದ ಅರ್ಜುನನ ಶಪಥ ಈಡೇರಿಕೆಗಾಗಿ, ಕೃತಕ ರಾತ್ರಿಯನ್ನು ಸೃಷ್ಟಿಮಾಡಿದ್ದ ಶ್ರೀಕೃಷ್ಣ ಮಾಡಿದ್ದು ಬ್ಯಾಡ್ ಲೈಟ್ ವಂಚನೆಯಲ್ಲವೇ? ಯುದ್ಧದಲ್ಲಿ ಸೋಲುವಂತೆ ಭೀಷ್ಮರನ್ನು ಕೇಳಿಕೊಂಡ ಪಾಂಡವರಿಗೆ, ನಾಳಿನ ಯುದ್ಧದಲ್ಲಿ ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ಧಮಾಡೆಂದು ಸಲಹೆ ಕೊಟ್ಟು, ಶರಶಯ್ಯೆಯಲ್ಲಿ ಮಲಗಿದ ಭೀಷ್ಮರದ್ದು ಫಿಕ್ಸಿಂಗ್ ಅಲ್ಲವೇನು?
ಈ ಥರದ ವಿತಂಡ ವಾದಗಳನ್ನು ಆಲಿಸುತ್ತಾ, ಸುತ್ತಲೂ ನೋಡಿದರೆ ಹೌದೌದೆನಿಸಿ ಬಿಡುತ್ತದೆ. ಇಡೀ ಜಗತ್ತಿನ ನಿಯಮಾವಳಿಗಳೆಲ್ಲ ಫಿಕ್ಸಿಂಗ್‌ನಂತೆ ಕಂಡುಬಿಡುತ್ತದೆ.
ಮಹಾಭಾರತವೆನ್ನುವುದು ಲೋಕಕಲ್ಯಾಣಕ್ಕಾಗಿ ಶ್ರೀಕೃಷ್ಣ ಆಡಿದ ಆಟ, ಮಾಯೆ. ಮಹಾಭಾರತವೆಂದರೆ ಜಗತ್ತಿಗೆ ಶ್ರೀಕೃಷ್ಣ ತೋರಿಸಿಕೊಟ್ಟ ಜೀವನ ಕ್ರಮದ ಅದ್ಭುತ ಪ್ರಾತ್ಯಕ್ಷಿಕೆ. ಆದರೂ ಮಾನವ ಜೀವನದ ಅರ್ಥ ತಿಳಿಯದಿದ್ದಲ್ಲಿ ಪುನಃ ಓದಿಕೊಳ್ಳಲೆಂದು ಮಾನವತೆಗೇ ಸಂದ ಭಗವದ್ಗೀತೆ ಎನ್ನುವ ಬೃಹತ್ ಕೈಪಿಡಿ.
ಇಂದು ಕ್ರಿಕೆಟನ್ನು ನೋಡಿ. ಎಷ್ಟು ಕೆಟ್ಟುಹೋಗಿದೆ. ಕ್ರಿಕೆಟ್ ಭಾರತೀಯರ ಪಾಲಿಗೆ ಧರ್ಮ. ಇಂಥ ಪವಿತ್ರ ಆಟದ ಮೇಲೂ ದಾಳಿಮಾಡಿಬಿಟ್ಟನಲ್ಲ, ಆ ದಾವುದ್ ಇಬ್ರಾಹಿಂ. ಬೆಟ್ಟಿಂಗ್ ಫಿಕ್ಸಿಂಗ್‌ಗಳ ಜಾಲಕ್ಕೆ ಕ್ರಿಕೆಟನ್ನು ಸಿಕ್ಕಿಸಿ, ಒಂದೊಂದು ಎಸೆತವನ್ನು ನಿರ್ಣಯಿಸುವ ನಿರ್ಣಾಯಕನಾಗಿಬಿಟ್ಟ. ಕ್ರಿಕೆಟ್ ಸಭ್ಯತೆಯ ಸೀಮಾರೇಖೆಯನ್ನು ದಾಟಿ ಹೊರ ನಡೆಯಿತು. ನೋಡುಗರಿಲ್ಲದೇ ಬೇರೆ ಕ್ರೀಡೆಗಳು ಮಂಕಾಗಿಬಿಟ್ಟವು.
ಬೆಟ್ಟಿಂಗ್ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಲೇ ಇತ್ತು. ಐಶ್ವರ್ಯಾ ರೈಗೆ ಹುಟ್ಟುವ ಮಗುವಿನ ಮೇಲೆ, ಬಾಂಬೆಯಲ್ಲಿ ಬೀಳುವ ಮೊದಲ ಮಳೆಯ ದಿನಾಂಕದ ಮೇಲೆ, ಚುನಾವಣೆಯಲ್ಲಿ ಗೆಲ್ಲುವ ರಾಜಕಾರಣಿಯ ಮೇಲೆ, ರಜನಿಕಾಂತನ ಸಿನಿಮಾ ಓಡುವ ದಿನಗಳ ಮೇಲೆ... ಹೀಗೆ ತಮ್ಮ-ತಮ್ಮಲ್ಲೇ ಬಾಜಿಕಟ್ಟಿಕೊಳ್ಳುತ್ತಿದ್ದ ಬಾಜೀದಾರರನ್ನು ಭೂಗತಲೋಕದ ಕಬಂಧ ಬಾಹುಗಳು ಸಾಮೂಹಿಕವಾಗಿ ಸೆಳೆದುಬಿಟ್ಟವು. ನಡುಬೀದಿಯಲ್ಲಿ ನಿಂತು ರಾಜಾರೋಷವಾಗಿ ಬಾಜಿಕಟ್ಟುವ ಮಟ್ಟಕ್ಕೆ ಜನ ಇಳಿದರು. ದೇಶದ ಗೆಲುವಿಗೆ ಒಂದಾಗಿ ಹಾತೊರೆಯುತ್ತಿದ್ದ ಭಾರತೀಯ, ಭಾರತದ ಸೋಲಿಗೇ ಬಾಜಿಕಟ್ಟಿ ದೇಶಾಭಿಮಾನವನ್ನು ಮರೆತು ಬಿಟ್ಟ. ಕ್ರೀಡಾಭಿಮಾನವಿಲ್ಲದೇ ಕೇವಲ ಪ್ರತಿಷ್ಠೆಗಾಗಿ ತಂಡ ಕಟ್ಟಿದ್ದ ಮಾಲೀಕರು, ಕ್ರಿಕೆಟನ್ನು ವಾಣಿಜ್ಯ ಸರಕಿನಂತೆ ಕಂಡರು.
ಬೆಟ್ಟಿಂಗ್ ಫಿಕ್ಸಿಂಗ್‌ಗಳಲ್ಲಿ ಭಾಗಿಯಾದವರ ದೊಡ್ಡ ಪಟ್ಟಿಯೇ ಹೊರಬಿದ್ದಿದೆ. ಕೈತುಂಬ ಹಣ ಸಿಗುತ್ತಿದ್ದರೂ ಅಧರ್ಮದ ಮೊರೆಹೊಕ್ಕ ಇಂಥವರನ್ನು ಯಾವ ವಾದವೂ ಸಮರ್ಥಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷೆಯಾಗಲೇಬೇಕು. ಭೂಗತ ಜಗತ್ತಿನ ಕಾಣದ ಕೈಗೇ ಹಸ್ತಲಾಘವ ಮಾಡಿದ ಅಧರ್ಮಗಳೇ ತೊಂಬತ್ತೊಂಬತ್ತು ಅಪರಾಧಿಗಳು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆನ್ನುವ ನ್ಯಾಯದೇವತೆಯ ಸಣ್ಣ ಕಳಕಳಿಯನ್ನು ದೊಡ್ಡ ರಂಧ್ರವಾಗಿಸಿ ನುಣುಚಿಕೊಂಡು ಜನಪ್ರತಿನಿಧಿಗಳಾಗುತ್ತಾ ಸಾಗಿದರೆ, ಮುಂದೊಂದು ದಿನ ದೇಶದ ಪಾರ್ಲಿಮೆಂಟನ್ನೂ ಪಣಕ್ಕಿಟ್ಟಾರು!
'ಜಂಟಲ್‌ಮನ್ ಗೇಮ್‌' ಇಂದು 'ಫಿಕ್ಸಿಂಗ್‌ಮ್ಯಾನ್‌ಗಳ' ಗೇಮ್ ಆಗಿರುವ ಇಂಥ 'ಕ್ರಿಕೆಟ್ ಅಜೀರ್ಣ' ಭಾರತಕ್ಕೆ ಬೇಕೇಕೆ? ಮಾನವಂತ ಮುಖವಾಡ ಹೊತ್ತು ಇಡೀ ದೇಶವನ್ನು ಅಧರ್ಮದ ಕಡೆಗೆ ಕೊಂಡೊಯ್ಯುತ್ತಿರುವ ದುಷ್ಟಶಕ್ತಿಗಳೇ ಭಾರತವನ್ನು ತುಂಬಿಕೊಂಡಿವೆ. ಧರ್ಮಸಂಸ್ಥಾಪನೆಯಾಗಲೇಬೇಕು. 'ಧರ್ಮಸಂಸ್ಥಾಪನಾರ್ಥಯಃ ಸಂಭವಾಮಿ ಯುಗೇ ಯುಗೇ' ಎಂದಿದ್ದ ಶ್ರೀಕೃಷ್ಣ, ಸರ್ವಧರ್ಮಗಳ ಸಮನ್ವಯದ ಬೀಡಾಗಿರುವ ಇಂದಿನ ಭಾರತದಲ್ಲಿ ಪ್ರಜೆಗಳ ಪ್ರತಿಭಟನೆಯ ಮಾಯೆಯಲ್ಲದೇ ಬೇರೆ ಯಾವ ರೂಪಗಳಲ್ಲೂ ಅವತರಿಸಲು ಸಾಧ್ಯವಿಲ್ಲ.
ಕ್ರಿಕೆಟ್ ತನ್ನ ಗತಕಾಲದ ಸಭ್ಯತೆಯನ್ನು ಮರಳಿ ಪಡೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಭೂಗತ ಜಗತ್ತಿನ ಕಬಂಧ ಬಾಹುಗಳು ನಮ್ಮ ತೆಂಡೂಲ್ಕರನನ್ನು ಮುಟ್ಟಿ ಅಪವಿತ್ರಗೊಳಿಸದಿದ್ದರೆ ಸಾಕು. ಛೇ, ಸಾಧ್ಯವೇ ಇಲ್ಲ ಬಿಡಿ. ಆತ ಭಾರತದ ಕ್ರಿಕೆಟ್ ದೇವರು, ಅಭಿಮಾನಿಗಳ ಕಣ್ಮಣಿ, ಉಸಿರು, ನಂಬುಗೆ. ಆದರೆ ಬೆಟ್ಟಿಂಗ್ ಫಿಕ್ಸಿಂಗ್‌ಗಳ ವಿರುದ್ಧ ಮಾತನಾಡುತ್ತಿಲ್ಲವೇಕೆ? ಅವನಿರುವುದೇ ಹಾಗೆ. ಮಾತನಾಡುವುದೇನಿದ್ದರೂ ಅವನ ಬ್ಯಾಟು. ಆದರೆ, ನೂರನೇ ಶತಕದ ಆ ಒಂದೆರಡು ರನ್ನುಗಳಿಗಾಗಿ ಎರಡು ವರ್ಷ... ನೋ ನೋ ನೋ... ಅದು ನರ್ವಸ್ ನೈನ್ಟಿ... ಆ ಚಿಕ್ಕಮೂರ್ತಿಯ ದೊಡ್ಡ ಕೀರ್ತಿಯನ್ನು ನಾವೆಷ್ಟು ಬಿಗಿದಪ್ಪಿಕೊಂಡಿದ್ದೇವೆಂದೆರೆ, ಆತನ ಬಗ್ಗೆ ಅನುಮಾನಿಸಿದರೆ ಸ್ವಯಂ ಘಾಸಿಗೊಳಿಸಿಕೊಳ್ಳುತ್ತಿರುವ ವಿಚಿತ್ರ ವೇದನೆ ನಮಗಾಗುತ್ತದೆಯಲ್ಲವೆ? ಹಾಗಾದರೆ, ಕ್ರಿಕೆಟ್ ಇನ್ನೂ ಹೊಸ ಹೊಸ ಹೊಲಸುಗಳನ್ನು ಮೆತ್ತಿಕೊಳ್ಳುವ ಮುನ್ನ, ಆತನ ನಿವೃತ್ತಿಯನ್ನೇ ಎದುರು ನೋಡುತ್ತಾ, ಕಣ್ದುಂಬಿ ಬೀಳ್ಕೊಡೋಣ.

- ಪ್ರಕಾಶ್ ಕಾಕಾಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.