ಕ್ರೀಡೆ

ಇದೇ ನರಕ!

ಇದೇ ನರಕ!
Published On :

ಏಕದಿನ ಕ್ರಿಕೆಟ್ ಜನಪ್ರಿಯತೆ ಮರಳಿ ಗಳಿಸಬೇಕು ಎಂಬ ಉದ್ದೇಶದಿಂದ ಐಸಿಸಿ ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಅದು ಏಕಪಕ್ಷೀಯವಾದದ್ದು. ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಬ್ಬರಿಗೂ ಸಮನಾದ ನ್ಯಾಯ ದೊರಕುವ ನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತರುವುದಾದಲ್ಲಿ ಆಟದಲ್ಲೂ ಸ್ಪರ್ಧಾತ್ಮಕತೆ ತುಂಬಲು ಸಾಧ್ಯವಾಗುತ್ತದೆ. ಆಗ ಉತ್ತಮ ಪೈಪೋಟಿಗೂ ಎಡೆಮಾಡಿಕೊಡಲಿದೆ. ಸ್ಪರ್ಧೆ ಇಲ್ಲದೆಡೆ ಕುತೂಹಲ ಇರುವುದಿಲ್ಲ.

ಟೀಂ ಇಂಡಿಯಾ 27 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಕ್ರಿಕೆಟ್ ಸರಣಿ ಗೆದ್ದು ಹೊಸ ಇತಿಹಾಸ ರಚಿಸಿದೆ. ಧೋನಿ ಬಾಯ್ಸ್‌ಗೆ ಅಭಿನಂದನೆ.
ಒಟ್ಟು ಏಳು ಪಂದ್ಯಗಳ ಸರಣಿಯನ್ನು ಭಾರತ 3-2ರ ಅಂತರದಲ್ಲಿ ಗೆದ್ದು ತವರಿನಲ್ಲಿ ತನ್ನ ಹಿರಿಮೆ ಮೆರೆಯಿತು. ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾದವು.
ಈ ಸರಣಿಯಲ್ಲಿ ತವರು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಎರಡೂ ಪಡೆಗಳಿಂದ ಹರಿದುಬಂದ ಗುಡುಗು-ಸಿಡಿಲಿನಿಂದ ಕೂಡಿದ ರನ್ ಮಳೆಯಲ್ಲಿ ಅಭಿಮಾನಿಗಳು ಮಿಂದೆದ್ದರು. ಮುಗಿಲೆತ್ತರಕ್ಕೆ ಚಿಮ್ಮಿದಂತೆ ಭಾಸವಾಗುವ ಸುನಾಮಿ ಅಲೆಗಳ ರೀತಿಯಲ್ಲಿ ಸಿಕ್ಸರ್‌ಗಳು ಸಿಡಿದವು. ಬೌಂಡರಿಗಳ ಹೊಳೆ ಹರಿಯಿತು. ಅನೇಕ ದಾಖಲೆಗಳು ನುಚ್ಚುನೂರಾದವು.
ಸರಣಿಯಲ್ಲಿ ಒಟ್ಟು 3596 ರನ್‌ಗಳು ಸಂಪಾದನೆಯಾದವು. ಒಂದು ದ್ವಿಶತಕ ಒಳಗೊಂಡಂತೆ ಒಟ್ಟು 9 ಶತಕಗಳು (ಭಾರತದಿಂದ 6 ಮತ್ತು ಆಸ್ಟ್ರೇಲಿಯಾದಿಂದ 3) ದಾಖಲಾದವು. 11 ಇನ್ನಿಂಗ್ಸ್‌ಗಳ ಆಟದಲ್ಲಿ 9 ಇನಿಂಗ್ಸ್‌ಗಳಲ್ಲಿ 300ಕ್ಕಿಂತಲೂ ಹೆಚ್ಚಿನ ಮೊತ್ತ ಗಳಿಕೆಯಾಯಿತು. ಎರಡು ಪಂದ್ಯಗಳಲ್ಲಿ 350ಕ್ಕೂ ಹೆಚ್ಚಿನ ಮೊತ್ತದ ಗುರಿ ಬೆಂಬತ್ತಿ ತಂಡವೊಂದು ಯಶಸ್ವಿಯಾಯಿತು. ಈ ಎರಡೂ ಸಾಧನೆ ಭಾರತ ತಂಡದಿಂದಲೇ ಹೊರಹಮ್ಮಿದ್ದು ಮತ್ತೊಂದು ಹೆಮ್ಮೆಯ ಸಂಗತಿ. ಜೈಪುರದಲ್ಲಿನ ಎರಡನೇ ಪಂದ್ಯದಲ್ಲಿ 360ರ ಗುರಿ ಹಾಗೂ ನಾಗ್ಪುರದಲ್ಲಿನ ಆರನೇ ಪಂದ್ಯದಲ್ಲಿ 351ರ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ ಮಹೇಂದ್ರ ಸಿಂಗ್ ಧೋನಿ ಪಡೆ ಐತಿಹಾಸಿಕ ಸಾಧನೆ ಮಾಡಿತು.
ಸರಣಿಯ ನಿರ್ಣಾಯಕ ಎನಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಳನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಸಿಡಿಲಬ್ಬರದ ಬ್ಯಾಟಿಂಗ್ ಕಂಡು ಅಭಿಮಾನಿಗಳು ನಿಬ್ಬೆರಗಾದರು. ಆಸ್ಟ್ರೇಲಿಯಾದ ದಾಳಿಯನ್ನು ಮನಬಂದಂತೆ ಪುಡಿಗಟ್ಟಿದ ರೋಹಿತ್ ಶರ್ಮಾ ಸಿಡಿಸಿದ ದ್ವಿಶತಕ ಎಲ್ಲರ ಕಣ್ಣು ಕುಕ್ಕಿಸಿತು. ಇಡೀ ಸರಣಿಯಲ್ಲಿ ಉಭಯ ತಂಡಗಳ ದಾಂಡಿಗರು ರನ್ ಮಳೆ ಸುರಿಸುವಲ್ಲಿ ನಾ ಮುಂದು...ತಾ ಮುಂದು... ಎನ್ನುವಂತೆ ಅಬ್ಬರಿಸಿದ್ದೇ ಅಬ್ಬರಿಸಿದ್ದು.

ನಿತ್ಯ ದೀಪಾವಳಿ
ಒಟ್ಟಾರೆಯಾಗಿ ದೀಪಾವಳಿ ಹಬ್ಬದ ಸಂಭ್ರಮದ ಗಳಿಗೆಯಲ್ಲಿ ಪಟಾಕಿಗಳ ಸದ್ದಿಗಿಂತಲೂ ಬ್ಯಾಟ್ಸ್‌ಮನ್‌ಗಳ ಆರ್ಭಟವೇ ಹೆಚ್ಚಾಗಿತ್ತೇನೋ ಎನ್ನುವ ರೀತಿಯಲ್ಲಿ ದಾಂಡಿನ ಸದ್ದು ಕೇಳಿಸಿತು. ಒಂದು ರೀತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಈ ಸರಣಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗವೇ ಆಗಿತ್ತು.
ಇಡೀ ಸರಣಿಯಲ್ಲಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ದೊರೆತಿರಬಹುದು. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿರಬಹುದು. ಒಂದು ರೀತಿಯ ರೋಮಾಂಚನ ಅವರಲ್ಲಿ ಉಂಟಾಗಿರಬಹುದು. ಆದರೆ... ಎಲ್ಲೋ ಒಂದು ಕಡೆ ಕ್ರಿಕೆಟ್ ಅನ್ನು ಗಂಭೀರವಾಗಿ ತೆಗೆದುಕೊಂಡಾಗ ಏಕದಿನ ಪಂದ್ಯಾವಳಿಯ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ. ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗುವುದಾದರೆ ಬೌಲರ್‌ಗಳ ಗತಿಯೇನು ಎಂಬ ಪ್ರಶ್ನೆ ಮೂಡುತ್ತದೆ. ಇದರಿಂದ ಆಟದಲ್ಲಿ ಸ್ಪರ್ಧಾತ್ಮಕತೆಯನ್ನು ತುಂಬಲು ಸಾಧ್ಯವಾಗುತ್ತದೆಯೇ?
ಪ್ರತಿ ದಿನ ದೀಪಾವಳಿ ಸಂಭ್ರಮವನ್ನು ಯಾರೂ ಇಷ್ಟಪಡುವುದಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿಯ ಸಂಭ್ರಮಾಚರಣೆಯೇ ಬೇರೆ. ಅದಕ್ಕೊಂದು ಅರ್ಥವೂ ಇರುತ್ತದೆ.

ರನ್ ಗಳಿಕೆ ಬಲು ಸುಲಭ
ಮೋಜು-ಮಸ್ತಿಗಾಗಿ ಹುಟ್ಟಿಕೊಂಡಿರುವ ಟಿ-20 ಪಂದ್ಯಾವಳಿಯ ಜನಪ್ರಿಯತೆಯಿಂದ ಏಕದಿನ ಕ್ರಿಕೆಟ್‌ನ ಕುತೂಹಲ ದೂರವಾಗುತ್ತಿದೆ. ಈ ಬಗ್ಗೆ ಅರಿತೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಇದರ ಜನಪ್ರಿಯತೆಯನ್ನು ಮರಳಿ ಪಡೆಯುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಈ ನಿಯಮಗಳು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಇದರಿಂದ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗ ಸೃಷ್ಟಿಯಾದರೆ, ಬೌಲರ್‌ಗಳಿಗೆ ನರಕ ಸೃಷ್ಟಿಸಿದೆ. ಇದು ಕ್ರಿಕೆಟ್‌ನಲ್ಲಿನ ಸ್ಪರ್ಧೆಯನ್ನು ಚಿವುಟಿಹಾಕಿದೆ.
ಎರಡೂ ಬದಿಯಿಂದ ಹೊಸ ಚೆಂಡಿನ ಪ್ರಯೋಗ ಒಂದು ರೀತಿಯ ಸಮಸ್ಯೆಯಾಗಿದ್ದರೆ, ಕ್ಷೇತ್ರರಕ್ಷಣೆಯ ವೇಳೆ ಕೇವಲ ನಾಲ್ವರು ಫೀಲ್ಡರ್‌ಗಳು ಮಾತ್ರ 30 ಗಜ ದೂರದಿಂದ, ಅಂದರೆ ಔಟ್ ಫೀಲ್ಡ್ ಸುತ್ತ ನಿಲ್ಲುವ ಹೊಸ ನಿಯಮದಿಂದಾಗಿ ದಾಂಡಿಗರನ್ನು ಕಟ್ಟಿಹಾಕಲು ಹೇಗೆ ಸಾಧ್ಯ? ಕೇವಲ ರನ್‌ಗಳ ಭರಾಟೆಯಷ್ಟೇ ಕ್ರಿಕೆಟ್‌ನಲ್ಲಿ ಸ್ಪರ್ಧೆಯ ಕಿಚ್ಚು ಹಚ್ಚದು. ಈ ರೀತಿಯ ನಿಯಮಗಳು ಏಕಪಕ್ಷೀಯವಾಗಿದ್ದು, ಇಲ್ಲಿ ಬೌಲರ್‌ಗಳ ಮಾರಣ ಹೋಮ ನಡೆಯುತ್ತದೆ ಅಷ್ಟೇ.
ಒಬ್ಬ ಬ್ಯಾಟ್ಸ್‌ಮನ್ ತನ್ನಲ್ಲಿನ ತಾಂತ್ರಿಕತೆ, ಕೌಶಲ್ಯ, ಬುದ್ಧಿವಂತಿಕೆ, ಚಾಣಾಕ್ಷತನ ತೋರಬೇಕಾದರೆ ಕ್ಷೇತ್ರರಕ್ಷಕನ ಕಣ್ತಪ್ಪಿಸಿ ಚೆಂಡನ್ನು ಬೌಂಡರಿಗೆ ಅಟ್ಟಬೇಕಾಗುತ್ತದೆ. ತಜ್ಞ ಬೌಲರ್‌ಗಳ ಜಾಣ್ಮೆಯ ಎಸೆತಗಳಿಗೆ ಅಷ್ಟೇ ಜಾಣ್ಮೆಯಿಂದ ತಕ್ಕ ಉತ್ತರ ನೀಡಿದಾಗಲೇ ಆತನಲ್ಲಿನ ಬ್ಯಾಟಿಂಗ್ ಕಲೆಯ ಬಗ್ಗೆ ತಿಳಿಯಲು ಸಾಧ್ಯ. ಆದರೆ, ತನಗಾಗಿಯೇ ಸಿದ್ಧಪಡಿಸಲಾದ ಹಾಗೂ ಕಣ್ಣಿಗೂ ಕಾಣದ ರೀತಿಯಲ್ಲಿ ಅಲ್ಲೊಬ್ಬ-ಇಲ್ಲೊಬ್ಬ ನಿಲ್ಲುವ ಕ್ಷೇತ್ರರಕ್ಷಕರನ್ನು ವಂಚಿಸಿ ರನ್ ಗಳಿಸುವುದು ಆತನಿಗೇನೂ ದೊಡ್ಡ ಕಷ್ಟವಾಗದು.
ಇದರಿಂದಾಗಿ ಅಂತಿಮವಾಗಿ ಆಟದ ಗುಣಮಟ್ಟ ಕುಸಿಯುತ್ತದೆ. ಬ್ಯಾಟ್ಸ್‌ಮನ್ ಆಥವಾ ಬೌಲರ್ ಯಾರೇ ಆಗಿರಲಿ ಆತನ ನೈಜ  ಪ್ರತಿಭೆ ಕಂಡುಬರಬೇಕಾದರೆ ಆತನ ಮುಂದೆ ಸವಾಲುಗಳನ್ನು ನಿಲ್ಲಿಸಬೇಕು. ಆ ಮೂಲಕ ಅವರಲ್ಲಿನ ಪ್ರತಿಭೆಗಳ ಪರೀಕ್ಷೆಗೆ ವೇದಿಕೆ ಕಲ್ಪಿಸಬೇಕು. ಸಮನಾದ ಸ್ಪರ್ಧೆಯೇ ಇಲ್ಲವೆಂದ ಮೇಲೆ ಸವಾಲುಗಳು ಇನ್ನೆಲ್ಲಿ?
ಟಿ-20 ಜನಪ್ರಿಯತೆಯಲ್ಲಿ ಏಕದಿನ ಪಂದ್ಯಾವಳಿ ಕಳೆದುಹೋಗಬಹುದೆಂಬ ಭೀತಿಯಲ್ಲಿ ಅದರ ಕುತೂಹಲ ಹೆಚ್ಚಿಸಲು ಹೊಸ-ಹೊಸ ನಿಯಮಗಳನ್ನು ಜಾರಿಗೊಳಿಸುವ ಭರಾಟೆಯಲ್ಲಿ ಆಟಕ್ಕೇನೇ ಚ್ಯುತಿ ತಂದುಕೊಳ್ಳುವುದು ಸರಿಯಲ್ಲ. ಅದಕ್ಕೆ ಅನ್ಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.
ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಬ್ಬರಿಗೂ ಸಮನಾದ ನ್ಯಾಯ ದೊರಕುವ ನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತರುವುದಾದಲ್ಲಿ ಆಟದಲ್ಲೂ ಸ್ಪರ್ಧಾತ್ಮಕತೆ ತುಂಬಲು ಸಾಧ್ಯವಾಗುತ್ತದೆ. ಆಗ ಉತ್ತಮ ಪೈಪೋಟಿಗೂ ಎಡೆಮಾಡಿಕೊಡಲಿದೆ. ಸ್ಪರ್ಧೆ ಇಲ್ಲದೆಡೆ ಕುತೂಹಲ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ ವಿನಃ ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಮಾರಕವಾಗಬಲ್ಲ ಬದಲಾವಣೆ ಬೇಕಾಗಿಲ್ಲ. ಹಾಗಾಗಿ ಈಗಲೇ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ.

ಮಿಚೆಲ್ ಕಥೆಯೂ ಅಷ್ಟೇ...
ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯಗಳ ಸರಣಿಯನ್ನೇ ತೆಗೆದುಕೊಳ್ಳಿ. ಭಾರತದ ಬೌಲಿಂಗ್ ವಿಭಾಗಕ್ಕಿಂತಲೂ ಆಸ್ಟ್ರೇಲಿಯಾ ಬೌಲಿಂಗ್ ಹೆಚ್ಚು ಸದೃಢವೇ ಆಗಿತ್ತು. ಆದರೂ ಸಹ ಆಸ್ಟ್ರೇಲಿಯಾ ದಾಳಿಕಾರರೂ ಕಠಿಣ ಶಿಕ್ಷೆಗೊಳಗಾದರು. ಏಕದಿನ ಕ್ರಿಕೆಟ್‌ನ ಹೊಸನಿಯಮಗಳಿಂದಾಗಿ ಬೌಲರ್‌ಗಳ ಗುಣಮಟ್ಟ ನಾಶವಾಗುತ್ತಿದೆ. ಎಂತಹುದೇ ಸ್ವಿಂಗ್, ವೇಗ ಅಥವಾ ಪುಟಿತದಿಂದ ಕೂಡಿದ ಎಸೆತಗಳನ್ನು  ಎಸೆಯಲಿ, ಚೆಂಡು ಪಿಚ್ ಮೇಲೆ ಬಿದ್ದಾಗ ಯಾವುದೇ ರೀತಿಯ ಪರಿಣಾಮ ಬೀರದೇ ಇದ್ದಾಗ ಬೌಲರ್‌ಗಳಾದರೂ ಏನು ಮಾಡಲು ಸಾಧ್ಯ?
ಈ ರೀತಿಯಾದರೆ ಅತ್ಯುತ್ತಮ ಬೌಲರ್‌ಗಳೂ ಕೂಡ ನಾಶವಾಗುತ್ತಾರೆ. ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಜಾನ್ಸನ್ ಅಪಾಯಕಾರಿ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಸರಣಿಯಲ್ಲಿ ಅವರ ಸ್ಥಿತಿ ಕೂಡ ಮಿಕ್ಕ ಬೌಲರ್‌ಗಳಿಗಿಂತ ಹೆಚ್ಚು ಭಿನ್ನವಾಗೇನೂ ಇರಲಿಲ್ಲ.

- ಮೈಲಾರಲಿಂಗ ದಿಂಡಲಕೊಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.