ಕ್ರೀಡೆ

ಸಚಿನ್‌ಗೆ ಭಾರತರತ್ನ ನೀಡಿದರೆ ಅಪಸ್ವರವೇಕೆ?

ಸಚಿನ್‌ಗೆ ಭಾರತರತ್ನ ನೀಡಿದರೆ ಅಪಸ್ವರವೇಕೆ?
Published On :

ಧ್ಯಾನ್ ದಿ ಗ್ರೇಟ್...
ಹಾಕಿ ದಂತಕಥೆ ಧ್ಯಾನ್‌ಚಂದ್ ಯಶೋಗಾಥೆಯನ್ನು ಕೆದಕಿದರೆ ಮೈನವಿರೇಳುತ್ತದೆ. ವಿಶ್ವ ಗೆಲ್ಲಲು ಹೊರಟಿದ್ದ ಅಡಾಲ್ಫ್ ಹಿಟ್ಲರ್ ಸಹ ಧ್ಯಾನ್ ಚಂದ್ ಮ್ಯಾಜಿಕ್‌ಗೆ ತಲೆದೂಗಿದ್ದ ಮಾತ್ರವಲ್ಲ ಜರ್ಮನಿ ತಂಡಕ್ಕಾಗಿ ಆಡು, ನಿನ್ನನ್ನು ಮೇಜರ್ ಮಾಡುತ್ತೇನೆ. ಮಾತ್ರವಲ್ಲ ಕೇಳಿದಷ್ಟು ಸಂಪತ್ತು ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದ. ಇದನ್ನು ನಯವಾಗಿ ತಿರಸ್ಕರಿಸಿದ್ದ ಧ್ಯಾನ್ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸ್ವರ್ಣಪದಕ ತಂದುಕೊಟ್ಟರು. ಭಾರತ ಮೂರು ಬಾರಿ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರನ್ನು ವಿಶ್ವವೇ ಹಾಕಿ ಮಾಂತ್ರಿಕ ಎಂದು ಗೌರವಿಸಿದೆ. ಇಂತಹಾ ಮೆಜೀಶಿಯನ್ ಮತ್ತೆ ಹುಟ್ಟಿ ಬರಲಾರ ಎಂಬ ಮಾತಿದೆ. ನಿಜವಾದ ಅರ್ಥದಲ್ಲಿ ಇವರು ಭಾರತ ವಿಶ್ವ ಹಾಕಿಗೆ ನೀಡಿದ ಅಮೂಲ್ಯ ರತ್ನ. ಅವರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದ್ದೇವೆ ಎಂಬುದು ಸಂತಸದ ಸಂಗತಿ. ಇವರಿಗೆ ಭಾರತ ರತ್ನ ನೀಡದಿದ್ದರೆ ಆ ಪ್ರಶಸ್ತಿ ಮೌಲ್ಯ ನಿಜಕ್ಕೂ ಹೆಚ್ಚುತ್ತಿತ್ತು.

ಮಿಲ್ಕಾ ಯಾರಿಗೆ ಕಡಿಮೆ
ಯಶಸ್ಸೆನ್ನುವುದನ್ನು ವಿಶ್ವಸ್ತರದಲ್ಲಿಯೇ ಗುರುತಿಸಬೇಕೆಂದಿಲ್ಲ. ಒಂದು ದೇಶದ ಆತ್ಮವಿಶ್ವಾಸ, ಗೌರವವನ್ನು ಎತ್ತಿ ಹಿಡಿವ ಯಾವುದೇ ಕಾರ್ಯವೂ ಶ್ರೇಷ್ಠವೇ. ಹೀಗಾಗಿಯೇ ಏಷ್ಯಾಡ್, ಕಾಮನ್ವೆಲ್ತ್ ಗೇಮ್ಸ್‌ನ ಟ್ರ್ಯಾಕ್‌ಗಳಲ್ಲಿ ಯಾರನ್ನೂ ಮುಂದೆ ಹೋಗಗೊಡದ ಮಿಲ್ಕಾ ಸಿಂಗ್ ಬದುಕಿನ ಹಾದಿ ಹೂಹಾಸಿನದೇನಲ್ಲ. ಬಡತನದೊಂದಿಗೇ ಸ್ಪರ್ಧೆಗಿಳಿದರು. ದೇಶವಿಭಜನೆಯ ಸಂದಂರ್ಭ ಪಾಕಿಸ್ತಾನದ ಪಂಜಾಬ್ ಪ್ರಾಂತದಿಂದ ಜೀವ ಕೈಯಲ್ಲಿ ಹಿಡಿದು ಓಡಿದ ಮಿಲ್ಕಾ ಟ್ರ್ಯಾಕ್‌ಗಳಲ್ಲಿ ಭಾರತದ ಮಾನ ಎತ್ತಿ ಹಿಡಿದರು. ಶತ್ರುರಾಷ್ಟ್ರವಾದ ಪಾಕಿಸ್ತಾನವೇ ಅವರನ್ನು ಗುರುತಿಸಿ ಫ್ಲೈಯಿಂಗ್ ಸಿಖ್ ಎಂಬ ಬಿರುದು ನೀಡಿದ್ದರೂ ಭಾರತದಲ್ಲಿ ಅನಾದರಕ್ಕೆ ಒಳಗಾಗುತ್ತಲೇ ಇದ್ದಾರೆ. ಮಿಲ್ಕಾ ಸಾಧನೆ ಹಾಲಿನಷ್ಟು ಬೆಳ್ಳಗೆ ಕಂಗೊಳಿಸುತ್ತಿದ್ದರೂ ಅವರಿಗೆ ಪದ್ಮಶ್ರೀ ಎಂಬ ಸಮಾಧಾನಕರ ಬಹುಮಾನ ನೀಡಿದ್ದೇವೆ ಎಂಬುದಷ್ಟೇ ನಮ್ಮ ಹೆಗ್ಗಳಿಕೆ.

ವಿಶಿ, ಪೇಸ್ ಸಾಧನೆ ಲೆಕ್ಕಕ್ಕಿಲ್ಲವೇ?
ತನ್ನನ್ನು ಸೋಲಿಸುವರುಂಟೇ ಎಂದು ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಸವಾಲು ಹಾಕಿದ ಕಾಲದಲ್ಲಿ ಉದಯಿಸಿದ ಭಾರತದ ಚೆಸ್ ತಾರೆ ವಿಶ್ವನಾಥನ್ ಆನಂದ್. ಸಣ್ಣಪುಟ್ಟ ಸಾಧನೆಗಳಿಗೆ ಖೇಲ್ ರತ್ನ ಪ್ರಶಸ್ತಿಗಳು ಸಾಲು ಸಾಲಾಗಿ ನೀಡಿರುವಾಗ ಬುದ್ಧಿವಂತರ ಕ್ರೀಡೆಯಲ್ಲಿ ದಶಕದಿಂದ ಪ್ರಭುತ್ವ ಸಾಧಿಸಿರುವ ವಿಶಿ ಸಾಧನೆಗೆ ಎಂದೋ ಭಾರತ ರತ್ನ ಸಿಗಬೇಕಿತ್ತು. ಹತ್ತು ಹಲವು ಬಾರಿ ದೇಶವಾಸಿಗಳ ಕೌತುಕವನ್ನು ತುದಿಗಾಲಲ್ಲಿ ನಿಲ್ಲಿಸಿದ, ದೇಶದ ಪ್ರಶ್ನೆ ಬಂದಾಗ ಟೆನಿಸ್ ಕೋರ್ಟ್‌ನಲ್ಲಿ ವೀರಾವೇಶದಿಂದ ಹೋರಾಡಿ ಅಚ್ಚರಿಯ ಗೆಲವನ್ನು ತಂದುಕೊಟ್ಟ ಪೇಸ್ ಪ್ರಶಸ್ತಿ ಸಿಗದಿದ್ದರೂ ಭಾರತದ ರತ್ನವೇ. ಆತ ಗೆದ್ದಾಗಲೆಲ್ಲಾ ಆತ ಮಾತ್ರವಲ್ಲ, ಭಾರತೀಯರೂ ಆನಂದ ಭಾಷ್ಪ ಸುರಿಸಿದ್ದಾರೆ. 1996ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದೇ ಒಂದು ಪದಕ ದಕ್ಕಲಿಲ್ಲವಲ್ಲ ಎಂದು ಕೊರಗುತ್ತಿದ್ದಾಗ ಪೇಸ್ ದೇಶಕ್ಕೆ ನೀಡಿದ ಸಂತಸವನ್ನು ಮರೆಯಲಾದೀತೆ

ನೀತಿಯೇ ತೊಡಕಾಯಿತು...
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತ ರತ್ನ ಪ್ರಶಸ್ತಿಯ ರೂಪರೇಶ ತಯಾರಿಸಬೇಕಾದರೆ, ಕ್ರೀಡಾ ವಿಭಾಗವನ್ನು ಸೇರಿಸಿರಲಿಲ್ಲ. ಹೀಗಾಗಿ ಅಷ್ಟೂ ವರ್ಷಗಳ ಕಾಲ ಧ್ಯಾನ್‌ಚಂದ್, ಮಿಲ್ಕಾ ಸಿಂಗ್ ಇವರಿಗೆ ಭಾರತ ರತ್ನ ಕೊಡುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಅವರಿಗೆ ಕೊಡಿ ಎಂದೂ ಯಾರೂ ಧ್ವನಿಯೆತ್ತಲಿಲ್ಲ. ಆದರೆ ಸಚಿನ್‌ಗೆ ಭಾರತ ರತ್ನ ನೀಡಿ ಎಂದಾಗ ಮಾತ್ರ ಎಲ್ಲರ ಕಿವಿ ನೆಟ್ಟಗಾಯಿತು. ಅದಕ್ಕಾಗಿ ಭಾರತ ರತ್ನದ ಮಾನದಂಡದಲ್ಲಿ ತಿದ್ದುಪಡಿ ತರಲಾಯಿತು. ಈಗ ಭಾರತ ರತ್ನ ನೀಡಬೇಕೆಂದು ಉಲ್ಲೇಖಿಸಲ್ಪಡುತ್ತಿರುವ ಸಾಧಕರಿಗೆ ಪ್ರಶಸ್ತಿ ನೀಡಲು ಮುಂದಿನ ದಿನಗಳಲ್ಲೂ ಅವಕಾಶವಿದೆ ಹಾಗೂ ನೀಡಬೇಕಾದ್ದೆ.
ಸಚಿನ್ ಎಂಬ ಒಂದೇ ಹೆಸರಿನಿಂದ ಕ್ರೀಡಾ ವಿಭಾಗಕ್ಕೂ ಪ್ರಾಶಸ್ತ್ಯ ದೊರಕಿತು ಆತನ ಪ್ರಾಮುಖ್ಯತೆ ಏನು ಎಂಬುದರ ಅರಿವಾಗುತ್ತದೆ. ಹೀಗಿರುವಾಗ ಆ ಪ್ರಶಸ್ತಿಯನ್ನು ಸಚಿನ್‌ಗೆ ನೀಡಬಾರದು ಎಂದರೆ ಹೇಗೆ, ಕಳೆದ 24 ವರ್ಷಗಳಲ್ಲಿ ಈ ದೇಶವಾಸಿಗಳು ತಮ್ಮೆಲ್ಲಾ ನೋವು, ನಲಿವು, ಬಡತನ, ಸಿರಿತನ ಮರೆತು ಸಚಿನ್ ಬ್ಯಾಟಿಂಗ್ ಅನ್ನು ಆನಂದಿಸಿದ್ದಾರೆ. ನಿಜಕ್ಕೂ ಆತ ಭಾರತ ರತ್ನ. ಆತನ ಯಶಸ್ಸಿನಲ್ಲಿ ತಮ್ಮ ಗೆಲವನ್ನು ಕಂಡಿದ್ದಾರೆ. ಕೋಟ್ಯಂತರ ರು. ಗಳಿಸಿದಾಗಲೂ ಆಗದಿದ್ದ ಸಂತಸವನ್ನು ದೇವರ ಆಟ ನೀಡಿದೆ. ನಿಜಕ್ಕೂ ಆತ ಭಾರತ ರತ್ನ.

ಕ್ರಿಕೆಟ್ ಬಗ್ಗೆ ಏನೂ ತಿಳಿದಿರದ ಬರಾಕ್ ಒಬಾಮಗೆ ಸಚಿನ್ ಯಾರೆಂದು ಗೊತ್ತು. ಆತ ಬ್ಯಾಟಿಂಗ್ ನಡೆಸುವಾಗ ತನ್ನ ದೇಶದ ಆರ್ಥಿಕತೆಗೆ ಶೇ.5ರಷ್ಟು ಕುಗ್ಗುತ್ತದೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ನಿಜಕ್ಕೂ ಆತ ಭಾರತ ರತ್ನ. ಇದು ದೇವರಾಣೆ ಸತ್ಯ.

- ಗಣೇಶ್ ಪ್ರಸಾದ್ ಕುಂಬ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.