ಹೆಮ್ಮಾರಿ

ಟೆನಿಸ್ನಲ್ಲಿ ದಿಗ್ಗಜರೆನಿಸಿಕೊಂಡವರಿಗೆ ಆತ ಮಣ್ಣು ಮುಕ್ಕಿಸಿದ್ದಾನೆ. ಅತಿರಥ ಮಹಾರಥರೆನಿಸಿಕೊಂಡವರ ಆಟವೂ ಆತನ ಮುಂದೆ ನಡೆದಿಲ್ಲ. ಆತ ಸದ್ಯಕ್ಕೆ ವಿಶ್ವದ ನಂಬರ್ 1 ಟೆನಿಸ್ ಆಟಗಾರ. ಇನ್ನು ಐದು ಗ್ರ್ಯಾಂಡ್ಸ್ಲ್ಯಾಮ್ ಗೆದ್ದರೆ, ಟೆನಿಸ್ ಲೋಕಕ್ಕೆ ಆತನೇ ದಿಗ್ಗಜ. ಎದುರಾಳಿ ಎಷ್ಟೇ ಬಲಿಷ್ಠವಾಗಿದ್ದರೂ ಆತನಿಗೆ ಅಂಜಿಕೆ ಎಂಬುದೇ ಇಲ್ಲ. ಆದರೆ, ಗಾಯವೆಂದರೆ ಮಾತ್ರ ಆತನಿಗೆ ಎಲ್ಲಿಲ್ಲದ ಭೀತಿ. ಹೀಗಾಗಿ ಸದಾ ಗಾಯಕ್ಕೆ ಹೆದರುವ ಆತ, 'ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಟೆನಿಸ್ಗೆ ಮರಳಿರುವುದು ನನ್ನ ಮಹಾನ್ ಸಾಧನೆ. ಗಾಯವೊಂದನ್ನು ಎದುರಿಸಿದರೆ ಈ ಜಗತ್ತಿನಲ್ಲಿ ನನ್ನನ್ನು ಸೋಲಿಸುವವರೇ ಇಲ್ಲ' ಎನ್ನುತ್ತಾನೆ. ಗಾಯದಿಂದ ನರಳಿ ಮತ್ತೆ ಫಿಟ್ನೆಸ್ ಪಡೆದಾಗ ಓರ್ವ ಸ್ಫೂರ್ತಿಯುತ ಕ್ರೀಡಾಪಟುವಿನ ಅನುಭವ ಏನು ಎನ್ನುವುದಕ್ಕೆ ಆತನ ಈ ಮೇಲಿನ ಮಾತುಗಳೇ ಸಾಕ್ಷಿ. ಅವರು ಬೇರಾರೂ ಅಲ್ಲ ಸದ್ಯಕ್ಕೆ ವಿಶ್ವ ಟೆನಿಸ್ ರಂಗದಲ್ಲಿ ಮಿಂಚುತ್ತಿರುವ ರಾಫೆಲ್ ನಡಾಲ್.
ನಡಾಲ್ ಓರ್ವ ಮಹಾನ್ ಟೆನಿಸ್ ತಾರೆ. ತಮ್ಮ ಸಾಧನೆಗಳ ಮೂಲಕ ನಡಾಲ್ ಟೆನಿಸ್ ಲೋಖದ ಶಿಖರವೇರುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಗಾಯ ಎಂತಹ ಕ್ರೀಡಾಪಟುವನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸ್ಪರ್ಧೆಯಲ್ಲಿ ಎದುರಾಗುವ ಬಲಿಷ್ಠ ಸ್ಪರ್ಧಿಗಿಂತ, ಗಾಯ ಎಷ್ಟು ತೀವ್ರ ಸ್ವರೂಪದ್ದು ಎಂಬ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
'ಇಂದು ನಾನು ನಂಬರ್ 1 ಸ್ಥಾನದಲ್ಲಿರುವುದು ಸಂತಸ ಉಂಟುಮಾಡಿದೆ. ಇದೇ ಸಾಧನೆಯನ್ನು ನಾನು ನೂರಾರು ಬಾರಿ ಮರುಕಳಿಸಬಲ್ಲೆ. ಆರೋಗ್ಯದಿಂದ ಇದ್ದರೆ, ನಾನು ಎಲ್ಲರ ಎದುರಿಗೂ ಸೋಲಬಹುದು ಅಥವಾ ಗೆಲ್ಲಬಹುದು. ಆದರೆ, ಆರೋಗ್ಯವಿಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ' ಎನ್ನುವ ನಡಾಲ್ ಮಾತುಗಳಲ್ಲೇ ಗಾಯದ ಬಗೆಗಿನ ಭೀತಿಯನ್ನು ಅರ್ಥ ಮಾಡಿಕೊಳ್ಳಬಹುದು.
ವಿಂಬಲ್ಡನ್ ಗೆದ್ದವಳ ನುಂಗಿದ ಗಾಯ!
ಆಕೆಗಿನ್ನೂ ಕೇವಲ 28 ವರ್ಷ. ಇನ್ನೂ ಹಲವಾರು ಪ್ರಶಸ್ತಿಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದಳು. ಆದರೆ, ನಿರಂತರವಾಗಿ ಕಾಡುತ್ತಿದ್ದ ಗಾಯ ತನ್ನ ವೃತ್ತಿಗೆ ವಿದಾಯ ಹೇಳುವಂತೆ ಮಾಡಿತು. ಆಕೆ ವಿಶ್ವದ ಪ್ರತಿಷ್ಠಿತ ವಿಂಬಲ್ಡನ್ ಚಾಂಪಿಯನ್ಶಿಪ್ ಗೆದ್ದುಕೊಂಡು ಕೇವಲ 40 ದಿನಗಳಲ್ಲೇ ವಿದಾಯದ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಆಕೆಗೆ ಗಾಯ ಅದೆಷ್ಟು ತೀವ್ರವಾಗಿ ಕಾಡಿರಬೇಕು.
ಪ್ರಶಸ್ತಿಯ ಕನಸು ಕಾಣುತ್ತಿದ್ದ ಆಕೆಯ ಕಣ್ಣುಗಳಲ್ಲಿ ನಿವೃತ್ತಿ ಘೋಷಿಸುವಾಗ ತುಂಬಿಕೊಂಡಿದ್ದ ಕಣ್ಣೀರು, ನಿಂತರವಾಗಿ ಗಾಯದಿಂದ ತಾನು ಅನುಭವಿಸಿದ ಯಾತನೆಯ ಪ್ರತೀಕವಾಗಿತ್ತು.
'ಇದು ನನಗೆ ನಿವೃತ್ತಿ ಹೇಳಲು ಸೂಕ್ತ ಸಮಯ. ವಿದಾಯ ಹೇಳುವುದು ಯಾವತ್ತೂ ಸುಲಭದ ಮಾತಲ್ಲ. ಗಾಯ ಎಂಬ ನೋವಿನಿಂದ ನರಳುತ್ತಿರುವ ನನ್ನಿಂದ ಇನ್ನು ಮುಂದೆ ಆಡಲು ಸಾಧ್ಯವಿಲ್ಲ' ಎಂದ ಫ್ರಾನ್ಸ್ ಆಟಗಾರ್ತಿ ಮೆರಿಯನ್ ಬಾರ್ಟೋಲಿ ಮನದಲ್ಲೇ ಗಾಯಕ್ಕೆ ಹಿಡಿ ಶಾಪ ಹಾಕಿದ್ದಳು.
ಇದು ಬರೀ, ನಡಾಲ್, ಬಾರ್ಟೋಲಿ ಅಥವಾ ಟೆನಿಸ್ಗೆ ಸಬಂಧಿಸಿದ ಕತೆಯಲ್ಲ. ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್, ಟ್ರ್ಯಾಕ್ ಮತ್ತು ಫೀಲ್ಡ್ ಹೀಗೆ ಸಾಲು ಸಾಲು ಕ್ರೀಡೆಗಳಲ್ಲಿ ಗಾಯದಿಂದ ಚೇತರಿಸಿಕೊಳ್ಳದೇ ಒದ್ದಾಡಿದವರನ್ನು ಹುಡುಕುತ್ತಾ ಹೊರಟರೆ, ಗಾಯದಿಂದಲೇ ಕ್ರೀಡಾ ಜೀವನದಲ್ಲಿ ಸೋಲುಂಡವರು ಸಾಲು ಸಾಲಾಗಿ ನಿಲ್ಲುತ್ತಾರೆ.
- ಎಂಬಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


