ಹಗ್ಗ ಜಗ್ಗಾಟ

ಒಂದಷ್ಟು ರೆಸ್ಟ್ನ ನಂತರ, ಕ್ರಿಕೆಟ್ನ ಮಾಹೋಲ್ ಕೆಲವೇ ದಿನಗಳಲ್ಲಿ ಮತ್ತೆ ಶುರುವಾಗುತ್ತಿದೆ. ಒನ್ಸ್ ಅಗೇನ್ ಟೀಂ ಇಂಡಿಯಾ ತನ್ನ ರೆಸ್ಟ್ಲೆಸ್ ಶೆಡ್ಯೂಲ್ನಲ್ಲಿ ಬ್ಯುಸಿಯಾಗಲಿದೆ. ಭಾರತ ತಂಡ, ಹಾಗೆ ಕ್ರಿಕೆಟ್ನ ಉಳಿದರ್ಧ ಋತುವಿಗಾಗಿ ತಯಾರಿ ನಡೆಸುತ್ತಿದ್ದರೆ, ಇತ್ತ ನಾಲ್ವರು ಜಗಜಟ್ಟಿ ಬ್ಯಾಟ್ಸ್ಮನ್ಗಳು ಟೀಂ ಇಂಡಿಯಾದ ಆರಂಭಿಕರ ಸ್ಥಾನಕ್ಕೆ ಪೈಪೋಟಿ ಶುರುವಿಟ್ಟುಕೊಂಡಿದ್ದಾರೆ....
ಆರಂಭಿಕರ ಸ್ಥಾನ ಹೆಚ್ಚು ಜವಾಬ್ದಾರಿಯುತವಾದದ್ದು. ಇವರು ಹಾಕುವ ಬುನಾದಿಯೇ ಪಂದ್ಯದಲ್ಲಿ ತಂಡವೊಂದರ ಫಲಿತಾಂಶವನ್ನು ನಿರ್ಧರಿಸಬಲ್ಲದು. ಶಿಖರ್ ಧವನ್- ರೋಹಿತ್ ಶರ್ಮಾ, ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಈ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಇವರು ಸಕ್ಸಸ್ ಆಗ್ತಾರಾ ಅಥವಾ ಸಕ್ಸಸ್ಗಾಗಿ ಸರ್ಕಸ್ ಮಾಡ್ತಾನೇ ಇರ್ತಾರಾ ? ಎನ್ನುವುದು ಸದ್ಯದ ಇಂಟೆರೆಸ್ಟಿಂಗ್ ವಿಷಯ. ಆದರೆ, ಈ ಎರಡೂ ಜೋಡಿಗಳ ನಡುವೆ ಟಗ್ ಆಫ್ ವಾರ್ ನಡೆಯುವುದಂತೂ ಸತ್ಯ. ಇವರ ಜತೆಯಲ್ಲಿ ಮುರಳಿ ವಿಜಯ್ ಕೂಡ ಕಣದಲ್ಲಿದ್ದಾರೆ.
ಇವರಲ್ಲಿ ಮೊದಲಿಗೆ ಹಿರಿಯರ ವಿಷಯಕ್ಕೆ ಬರೋಣ. ಶಿಖರ್, ರೋಹಿತ್, ಮುರಳಿಗೆ ಹೋಲಿಸಿದರೆ, ಸೆಹ್ವಾಗ್ ಹಾಗೂ ಗಂಭೀರ್- ಅವರೆಲ್ಲರಿಗಿಂತ ಶ್ಯಾನೇ ಸೀನಿಯರ್ಗಳು. ಇತ್ತೀಚೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದರ ಪರಿಣಾಮವಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡವರು. ಆದರೆ, ಒಂದಲ್ಲ ಒಂದು ರೀತಿಯಲ್ಲಿ ಕ್ರಿಕೆಟ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಇಬ್ಬರೂ, ಟೀಂ ಇಂಡಿಯಾಗೆ ಮರಳಲು ಶತಪ್ರಯತ್ನ ನಡೆಸುತ್ತಲೇ ಇದ್ದಾರೆ.
ಕೌಂಟಿ ಕ್ರಿಕೆಟ್ನ ಎಸ್ಸೆಕ್ಸ್ ತಂಡದಲ್ಲಿ ಗಂಭೀರ್ ಬೆವರು ಹರಿಸಿದ್ದರೆ, ಇತ್ತ, ಸೆಹ್ವಾಗ್ ಚೆನ್ನೈನಲ್ಲಿನ ಎಂಆರ್ಎಫ್ ಪೇಸ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಸದ್ಯಕ್ಕೆ, ಭಾರತ ಪ್ರವಾಸದಲ್ಲಿರುವ ವಿಂಡೀಸ್ ಎ ಹಾಗೂ ಭಾರತ ಎ ತಂಡಗಳ ನಡುವೆ ನಡೆಯಲಿರುವ ನಾಲ್ಕು ದಿನಗಳ ಅನಧಿಕೃತ ಪಂದ್ಯಗಳಿಗೆ ಸೆಹ್ವಾಗ್, ಗಂಭೀರ್ ಇಬ್ಬರೂ ಆಯ್ಕೆಯಾಗಿದ್ದಾರೆ. ಈ ಸವಾಲನ್ನು ಅವರು ಹೇಗೆ ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಏನಿದು ಸವಾಲು?
ಔಟ್ ಆಫ್ ಫಾರ್ಮ್ನಿಂದಾಗಿ ತಮ್ಮಿಂದ ತೆರವಾದ ಟೀಂ ಇಂಡಿಯಾದ ಆರಂಭಿಕರ ಸ್ಥಾನಗಳನ್ನು ಈಗಾಗಲೇ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮೂಲಕ ಯಶಸ್ವಿಯಾಗಿ ತುಂಬಿದ್ದಾರೆ. ಇವರು ಮೂಡಿಸಿರುವ ಇಮೇಜನ್ನೂ ಮೀರಿ, ತಮ್ಮದೇ ಆದ ಹಳೆಯ ಇಮೇಜನ್ನು ಮತ್ತೆ ವಿಜೃಂಭಿಸುವಂತೆ ಮಾಡಿ, ಇದೇ ವರ್ಷ ಅಕ್ಟೋಬರ್- ನವೆಂಬರ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಮರಳಿ ಟೀಂ ಇಂಡಿಯಾದ ಆರಂಭಿಕರ ಸ್ಥಾನಗಳಲ್ಲಿ ಬಂದು ಕೂರಬೇಕು ಎನ್ನುವುದು ಸೆಹ್ವಾಗ್-ಗಂಭೀರ್ ಸದ್ಯದ ಕನಸು.
ಈ ಸವಾಲನ್ನು ಸೆಹ್ವಾಗ್- ಗಂಭೀರ್ ಸ್ವೀಕರಿಸುವುದು ಸುಲಭ. ಆದರೆ, ಅದನ್ನು ಮೀರಿ ನಿಲ್ಲುವುದು ಕಷ್ಟ. ಏಕೆಂದರೆ, ಈಗಾಗಲೇ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ತಮ್ಮ ಆರಂಭಿಕ ಸ್ಥಾನಗಳಲ್ಲಿ ತಮ್ಮ ಸಾಮರ್ಥ್ಯವನ್ನು ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತೋರಿದ್ದಾರೆ. ಈಗಾಗಲೇ ಆಯ್ಕೆದಾರರನ್ನು ತಮ್ಮ ಮೊನಚು ಆಟದಿಂದ ತೃಪ್ತಿಪಡಿಸಿದ್ದಾರೆ. ಅಲ್ಲದೇ, ಸ್ವದೇಶದಲ್ಲೂ, ವಿದೇಶದಲ್ಲೂ ಈ ಇಬ್ಬರು ಉತ್ತಮವಾಗಿಯೇ ಆಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಪೇರಿಸಿದ್ದು ಇದೇ ಶಿಖರ್ ಧವನ್. ಅಲ್ಲದೇ, ಇದೇ ವರ್ಷ ಆ. 12ರಂದು ಪ್ರಿಟೋರಿಯಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ಪಂದ್ಯ (ಲಿಸ್ಟ್ 'ಎ'ನ 50 ಓವರ್ ಪಂದ್ಯ)ದಲ್ಲಿ 248 ರನ್ ಬಾರಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಟೆಸ್ಟ್ ಪಂದ್ಯಗಳಲ್ಲೂ ಇಬ್ಬರೂ ಕಮಾಲ್ ತೋರಿದ್ದಾರೆ. ಹಾಗಾಗಿ, ಫಾರ್ಮ್ನಲ್ಲಿರುವ ಈ ಇಬ್ಬರಿಗೇ ಆಯ್ಕೆ ಮಂಡಳಿ ಮತ್ತೆ ಮಣೆ ಹಾಕಿದರೂ ಹಾಕಬಹುದು.
ಇದಲ್ಲದೇ, ರೋಹಿತ್ ಶರ್ಮಾ ಅವರ ಬಗ್ಗೆ ಟೀಂ ಇಂಡಿಯಾ ನಾಯಕ ಧೋನಿಗೆ ವಿಶ್ವಾಸವಿದೆ. ಕೆಲವೊಂದು ಹೇಳಿಕೆಗಳಲ್ಲಿ ಅದನ್ನು ಹೇಳಿಕೊಂಡಿದ್ದಾರೆ ಕೂಡ. ಹಾಗಾಗಿ, ಆಯ್ಕೆ ಮಂಡಳಿಯ ಮುಂದೆ ಧೋನಿ ಮಾತು ನಡೆಯುತ್ತದೆಯಾದ್ದರಿಂದ ಧೋನಿಯವರ ಆಯ್ಕೆಯಂತೇ ಟೀಂ ಇಂಡಿಯಾ ಪ್ರಕಟಗೊಳ್ಳಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದೇ... ಈಗ ಸೆಹ್ವಾಗ್ ಹಾಗೂ ಗಂಭೀರ್ ಅವರಿಬ್ಬರನ್ನೂ ಕಾಡುತ್ತಿರುವ ವಿಚಾರ. ಈಗ ಸದ್ಯಕ್ಕೆ ಸಿಕ್ಕಿರುವ ಅವಕಾಶದಲ್ಲೇ ಮಿರಿಮಿರಿ ಮಿಂಚಿ, ಟೀಂ ಇಂಡಿಯಾಕ್ಕೆ ಮರಳಲು ಈ ಇಬ್ಬರೂ ಪ್ರಯತ್ನಿಸುತ್ತಿದ್ದಾರೆ. ಇಬ್ಬರ ನಡುವೆ 398 ಪಂದ್ಯಗಳಲ್ಲಿ ಜೊತೆಯಾಟವಾಡಿದ ಅಪಾರ ಅನುಭವವಿದೆ. ಈ ಅನುಭವ, ಅನನುಭವಿಗಳೇ ಹೆಚ್ಚಾಗಿ ತುಂಬಿಕೊಂಡಿರುವ ವೆಸ್ಟ್ ಇಂಡೀಸ್ 'ಎ' ತಂಡದ ಮೇಲೆ ಪ್ರಹಾರ ಮಾಡಿದರೆ, ಮತ್ತೊಮ್ಮೆ ಸೆಹ್ವಾಗ್- ಗಂಭೀರ್ ಇಲ್ಲಿ ವಿಜೃಂಭಿಸಿದರೆ, ಆಯ್ಕೆ ಮಂಡಳಿಯ ಗಮನ ಸೆಳೆಯಬಹುದು ಎಂದು ಕ್ರಿಕೆಟ್ ಚಿಂತಕರು ಹಾಗೂ ಅಭಿಮಾನಿಗಳು ಭಾವಿಸಿದ್ದರು.
ಇನ್ನು, ಮುರಳಿ ವಿಜಯ್ ಬಗ್ಗೆ ಹೇಳುವುದಾದರೆ, ಆಗಾಗ ಸಿಕ್ಕಿರುವ ಆರಂಭಿಕನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರಲ್ಲೂ ವಿಶೇಷವಾಗಿ, ಆಸ್ಟ್ರೇಲಿಯಾ ವಿರುದ್ಧ ಈ ತಮಿಳುನಾಡಿದ ಬ್ಯಾಟ್ಸ್ಮನ್ನ ರೆಕಾರ್ಡ್ ಉತ್ತಮವಾಗೇ ಇದೆ. ದಕ್ಷಿಣ ಆಫ್ರಿಕಾ ಎ, ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಳಲ್ಲಿ ಶಿಖರ್ ಧವನ್ ಜೊತೆ ಉತ್ತಮ ಪ್ರದರ್ಶನ ನೀಡಿದ್ದಾರೆ ವಿಜಯ್.
ಈ ಎಲ್ಲಾ ಚಾಲೆಂಜ್ಗಳನ್ನೂ ಮನದಲ್ಲಿಟ್ಟುಕೊಂಡೇ ಕಣಕ್ಕಿಳಿಯುತ್ತಿರುವ ದಿಲ್ಲಿಯ ಜೋಡಿಯಾದ ಸೆಹ್ವಾಗ್- ಗಂಭೀರ್ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣಲಿದ್ದಾರೆಯೇ ಎನ್ನುವುದೇ ಸದ್ಯದ ಕುತೂಹಲ. ಆದರೆ ವೆಸ್ಟ್ ಇಂಡೀಸ್ 'ಎ' ವಿರುದ್ಧ ನಡೆದ 2ನೇ ಅನಧಿಕೃತ ಪಂದ್ಯದಲ್ಲಿ ಸೆಹ್ವಾಗ್ ಹಾಗೂ ಗಂಭೀರ್ ತಮ್ಮ ವೈಫಲ್ಯ ಮುಂದುವರಿಸಿದ್ದಾರೆ.
ಹಾಗಾಗಿ ಈ ಇಬ್ಬರು ಆಟಗಾರರು 3ನೇ ಅನಧಿಕೃತ ಟೆಸ್ಟ್ನಲ್ಲಿ ನೀಡುವ ಪ್ರದರ್ಶನ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಂದುವೇಳೆ ಈ ಇಬ್ಬರು ಆಟಗಾರರು ತಮ್ಮ ಫಾರ್ಮ್ ಕಂಡುಕೊಂಡಿದ್ದೇ ಆದಲ್ಲಿ ತಂಡದ ಆಯ್ಕೆಗಾರರಿಗೆ ತಲೆನೋವು ತಪ್ಪಿದ್ದಲ್ಲ.
ಕಳೆದ ಐದು ಏಕದಿನ ಪಂದ್ಯಗಳಲ್ಲಿ ಆರಂಭಿಕರ ಈ ಸಾಧನೆ:
ಶಿಖರ್ ಧವನ್ - 16, 17, 116, 35 ಹಾಗೂ 41
ಕೊನೆಯ ಪಂದ್ಯ: ಜಿಂಬಾಬ್ವೆ ವಿರುದ್ಧ, ಆಗಸ್ಟ್ 3, 2013
ರೋಹಿತ್ ಶರ್ಮಾ - 58, 20, 1, 14 ಹಾಗೂ 64
ಕೊನೆಯ ಪಂದ್ಯ: ಜಿಂಬಾಬ್ವೆ ವಿರುದ್ಧ ಆಗಸ್ಟ್ 1, 2013
ವೀರೇಂದ್ರ ಸೆಹ್ವಾಗ್ - 15, 3, 34, 4 ಹಾಗೂ 31
ಕೊನೆಯ ಪಂದ್ಯ: ಪಾಕಿಸ್ತಾನ, ಜನವರಿ 3, 2013
ಗೌತಮ್ ಗಂಭೀರ್ - 52, 8, 33, 10 ಹಾಗೂ 24
ಕೊನೆಯ ಪಂದ್ಯ: ಇಂಗ್ಲೆಂಡ್ ವಿರುದ್ಧ, ಜನವರಿ 27, 2013
- ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


