ಲಿವರ್ ಪ್ರವೇಶ

ಇಂಗ್ಲಿಷ್ ಪ್ರೀಮಿಯರ್ ಫುಟ್ಬಾಲ್ ಲೀಗ್‌ನಲ್ಲಿ ಯಾರು ಅವಕಾಶ ವಂಚಿತರೋ ಅವರೆಲ್ಲ ಭಾರತದ ಐ-ಲೀಗ್‌ನಲ್ಲಿ ಹೀರೋಗಳು! ಇದು ವಿಶ್ವದ ಜನಪ್ರಿಯ ಕ್ರೀಡೆಯಲ್ಲಿನ ನಮ್ಮ ಸಾಧನೆ. ಇಂಥ ಸ್ಥಿತಿಯಲ್ಲೇಕೋ ಭೈಚುಂಗ್ ಭುಟಿಯಾನ ಆ ಮಾತು ನೆನಪಿಗೆ ಬರುತ್ತೆ; 'ಭಾರತದ ಫುಟ್ಬಾಲ್ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಇನ್ನೂ 100 ವರ್ಷ ಬೇಕು'!
ಭಾರತೀಯ ಫುಟ್ಬಾಲ್ ತಂಡವನ್ನು ಮೇಲೆತ್ತಲು ಹಲವು ಯತ್ನಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಟಾಟಾ ಫುಟ್ಬಾಲ್ ಅಕಾಡೆಮಿಯ ಪಾತ್ರ ಗಮನಾರ್ಹ. ಆದರೆ, ಅದು ಸಹ ಇತ್ತೀಚೆಗೆ ಸಪ್ಪೆ ಎನಿಸತೊಡಗಿದೆ. ಆದರೂ ಪುಣೆಯ ಹೊರವಲಯದ ಲೂನಿಯಲ್ಲಿ ಕಣ್ಣುಬಿಡುತ್ತಿರುವ 'ಅಂತಾರಾಷ್ಟ್ರೀಯ ಫುಟ್ಬಾಲ್ ಅಕಾಡೆಮಿ' ಈ ನಿಟ್ಟಿನಲ್ಲೊಂದು ಹೊಸ ಭರವಸೆ ಮೂಡಿಸಿದೆ.
ಇದು ವಿಶ್ವದರ್ಜೆಯ ಅಕಾಡೆಮಿ. ಸುಸಜ್ಜಿತ ವಸತಿ ಸೌಲಭ್ಯ ಇಲ್ಲಿದೆ. ಯುವ ಆಟಗಾರರಲ್ಲಿ ಹೊಸ ಕನಸನ್ನು ಚಿಗುರೊಡೆಯುವಂತೆ ಮಾಡುವ ಉದ್ದೇಶ ಈ ಅಕಾಡೆಮಿಯ ಹಿಂದಿದೆ. ಪುಣೆಯ ಡಿಎಸ್‌ಕೆ ಶಿವಾಜಿಯನ್ಸ್ ಫುಟ್ಬಾಲ್ ಕ್ಲಬ್ ಆರಂಭಿಸುತ್ತಿರುವ ಈ ಅಕಾಡೆಮಿಯೊಂದಿಗೆ ವಿಶ್ವದ ಖ್ಯಾತ ಮತ್ತು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ಕೈಜೋಡಿಸುತ್ತಿರುವುದು ಸಂತಸದ ವಿಚಾರವೇ. ಅಲ್ಲದೆ, ದೇಶದ ಫುಟ್ಬಾಲ್ ಪ್ರೇಮಿಗಳ ಕಾತರಕ್ಕೂ ಕಾರಣವಾಗಿದೆ.
ಇಪ್ಪತ್ನಾಲ್ಕು ಗಂಟೆ ಫುಟ್ಬಾಲ್!
ಫುಟ್ಬಾಲ್ ಆಟಗಾರರು ದಿನದ 24 ಗಂಟೆಯೂ ಇಲ್ಲಿ ಇಲ್ಲಿ ಫುಟ್ಬಾಲ್ ಮಂತ್ರವನ್ನೇ ಜಪಿಸಬೇಕು. ಹಾಗಿದೆ ವಾತಾವರಣ. ದೇಶದ ಮೊದಲ ವಿಶ್ವದರ್ಜೆಯ ವಸತಿ ಸೌಲಭ್ಯವುಳ್ಳ ಅಕಾಡೆಮಿಯೂ ಇದು ಹೌದು. ಇದರೊಂದಿಗೆ ಮಹಾರಾಷ್ಟ್ರದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರ ಪುಣೆಯಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯತೊಡಗಿದೆ. 2007ರಲ್ಲಿ ಇಲ್ಲಿ ಫುಟ್ಬಾಲ್ ಕ್ಲಬ್ ಆರಂಭವಾಗುವುದರೊಂದಿಗೆ ಪುಣೆಯಲ್ಲಿ ಫುಟ್ಬಾಲ್ ಗಾಳಿ ಬೀಸತೊಡಗಿತು. ಪೆನಿನ್ಸುಲಾ ಪುಣೆ ಫುಟ್ಬಾಲ್ ಅಕಾಡೆಮಿ ಈಗ 7ನೇ ಏರ್‌ಟೆಲ್ ಐ-ಲೀಗ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ. ಅಲ್ಲದೆ ತಂಡದ ನಿರ್ದೇಶಕ ರಂಜನ್ ಚೌಧ್ರಿ ದೇಶದಲ್ಲೇ ದೊಡ್ಡ ಫುಟ್ಬಾಲ್ ಅಕಾಡೆಮಿಯನ್ನು ತೆರೆಯಲು ಯೋಜಿಸುತ್ತಿದ್ದಾರೆ. ಈಗ ಐ- ಲೀಗ್ 2ನೇ ಡಿವಿಷನ್‌ನಲ್ಲಿರುವ ಡಿಎಸ್‌ಕೆ ಶಿವಾಜಿಯನ್ಸ್ ತಂಡ ಮುಂದಿನ ಜನವರಿಯಲ್ಲಿ ನೂತನ ರೆಸಿಡೆನ್ಸಿಯಲ್ ಫುಟ್ಬಾಲ್ ಅಕಾಡೆಮಿಯನ್ನು ಉದ್ಘಾಟಿಸಲು ಎದುರು ನೋಡುತ್ತಿದೆ.
ಅಕಾಡೆಮಿಯಲ್ಲಿ ಏನೇನಿದೆ?
ಉತ್ತಮ ಪಿಚ್, ಅಭ್ಯಾಸ ಮಾಡಲು ಪ್ರತ್ಯೇಕ ಸ್ಥಳ, ತರಗತಿಯ ಕೊಠಡಿಗಳು, ಜಿಮ್, ಕ್ಯಾಂಟೀನ್, ಉಪನ್ಯಾಸ ಮಂದಿರ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಆಟಗಾರರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಅಕಾಡೆಮಿ ತಯಾರಿ ಮಾಡಿಕೊಂಡಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಮೊದಲ ಹಂತದಲ್ಲಿ ಅಕಾಡೆಮಿ 17 ಮತ್ತು 18 ವಯಸ್ಸಿನ 64 ಆಟಗಾರರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಿದೆ. ನಂತರ 2017ರಿಂದ 7, 8 ಹಾಗೂ 12ನೇ ವಯಸ್ಸಿನ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲು ಅಕಾಡೆಮಿ ಯೋಜಿಸುತ್ತಿದೆ ಎಂದು ಡಿಎಸ್‌ಕೆ ಶಿವಾಜಿಯನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಶಿರೀಶ್ ಕುಲಕರ್ಣಿ ಹೇಳಿದ್ದಾರೆ.
ಅನುಭವಿಗಳಿಂದ ತರಬೇತಿ
ವಿಶ್ವದ ಖ್ಯಾತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಲಿವರ್‌ಪೂಲ್ ತಂಡ ಇದೇ ಮೊದಲ ಬಾರಿಗೆ ಭಾರತದಲ್ಲಿ ಫುಟ್ಬಾಲ್ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ. ಇದು ದೇಶದ ಫುಟ್ಬಾಲ್ ಬೆಳವಣಿಗೆಯ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ. ಅಲ್ಲದೆ, ಇನ್ನು 5 ವರ್ಷಗಳವರೆಗೆ ಡಿಎಸ್‌ಕೆ ಶಿವಾಜಿಯನ್ಸ್ ತಂಡವನ್ನು ಬಿಟ್ಟು ಅನ್ಯರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದೂ ಲಿವರ್‌ಪೂಲ್ ಭರವಸೆ ನೀಡಿದೆ. ಅಲ್ಲದೆ ವಿಶ್ವದ ಬಲಿಷ್ಠ ಫುಟ್ಬಾಲ್ ಕ್ಲಬ್ ಒಂದರ ಅನುಭವಿಗಳಿಂದ ತರಬೇತಿ ಪಡೆಯಲು ದೇಶದ ಯುವ ಪ್ರತಿಭೆಗಳಿಗೆ ಅವಕಾಶ ದೊರಕಿದಂತಾಗಿದೆ.
ಪ್ರತಿಭೆಗಳ ತಯಾರಿ ಹೇಗೆ?
ಅಕಾಡೆಮಿ ಆರಂಭದಲ್ಲಿ 17 ಮತ್ತು 19 ವರ್ಷದೊಳಗಿನ ಎರಡು ತಂಡಗಳು ಇರುತ್ತವೆ. ಈ ತಂಡಗಳಿಗೆ ತರಬೇತಿ ನೀಡಲು ಲಿವರ್‌ಪೂಲ್‌ನಿಂದ ಇಬ್ಬರು ಕೋಚ್‌ಗಳು ಇರುತ್ತಾರೆ. ಇವರಿಗೆ ಭಾರತದ ಇಬ್ಬರು ಸಹಾಯಕ ಕೋಚ್‌ಗಳು ನೆರವು ನೀಡಲಿದ್ದಾರೆ. ಫುಟ್ಬಾಲ್ ಜತೆಗೆ ಅಲ್ಲಿನ ಆಟಗಾರರಿಗೆ ಸೂಕ್ತ ಶಿಕ್ಷಣವನ್ನೂ ನೀಡಲಾಗುತ್ತದೆ. ಲಿವರ್‌ಪೂಲ್ ಕ್ಲಬ್ ಕಳೆದ ಕೆಲ ದಶಕಗಳಲ್ಲಿ ಅದ್ಭುತ ಆಟಗಾರರನ್ನು ನೀಡಿದೆ. ಒಂದು ವೇಳೆ ಈ ಅಕಾಡೆಮಿ ಭಾರತ ಫುಟ್ಬಾಲ್‌ನಲ್ಲಿ ಪರಿಣಾಮಕಾರಿ ಬದಲಾವಣೆ ತಂದರೆ, ದೇಶದ ಇತರ ಅಕಾಡೆಮಿಗಳಿಗೆ ಅದು ಮಾದರಿಯಾಗುವುದರಲ್ಲಿ ಅನುಮಾನವಿಲ್ಲ.
- ಮಲ್ಲಿಕಾರ್ಜುನ ಕರಿಯಪ್ಪನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


