ಪ್ರೆಶರ್ ಪ್ರೇಯರ್

ಕ್ರೀಡಾಪಟುಗಳು ಯಶಸ್ಸಿನ ತೇರಿನಲ್ಲಿದ್ದಾಗ ಅಭಿಮಾನಿಗಳು ಹುಟ್ಟಿಕೊಳ್ಳುವುದು ಸಾಮಾನ್ಯ. 'ನೆಚ್ಚಿನ ಆಟಗಾರ ಗೆಲ್ಲಲೇಬೇಕು' ಎಂಬ ಸದಾಶಯವೂ ಅಭಿಮಾನಿಗಳ ಎದೆಯಲ್ಲಿ ಬಡಿತವಾಗಿರುತ್ತದೆ. ಗೆಲವು ಕಂಡಾಗ ಆಗಸ ಚುಂಬಿಸುವ ಕೇಕೆ, ಸೋತಾದ ನೆಲದ ಮೇಲೆ ಬೀಳುವ ಕಣ್ಣೀರು... ಎರಡೂ ಸ್ವಾಭಾವಿಕವೇ. ಅಭಿಮಾನಿಗಳ ಈ ಪ್ರೀತಿ, ಕಾಳಜಿ ಆಟಗಾರನನ್ನು ಒತ್ತಡದಲ್ಲಿ ಸಿಲುಕಿಸುವುದೂ ಸಹಜವೇ.
ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೀನಾದ ಅಗ್ರ ಆಟಗಾರ್ತಿಯರಿಗೆ ಮಣ್ಣು ಮುಕ್ಕಿಸಿದ್ದ ಭಾರತದ ಉದಯೋನ್ಮುಖ ತಾರೆ ಪಿ.ವಿ. ಸಿಂಧು ಇದೇ ಒತ್ತಡವನ್ನೇ ಅನುಭವಿಸಿದ್ದರು. ಜಪಾನ್ ಓಪನ್ನಲ್ಲಿ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಪ್ರವೇಶಿಸಿದ ಆಟಗಾರ್ತಿ ವಿರುದ್ಧ ಸಿಂಧು ಸೋತಿದ್ದೇ ಇದಕ್ಕೆ ಸಾಕ್ಷಿ. ಹೌದು... ವಿಶ್ವದ ಟಾಪ್ 10 ರ್ಯಾಂಕಿಂಗ್ನಲ್ಲಿದ್ದ ಸಿಂಧು, 145ನೇ ರ್ಯಾಂಕಿಂಗ್ ಆಟಗಾರ್ತಿ ವಿರುದ್ಧ 6-21, 17-21 ನೇರ ಸೆಟ್ಗಳಿಂದ ಹೀನಾಯವಾಗಿ ಸೋತಿದ್ದನ್ನು ಕಂಡರೆ ಒತ್ತಡ ಎಷ್ಟರ ಮಟ್ಟಿಗೆ ಸಿಂಧುವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು? ಯೋಚಿಸಿ.
ಆದರೆ, ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಸಿಂಧು ಆಡಿದ್ದರಿಂದ ಆ ದಣಿವೇ ಸೋಲಿಗೆ ಕಾರಣವಾಯಿತೇನೋ ಎಂಬ ಮಾತುಗಳೂ ಕೇಳಿಬಂದವು. 'ದಣಿವಿಗಿಂತ ಒತ್ತಡ ಎಂಬ ಭೂತ ಹೆಚ್ಚು ಅಪಾಯಕಾರಿ' ಎನ್ನುತಾರೆ ಕ್ರೀಡಾತಜ್ಞರು.
ಸಚಿನ್ಗೂ ಕಾಡಿತ್ತು ಒತ್ತಡ
ಒತ್ತಡ ಎಂಬ ಪೆಡಂಭೂತ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನೇ ಬಿಟ್ಟಿಲ್ಲ. 'ಕ್ರೀಸ್ನಲ್ಲಿ ನಿಂತಾಗ ಒತ್ತಡದಿಂದ ಹೊರಗುಳಿಯಲು ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಹೆಚ್ಚು ಹೆಚ್ಚು ಮೊಸರನ್ನು ಸೇವಿಸುತ್ತಿದ್ದೆ. ಆಟಕ್ಕೂ ಮುನ್ನ ಮೊಸರು ಕುಡಿದೇ ಅಂಗಣಕ್ಕಿಳಿಯುತ್ತಿದ್ದೆ' ಎಂದು ಸಚಿನ್ ಹೇಳಿಕೊಂಡಿದ್ದಾರೆ.
ಸಚಿನ್ 100ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಲು ಹೆಚ್ಚು ಸಮಯ ತೆಗೆದುಕೊಂಡಾಗಲಂತೂ, ಅವರು ಅಭಿಮಾನಿಗಳ ನಿರೀಕ್ಷೆಯ ಒತ್ತಡಕ್ಕೊಳಗಾಗಿದ್ದಾರೆ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ಕೇಳಿಬಂದಿದ್ದವು.
ಸೈನಾಗೆ ನಿರೀಕ್ಷೆಯ ನೋವು
2010ರಲ್ಲಿ ಇಂಡೋನೇಷ್ಯಾ ಓಪನ್ ಗೆಲ್ಲುವ ಮೂಲಕ ವಿಶ್ವ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೇರಿದ್ದ ಸೈನಾ, ನಂತರ ಅದೇ ರೀತಿಯ ಹೋರಾಟವನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದರು. ಅವರ ಮೇಲಾಗ ಅಭಿಮಾನಿಗಳ ನಿರೀಕ್ಷೆಯ ಒತ್ತಡ ತೀವ್ರವಾಗಿತ್ತು ಎಂಬುದು ಕ್ರೀಡಾ ಪಂಡಿತರ ಅಭಿಪ್ರಾಯ.
ಆದರೆ, ಸೈನಾ ಇದನ್ನು ಒಪ್ಪಿಕೊಳ್ಳಲಿಲ್ಲ. 'ಸದಾ ಒಂದೇ ರೀತಿಯಾದ ಫಲಿತಾಂಶ ಕಾಣುವುದು ಕಷ್ಟ. ಮುಂದಿನ ಸರಣಿಗಳಲ್ಲಿ ನಾನು ಗೆಲ್ಲುವ ಭರವಸೆ ಹೊಂದಿದ್ದೇನೆ' ಎಂದಿದ್ದರು.
ಅಂದಹಾಗೆ, ಈ ಅಭಿಮಾನಿಗಳಿಗೆ ಹುಚ್ಚು ಪ್ರೀತಿಯ ಜೊತೆ ಇನ್ನೊಂದು ಕಾಳಜಿಯೂ ಇದೆ. ಅದೇನು ಗೊತ್ತಾ? 'ನನ್ನ ಆಟಗಾರ ಒತ್ತಡಕ್ಕೆ ಸಿಲುಕದಿರಲಿ'! <
ನಿರೀಕ್ಷೆ ಸಹಜ
ಕ್ರೀಡಾಪಟುವೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವಾಗ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ಸಹಜ. ಸೂಕ್ತ ತರಬೇತಿ ಮೂಲಕ ಕ್ರೀಡಾಪಟುಗಳು ಒತ್ತಡದಿಂದ ಹೊರಬರಲು ಯತ್ನಿಸಬೇಕು. ಅಭಿಮಾನಗಳೂ ನಿರೀಕ್ಷೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಇಟ್ಟುಕೊಂಡು ಬೆಂಬಲಿಸಬೇಕು.ಯುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಮೇಲೂ ಭಾರಿ ಒತ್ತಡ ಇದೆ. ಆದರೆ, ಒತ್ತಡವನ್ನು ಕಳಚಿಕೊಂಡು, ಮಿಂಚಲು ಸಿಂಧು ಇನ್ನೂ ಸಾಕಷ್ಟು ಅವಕಾಶ ಹೊಂದಿದ್ದಾರೆ.
- ವಿಮಲ್ ಕುಮಾರ್, ರಾಷ್ಟ್ರೀಯ ಮಾಜಿ ಬ್ಯಾಡ್ಮಿಂಟನ್ ತರಬೇತುದಾರ
- ಎಂಬಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


