ಕ್ರೀಡೆ

ಚೆಂಡನ್ನೇ ಸುಟ್ಟುಬಿಟ್ಟಾನು!

ಚೆಂಡನ್ನೇ ಸುಟ್ಟುಬಿಟ್ಟಾನು!
Published On :

ಕ್ರೀಡೆಯ ಜನಪ್ರಿಯತೆ ಹೆಚ್ಚಿದಂತೆ ಅಲ್ಲಿನ ದಿಟ್ಟ ಆಟಗಾರರ ಬೇಡಿಕೆಯೂ ಏರುತ್ತದೆ. ಈಗ ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್ ಆಟಗಾರರಿಗೆ ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ. ವಿಶ್ವದ ಪ್ರಮುಖ ತಂಡವಾಗಿರುವ ಭಾರತವೂ ಸದಾ ಹೊಸ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ. ಯುವ ಮತ್ತು ಉತ್ತಮ ಗುಣಮಟ್ಟದ ಬಲಿಷ್ಠ ಆಟಗಾರನಿಗೆ ತಂಡದ ಬಾಗಿಲು ಸದಾ ತೆರೆದಿದೆ. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುತ್ತ ಉತ್ತಮ ನಾಯಕತ್ವ ಗುಣಗಳನ್ನು ಪ್ರದರ್ಶಿಸುತ್ತಿರುವ ಮಹಾರಾಷ್ಟ್ರದ ಯುವ ಪ್ರತಿಭೆ ವಿಜಯ್ ಜೋಲ್ ಕೂಡ ಟೀಂ ಇಂಡಿಯಾ ಸೇರಬೇಕೆಂಬ ಕನಸು ಹೊದ್ದವರು. ಬೌಲರ್‌ಗಳನ್ನು ದಣಿಯುವಂತೆ ಮಾಡುವ ಈತ, ಎಂಥ ಭೀಕರ ಎಸೆತಗಳಿಗೂ ಬೌಂಡರಿಯ ದಾರಿ ತೋರಿಸಬಲ್ಲ. ಇವನದ್ದೆಲ್ಲ ಬೆಂಕಿಯ ಹೊಡೆತಗಳು.
ಈತ ಮಹಾರಾಷ್ಟ್ರದ ಎಡಗೈ ಬ್ಯಾಟ್ಸ್‌ಮನ್. ಪ್ರಸ್ತುತ ಭಾರತ 19 ವರ್ಷದೊಳಗಿನ ತಂಡದ ನಾಯಕತ್ವ ವಹಿಸಿರುವ ಜೋಲ್, ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದಾರೆ. ಇದುವರೆಗೆ ಮಹಾರಾಷ್ಟ್ರದ ಅಂಡರ್ 19, ಭಾರತ ಅಂಡರ್ 19, ಭಾರತ ಪಶ್ಚಿಮ ವಲಯ ತಂಡ, ಐಪಿಎಲ್‌ನ ರಾಯಲ್ ಚಾಲೆಂಜರ್ಸ್, ಭಾರತ 'ಎ' ತಂಡವನ್ನು ಪ್ರತಿನಿಧಿಸಿರುವ ಜೋಲ್ ಸ್ಥಿರ ಪ್ರದರ್ಶನದ ಮೂಲಕ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ.

ಕ್ರಿಕೆಟ್ ಹಾದಿ
ಮಹಾರಾಷ್ಟ್ರ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಮೂಲಕ ಯಶಸ್ಸಿನ ಯಾತ್ರೆ ಆರಂಭಿಸಿದ ಜೋಲ್, 2011ರಲ್ಲಿ ದಾಖಲೆಯ ಇನಿಂಗ್ಸ್ ಆಡುವ ಮೂಲಕ ಗಮನ ಸೆಳೆದರು. ಆ ಇನಿಂಗ್ಸ್‌ನಲ್ಲಿ ಸತತ 11 ಗಂಟೆ ಬ್ಯಾಟಿಂಗ್ ನಡೆಸಿದ ಜೋಲ್, 467 ಎಸೆತಗಳನ್ನು ಎದುರಿಸಿ ಅಜೇಯ 451 ರನ್ ಕಲೆಹಾಕಿದರು. ಈ ಮೊತ್ತದಲ್ಲಿ 51 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು. ಮಧ್ಯಮ ಕ್ರಮಾಂಕದಲ್ಲಿ ಆಡುವ ಈತ ತಂಡಕ್ಕೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆಧಾರವಾಗುವ ಸಾಮರ್ಥ್ಯವನ್ನು ಹೊಂದಿದ್ದಾನೆ.

ನಾಯಕತ್ವ ಗುಣ
ಜೋಲ್ ಕೇವಲ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಮಾತ್ರ ಗಮನ ಸೆಳೆದಿಲ್ಲ. ಆತನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕತ್ವದ ಗುಣವಿದೆ. ಪ್ರಸ್ತುತ ಭಾರತ ಅಂಡರ್ 19 ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಲ್, ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿ, ಶ್ರೀಲಂಕಾದಲ್ಲಿ ನಡೆದ ಅಂಡರ್ 19 ಏಕದಿನ ಹಾಗೂ ಯೂತ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಜೋಲ್ ಉತ್ತಮ ಪಾತ್ರ ನಿರ್ವಹಿಸಿದ್ದಾರೆ.

ಉತ್ತಮ ಫಾರ್ಮ್
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ 5 ಪಂದ್ಯಗಳನ್ನಾಡಿದ ಜೋಲ್, 73.25 ಸರಾಸರಿಯಲ್ಲಿ 293 ರನ್ ದಾಖಲಿಸಿದ್ದರು. ಅಲ್ಲದೆ ಪಂದ್ಯಾವಳಿಯಲ್ಲಿ 1 ಶತಕ ದಾಖಲಿಸಿದ್ದು, 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನಂತರ ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ಅಂಡರ್ 19 ತಂಡ, ಶ್ರೀಲಂಕಾ ವಿರುದ್ಧ 2 ಯೂತ್ ಟೆಸ್ಟ್ ಪಂದ್ಯವನ್ನಾಡಿತು. ಈ ಸರಣಿಯಲ್ಲಿ ಜೋಲ್, ಎರಡು ಶತಕ ಬಾರಿಸಿದರು. ಅಲ್ಲದೆ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಕಾರಣವಾದರು.

ಹಿರಿಯ ಆಟಗಾರರಿಗೆ ಪೈಪೋಟಿ
ವಿಜಯ್ ಹೀಗೆ ಉತ್ತಮ ಪ್ರದರ್ಶನ ಮುಂದುವರಿಸಿದರೆ, ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಅವರನ್ನು ಸ್ವಾಗತಿಸಲಿದೆ. ಈಗಾಗಲೇ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ದಿನೇಶ್ ಕಾರ್ತಿಕ್, ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ, ಮನೋಜ್ ತಿವಾರಿ- ಹೀಗೆ ಆಟಗಾರರ ನಡುವೆ ಪೈಪೋಟಿ ಹೆಚ್ಚಿದ್ದು, ಈ ಸಾಲಿಗೆ ಜೋಲ್ ಸೇರಿಕೊಳ್ಳುವ ಸಾಧ್ಯತೆಗಳಿವೆ.

- ಸೋಮಶೇಖರ್ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.