ಶ್ರೀಕಾಂತ್ ಕನಸು ಭಗ್ನ
ಸಿಂಗಾಪುರ: ಭಾರತದ ಉದಯೊನ್ಮುಖ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಉತ್ತಮ ಹೋರಾಟ ನೀಡಿದ ಹೊರತಾಗಿಯೂ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಉಪಾಂತ್ಯದ ಪಂದ್ಯದಲ್ಲಿ ಮಲೇಷ್ಯಾದ ಅಗ್ರ ಶ್ರೇಯಾಂಕಿತ ಲೀ ಚಾಂಗ್ ವಿ ವಿರುದ್ಧ ಉತ್ತಮ ಹೋರಾಟ ನೀಡಿದರಾದರೂ, ಪಂದ್ಯದಲ್ಲಿ ಗೆಲವು ದಾಖಲಿಸಲು ಸಾಧ್ಯವಾಗಲಿಲ್ಲ.
42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದ ಶ್ರೀಕಾಂತ್ 19-21, 18-21 ಸೆಟ್ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಈ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಲೀ ಚಾಂಗ್, ಅಂತಿಮ ಸುತ್ತಿನಲ್ಲಿ ಇಂಡೋನೇಷ್ಯಾದ ಸಿಮನ್ ಸ್ಯಾಂಟೋಸ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಉತ್ತಮ ಫಾರ್ಮ್ನಲ್ಲಿದ್ದ ಶ್ರೀಕಾಂತ್ ಪಂದ್ಯದಲ್ಲಿ ಉತ್ತಮ ಆರಂಭವನ್ನೇ ಪಡೆದರು. ನಂತರ ಮೊದಲ ಸೆಟ್ನಲ್ಲಿ 15-16 ಅಂಕಗಳ ಅಂತರದಿಂದ ಉಭಯ ಆಟಗಾರರು ಪರಸ್ಪರ ತೀವ್ರ ಪೈಪೋಟಿ ನೀಡುತ್ತಿದ್ದರು. ನಂತರ ಅತ್ಯುತ್ತಮ ಸ್ಮ್ಯಾಷ್ ಮೂಲಕ ಅಬ್ಬರಿಸಿದ ಶ್ರೀಕಾಂತ್ 19-16 ಅಂತರದ ಮುನ್ನಡೆ ಪಡೆದರು. ಈ ವೇಳೆ ಎಚ್ಚೆತ್ತ ಲೀ ಚಾಂಗ್, ನಂತರ ಯಾವುದೇ ತಪ್ಪು ಎಸಗದೇ ಸತತ ಅಂಕ ದಾಖಲಿಸಿ ಮೊದಲ ಸೆಟ್ ಅನ್ನು ಗೆದ್ದುಕೊಂಡರು.
ಮೊದಲ ಸೆಟ್ ವಶಪಡಿಸಿಕೊಂಡು ಆತ್ಮ ವಿಶ್ವಾಸದೊಂದಿಗೆ ಎರಡನೇ ಸೆಟ್ ಆರಂಭಿಸಿದ ಲೀ ಚಾಂಗ್, ಒಂದು ಹಂತದಲ್ಲಿ 15-8 ಅಂತರದ ಮುನ್ನಡೆ ಪಡೆದುಕೊಂಡರು. ನಂತರ 19-12 ಅಂತರ ಕಂಡುಕೊಂಡರು. ಆದರೆ ತಮ್ಮ ಛಲ ಬಿಡದೇ ಆಡಿದ ಶ್ರೀಕಾಂತ್ ಸತತ ಆರು ಅಂಕಗಳನ್ನು ಗಳಿಸಿ ಪಂದ್ಯದಲ್ಲಿ ಮತ್ತೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಿದರು. ಆದರೆ ಅಂತಿಮವಾಗಿ ಅಬ್ಬರಿಸಿದ ಲೀ ಚಾಂಗ್ ಪಂದ್ಯವನ್ನು ಗೆದ್ದುಕೊಂಡರು.
ಶ್ರೀಕಾಂತ್ ಪಂದ್ಯಾವಳಿಯಿಂದ ಹೊರ ಬೀಳುತ್ತಿದ್ದಂತೆ ಈ ಟೂರ್ನಿಯಲ್ಲಿ ಭಾರತದ ಅಭಿಯಾನಕ್ಕೆ ತೆರೆ ಬಿದ್ದಿತು. ಇನ್ನು ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಯಾಂಟೊಸೊ ಹಾಗೂ ಐದನೇ ಶ್ರೇಯಾಂಕಿತ ಚೀನಾದ ಪೆಂಗ್ಯೂ ಡು ಕಾದಾಟ ನಡೆಸಿದ್ದು, ಸ್ಯಾಂಟೊಸೊ 16-21 21-17, 21-17 ಅಂಕಗಳ ಅಂತರದಲ್ಲಿ ಗೆಲವಿನ ನಗೆ ಬೀರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

