ಸಲ್ಗಾಂವಕರ್ಗೆ ಸಮಗೌರವ
ಮಡಗಾಂವ್: ಸಲ್ಗಾಂವಕರ್ ಕ್ಲಬ್ ಮತ್ತು ಸ್ಪೋರ್ಟಿಂಗ್ ಗೋವಾ ತಂಡಗಳು ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪರಸ್ಪರ ಡ್ರಾ ಫಲಿತಾಂಶಕ್ಕೆ ನಿಟ್ಟುಸಿರು ಬಿಟ್ಟಿವೆ.
ಫಟೋರ್ಡಾದಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು 3-3 ಗೋಲು ಗಳಿಂದ ಡ್ರಾ ಸಾಧಿಸಿದವು.
ಸಲ್ಗಾಂವಕರ್ ಕ್ಲಬ್ ಪರ ಸ್ಕಾಟ್ಲೆಂಡ್ನ ಆಮದು ಆಟಗಾರ ಡಾರಿಲ್ ಡಫಿ 4ನೇ ನಿಮಿಷ, ನೈಜೀರಿಯಾ ಮೂಲದ ಡುಡು ಓಮಾಗ್ಬೆಮಿ 11ನೇ ನಿಮಿಷ ಮತ್ತು ಬಿಕಾಶ್ ಜೈರು 90ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಸ್ಪೋರ್ಟಿಂಗ್ ಗೋವಾ ತಂಡಕ್ಕೆ ನೈಜೀರಿಯಾದ ಓಗ್ಬಾ ಕಾಲು 20ನೇ ನಿಮಿಷ, ಆಸ್ಟ್ರೇಲಿಯಾದ ಬೊಯಿಮಾ ಜೆರ್ರಿ ಕಾರ್ಪೆ 41ನೇ ನಿಮಿಷ ಮತ್ತು ರಾಲಿನ್ ಬೋರ್ಗಿಸ್ 73ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.
ಈ ಡ್ರಾನೊಂದಿಗೆ ಎರಡೂ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು. ಆ ಮೂಲಕ ಸಲ್ಗಾಂವಕರ್ ಆಟಗಾರರು ಒಟ್ಟು 23 ಪಂದ್ಯಗಳಿಂದ ಅಂಕ ಗಳಿಕೆಯನ್ನು 38ಕ್ಕೆ ಹೆಚ್ಚಿಸಿಕೊಂಡು ಎರಡನೇ ಸ್ಥಾನದ ಗೌರವ
ಸಾಧಿಸಿದರು. ಸ್ಪೋರ್ಟಿಂಗ್ ಗೋವಾ 23 ಪಂದ್ಯಗಳಿಂದ 34 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಸಲ್ಗಾಂವಕರ್ ಆಟಗಾರರು ಆತ್ಯುತ್ತಮ ಆರಂಭ ಪಡೆದಿದ್ದರು. ಮೊದಲ 11 ನಿಮಿಷಗಳ ಆಟದಲ್ಲಿಯೇ ಎರಡು ಗೋಲುಗಳನ್ನು ಗಳಿಸಿ 2-0 ಮುನ್ನಡೆಯೊಂದಿಗೆ ಜಯ ಗಳಿಸುವ ಉತ್ತಮ ಅವಕಾಶ ಹೊಂದಿದ್ದರು. ಆದರೆ, ನಂತರದಲ್ಲಿ ಆಕ್ರಮಣಕಾರಿ ಆಟ ಮುಂದುವರಿಸಿದ ಸ್ಪೋರ್ಟಿಂಗ್ ಗೋವಾ ನಿರಂತರ ಎರಡು ಗೋಲು ಸಂಪಾದಿಸಿ ವಿರಾಮದ ವೇಳೆಗೆ ಎದುರಾಳಿ ಜೊತೆ 2-2 ಗೋಲುಗಳಿಂದ ಸಮಸ್ಥಿತಿ ತಲುಪಿತು.
ಅಷ್ಟೇ ಅಲ್ಲದೆ, ಉತ್ತರಾರ್ಧದ ಆಟದಲ್ಲಿ ಕೂಡ ಮೊದಲಿಗೆ ಸ್ಪೋರ್ಟಿಂಗ್ ಗೋವಾ ಆಟಗಾರರೇ ಪ್ರಭುತ್ವ ಸ್ಥಾಪಿಸಿದರು. ಪಂದ್ಯದ 73ನೇ ನಿಮಿಷದಲ್ಲಿ ಬೋರ್ಗಿಸ್ ನೆರವಿನಿಂದ ಗೋಲು ಗಳಿಸಿ 3-2ರಿಂದ ಮುನ್ನಡೆ ಸಾಧಿಸಿತು.
ಆದರೆ, ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಸ್ಪೋರ್ಟಿಂಗ್ ಆಟಗಾರರು ಕೊನೆಯ ಕ್ಷಣದಲ್ಲಿ ಮುಗ್ಗರಿಸಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಸ್ಥಿತಿಗೆ ಅದು ಸಿಲುಕಿತು. ಕೊನೆಯ ನಿಮಿಷದಲ್ಲಿ ಸಲ್ಗಾಂವಕರ್ ಗೋಲು ಗಳಿಸಿ ಎದುರಾಳಿ ಜೊತೆ ಸಮಗೌರವ ಸಾಧಿಸುವಲ್ಲಿ ಯಶಸ್ವಿಯಾಗಿ ಸೋಲಿನ ಭೀತಿಯಿಂದ ಪಾರಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

