ಭಟ್, ಸೌರಭ್ ಪ್ರಿಕ್ವಾರ್ಟರ್ಗೆ
ಆಕ್ಲೆಂಡ್: ಭಾರತದ ಅರವಿಂದ್ ಭಟ್ ಮತ್ತು ಸೌರಭ್ ವರ್ಮಾ ಅವರು ಆಕ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ವಿಭಾಗದಲ್ಲಿ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಮೂಲದ ಅರವಿಂದ್ ಭಟ್ 21-17, 25-23 ಅಂಕಗಳಿಂದ ತೈಪೇನ ಸೂ ಜುಯಿ ಟಿಂಗ್ ಅವರನ್ನು ಸೋಲಿಸಿದರು.
ಕಳೆದ ಜರ್ಮನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಬೆಂಗಳೂರಿನ ಹುಡುಗ ಅರವಿಂದ್, ಎರಡೂ ಸುತ್ತುಗಳಲ್ಲಿ ಉತ್ತಮ ಆಟ ಸಂಘಟಿಸಿ ನಿರೀಕ್ಷಿತ ಗೆಲವು ತಮ್ಮದಾಗಿಸಿಕೊಂಡರು.
ಟೂರ್ನಿಯಲ್ಲಿ ಐದನೇ ಶ್ರೇಯಾಂಕಿತ ಆಟಗಾರರಾಗಿರುವ ಅರವಿಂದ್, ತಮ್ಮೆಲ್ಲ ಅನುಭವ ಧಾರೆಯರೆಯುವ ಮೂಲಕ ಸುಮಾರು 40 ನಿಮಿಷಗಳ ಆಟದಲ್ಲಿಯೇ ಎದುರಾಳಿಗೆ ಸೋಲುಣಿಸಿ ಮುನ್ನಡೆ ಸಾಧಿಸಿದರು.
ಹಾಗೆ ನೋಡಿದರೆ, ಸೂ ಜುಯಿ ಟಿಂಗ್ ಅವರು ಎರಡೂ ಗೇಮ್ಗಳಲ್ಲಿ ಭಾರತೀಯ ಆಟಗಾರನ ಮುಂದೆ ಕಠಿಣ ಸವಾಲುಗಳನ್ನೇ ನಿಲ್ಲಿಸಿದರು. ಅದರಲ್ಲೂ ಎರಡನೇ ಗೇಮ್ನಲ್ಲಿ ಗೆಲವು ಸಾಧಿಸಲು ಅರವಿಂದ್ ಭಟ್ ಭಾರಿ ಬೆವರು ಸುರಿಸಬೇಕಾಯಿತು.
ಹದಿನಾರರಘಟ್ಟದ ಸೆಣಸಿನಲ್ಲಿ ಕರ್ನಾಟಕದ ಆಟಗಾರ, ಮಲೇಷ್ಯಾದ ಟಾಂಗ್ ಜೀ ಚೆನ್ ಅವರ ವಿರುದ್ಧ ಸೆಣಸಲಿದ್ದಾರೆ.
ಇಂದೇ ನಡೆದ ಮತ್ತೊಂದು ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಭರವಸೆಯ ಆಟಗಾರ ಸೌರಭ್ ವರ್ಮಾ, 21-11, 21-12 ಅಂಕಗಳಿಂದ ಸ್ಥಳೀಯ ಆಟಗಾರ ಡೈಲಾನ್ ಹೆಂಟಾನ್ ಅವರಿಗೆ ಆಘಾತ ನೀಡಿದರು. ಎರಡೂ ಸೆಟ್ಗಳಲ್ಲಿ ಭಾರತೀಯ ಆಟಗಾರನಿಗೆ ಹೆಚ್ಚು ಕಠಿಣ ಸವಾಲು ಎದುರಾಗಲಿಲ್ಲ. ಎರಡನೇ ಶ್ರೇಯಾಂಕಿತ ಸೌರಭ್ ಸುಮಾರು 30 ನಿಮಿಷಗಳ ಆಟದಲ್ಲಿಯೇ 14ನೇ ಶ್ರೇಯಾಂಕಿತ ತೈಪೇ ಆಟಗಾರನ ವಿರುದ್ಧ ಸುಲಭ ಗೆಲವು ದಾಖಲಿಸಿದರು.
ಪ್ರೀಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತೈಪೇನ ಕುಯಿ ಚುನ್ ಸಿಹ್ ಅವರನ್ನು ಸೌರಭ್ ವರ್ಮಾ ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

