ಕ್ರೀಡೆ

ಭಾರತಕ್ಕೆ ಎರಡನೇ ಸೋಲು, ನೆದರ್ಲೆಂಡ್‌ಗೆ 4-2ರಿಂದ ಗೆಲವು

Published On :

ನವದೆಹಲಿ: ಭಾರತದ ಆಟಗಾರರು ಯೂರೋಪಿಯನ್ ಹಾಕಿ ಪ್ರವಾಸದಲ್ಲಿ ಸತತ ಎರಡನೇ ಸೋಲನುಭವಿಸಿದ್ದಾರೆ. ಹಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯರು ಆತಿಥೇಯ ನೆದರ್ಲೆಂಡ್ ತಂಡದ ಎದುರು 2-4 ಗೋಲುಗಳಿಂದ ಆಘಾತಕ್ಕೆ ಒಳಗಾದರು.
ಹಾಲೆಂಡ್ ಆಟಗಾರರು ಪ್ರಾರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಲು ಮುಂದಾದರು. ಪ್ರಥಮಾರ್ಧದ 9ನೇ ನಿಮಿಷದಲ್ಲಿಯೇ ಮೈಕ್ರೊ ಪ್ರುಸೆರ್ ಆಕರ್ಷಕ ಗೋಲು ಗಳಿಸಿ ತಮ್ಮ ತಂಡಕ್ಕೆ 1-0 ಗೋಲಿನ ಮುನ್ನಡೆ ತಂದುಕೊಟ್ಟರು.
ಇದರಿಂದ ಸ್ಫೂರ್ತಿಗೊಂಡ ನೆದರ್ಲೆಂಡ್ ಪಡೆ ಚುರುಕಿನ ಪ್ರದರ್ಶನ ಮುಂದುವರಿಸಿತು. ಪರಿಣಾಮವಾಗಿ ಪಂದ್ಯದ 15ನೇ ನಿಮಿಷದಲ್ಲಿ ಗ್ಲೆನ್ ಶುರ್ಮಾನ್ ಮತ್ತು 28ನೇ ನಿಮಿಷದಲ್ಲಿ ಟ್ರಿಸ್ಟಾನ್ ಅಲ್ಜೆರಿಯಾ ಮೂಲಕ ಕ್ರಮವಾಗಿ ಮತ್ತೆರಡು ಗೋಲು ದಾಖಲಿಸಿ 3-0 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಮೊದಲ ಅವಧಿಯ ಆಟದಲ್ಲಿ ಒಂದೂ ಗೋಲು ಗಳಿಸಲಾಗದೇ ವಿರಾಮದ ವೇಳೆಗೆ ಮೂರು ಗೋಲುಗಳ ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತದ ಆಟಗಾರರು ಎರಡನೇ ಅವಧಿಯಲ್ಲಿ ಮಾತ್ರ ಎದುರಾಳಿಗೆ ತಿರುಗಿಬಿದ್ದರು. ಆಟದಲ್ಲಿ ವೇಗ ಹೆಚ್ಚಿಸಿಕೊಳ್ಳುವುದರ ಜೊತೆಗೆ ನಿರಂತರ ಎದುರಾಳಿ ಕೋಟೆಯ ಮೇಲೆ ದಂಡೆತ್ತಿ ಹೋಗುವಲ್ಲಿ ಸಫಲರಾದರು. ಹಾಗಾಗಿ ಕೇವಲ ಮೂರು ನಿಮಿಷಗಳ ಅಂತರದಲ್ಲಿಯೇ ಎರಡು ಗೋಲು ಸಂಪಾದಿಸಿದ ಭಾರತೀಯರು ಎದುರಾಳಿ ಪಾಳಯದಲ್ಲಿ ಭಯ ಹುಟ್ಟಿಸಿದರು.
ಉತ್ತಮ ಲಯ ತೋರಿದ ಎಸ್.ಕೆ. ಉತ್ತಪ್ಪ 37ನೇ ನಿಮಿಷ ಮತ್ತು ನಾಯಕ ಸರ್ದಾರ್ ಸಿಂಗ್ 40ನೇ ನಿಮಿಷ ತಲಾ ಒಂದು ಗೋಲು ಗಳಿಸುವ ಮೂಲಕ ಭಾರತದ ಹಿನ್ನಡೆಯನ್ನು 2-3ಕ್ಕೆ ತಗ್ಗಿಸಿದರು. ಆದರೆ, ಪಂದ್ಯದ 60ನೇ ನಿಮಿಷದಲ್ಲಿ ಬಿಲ್ಲಿ ಬಾಕರ್ ಗೋಲು ಗಳಿಸುವುದರೊಂದಿಗೆ ನೆದರ್ಲೆಂಡ್ ಮುನ್ನಡೆಯನ್ನು 4-2ಕ್ಕೆ ಹಿಗ್ಗಿಸಿದರು. ಉಳಿದ ಅವಧಿಯ ಆಟದಲ್ಲಿ ಎರಡೂ ತಂಡಗಳ ಆಟಗಾರರು ಮತ್ತೆ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಫಲ ಕಾಣಲಿಲ್ಲ.
ಪ್ರವಾಸದ ಆರಂಭದಲ್ಲಿ ಲೀಡೆನ್ ಹಾಕಿ ಕ್ಲಬ್ ವಿರುದ್ಧ 7-0 ಗೋಲುಗಳಿಸಿ ಶುಭಾರಂಭ ಮಾಡಿದ್ದ ಭಾರತದ ಆಟಗಾರರು, ನಂತರ ಎರಡನೇ ಪಂದ್ಯದಲ್ಲಿ ಎಚ್‌ಜಿಸಿ ಹಾಕಿ ಕ್ಲಬ್ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದ್ದರು. ಆದರೆ, ಕಳೆದ ಪಂದ್ಯದಲ್ಲಿ ಬೆಲ್ಜಿಯಂ ಎದುರು 1-2 ಗೋಲುಗಳಿಂದ ಸೋತಿದ್ದ ಭಾರತ ಈಗ ಸತತ ಎರಡನೇ ಸೋಲು ಕಂಡಿದೆ. ಹಾಗ್‌ನಲ್ಲಿ ಮೇ 31ರಿಂದ ಜೂನ್ 15ರ ವರೆಗೆ ನಡೆಯಲಿರುವ ಎಫ್‌ಐಎಚ್ ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್‌ಶಿಪ್‌ಗಾಗಿ ಸಿದ್ಧತೆ ಮಾಡಿಕೊಳ್ಳಲು ಭಾರತೀಯರು ಕೆಲ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.