ಮ್ಯಾಕ್ಸ್ವೆಲ್, ಚೆನ್ನೈ ಡಲ್

ಅಬುಧಾಬಿ: ಮೊದಲು ಬ್ಯಾಟ್ ಮಾಡಿ ದ್ವಿಶತಕದ ಮೊತ್ತದ ಗಡಿ ಗಾಟುತ್ತಲೇ ಗೆಲುವು ಖಚಿತ ಎಂದು ಭಾವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಆತ್ಮವಿಶ್ವಾಸಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಕೊಡಲಿಪೆಟ್ಟು ಹಾಕಿದೆ.
ಅಬುಧಾಬಿಯಲ್ಲಿ ಶುಕ್ರವಾರ ನಡೆದ 7ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯದಲ್ಲಿ ಪಂಜಾಬ್ ಪಡೆ 6 ವಿಕೆಟ್ಗಳಿಂದ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲವು ಸಂಪಾದಿಸಿದೆ. ಗೆಲ್ಲಲು 206 ರನ್ಗಳ ಕಠಿಣ ಲಕ್ಷ್ಯದತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕಿಂಗ್ಸ್ ಪಂಜಾಬ್ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ವಿಜಯದ ಕಹಳೆ ಮೊಳಗಿಸಿತು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸಿದ ಗ್ಲೆನ್ ಮ್ಯಾಕ್ಸ್ವೆಲ್ (95ರನ್, 43 ಎಸೆತ, 15 ಬೌಂಡರಿ, 2 ಸಿಕ್ಸರ್) ಮತ್ತು ಡೇವಿಡ್ ಮಿಲ್ಲರ್ (ಅಜೇಯ 54, 37 ಎಸೆತ, 3 ಬೌಂಡರಿ, 3 ಸಿಕ್ಸರ್) ಪಂಜಾಬ್ನ ಗೆಲವಿನ ರೂವಾರಿಯಾದರು. ಮ್ಯಾಕ್ಸ್ವೆಲ್ ಮತ್ತು ಮಿಲ್ಲರ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 66 ಎಸೆತಗಳಿಂದ 115 ಸಿಡಿಸಿದ್ದು ಪಂಜಾಬ್ಗೆ ನಿರೀಕ್ಷಿತ ಜಯ ತಂದುಕೊಟ್ಟಿತು.
ಮೊದಲ 10 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ಗಳಿಸಿದ್ದ ಪಂಜಾಬ್, ಉಳಿದ 113 ರನ್ಗಳನ್ನು ಕೇವಲ 53 ಎಸೆತಗಳಲ್ಲಿ ಪೂರೈಸಿದ್ದು ಮ್ಯಾಕ್ಸ್ವೆಲ್ ಮತ್ತು ಮಿಲ್ಲರ್ರ ಬ್ಯಾಟಿಂಗ್ ಪ್ರಳಯಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಚೆನ್ನೈ ದಾಳಿಯನ್ನು ಮನಬಂದಂತೆ ಪುಡಿಗಟ್ಟಿದ ಮ್ಯಾಕ್ಸ್ವೆಲ್ರ ಆರ್ಭಟ ತಡೆಯಲು ನಾಯಕ ಮಹೇಂದ್ರ ಸಿಂಗ್ ಧೋನಿ ಏನೆಲ್ಲ ತಂತ್ರ ಉಪಯೋಗಿಸಿದರೂ ಸಫಲತೆ ದಕ್ಕಿಸಿಕೊಳ್ಳಲಾಗದೇ ಕೊನೆಗೆ ಅವಮಾನಕಾರಿ ಸೋಲು ಅನುಭವಿಸುವಂತಾಯಿತು. ಮ್ಯಾಕ್ಸ್ವೆಲ್ಗೆ ಪಂದ್ಯಶ್ರೇಷ್ಠ ಪುರಸ್ಕಾರ ಲಭಿಸಿತು.
ಮಿಂಚಿದ ಸ್ಮಿತ್-ಮೆಕಲಂ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 205 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಂ ಮತ್ತು ವೆಸ್ಟ್ ಇಂಡೀಸ್ನ ಡ್ವೈನ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಚೆನ್ನೈ ಮೊತ್ತ ಸುಲಭವಾಗಿಯೇ ದ್ವಿಶತಕದ ಗಡಿ ದಾಟಲು ಕಾರಣರಾದರು. ಪಂಜಾಬ್ ದಾಳಿಯನ್ನು ಕಠಿಣವಾಗಿ ಶಿಕ್ಷಿಸಿದ ಮೆಕಲಂ ಮತ್ತು ಸ್ಮಿತ್ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 76 ಎಸೆತಗಳಲ್ಲಿ 123 ರನ್ ಸಿಡಿಸಿದರು. ಮೆಕಲಂ ಕೇವಲ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 67 ರನ್ ಚಚ್ಚಿದರೆ, ಸ್ಮಿತ್ 43 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಹೊಂದಿದ್ದ 66 ರನ್ ಸಂಪಾದಿಸಿದರು.
ಉಳಿದಂತೆ, ನಾಯಕ ಮಹೇಂದ್ರ ಸಿಂಗ್ ಧೋನಿ 11 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 26 ರನ್ಗಳಿಸಿದರೆ, ಸುರೇಶ್ ರೈನಾ 19 ಎಸೆತಗಳಲ್ಲಿ 2 ಬೌಂಡರಿಗಳಿದ್ದ 24 ರನ್ ಸಂಗ್ರಹಿಸಿದರು. ಮೆಕಲಂಗೆ ಜೀವದಾನ ನೀಡಿದ್ದಕ್ಕೆ ಪಂಜಾಬ್ ಆಟಗಾರರು ಪಶ್ಚಾತ್ತಾಪ ಪಡುವಂತಾಯಿತು. ಮೆಕಲಂ 22 ರನ್ಗಳಿಸಿದಾಗ ಪರ್ವಿಂದರ್ ಆವಾನ ಬೌಲಿಂಗ್ನಲ್ಲಿ ನೀಡಿದ್ದ ಕ್ಯಾಚ್ನ್ನು ಜಾರ್ಜ್ ಬೇಯ್ಲಿ ನೆಲಕ್ಕೆ ಹಾಕಿದರು. ಈ ಅವಕಾಶವನ್ನು ಸದ್ಭಳಕ್ಕೆ ಮಾಡಿಕೊಂಡ ಮೆಕಲಂ ಮೈದಾನದ ಪ್ರತಿಮೂಲೆಗೂ ಚೆಂಡನ್ನು ಬಾರಿಸಿ ರನ್ ವೇಗ ಹೆಚ್ಚುವಂತೆ ನೋಡಿಕೊಂಡರು. ಡ್ವೈನ್ ಸ್ಮಿತ್ ಸಹ ಬಿರುಸಿನ ಹೊಡೆತಗಳನ್ನು ಬಾರಿಸುವಲ್ಲಿ ಹಿಂದೆ ಬೀಳಲಿಲ್ಲ. ಪರಿಣಾಮವಾಗಿ ಚೆನ್ನೈ ತಂಡ ಮೊದಲ 10 ಓವರುಗಳಲ್ಲಿಯೇ ನೂರರ ಗಡಿ ತಲುಪಲು ಸಾಧ್ಯವಾಯಿತು. ರಿಶಿ ಧವನ್ ಎಸೆತವೊಂದನ್ನು ಬೌಂಡರಿಗೆ ಅಟ್ಟುವ ಮೂಲಕ ಅರ್ಧಶತಕ ಪೂರೈಸಿದ ಮೆಕಲಂ, ಅಕ್ಷರ್ ಪಟೇಲ್ಗೆ ವಿಕೆಟ್ ನೀಡಿ ಹೊರನಡೆದರು.
ಚೆನ್ನೈ ಸೂಪರ್ ಕಿಂಗ್ಸ್
20 ಓವರುಗಳಲ್ಲಿ 205/4
ಕಿಂಗ್ಸ್ ಇಲೆವೆನ್ ಪಂಜಾಬ್
20 ಓವರುಗಳಲ್ಲಿ 206/4
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20
ಓವರುಗಳಲ್ಲಿ 4 ವಿಕೆಟ್ಗೆ 205
ಡ್ವೈನ್ ಸ್ಮಿತ್ ಸಿ ಬೇಯ್ಲಿ ಬಿ ಬಾಲಾಜಿ 66, ಬ್ರೆಂಡನ್ ಮೆಕಲಂ ಸಿ ಮ್ಯಾಕ್ಸ್ವೆಲ್ ಬಿ ಪಟೇಲ್ 67, ಸುರೇಶ್ ರೈನಾ ಸಿ ಸೆಹವಾಗ್ ಬಿ ಅವಾನ 24, ಮಹೇಂದ್ರ ಸಿಂಗ್ ಧೋನಿ ಸಿ ಧವನ್ ಬಿ ಬಾಲಾಜಿ 26, ಡ್ವೈನ್ ಬ್ರಾವೊ ಅಜೇಯ 8
ಇತರೆ: (ಲೆಗ್ಬೈ-2, ವೈ-11, ನೋಬಾಲ್-1) 14.
ವಿಕೆಟ್ ಪತನ: 1-123, 2-161, 3-185, 4-205
ಬೌಲಿಂಗ್ ವಿವರ:
ಅಕ್ಷರ್ ಪಟೇಲ್ 4-0-34-1, ಪರ್ವಿಂದರ್ ಅವಾನ 3-0-35-1, ಮಿಚೆಲ್ ಜಾನ್ಸನ್ 4-0-47-0, ಲಕ್ಷ್ಮೀಪತಿ ಬಾಲಾಜಿ 4-0-43-2, ರಿಶಿ ಧವನ್ 3-0-21-0, ಗ್ಲೆನ್ ಮ್ಯಾಕ್ಸ್ವೆಲ್ 2-0-23-0.
ಕಿಂಗ್ಸ್ ಇಲೆವೆನ್ ಪಂಜಾಬ್ 18.5 ಓವರುಗಳಲ್ಲಿ 4 ವಿಕೆಟ್ಗೆ 206
ಚೇತೇಶ್ವರ ಪೂಜಾರ ಎಲ್ಬಿ ಬಿ ಅಶ್ವಿನ್ 13, ವೀರೇಂದ್ರ ಸೆಹವಾಗ್ ಬಿ ನೆಹ್ರಾ 19, ಗ್ಲೆನ್ ಮ್ಯಾಕ್ಸ್ವೆಲ್ ಬಿ ಸ್ಮಿತ್ 95, ಅಕ್ಷರ್ ಪಟೇಲ್ ಎಲ್ಬಿ ಬಿ ಅಶ್ವಿನ್ 2, ಡೇವಿಡ್ ಮಿಲ್ಲರ್ ಅಜೇಯ 54, ಜಾರ್ಜ್ ಬೇಯ್ಲಿ ಅಜೇಯ 17
ಇತರೆ: (ಲೆಗ್ಬೈ-1, ವೈ-5) 6.
ವಿಕೆಟ್ ಪತನ: 1-31, 2-38, 3-52, 4-167.
ಬೌಲಿಂಗ್ ವಿವರ
ಆಶಿಶ್ ನೆಹ್ರಾ 3-0-24-1, ಮೊಹಿತ್ ಶರ್ಮಾ 2.5-0-35-0, ಆರ್. ಅಶ್ವಿನ್ 4-0-41-2, ಪವನ್ ನೇಗಿ 3-0-37-0, ರವೀಂದ್ರ ಜಡೇಜಾ 4-0-43-0, ಡ್ವೈನ್ ಸ್ಮಿತ್ 2-0-25-1.
ಬೌಲರ್ಗಳನ್ನು ಒತ್ತಡದಲ್ಲಿ ಕೆಡವುದರ ಜೊತೆಗೆ ಸುಲಭವಾಗಿ ರನ್ ಗಳಿಸುವ ಹಾದಿ ಹುಡುಕುವ ಉದ್ದೇಶ ಹೊಂದಿದ್ದೆವು. ಚೆನ್ನೈನಂತಹ ಉತ್ತಮ ತಂಡದ ವಿರುದ್ಧ ಬೃಹತ್ ಮೊತ್ತದ ಗುರಿ ಬೆಂಬತ್ತಿ ಯಶಸ್ವಿಯಾಗಿದ್ದು ಹೆಮ್ಮೆಯಾಗುತ್ತದೆ.
-ಗ್ಲೆನ್ ಮ್ಯಾಕ್ಸ್ವೆಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


