ಸೆಮೀಸ್ನಲ್ಲಿ ಮುಗ್ಗರಿಸಿದ ಭಟ್
ಆಕ್ಲೆಂಡ್: ಭಾರತದ ಅನುಭವಿ ಆಟಗಾರ ಅರವಿಂದ್ ಭಟ್ ಅವರು ಆಕ್ಲೆಂಡ್ನಲ್ಲಿ ನಡೆಯುತ್ತಿರುವ ಸ್ಕೈಸಿಟಿ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿಯೇ ಸೋಲನುಭವಿಸಿ ಪ್ರಶಸ್ತಿ ಸುತ್ತಿನ ಪೈಪೋಟಿಯಿಂದ ಹೊರನಡೆದಿದ್ದಾರೆ.
ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತೈಪೇನ ನಂಬರ್ ಓನ್ ಆಟಗಾರ ಜೆನ್ ಹಾವೊ ಸೂ ಅವರು 21-14, 21-9 ನೇರ ಅಂಕಗಳಿಂದ ಅರವಿಂದ್ ಭಟ್ಗೆ ಸೋಲುಣಿಸಿದರು.
ಐದನೇ ಶ್ರೇಯಾಂಕಿತ ಆಟಗಾರ ಕರ್ನಾಟಕದ ಅರವಿಂದ್, ಮೊದಲ ಗೇಮ್ನಲ್ಲಿ ಎದುರಾಳಿಗೆ ಕಠಿಣ ಸವಾಲುಗಳನ್ನು ನಿಲ್ಲಿಸಿದ್ದರು. ಆದರೂ, ಕೆಲ ಅನಗತ್ಯ ತಪ್ಪುಗಳನ್ನು ಎಸಗುವುದರೊಂದಿಗೆ ಅಂಕಗಳನ್ನು ಕಳೆದುಕೊಂಡರು.
ಇನ್ನು ಎರಡನೇ ಗೇಮ್ನ ಹೋರಾಟದಲ್ಲಿ ತೈಪೇ ಆಟಗಾರ ಹೆಚ್ಚು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುವ ಮೂಲಕ ಅರವಿಂದ್ ಭಟ್ಗೆ ಎಚ್ಚೆತ್ತುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಭಟ್ ದೌರ್ಬಲ್ಯವನ್ನು ಚೆನ್ನಾಗಿ ಗುರುತಿಸಿ ಅದೇ ದಿಕ್ಕಿನತ್ತ ತಮ್ಮ ಪರಿಣಾಮಕಾರಿ ಹೋರಾಟ ನಡೆಸಿದ ಜೆನ್ ಹಾವೊ ಸೂ ನಿರೀಕ್ಷೆಯಂತೆ ಗೆಲವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟರು.
ನಿನ್ನೆಯೇ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತೈಪೇನ ಜೂ ವೀ ವಾಂಗ್ ಕೂಡ ಗೆಲವು ದಾಖಲಿಸಿ ಪ್ರಶಸ್ತಿ ಸುತ್ತು ತಲುಪಿದರು. ಆರನೇ ಶ್ರೇಯಾಂಕಿತ ವಾಂಗ್ ವರು 21-14, 21-18 ಅಂಕಗಳಿಂದ ಮಲೇಷಿಯಾದ ಒಂಬತ್ತನೇ ಕ್ರಮಾಂಕದ ಆಟಗಾರ ಮೊಹಮ್ಮದ್ ಆರೀಫ್ ಅಬ್ದುಲ್ ಲತೀಫ್ ಅವರನ್ನು ಪರಾಭವಗೊಳಿಸಿದರು.
ಉಭಯ ಆಟಗಾರರ ನಡುವಿನ ಎರಡೂ ಗೇಮ್ಗಳು ರೋಚಕ ಹಣಾಹಣಿಯಿಂದ ಕೂಡಿದ್ದವು. ಆದರೆ, ಅಂತಿಮವಾಗಿ ತೈಪೇ ಆಟಗಾರ ತಮ್ಮ ಪ್ರಭುತ್ವ ಸ್ಥಾಪಿಸುವಲ್ಲಿ ಯಶಸ್ವಿಯಾಗಿ ನಿರ್ಣಾಯಕ ಸುತ್ತಿಗೆ ಪ್ರವೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

