ಕ್ರೀಡೆ

ಜೋಶ್ನಾಗೆ ಪ್ರಶಸ್ತಿ ಗರಿ

Published On :

ರಿಚ್‌ಮಂಡ್ (ಅಮೆರಿಕ): ಭಾರತದ ಅನುಭವಿ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ಹತ್ತು ಸಾವಿರ ಡಾಲರ್ ಬಹುಮಾನ ಮೊತ್ತದ ಆರಂಭಿಕ ರಿಚ್‌ಮಂಡ್ ಓಪನ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶನಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಸಮರದಲ್ಲಿ ಜೋಶ್ನಾ ಚಿನ್ನಪ್ಪ, ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಆಸ್ಟ್ರೇಲಿಯಾದ ರಾಕೆಲ್ ಗ್ರಿನಾಮ್ ಅವರನ್ನು 11-9, 11-5, 11-8 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಈ ಸಾಧನೆ ಮಾಡಿದರು.
ಈ ಗೆಲವಿನೊಂದಿಗೆ ಭಾರತೀಯ ಆಟಗಾರ್ತಿಯು ಸುದೀರ್ಘ ಸಮಯದ ನಂತಹ ಆಸ್ಟ್ರೇಲಿಯನ್ ಆಟಗಾರ್ತಿಯ ವಿರುದ್ಧ ಮೊದಲ ಗೆಲವು ದಾಖಲಿಸಿದ ತೃಪ್ತಿ ಪಡೆದರು. ಒಟ್ಟಾರೆ, ಆರು ಬಾರಿಯ ಮುಖಾಮುಖಿಯಲ್ಲಿ ರಾಕೆಲ್ ಗ್ರಿನಾಮ್, ಮೊದಲ ಬಾರಿಗೆ ಜೋಶ್ನಾ ವಿರುದ್ಧ ಸೋಲಿನ ಕಹಿ ಅನುಭವಿಸಿದರು.
ಇದರ ಹೊರತಾಗಿ, ಕಳೆದ ವಾರ ಮುಕ್ತಾಯಗೊಂಡ ಟೆಕ್ಸಾಸ್ ಓಪನ್ ಟೂರ್ನಿಯಲ್ಲಿ 37ರ ಆಸ್ಟ್ರೇಲಿಯನ್ ಆಚಗಾರ್ತಿಯ ವಿರುದ್ಧ ಅನುಭವಿಸಿದ್ದ ಸೋಲಿಗೂ ಜೋಶ್ನಾ ತಕ್ಕ ಸೇಡು ತೀರಿಸಿಕೊಂಡಂತಾಯಿತು. ಕೇವಲ 24 ನಿಮಿಷಗಳ ಆಟದಲ್ಲಿಯೇ ವಿಶ್ವದ ಮಾಜಿ ಚಾಂಪಿಯನ್ ರಾಕೆಲ್ ಎದುರು ಭಾರತೀಯ ಆಟಗಾರ್ತಿ ಐತಿಹಾಸಿಕ ಗೆಲವು ತಮ್ಮದಾಗಿಸಿಕೊಂಡರು.
ವಿಶ್ವದ 21ನೇ ಶ್ರೇಯಾಂಕಿತೆ ಜೋಶ್ನಾ ಒಟ್ಟಾರೆ ಒಂಬತ್ತನೇ ಮಹಿಳಾ ಸ್ಕ್ವಾಶ್ ಟೂರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಾರ್ಚ್ 1998ರಲ್ಲಿ ಮೊದಲ ಬಾರಿಗೆ ಟೂರ್ ಫೈನಲ್ ತಲುಪಿದ್ದ ನಂತರ ಆಸ್ಟ್ರೇಲಿಯಾದ ಆಟಗಾರ್ತಿಯು ಈಗ ಒಟ್ಟಾರೆ 65ನೇ ಬಾರಿಗೆ ಈ ಹಂತಕ್ಕೆ ಪ್ರವೇಶ ಪಡೆದಿದ್ದರು. ಜೋಶ್ನಾಗೆ ಮಾತ್ರ ಇದು 16ನೇ ಫೈನಲ್ ಕದನವಾಗಿತ್ತು.
ಭಾರತ-ಆಸ್ಟ್ರೇಲಿಯನ್ ಸ್ಪರ್ಧಿಗಳ ನಡುವೆ ಪಂದ್ಯ ಕುತೂಹಲದಿಂದ ಕೂಡಿತ್ತು. ಮೊದಲ ಗೇಮ್‌ನಲ್ಲಿ ರಾಕೆಲ್ ಗ್ರಿನಾಮ್ ಒಂದು ಹಂತದಲ್ಲಿ 6-2ರಿಂದ ಮುನ್ನಡೆ ಸಾಧಿಸಿ ಗೆಲವಿನ ಆಸೆ ಹೊಂದಿದ್ದರು. ಆದರೆ, ನಂತರದಲ್ಲಿ ಜೋಶ್ನಾ ನಿರಂತರ 4 ಅಂಕಗಳನ್ನು ಸಂಪಾದಿಸಿ ಎದುರಾಳಿ ಜೊತೆ 6-6ರಿಂದ ಸಮಸ್ಥಿತಿಗೆ ಬಂದರು. ಇದರಿಂದ ಸ್ಫೂರ್ತಿಗೊಂಡ ಭಾರತೀಯ ಆಟಗಾರ್ತಿ ನಂತರದಲ್ಲಿ ಕೂಡ ಬುದ್ಧಿವಂತಿಕೆಯಿಂದ ಹೋರಾಟ ಅಣಿಗೊಳಿಸಿ ಅಂತಿಮವಾಗಿ ಮೊದಲ ಗೇಮ್ ವಶಕ್ಕೆ ತೆಗೆದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.