ಲೂಯಿಸ್ ಹ್ಯಾಮಿಲ್ಟನ್ ಹ್ಯಾಟ್ರಿಕ್

ಶಾಂಘೈ: ಮರ್ಸಿಡೀಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ಋತುವಿನಲ್ಲಿ ಸತತ ಮೂರನೇ ಪ್ರಶಸ್ತಿ ಗೆಲ್ಲುವ ಮೂಲಕ ಫಾರ್ಮುಲಾ ಒನ್ ರೇಸ್ನಲ್ಲಿ ಹ್ಯಾಟ್ರಿಕ್ ದಾಖಲಿಸಿದರು. ಭಾನುವಾರ ಚೀನಾ ಗ್ರ್ಯಾನ್ ಫ್ರೀ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದರು.
ಅಲ್ಲದೆ, ಈ ಋತುವಿನಲ್ಲಿ ನಡೆದ ನಾಲ್ಕು ರೇಸ್ಗಳ ಪೈಕಿ ಮೂರರಲ್ಲಿ ಮರ್ಸಿಡಿಸ್ ತಂಡದ ಹ್ಯಾಮಿಲ್ಟನ್ ಮತ್ತು ನಿಕೋ ರೋಸ್ಬರ್ಗ್ ಅವರು ಮೊದಲ ಮತ್ತು ದ್ವಿತೀಯ ಸ್ಥಾನ ಪಡೆಯುವ ಮೂಲಕ ವಿಭಿನ್ನ ಫಲಿತಾಂಶ ಕಂಡುಕೊಂಡರು.
ಅಲ್ಲದೆ, ಮೂರನೇ ಸ್ಥಾನ ಪಡೆದ ಫೆರ್ನಾಂಡೋ ಅಲಾನ್ಸೋ ಅವರು ತಂಡಕ್ಕೆ ಮೊದಲ ಬಾರಿಗೆ ಋತುವಿನ ಪ್ರಶಸ್ತಿ ತಂದುಕೊಟ್ಟರು. ರೆಡ್ಬುಲ್ನ ಡೇನಿಯಲ್ ರಿಕಿರ್ಡೋ ನಾಲ್ಕನೇ ಸ್ಥಾನ ಪಡೆದರೆ, ಅವರ ತಂಡದ ಇನ್ನೊಬ್ಬ ಚಾಲಕ ಹಾಲಿ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ 5ನೇ ಸ್ಥಾನ ಪಡೆದರು.
ಈ ಗ್ರ್ಯಾನ್ ಗೆಲ್ಲುವುದರೊಂದಿಗೆ ಹ್ಯಾಮಿಲ್ಟನ್ ಅವರು ವೃತ್ತಿ ಜೀವನದಲ್ಲಿ ಮೊದಲ ಹ್ಯಾಟ್ರಿಕ್ ಗಳಿಸಿಕೊಂಡರು. ಈ ಮುನ್ನ ಅವರು ಕ್ರಮವಾಗಿ ಮಲೇಷ್ಯಾ ಮತ್ತು ಬಹ್ರೇನ್ ಗ್ರ್ಯಾನ್ ಫ್ರೀಯಲ್ಲಿ ಜಯ ಕಂಡುಕೊಂಡಿದ್ದರು. ಬ್ರಿಟನ್ನ ಚಾಲಕನಿಗೆ ಇದು ನಾಲ್ಕನೇ ಪ್ರಶಸ್ತಿಯಾಗಿರುತ್ತಿತ್ತೇನೋ? ಆದರೆ, ಋತುವಿನ ಮೊದಲ ರೇಸ್ ಆದ ಆಸ್ಟ್ರೇಲಿಯಾ ಗ್ರ್ಯಾನ್ ಫ್ರೀಯಲ್ಲಿ ತಮ್ಮ ಕಾರಿನ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವರು ನಿವೃತ್ತಿ ಹೊಂದಿದ್ದರು.
ಹ್ಯಾಮಿಲ್ಟನ್ ಅವರು ತಮ್ಮ ಸಹ ಚಾಲಕ ರೋಸ್ಬರ್ಗ್ ಅವರಿಗಿಂತ ಕೂದಲೆಳೆ ಅಂತರದಲ್ಲಿ ಮುನ್ನಡೆ ಕಂಡುಕೊಂಡರು. ಹ್ಯಾಮಿಲ್ಟನ್ 75 ಅಂಕಗಳನ್ನು ಪಡೆದರೆ, ರೋಸ್ಬರ್ಗ್ 4 ಅಂಕ ಕಡಿಮೆ ಪಡೆದುಕೊಂಡರು.
ಹೀಗಾಗಿ ತಂಡದ ಸಹ ಚಾಲಕನಿಂದಲೇ ಹ್ಯಾಮಿಲ್ಟನ್ ಹೆಚ್ಚಿನ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಚೀನಾ ಗ್ರ್ಯಾನ್ ಫ್ರೀಯಲ್ಲೇ ಹ್ಯಾಮಿಲ್ಟನ್ ಅವರನ್ನು ರೋಸ್ಬರ್ಗ್ ಹಿಂದಿಕ್ಕಲಿದ್ದಾರೆ ಎನ್ನಲಾಗಿತ್ತು. ಬಹ್ರೇನ್ನಲ್ಲೂ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಮೊದಲ ಸ್ಥಾನ ಪಡೆಯುವಲ್ಲಿ ಹ್ಯಾಮಿಲ್ಟನ್ ಯಶಸ್ವಿಯಾದರು.
ಮೂರನೇ ಸ್ಥಾನದಲ್ಲಿ ಫೋರ್ಸ್ ಇಂಡಿಯಾ
ಉತ್ತಮ ಸ್ಪರ್ಧೆಯೊಡ್ಡಿದ ಫೋರ್ಸ್ ಇಂಡಿಯಾ ಮೂರನೇ ಬಾರಿಗೆ ಎರಡಂಕಿ ಪಡೆಯುವ ಮೂಲಕ ತಂಡ ವಿಭಾಗದಲ್ಲಿ ಒಟ್ಟಾರೆ 3ನೇ ಸ್ಥಾನ ಉಳಿಸಿಕೊಂಡಿದೆ. ಫೋರ್ಸ್ ಇಂಡಿಯಾ ಒಟ್ಟು 4 ರೇಸ್ಗಳಿಂದ 54 ಅಂಕ ಸಂಪಾದಿಸಿದಂತಾಗಿದೆ.
ಮರ್ಸಿಡೀಸ್ 154 ಅಂಕ ಮತ್ತು ರೆಡ್ಬುಲ್ ರೇಸಿಂಗ್-ರೆನಾಲ್ಟ್ 57 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಚೀನಾ ಗ್ರ್ಯಾನ್ ಫ್ರೀಯಲ್ಲಿ ತಂಡದ ನಿಕೋ ಹಲ್ಕನ್ಬರ್ಗ್ ಅವರು 6ನೇ ಸ್ಥಾನದೊಂದಿಗೆ 8 ಅಂಕ, ಪಡೆದರೆ, ಸೆರ್ಗಿಯೋ ಪೆರೆಜ್ ಅವರು 9ನೇ ಸ್ಥಾನ ಪಡೆದು2 ಅಂಕಗಳನ್ನು ತಮ್ಮದಾಗಿಸಿಕೊಂಡರು. ಸಿಲ್ವರ್ಸ್ಟೋನ್ ತಂಡ ಪರವಾಗಿ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಹಲ್ಕನ್ಬರ್ಗ್ 8ನೇ ಸ್ಥಾನ ಪಡೆದರೆ, ಪೆರೆಜ್ 16ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ, ಭಾನುವಾರ 6 ಮತ್ತು 9ನೇ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು.
ಸ್ಫರ್ಧೆಯ ಅಂತ್ಯದಲ್ಲಿ ನಮಗೆ ಇದು ತುಂಬಾ ಕಠಿಣವಾಗಿತ್ತು. ಒಂದು ವೇಳೆ ಇನ್ನೊಂದು ಲ್ಯಾಪ್ ಸ್ಪರ್ಧೆ ಬಾಕಿ ಉಳಿದಿದ್ದರೆ, ಪ್ರತಿಸ್ಪರ್ಧಿ ವಿಲಿಯಮ್ಸ್ ತಂಡದ ವಾಲ್ಟೆರ್ರಿ ಬೊಟಾಸ್ ಅವರು ನನ್ನನ್ನು ಹಿಂದಿಕ್ಕುವ ಸಾಧ್ಯತೆಗಳಿದ್ದವು ಎಂದು ಸೆಬಾಸ್ಟಿಯನ್ ವೆಟ್ಟಲ್ಗಿಂತ ಕೇವಲ ಒಂದು ಸ್ಥಾನ ಹಿಂದುಳಿದ ಹಲ್ಕನ್ಬರ್ಗ್ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


