ವಿಜಯಕುಮಾರಿಗೆ ಚಿನ್ನ
ಪಣಜಿ: ಕರ್ನಾಟಕದ ಓಟಗಾರ್ತಿ ಜಿ.ಕೆ ವಿಜಯಕುಮಾರಿ 11ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮಂಗಳವಾರ ನಡೆದ 200 ಮೀ. ಬಾಲಕಿಯರ ಓಟದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ವಿಜಯಕುಮಾರಿ ಚಿನ್ನದ ಪದಕ ಪಡೆದರು.
26.17 ಸೆಕೆಂಡ್ಗಳಲ್ಲಿ ಗುರಿ ತಲುಪಿದ ವಿಜಯಕುಮಾರಿ ಅಗ್ರಸ್ಥಾನ ಪಡೆದರೆ, ತಮಿಳುನಾಡಿನ ಚಂದ್ರಲೇಖ 26.60 ಸೆಕಂಡ್ನಿಂದ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು ಕೇರಳದ ಅಂಜಲಿ ಜಾನ್ಸನ್ 26.66 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಇನ್ನು 5,000 ಮೀ. ರೇಸ್ ವಾಕ್ನಲ್ಲಿ ಕೇರಳದ ಕೆ.ಟಿ ನೀನಾ ತಮ್ಮ ಹಳೆಯ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 5,000 ಮೀ. ರೇಸ್ ವಾಕ್ಅನ್ನು 24:42.18 ಸೆ.ನಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ನೀನಾ, ಈ ಬಾರಿ 24:11.70 ಸೆ.ಗಳಲ್ಲಿ ತಲುಪಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇನ್ನು ತಂಡಗಳ ಚಾಂಪಿಯನ್ಶಿಪ್ ವಿಭಾಗದಲ್ಲಿ ಕೇರಳ ತಂಡ, 198 ಅಂಕಗಳನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿ ಪಡೆದರೆ, ಉತ್ತರ ಪ್ರದೇಶ ತಂಡ 115.5 ಅಂಕಗಳೊಂದಿಗೆ ರನ್ನರ್ಅಪ್ ಆಗಿದೆ. ಬಾಲಕರ ವಿಭಾಗದಲ್ಲಿ ಉತ್ತರ ಪ್ರದೇಶ ತಂಡ 88.5 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಪಡೆದರೆ, ಹರ್ಯಾಣ ತಂಡ 77 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಕೇರಳ ತಂಡ 151 ಅಂಕಗಳೊಂದಿಗೆ ಚಾಂಪಿಯನ್ ಆದರೆ, ತಮಿಳು ನಾಡು ತಂಡ 65 ಅಂಕಗಳೊಂದಿಗೆ ರನ್ನರ್ ಅಪ್ ಆಯಿತು.
ಏಷ್ಯನ್ ಚೆಸ್: ಜಂಟಿ ಅಗ್ರಸ್ಥಾನಕ್ಕೇರಿದ ಸೇತುರಾಮನ್
ಶಾರ್ಜಾ: ಗ್ರ್ಯಾಂಡ್ಮಾಸ್ಟರ್ ಎಸ್.ಪಿ ಸೇತುರಾಮನ್ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನ ಮುಂದುವರಿಸಿದ್ದು, ಜಂಟಿಅಗ್ರಸ್ಥಾನ ಪಡೆದಿದ್ದಾರೆ. ಮಂಗಳವಾರ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಸೇತುರಾಮ್ ತಮ್ಮ ಎದುರಾಳಿ ಚೀನಾದ ಚು ವೈ ಚೌ ವಿರುದ್ಧ ಗೆಲವು ದಾಖಲಿಸಿದ್ದಾರೆ. ಈ ಗೆಲವಿನ ಮೂಲಕ ಪಂದ್ಯಾವಳಿಯಲ್ಲಿ 4 ಅಂಕಗಳನ್ನು ಪಡೆದ ಸೇತುರಾಮನ್, ಜಂಟಿ ಅಗ್ರಸ್ಥಾನದ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪಂದ್ಯದಲ್ಲಿ 55 ಚಲನೆಗಳು ನಡೆದಿದ್ದು, ಎದುರಾಳಿಯ ರಾಣಿಕಾಯಿಯನ್ನು ಹೊಡೆಯುವ ಮೂಲಕ ಸೇತುರಾಮ್ ಗೆಲವು ದಾಖಲಿಸಿಕೊಂಡರು. ಇನ್ನು ಭಾರತದ ಮತ್ತೊಬ್ಬ ಆಟಗಾರ ಅಧಿಬನ್ ತಮ್ಮ ಪಂದ್ಯದಲ್ಲಿ ಎಶನ್ ಮಘಮಿ ವಿರುದ್ಧ ಡ್ರಾ ಸಾಧಿಸಿದರು. ಪಂದ್ಯದಲ್ಲಿ 71 ಚಲನೆಗಳು ನಡೆದ ನಂತರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಪಂದ್ಯಾವಳಿಯಲ್ಲಿ ಐದು ಸುತ್ತುಗಳ ಬಳಿಕ ಒಟ್ಟು ಏಳು ಆಟಗಾರರು ಜಂಟಿ ಅಗ್ರಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರಾಗಿದ್ದಾರೆ. ಪಂದ್ಯಾವಳಿಯಲ್ಲಿ ಇನ್ನು ನಾಲ್ಕು ಸುತ್ತುಗಳು ಬಾಕಿ ಉಳಿದಿದ್ದು, ಪಂದ್ಯಾವಳಿ ಹಂತ ಹಂತವಾಗಿ ಹೆಚ್ಚು ರೋಚಕತೆ ಪಡೆಯುತ್ತಿದೆ.
ಇನ್ನು ಭಾರತದ ಇತರೆ ಆಟಗಾರರಾದ ಕೃಷ್ಣನ್ ಶಶಿಕಿರಣ್ ಹಾಗೂ ಪರಿಮರ್ಜನ್ ನೆಗಿ ಕ್ರಮವಾಗಿ ತಮ್ಮ ಎದುರಾಳಿ ಗುಜರಾತಿ ಮತ್ತು ದಾಸ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಸೋಮ್ಗೆ ಆಘಾತ
ಬಾರ್ಸಿಲೋನಾ: ಪ್ರಸಕ್ತ ಸಾಲಿನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಭಾರತದ ಸಿಂಗಲ್ಸ್ ಟೆನಿಸ್ ಆಟಗಾರ ಸೋಮ್ದೇವ್ ದೇವವರ್ಮನ್ ತಮ್ಮ ಸೋಲಿನ ಹಾದಿಯಲ್ಲಿ ಮುಂದುವರಿದಿದ್ದಾರೆ.
ಮಂಗಳವಾರ ಆರಂಭವಾದ ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ಸೋಮ್ದೇವ್, ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಈ ಮೂಲಕ ಸೋಮ್ ಸತತ ಐದನೇ ಎಟಿಪಿ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ವಿಶ್ವ ಟೆನಿಸ್ ರ್ಯಾಂಕಿಂಗ್ನ ಅಗ್ರ 100 ಗಡಿಯಲ್ಲಿರುವ ಸೋಮ್ದೇವ್, ತಮ್ಮ ಎದುರಾಳಿ ಸ್ಲೊವಾಕಿಯಾದ ಮಾರ್ಟೀನ್ ಕ್ಲಿಜನ್ ವಿರುದ್ಧ ಪರಾಭವಗೊಂಡಿದ್ದಾರೆ. ಒಂದು ಗಂಟೆ 18 ನಿಮಿಷ ನಡೆದ ಪಂದ್ಯದಲ್ಲಿ ಸೋಮ್ದೇವ್ 2-6, 4-6 ಸೆಟ್ಗಳ ಅಂತರದಲ್ಲಿ ಮುಖಭಂಗ ಅನುಭವಿಸಿದ್ದಾರೆ. ದೆಹಲಿ ಓಪನ್ ಚಾಲೆಂಜರ್ ಟೂರ್ನಿ ಗೆದ್ದ ನಂತರ ಸೋಮ್ದೇವ್ ಕೇವಲ 1 ಎಟಿಪಿ ಟೂರ್ ಪಂದ್ಯದಲ್ಲಿ ಮಾತ್ರ ಗೆಲವು ದಾಖಲಿಸಿದ್ದಾರೆ. ಅದರ ಹೊರತಾಗಿ ಸೋಮ್, ಡೇವಿಸ್ ಕಪ್ನ ಎರಡು ಪಂದ್ಯಗಳಲ್ಲಿ ಗೆಲವು ದಾಖಲಿಸಿದ್ದರು. ಈ ಪಂದ್ಯದಲ್ಲಿ ಸ್ಲೊವಾಕಿಯಾ ಆಟಗಾರನ ವಿರುದ್ಧ ನಿಯಂತ್ರಣ ಸಾಧಿಸುವಲ್ಲಿ ವಿಫಲವಾದ ಸೋಮ್, ಆರಂಭಿಕ ಎರಡೂ ಸೆಟ್ಗಳಲ್ಲಿ ಹಿನ್ನಡೆ ಅನುಭವಿಸಿ ಪರಾಭವಗೊಂಡರು.
ಸೋತ ಸೋಲಂಕಿ
ನವದೆಹಲಿ: ಭಾರತೀಯ ಬಾಕ್ಸರ್ ಗೌರವ್ ಸೋಲಂಕಿ ಎರಡನೇ ಬಾರಿಗೆ ಯೂತ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್ಶಿಪ್ನಲ್ಲಿ ಗೌರವ್ ಅವರು ಸೋಲು ಕಾಣುವುದರೊಂದಿಗೆ ಯೂತ್ ಒಲಿಂಪಿಕ್ಸ್ ಅವಕಾಶ ತಪ್ಪಿಸಿಕೊಂಡರು. ಆದರೂ ಸಹ ಏಪ್ರಿಲ್ 24ರಂದು ಕೋಟಾ ಆಧಾರದಲ್ಲಿ ಒಲಿಂಪಿಕ್ಸ್ ಪ್ರವೇಶಿಸುವ ಅವಕಾಶವೊಂದು ಅವರ ಮುಂದಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗೌರವ್ ಸೋಲಂಕಿ 0-3 ಅಂಕಗಳ ಅಂತರದಲ್ಲಿ ಸ್ಥಳೀಯ ಫೇವರಿಟ್ ಆಟಗಾರ ಡ್ಯಾನಿಯಲ್ ಆಸೆನೊವ್ ವಿರುದ್ಧ ಪರಾಜಯ ಅನುಭವಿಸಿದರು.
ಕೋಟಾದಡಿ ಒಟ್ಟು ಎರಡು ಅವಕಾಶಗಳಿದ್ದು, ಈಗಾಗಲೇ ಒಂದು ಕೈಜಾರಿಗೆ. ಯೂತ್ ಒಲಿಂಪಿಕ್ಸ್ಗೆ ನೇರವಾಗಿ ಅರ್ಹತೆ ಪಡೆಯಲು ಬಾಕ್ಸರ್ಗಳು ಕನಿಷ್ಠ ಸೆಮಿಫೈನಲ್ ಪ್ರವೇಶಿಸಬೇಕಿದೆ.
ಜುಪಿಟರ್ಗೆ ಗೆಲವು
ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಜುಪಿಟರ್ ತಂಡದ ಆಟಗಾರರು ರಾಜ್ಯ 'ಬಿ' ಡಿವಿಜನ್ ಲೀಗ್ ಫುಟ್ಬ್ ಪಂದ್ಯಾವಳಿಯಲ್ಲಿ ಸುಲಭ ಜಯ ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಜುಪಿಟರ್ ತಂಡ 4-1 ಗೋಲುಗಳಿಂದ ಇಸ್ರೊ ತಂಡವನ್ನು ಪರಾಭವಗೊಳಿಸಿದರು. ವಿಜೇತ ಜುಪಿಟರ್ ತಂಡ ಸನತ್ 21ನೇ, 36ನೇ ಮತ್ತು 43ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಂಚಿದರೆ, ಎಂ. ವಿನೋದ್ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು.
ಇಸ್ರೊ ತಂಡದ ಪರ ಸಾದಿಕ್ ಮಾತ್ರ 50ನೇ ನಿಮಿಷದಲ್ಲಿ ಒಂದು ಗೋಲು ಗಳಿಸಲು ಸಮರ್ಥರಾದರು. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ ಮತ್ತು ಮಿನರ್ವ ತಂಡಗಳು ಪರಸ್ಪರ ಸೆಣಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

