ಕ್ರೀಡೆ

ಜಯದ ವಿಶ್ವಾಸದಲ್ಲಿ ಬಿಎಫ್‌ಸಿ

Published On :

ಮಾರ್ಗೋವಾ: ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬೆಂಗಳೂರು ಫುಟ್ಬಾಲ್ ಕ್ಲಬ್, ಐ-ಲೀಗ್‌ನ ಪಂದ್ಯಾವಳಿಯನ್ನು ಜಯದೊಂದಿಗೆ ಮುಕ್ತಾಯಗೊಳಿಸುವ ಕಾತರದಲ್ಲಿದೆ.
ಸೋಮವಾರ ಇಲ್ಲಿನ ನೆಹರು ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧ ಸೆಣಸಲಿದೆ.ಐ-ಲೀಗ್‌ನಲ್ಲಿ ಪದಾರ್ಪಣೆ ವರ್ಷದಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡ ತಂಡ ಎಂಬ ಹೆಗ್ಗಳಿಕೆಗೆ ಬಿಎಫ್‌ಸಿ ಪಾತ್ರವಾಗಿದೆ.
ಈಗಾಗಲೇ ಆಡಿರುವ 23 ಪಂದ್ಯಗಳಿಂದ ಬೆಂಗಳೂರು ತಂಡ 44 ಅಂಕಗಳನ್ನು ಪಡೆದುಕೊಂಡಿದೆ. ತನ್ನ ಸಮೀಪದ ಪ್ರತಿಸ್ಪರ್ಧಿ ಈಸ್ಟ್ ಬೆಂಗಾಲ್‌ಗಿಂತ (40) ನಾಲ್ಕು ಅಂಕ ಹೆಚ್ಚು ಪಡೆದುಕೊಂಡಿದೆ.ಇನ್ನೊಂದೆಡೆ, ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ 23 ಪಂದ್ಯಗಳಿಂದ 34 ಅಂಕಗಳನ್ನು ಹೊಂದಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದೆ.ಮೊದಲ ಹಂತದ ಪಂದ್ಯಾವಳಿಯಲ್ಲಿ ಸ್ಪೋರ್ಟಿಂಗ್ ಕ್ಲಬ್ ಉತ್ತಮ ಪ್ರದರ್ಶನ ತೋರಿದೆ. ಅಲ್ಲದೆ, ಪ್ರಶಸ್ತಿಗಾಗಿ ಬೆಂಗಳೂರು ಎಫ್‌ಸಿಯೊಂದಿಗೆ ಗಂಭೀರ ಪೈಪೋಟಿ ನಡೆಸಿತ್ತು.
ಆದರೆ, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಸ್ಥಿರವಲ್ಲದ ಪ್ರದರ್ಶನ ನೀಡಿದ್ದಕ್ಕೆ ನಾಲ್ಕನೇ ಸ್ಥಾನಕ್ಕೆ ಜಾರಬೇಕಾಯಿತು.ಆದರೆ ಪಂದ್ಯಾವಳಿಯೂದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಬೆಂಗಳೂರು ಫುಟ್ಬಾಲ್ ಕ್ಲಬ್, ಈಗ ಕೊನೆಯ ಪಂದ್ಯದಲ್ಲೂ ಜಯ ಕೇಕೆ ಹಾಕುವ ಕಾತರದಲ್ಲಿದೆ. ಪಂದ್ಯಾವಳಿಯೂದ್ದಕ್ಕೂ ತಂಡದ ಯಶಸ್ಸಿಗೆ ಕಾರಣರಾಗಿರುವ ರಾಬಿನ್ ಸಿಂಗ್, ಸೀನ್ ರೂನಿ ಹಾಗೂ ಸುನಿಲ್ ಛೆಟ್ರಿ ಅವರು ಈ ಪಂದ್ಯದಲ್ಲೂ ಪ್ರಮುಖ ಪಾತ್ರವಹಿಸುವ ನಿರೀಕ್ಷೆಗಳಿವೆ.
ಇನ್ನು ಮಿಡ್‌ಫೀಲ್ಡ್‌ನಲ್ಲಿ ಜಾನ್ ಮೆನಿಯಾಂಗರ್ ಸಹ ತಂಡದ ಇತರ ಆಟಗಾರರೊಂದಿಗೆ ಅತ್ಯುತ್ತಮ ಸಮನ್ವಯ ಸಾಧಿಸುತ್ತಿದ್ದಾರೆ.ರಕ್ಷಣಾ ವಿಭಾಗದಲ್ಲಿ ಕರ್ಟೀಸ್ ಒಸಾನೋ ಮತ್ತು ಜಾನ್ ಜಾನ್ಸನ್ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್‌ನ ಸ್ಟ್ರೈಕರ್‌ಗಳು ಶ್ರೇಷ್ಠ ಪ್ರದರ್ಶನ ನೀಡುವ ಅಗತ್ಯವಿದೆ.
ಸ್ಪೋರ್ಟಿಂಗ್ ಕ್ಲಬ್‌ನ ಯಶಸ್ಸು ಹೆಚ್ಚಿನ ಪ್ರಮಾಣದಲ್ಲಿ ಕಾಲು ಓಗ್ಬಾ ಅವರ ಮೇಲೆ ಅವಲಂಬಿತವಾಗಿದೆ. ಕಾಲು ಅವರು ಎದುರಾಳಿ ತಂಡದ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನಡೆಸುತ್ತಾರೆ.ತಮ್ಮ ಗರಡಿಯಲ್ಲಿ ಪಳಗಿದ ತಂಡ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಸ್ಪೋರ್ಟಿಂಗ್ ಕ್ಲಬ್ ತಂಡದ ಕೋಚ್ ಆಸ್ಕರ್ ಬ್ರೂಜಾನ್.
'ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವುದು ನಮ್ಮ ಮೊದಲ ಗುರಿ. ಮೊದಲ ಹಂತದಲ್ಲಿ ನಾವು ಪ್ರಶಸ್ತಿ ಗೆಲ್ಲುವುದಕ್ಕಾಗಿ ಗಂಭೀರ ಪ್ರಯತ್ನ ನಡೆಸಿದೆವು. ಆದರೆ, ಪಂದ್ಯಾವಳಿಯ ಅಂತ್ಯದಲ್ಲಿ ಕೆಲ ಪಂದ್ಯಗಳನ್ನು ಸೋತಿದ್ದು, ಪ್ರಶಸ್ತಿಯಿಂದ ದೂರ ಉಳಿಯುವಂತಾಯಿತು. ಅಂತಿಮ ಪಂದ್ಯದಲ್ಲಿ ಜಯ ಕಾಣುವುದು ನಮ್ಮ ಮುಖ್ಯ ಗುರಿಯಾಗಿದೆ' ಎಂದು ಬ್ರುಜಾನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.