ಕ್ರೀಡೆ

ಭಾರತ-ಸರ್ಬಿಯಾ ಮುಖಾಮುಖಿ

Published On :

ನವದೆಹಲಿ: ಭಾರತ ಮತ್ತು ಸರ್ಬಿಯಾ ನಡುವೆ ನಡೆಯಲಿರುವ ಡೇವಿಸ್ ವಿಶ್ವ ಗುಂಪಿನ ಪ್ಲೇ ಆಫ್ ಸುತ್ತಿನ ಟೆನಿಸ್ ಪಂದ್ಯವನ್ನು ಆಯೋಜಿಸುವ ಭಾಗ್ಯ ಬೆಂಗಳೂರಿಗೆ ಲಭಿಸಿದೆ.
ಹಾಗಾಗಿ ಬೆಂಗಳೂರು ಅಭಿಮಾನಿಗಳಿಗೆ ಸರ್ಬಿಯಾ ತಂಡದಲ್ಲಿರುವ ವಿಶ್ವದ ನಂಬರ್ ಎರಡನೇ ಆಟಗಾರ ನೋವಾಕ್ ಜೊಕೊವಿಚ್ ಅವರನ್ನು ಕಣ್ಣಾರೆ ನೋಡುವ ಭಾಗ್ಯ ಒದಗಿಬರಬಹುದು. ಆದರೆ, ಜೊಕೊವಿಚ್ ಭಾರತಕ್ಕೆ ಆಗಮಿಸುವ ಬಗ್ಗೆ ಖಚಿತವಾಗಬೇಕಷ್ಟೇ ಅಖಿಲ ಭಾರತ ಟೆನಿಸ್ ಒಕ್ಕೂಟದ (ಎಐಟಿಎ) ಅಧಿಕಾರಿಗಳು ಈ ಪಂದ್ಯವನ್ನು ದೆಹಲಿ ನಡೆಸಬೇಕೇ ಎಂಬ ಬಗ್ಗೆಯೂ ಚರ್ಚೆ ನಡೆಸಿದರು. ಆದರೆ, ಅಂತಿಮವಾಗಿ ಆಟಗಾರರ ಸಲಹೆಯ ಮೇರೆಗೆ ಈ ಸಮರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರೊಂದಿಗೆ ಭಾರತ ಮತ್ತು ಸರ್ಬಿಯಾ ತಂಡಗಳು ಸೆಪ್ಟೆಂಬರ್ 12ರಿಂದ 14ರ ವರೆಗೆ ಕಬ್ಬನ್ ಉದ್ಯಾನವನದಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಂಕಣದಲ್ಲಿ ಪರಸ್ಪರ ಎದುರಾಗಲಿವೆ.
ಕಳೆದ ವರ್ಷ ಬೆಂಗಳೂರಿನಲ್ಲಿಯೇ ಆಡಲಾದ ಪಂದ್ಯದಲ್ಲಿ ಭಾರತದ ಆಟಗಾರರು 5-0 ಗೆಲವಿನ ಅಂತರದಲ್ಲಿ ಇಂಡೊನೇಷಿಯಾ ವಿರುದ್ಧ ನಿರಾಯಾಸ ಗೆಲವು ದಾಖಲಿಸಿದ್ದರು. ನಾಯಕರು ಮತ್ತು ಆಟಗಾರರ ಸಲಹೆ ಪಡೆದ ನಂತರ ಬೆಂಗಳೂರು ನಗರದಲ್ಲಿಯೇ ವಿಶ್ವಗುಂಪಿನ ಪ್ಲೇ ಆಫ್ ಸುತ್ತಿನ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿನ ಕೋರ್ಟ್‌ಗಳು ನಿಧಾನಗತಿಯಿಂದ ಕೂಡಿರುವ ಕಾರಣ ಆಟಗಾರರು ಪಂದ್ಯಗಳನ್ನು ಅಲ್ಲಿ ಆಡಲು ಬಯಸಿರಬಹುದು ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಭರತ್ ಓಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.  ಭಾರತ ತಂಡದ ಆಟಗಾರರು ಏಷಿಯಾ-ಓಷೆನಿಯಾ ಗುಂಪು-1ರ ಎರಡನೇ ಸುತ್ತಿನ ಸೆಣಸಿನಲ್ಲಿ ಕೊರಿಯಾವನ್ನು 3-1ರಿಂದ ಪರಾಭವಗೊಳಿಸುವ ಮೂಲಕ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಿದ್ದಾರೆ. ಮತ್ತೊಂದೆಡೆ ಸರ್ಬಿಯಾ ವಿಶ್ವಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಜರ್‌ಲೆಂಡ್ ವಿರುದ್ಧ 2-3ರಿಂದ ಸೋಲನುಭವಿಸಿತ್ತು. ಕಳೆದ ಬಾರಿ 2011ರಲ್ಲಿ ಉಭಯರು ಮುಖಾಮುಖಿಯಾದಾಗ ಆತಿಥೇಯ ಸರ್ಬಿಯಾ ತಂಡವೇ ಭಾರತದ ವಿರುದ್ಧ 4-1ರಲ್ಲಿ ಜಯ ಸಾಧಿಸಿ ತನ್ನ ಪ್ರಭುತ್ವ ಸ್ಥಾಪಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.