

ಭುವನೇಶ್ವರ್: ಎರಡು ಬಾರಿ ಮೇಲುಗೈ ಸಾಧಿಸಿದರೂ ಸಹ ಪಂದ್ಯದ ಮೇಲೆ ಹಿಡಿತ ಸಾಧಿಸಿ ಜಯ ಸಂಪಾದಿಸಲು ವಿಫಲರಾದ ಭಾರತದ ಆಟಗಾರರು ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಸತತ ಎರಡನೇ ಸೋಲನುಭವಿಸಿದ್ದಾರೆ.
ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ 2-4 ಗೋಲುಗಳಿಂದ ಅರ್ಜೆಂಟೀನಾ ಎದುರು ಸೋಲನುಭವಿಸಿತು. ಮೊದಲ ಪಂದ್ಯದಲ್ಲಿ ಜರ್ಮನಿ ಎದುರು 0-1 ಗೋಲಿನಿಂದ ಸೋಲನುಭವಿಸಿದ್ದ ಭಾರತ, ಈಗ ಸತತ ಎರಡನೇ ಕಹಿಯೊಂದಿಗೆ ನಾಲ್ಕು ತಂಡಗಳ ಪಟ್ಟಿಯಲ್ಲಿ ಮುಂದಿನ ಸುತ್ತ ಪ್ರವೇಶಿಸುವುದು ಬಹುತೇಕ ಆಸಾಧ್ಯ ಎಂಬಂತಾಗಿದೆ.
ಅರ್ಜೆಂಟೀನಾಕ್ಕೆ ಲೂಕಾಸ್ ವಿಲಾ 30ನೇ ನಿ., ಜುವಾನ್ ಲೊಪೆಜ್ 37ನೇ ನಿ., ಆಗಸ್ಟಿನ್ ಮಾಜಿಲಿ 49ನೇ ನಿಮಿಷ ಮತ್ತು ಜಾಕ್ವಿನ್ ಮೆನಿನಿ 59ನೇ ನಿಮಿಷ ಗೋಲುಗಳಿಸಿಕೊಟ್ಟರು. ಭಾರತದ ಪರ ಆಕಾಶ್ ದೀಪ್‌ಸಿಂಗ್ 30ನೇ ನಿಮಿಷ ಮತ್ತು ಗುರ್ಜಿಂದರ್ ಸಿಂಗ್ 37ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇನ್ನಿತರ ಪಂದ್ಯಗಳಲ್ಲಿ ಹಾಲೆಂಡ್ 4-1ರಿಂದ ಜರ್ಮನಿ ವಿರುದ್ಧ, ಇಂಗ್ಲೆಂಡ್ 8-2ರಿಂದ ಪಾಕಿಸ್ತಾನ ವಿರುದ್ಧ ಜಯಿಸಿದರೆ, ಆಸ್ಟ್ರೇಲಿಯಾ-ಬೆಲ್ಜಿಯಂ 4-4 ರಿಂದ ಡ್ರಾ ಸಾಧಿಸಿದವು.