

ಬಾದಲ್(ಬಾಥಿಂಡ): ಕಬ್ಬಡ್ಡಿ ಆಡಲು ಮತ್ತೆಂದಿಗೂ ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳಿದೆ.
ಪಂಜಾಬ್ ಸರ್ಕಾರದ ಆಶ್ರಯದಲ್ಲಿ ನಡೆದ ಐದನೇ ಆವೃತ್ತಿಯ ಕಬ್ಬಡ್ಡಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಂಪೈರ್‌ಗಳು ಪಕ್ಷಪಾತ ತೋರಿದ್ದಾರೆ. ನಮ್ಮ ವಿರುದ್ಧ ಅನೇಕ ತಪ್ಪು ತೀರ್ಪುಗಳನ್ನು ನೀಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನ ಆಟಗಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್ ಪಂದ್ಯದ ವೇಳೆ ಪಾಕಿಸ್ತಾನ ತಂಡ ಭಾರತದ ಎದುರು ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ತೀರ್ಪುಗಾರರು ಭಾರತದ ಪರ ತೀರ್ಪು ನೀಡಿದ್ದು, ಪಕ್ಷಪಾತ ತೋರಿದ್ದಾರೆ. ಹಾಗಾಗಿ, ಕಬ್ಬಡ್ಡಿ ಆಡಲು ಇನ್ನೆಂದೂ ಭಾತರಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಆಟಗಾರರು ಫೈನಲ್ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆ ಮಾಡುತ್ತಲೇ ಪಾಕಿಸ್ತಾನ ಆಟಗಾರರು ಅಂತಿಮವಾಗಿ ರನ್ನರ್‌ಅಪ್ ಪ್ರಶಸ್ತಿ ಸ್ವೀಕರಿಸಿದರು.
ಈ ಮಧ್ಯೆ ಪಂಜಾಬ್ ಉಪಮುಖ್ಯಮಂತ್ರಿ ಹಾಗೂ ಟೂರ್ನಿಯ ಸಂಘಟನಾ ಸಮಿತಿ ಸದಸ್ಯರೂ ಆದ ಸುಖಬೀರ್ ಬಾದಲ್ ಮಾತನಾಡಿ, ಟೂರ್ನಿಯಲ್ಲಿ ಯಾವುದೇ ರೀತಿಯ ಪಕ್ಷಪಾತ ತೋರಲಾಗಿಲ್ಲ. ಭಾರತ ತಂಡ ಗೆಲ್ಲಬೇಕೆಂದು ಅದರ ಪರ ತೀರ್ಪು ನೀಡಿಲ್ಲ. ನ್ಯಾಯಯುತವಾಗಿಯೇ ಪಂದ್ಯ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.