ಓಡು..ಓಡಿ..ನೋಡು

ಅಪರೂಪದ ಜೋಡಿ ಎಂದರೆ ಇವರೇ ಇರಬೇಕು ಎಂದು ಹೊಟ್ಟೆಕಿಚ್ಚು ಪಡುವಂತಹ ದಾಂಪತ್ಯವದು. ಓಡಲೆಂದೇ ಹುಟ್ಟಿದವರು. ಓಡಲೆಂದೇ ಒಂದಾದವರು. ರೇಸ್ ಇವರಿಗೆ ಪ್ಯಾಶನ್. ಇತ್ತೀಚೆಗಷ್ಟೇ ಅಮೆರಿಕದ ಬಹಾಮಾದಲ್ಲಿ ಕ್ಯಾನ್ಸರ್ ಜಾಗೃತಿಗೆಂದು ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಜಸ್ಟಿನ್ ಜಿಲ್ಲೆಟ್ ಹಾಗೂ ಮೆಲಿಸ್ಸಾ ಜಿಲ್ಲೆಟ್ ದಂಪತಿ 10ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಾಗ ಅಮೆರಿಕ ಮಾತ್ರವಲ್ಲ, ಜಗತ್ತೇ ಇವರನ್ನು ಬೆರಗುಗಣ್ಣಿನಿಂದ ನೋಡಿತು. ಕ್ರೀಡೆಯೆಂದರೆ ಪ್ರಶಸ್ತಿ, ಬಹುಮಾನ, ಪದಕ, ಹಣ, ಕೀರ್ತಿ, ಅಹಂಕಾರ ಇವುಗಳಲ್ಲಿ ಒಂದಾದರೂ, ನಮ್ಮ ಮುಂದೆ ಸುಳಿದು ಹೋಗದಿರದು. ಆದರೆ, ಈ ದಂಪತಿ ಮಾತ್ರ ಇವ್ಯಾವುದರ ಮೋಹಕ್ಕೂ ಒಳಗಾದವರಲ್ಲ. ಅದಕ್ಕೇ ಇವರು ಡಿಫರೆಂಟ್. ಇವರು ವಿಶ್ವ ಸ್ತರದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳೇನಲ್ಲ. ಆದರೆ ಕ್ರೀಡೆಯೊಂದಿಗಿನ ಅವರ ತಪಸ್ಸನ್ನು ಮಾತ್ರ ಜಗತ್ತೇ ಕುತೂಹಲದಿಂದ ಗಮನಿಸಿದೆ. ಅಮೆರಿಕದಲ್ಲಿ ಎಲ್ಲಿ ಮ್ಯಾರಥಾನ್ ಇದ್ದರೂ ಅಲ್ಲಿಗೆ ಈ ದಂಪತಿ ತಲುಪುತ್ತಾರೆ, ಭಾಗವಹಿಸುತ್ತಾರೆ, ಗೆಲ್ಲುತ್ತಾರೆ, ಖುಷಿಯಿಂದ ಮನೆಗೆ ಮರಳುತ್ತಾರೆ.
ಒಂದಾದದ್ದೇ ವಿಶೇಷ!
ಈ ದಂಪತಿ ಒಂದಾದದ್ದೇ ವಿಶೇಷ. ಜಸ್ಟಿನ್ಗೆ 16ರ ಹರೆಯದಿಂದಲೇ ಓಡುವ ಹಂಬಲ. ಆತ ಗೋಶನ್ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದಾಗಲೇ ತನ್ನೊಳಗಿದ್ದ ಅದಮ್ಯ ಹಂಬಲಕ್ಕೆ ನೀರೆರೆಯಲು ನಿರ್ಧರಿಸಿದ್ದ. ಈ ಬಗ್ಗೆ ಆತ ತನ್ನ ದೈಹಿಕ ಶಿಕ್ಷಣ ನಿರ್ದೇಶಕ ವಾಲ್ ಹರ್ಷ್ ಬರ್ಗ್ರ್ನಲ್ಲಿ, 'ನಾನು ಪದವಿ ಪಡೆಯುವುದರೊಳಗೆ ಒಬ್ಬ ಉತ್ತಮ ವೃತ್ತಿಪರ ಓಟಗಾರನಾಗಲು ಬಯಸುತ್ತೇನೆ. ಜೊತೆಗೆ ನನ್ನ ಅಭಿರುಚಿಗೆ ಹೊಂದಿಕೊಳ್ಳುವ ಬಾಳಸಂಗಾತಿಯನ್ನು ಇದೇ ಕಾಲೇಜಿನಲ್ಲೇ ಭೇಟಿಯಾಗುವ ಇಚ್ಛೆಯಿದೆ' ಎಂದು ಹೇಳಿಕೊಂಡಾಗ ವಾಲ್ ಜೋರಾಗಿ ನಕ್ಕಿದ್ದರಂತೆ. ಹಾಗೆಂದು ಜಸ್ಟಿನ್ ಸುಮ್ಮನೇ ಕೂರಲಿಲ್ಲ. ಓಟದೊಂದಿಗೆ ಇಚ್ಛೆಯನರಿತು ಓಡುವ ಸತಿಗಾಗಿ ಹುಡುಕಾಡತೊಡಗಿದ. ಆತನ ಎರಡೂ ಆಸೆಗಳು ಈಡೇರಿದವು. ಗೋಶಾನ್ ಕಾಲೇಜಿನ ಚೆಂದುಳ್ಳಿ ಚೆಲವೆ ಮೆಲಿಸ್ಸಾ ಈತನನ್ನು ಬಹುವಾಗಿ ಕಾಡಿದಳು. ಆಕೆಯ ಒಲವನ್ನು ಪಡೆಯಲೆಂದು ಈತನೂ ಹಿಂದೆಯೇ ಓಡಿದ, ಕಾಡಿದ, ಬೇಡಿದ. ಕಾಲೇಜಿಗೆ ಬಂದ ಪ್ರಥಮ ವರ್ಷದಲ್ಲೇ ಇಬ್ಬರ ಪರಿಚಯವಾದರೂ ಸ್ನೇಹ, ಪ್ರೇಮಕ್ಕೆ ತಿರುಗಲು ಸ್ವಲ್ಪ ಸಮಯವೇ ಹಿಡಿಯಿತೆನ್ನಿ. ಜಸ್ಟಿನ್ ಈಕೆ ನನಗೆ ಫಿಟ್ ಎಂದು ಅದಾಗಲೇ ತೀರ್ಮಾನಿಸಿದ್ದರೂ ಮೆಲಿಸ್ಸಾ ಸುಲಭದಲ್ಲಿ ಪ್ರೇಮವನ್ನು ಒಪ್ಪಿಕೊಂಡಿರಲಿಲ್ಲ. ಬೆಂಬಿಡದ ಈ ಅಸಾಮಿಯೊಂದಿಗೆ ಆಕೆ ಡೇಟಿಂಗ್ ಹೋಗಲು ಮೂರು ವರ್ಷದ ಬಳಿಕ ಒಪ್ಪಿಕೊಂಡಳು. ಆ ಬಳಿಕ ಹೇಳಬೇಕಾಗಿಲ್ಲ.
ಪದವಿ ಬಳಿಕ ವಿವಾಹ ಬಂಧನಕ್ಕೆ ಒಳಪಟ್ಟ ಇವರಿಗೆ ಇಬ್ಬರು ಮಕ್ಕಳು. 4 ವರ್ಷದ ದೊಡ್ಡ ಮಗನಿಗೆ ಇವರಿಟ್ಟಿರುವ ಹೆಸರು ಮೈಲ್ಸ್. ಮತ್ತೊಂದು ಮಗುವಿಗೆ ಒಂದು ವರ್ಷ. ಇನ್ನೂ ತೊಟ್ಟಿಲಲ್ಲಿದೆ. 'ನನಗೀಗ 31 ವರ್ಷವಷ್ಟೇ. 40 ತಲುಪಿದಾಗ, ಬದುಕಿನಲ್ಲಿ ನನ್ನ ಮಕ್ಕಳೂ ಜೊತೆಯಾಗುತ್ತಾರೆಂಬ ನಂಬಿಕೆ ಇದೆ' ಎನ್ನುತ್ತಾನೆ ಜಸ್ಟಿನ್. ಈ ರೀತಿಯಲ್ಲಿ ಕುಟುಂಬ ಕಲ್ಯಾಣ ಮಾಡುವ ಹಂಬಲ ಆತನದು.
ಮೆಲಿಸ್ಸಾ ಓಟವನ್ನೇ ಬದುಕಾಗಿ ಸ್ವೀಕರಿಸಲು ಅಲೋಚಿಸಿದವಳಲ್ಲ. ಆದರೆ, ಜಸ್ಟಿನ್ ತನ್ನ ಬದುಕಿನ ಧ್ಯೇಯವನ್ನು ಆಕೆಗೆ ಅರ್ಥಮಾಡಿಸಿದ. ಇಬ್ಬರೂ ಮದುವೆಯಾದ ಮೇಲೂ ಓಡುವ ಸಂಕಲ್ಪ ಮಾಡಿದರು. 'ನನ್ನಿಂದಿದು ಸಾಧ್ಯಾನಾ' ಅಂತ ಕೇಳಿದ ಮೆಲಿಸ್ಸಾಳ ಕೈಹಿಡಿದ ಜಸ್ಟಿನ್, 'ನೀನು ಅಷ್ಟೇನೂ ಚೆನ್ನಾಗಿ ಓಡುತ್ತಿಲ್ಲ ಅನ್ನೋದು ನಿಜ. ಆದ್ರೆ ಪ್ರಯತ್ನಿಸಿದರೆ ತುಂಬಾ ಚೆನ್ನಾಗಿ ಓಡಬಲ್ಲೆ' ಎಂದು ಧೈರ್ಯ ತುಂಬಿದ್ದ. ಜಸ್ಟಿನ್ ಈವರೆಗೆ ಭಾಗವಹಿಸಿದ 135 ಸ್ಪರ್ಧೆಗಳಲ್ಲಿ 72 ಬಾರಿ ಮನೆಗೆ ಪದಕ ಗೆದ್ದು ಹೋಗಿದ್ದಾನೆ. ಆಕೆಯೂ ಅಷ್ಟೇ. ವೈಯಕ್ತಿಕವಾಗಿ ಗೆದ್ದಿರುವ ಬಹುಮಾನಗಳು 50ರ ಗಡಿ ದಾಟಿವೆ. 10 ಬಾರಿ ಜೊತೆಯಾಗಿ ಗೆದ್ದಿದ್ದಾರೆ.
ನಾವು ಮದುವೆಯಾದ ಬಳಿಕ 10 ಬಾರಿ ಮ್ಯಾರಥಾನ್ ಪುರುಷರ ಹಾಗೂ ಮಹಿಳೆಯರ ವಿಭಾಗದ ಪ್ರಶಸ್ತಿಗಳನ್ನು ಜೊತೆಯಾಗಿ ಹಂಚಿಕೊಂಡಿದ್ದೇವೆ. ಹೀಗೆ ಗೆದ್ದು ಮನೆಗೆ ಹಿಂದಿರುಗುವಾಗಲೆಲ್ಲಾ ನಾವು ಬಹಳ ಸಂಭ್ರಮಿಸುತ್ತೇವೆ. ಇದೊಂದು ಸಾರ್ಥಕ ಪ್ರವಾಸ ಎಂಬ ಭಾವನೆಯಿಂದ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ಮನೆಯನ್ನು ಬಹುಮಾನಗಳಿಂದಲೇ ಅಲಂಕರಿಸುವ ಮಜವೇ ಬೇರೆ ಕಣ್ರೀ.
-ಜಸ್ಟಿನ್
-ಗಣೇಶಪ್ರಸಾದ್ ಕುಂಬ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


