ಕ್ರೀಡೆ

ಆಂಗ್ಲರ ಬಲೆಗೆ ಬಿದ್ದ ಕಿವೀಸ್

ಆಂಗ್ಲರ ಬಲೆಗೆ ಬಿದ್ದ ಕಿವೀಸ್
Published On :

ಅಬುಧಾಬಿ: ಮಾರಕ ಬೌಲಿಂಗ್ ದಾಳಿಯ ಮೂಲಕ ಕಿವೀಸ್ ಪಡೆಯನ್ನು ಕಂಗೆಡಿಸಿದ ಇಂಗ್ಲೆಂಡ್ ತಂಡ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭರ್ಜರಿ ಜಯ ದಾಖಲಿಸಿದೆ.
ಮಂಗಳವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 115 ರನ್‌ಗಳ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 229 ರನ್ ಪೇರಿಸಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಪಡೆ 36.1 ಓವರ್‌ಗಳಲ್ಲಿ 114 ರನ್‌ಗಳಿಗೆ ತನ್ನ ಇನಿಂಗ್ಸ್ ತೆರೆ ಎಳೆದುಕೊಳ್ಳುವ ಮೂಲಕ ಸೋಲನುಭವಿಸಿತು.
ರೆಯಾನ್ ಉತ್ತಮ ಬ್ಯಾಟಿಂಗ್: ಮೊದಲು ಬ್ಯಾಟ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ನೆರವಾಗಿದ್ದು, ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ರೆಯಾನ್ ಹಿಗ್ಗಿನ್ಸ್.
ಕೇವಲ 13 ರನ್ ಆಗುವಷ್ಟರಲ್ಲೇ ಆರಂಭಿಕ ಡೊಮಿನಿಕ್ ಸಿಬ್ಲಿ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್, ನಂತರ ಹಿಗ್ಗಿನ್ಸ್(83) ಅವರ ಅರ್ಧಶತಕದ ನೆರವಿನಿಂದ ಚೇತರಿಕೆ ಕಂಡಿತು. ಆದರೆ ಹಿಗ್ಗಿನ್ಸ್ ವಿಕೆಟ್ ಕಳೆದುಕೊಂಡ ನಂತರ ತಂಡಕ್ಕೆ ಸ್ವಲ್ಪ ಮಟ್ಟಿಗೆ ಆಧಾರವಾಗಿದ್ದು, ವಿಲ್ ರೋಡ್ಸ್(31) ಹಾಗೂ ಜೊ ಕ್ಲಾರ್ಕ್(33). ಈ ಇಬ್ಬರು ಬ್ಯಾಟ್ಸ್‌ಮನ್ ತಂಡ 200ರ ಗಡಿ ದಾಟುವಂತೆ ನೋಡಿಕೊಂಡರು.
ಕುಸಿದ ಕಿವೀಸ್: ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಗೆಲುವಿನ ಹಾದಿಯಲ್ಲಿ ಎಡವಿತು.
ಆರಂಭಿಕ ಬ್ಯಾಟ್ಸ್‌ಮನ್ ರಿಕಿ ವೀರಸುಂದರ(41) ಹೊರತ ಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಹೋರಾಟ ನೀಡುವ ಪ್ರಯತ್ನ ಮಾಡಲಿಲ್ಲ. ಕಿವೀಸ್ ಬ್ಯಾಟ್ಸ್‌ಮನ್‌ಗಳು ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡ 114 ರನ್‌ಗಳಿಗೆ ತಮ್ಮ ಇನಿಂಗ್ಸ್‌ಗೆ ಅತ್ಯ ಹಾಡಲು ಕಾರಣವಾಯಿತು.
ಆಂಗ್ಲರ ಪರ ವೇಗಿ ಮ್ಯಾಥ್ಯೂ ಫಿಷರ್ 18 ರನ್‌ಗಳಿಗೆ 3 ವಿಕೆಟ್ ಪಡೆದು ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಂಡೀಸ್ ವಿನ್: ಇನ್ನು ಸಿ ಗುಂಪಿನ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ಕೆನಡಾ ವಿರುದ್ಧ 63 ರನ್‌ಗಳ ಗೆಲವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ, 50 ಓವರ್‌ಗಳಲ್ಲಿ 4 ವಿಕೆಟ್‌ಗೆ 289 ರನ್ ದಾಖಲಿಸಿತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆನಡಾ 49.3 ಓವರ್‌ಗಳಲ್ಲಿ 226 ರನ್‌ಗಳಿಗೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ಪರ ಅಮೂಲ್ಯ ಅರ್ಧಶತಕ ದಾಖಲಿಸಿದ ತಾಗೆನಾರಾಯಣ ಚಂದ್ರಪಾಲ್(93) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಹರಿಣಗಳಿಗೆ ಸುಲಭ ಗೆಲವು: ಸಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವು, ದುರ್ಬಲ ಜಿಂಬಾಬ್ವೆ ತಂಡದ ವಿರುದ್ಧ ಸುಲಭದ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ 50 ಓವರ್‌ಗಳಲ್ಲಿ ಕೇವಲ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರೀಕಾ 39 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್ ಪೇರಿಸಿ ಗೆಲವಿನ ನಗೆ ಬೀರಿತು. ಹರಿಣಗಳ ಪರ ಐಡೆನ್ ಮಾರ್ಕ್ರಮ್ ಅವರ ಅಮೋಘ ಶತಕ(ಅಜೇಯ 120) ಸುಲಭ ಗೆಲವಿಗೆ ನೆರವಾಯಿತು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಲಂಕೆಗೆ ಜಯ: ಡಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡವು ಹಶನ್ ದುಮಿಂಡು(ಅಜೇಯ 113) ಅವರ ಅಮೂಲ್ಯ ಶತಕದ ನೆರವಿನಿಂದ ಯುಎಇ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಎಇ 47.5 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 43.1 ಓವರ್‌ಗಳಲ್ಲಿ 2 ವಿಕೆಟ್‌ಗೆ 206 ರನ್ ಗಳಿಸಿ ಗೆಲವಿನ ದಡ ಸೇರಿತು

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 50 ಓವರ್‌ಗಳಲ್ಲಿ  ವಿಕೆಟ್ ನಷ್ಟಕ್ಕೆ 229
ರಯಾನ್ ಹಿಗ್ಗಿನ್ಸ್ 83, ಜೋ ಕ್ಲಾರ್ಕ್ 33, ಬ್ರೆಟ್ ರ್ಯಾಂಡೆಲ್ 57ಕ್ಕೆ3
ನ್ಯೂಜಿಲೆಂಡ್ 36.1 ಓವರ್‌ಗಳಲ್ಲಿ 114
ರಿಕಿ ವೀರಸುಂದರ 41, ಶವ್ನ್ ಹಿಕ್ಸ್ 21, ಮ್ಯಾಥ್ಯೂ ಫಿಷರ್ 18ಕ್ಕೆ3

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.