ಕ್ವಾರ್ಟರ್ಫೈನಲ್ಗೆ ಸೋಮ್ದೇವ್
ನವದೆಹಲಿ: ಭಾರತದ ಸೋಮ್ದೇವ್ ದೇವ್ವರ್ಮನ್ ಒಂದು ಲಕ್ಷ ಡಾಲರ್ ಬಹುಮಾನ ಮೊತ್ತದ ದೆಹಲಿ ಓಪನ್ ಎಟಿಪಿ ಟೆನಿಸ್ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿನ ಆರ್.ಕೆ. ಖನ್ನಾ ಟೆನಿಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಚೀನಾದ ಡೀ ವು ಅವರ ವಿರುದ್ಧ 6-2, 6-2 ನೇರ ಸೆಟ್ಗಳಿಂದ ಜಯಗಳಿಸಿ ಮುನ್ನಡೆ ಸಾಧಿಸಿದರು.
ಎರಡನೇ ಸುತ್ತಿನಲ್ಲಿಯೇ ಮುಖಾಮುಖಿಯಾಗಿದ್ದ ಎರಡೂ ದೇಶಗಳ ಈ ಇಬ್ಬರು ಆಟಗಾರರ ನಡುವಿನ ಕದನ ಬಹುತೇಕ ಏಕಪಕ್ಷೀಯವಾಗಿತ್ತು. ಚೀನಾ ಆಟಗಾರ ಸಾಕಷ್ಟು ತಪ್ಪುಗಳನ್ನು ಮಾಡುವುದರೊಂದಿಗೆ ಸುಲಭವಾಗಿಯೇ ಭಾರತೀಯ ಆಟಗಾರನ ಎದುರು ತಲೆಬಾಗಿಸಬೇಕಾಯಿತು.
ವಿಶ್ವದ 96ನೇ ಶ್ರೇಯಾಂಕಿತ ಸೋಮ್ದೇವ್ ಮತ್ತು 212ನೇ ಶ್ರೇಯಾಂಕಿತ ಡೀ ವು ಎಟಿಪಿ ಟೂರ್ನಿಯಲ್ಲೇ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ತವರಿನ ಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಸಫಲರಾದ ಸೋಮ್ದೇವ್ ಕೇವಲ 62 ನಿಮಿಷಗಳ ಆಟದಲ್ಲೇ ಅಂತಿಮ ಗೆಲವಿನ ನಗೆ ಬೀರಿದರು. ಚೀನಾದ ಆಟಗಾರ ತಮಗೆ ಕಠಿಣ ಎದುರಾಳಿಯೇ ಆಗಿದ್ದರು. ಆದರೆ ಅವರು ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡವಲು ವಿಫಲರಾದರು. ಅಲ್ಲದೆ ತಮಗೆ ಉತ್ತಮವಾಗಿದ್ದ ಅಂಕಣದ ಮೇಲೆ ಗುಣಮಟ್ಟದ ಆಟ ಪ್ರದರ್ಶಿಸಿದ ಪರಿಣಾಮ ನಿರೀಕ್ಷೆಯಂತೆ ಗೆಲವು ನನ್ನದಾಯಿತು ಎಂದು ಪಂದ್ಯದ ಬಳಿಕ ಸೋಮ್ದೇವ್ ಪ್ರತಿಕ್ರಿಯಿಸಿದ್ದಾರೆ.
ಆರಂಭದಿಂದಲೇ ಎಚ್ಚರಿಕೆಯ ನಡೆಯೊಂದಿಗೆ ಮುನ್ನುಗ್ಗಿದ ಸೋಮ್ದೇವ್ ಕೇವಲ 30 ನಿಮಿಷಗಳ ಆಟದಲ್ಲಿಯೇ ಮೊದಲ ಸೆಟ್ ಜಯಿಸಿ ಶುಭಾರಂಭ ಮಾಡಿದರು. ಇದೇ ಸ್ಫೂರ್ತಿಯಲ್ಲಿ ಮುನ್ನಡೆದು ಎರಡನೇ ಸೆಟ್ ಅನ್ನೂ ಅಷ್ಟೇ ಉತ್ತಮವಾಗಿ ತಮ್ಮದಾಗಿಸಿಕೊಂಡರು. ಇಡೀ ಪಂದ್ಯದಲ್ಲಿ ಚೀನಾ ಆಟಗಾರನಿಗೆ ಕೇವಲ 4 ಗೇಮ್ಗಳನ್ನು ಗೆದ್ದುಕೊಳ್ಳಲಷ್ಟೇ ಅವಕಾಶ ನೀಡಿದರು.
ಕ್ವಾರ್ಟರ್ಫೈನಲ್ ಸುತ್ತಿನಲ್ಲಿ ಸೋಮ್ದೇವ್ಗೆ ಚೀನಾದವರೇ ಆದ ಜೀ ಝಾಂಗ್ ಸವಾಲು ಎದುರಾಗಲಿದೆ. 229ನೇ ಶ್ರೇಯಾಂಕಿತ ಝಾಂಗ್ ತಮ್ಮ ಪಂದ್ಯದಲ್ಲಿ ಸ್ವಿಸ್ನ ಮಾರ್ಕೊ ಚಿಡಿನೆಲ್ಲಿ ಅವರನ್ನು 7-5, 6-4 ನೇರ ಸೆಟ್ಗಳಿಂದ ಮಣಿಸಿ ಈ ಹಂತ ತಲುಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

