ಕ್ರೀಡೆ

ಸೋಮ್ಗೆ ಭರ್ಜರಿ ಮುನ್ನಡೆ

ಸೋಮ್ಗೆ ಭರ್ಜರಿ ಮುನ್ನಡೆ
Published On :

ದುಬೈ: ಭಾರತದ ನಂಬರ್ ಒನ್ ಟೆನಿಸ್ನ ಸಿಂಗಲ್ಸ್ ಆಟಗಾರ ಸೋಮ್ದೇವ್ ದೇವವರ್ಮನ್ ಅವರು ದುಬೈ ಡ್ಯೂಟಿ ಫ್ರೀ ಚಾಂಪಿಯನ್ಶಿಪ್ನಲ್ಲಿ ತಮ್ಮ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಗೆಲವು ದಾಖಲಿಸಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದಲ್ಲಿ 78ನೇ ರ್ಯಾಂಕಿಂಗ್ ಹೊಂದಿರುವ ಸೋಮ್ದೇವ್, ನಾಲ್ಕನೇ ರ್ಯಾಂಕಿಂಗ್ನ ಅರ್ಜೆಂಟೀನಾದ ಜುವಾನ್ ಮಾರ್ಟೀನ್ ಡೆಲ್ ಪೊಟ್ರೊ ವಿರುದ್ಧ ಗೆಲವು ದಾಖಲಿಸಿದ್ದಾರೆ. ಪೊಟ್ರೊ ಪಂದ್ಯದಲ್ಲಿ ಎಡಗೈನ ನೋವಿನಿಂದಾಗಿ ಹಿಂದೆ ಸರಿದ ಪರಿಣಾಮ ಸೋಮ್ದೇವ್ ಗೆಲವು ದಾಖಲಿಸಿದ್ದಾರೆ.
ಒಂದು ಗಂಟೆ ಏಳು ನಿಮಿಷಗಳ ಕಾನ ನಡೆದ ಮೊದಲ ಸೆಟ್ನಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ  ಸೋಮ್ದೇವ್ 7-6(3) ಅಂತರದಲ್ಲಿ ಮೇಲುಗೈ ಸಾಧಿಸಿದರು. ನಂತರ ಕೈ ನೋವಿನಿಂದ ಬಳಲಿದ ಪೊಟ್ರೊ ಪಂದ್ಯದಿಂದ ಹೊರ ನಡೆಯಲು ನಿರ್ಧರಿಸಿದರು. ಹಾಗಾಗಿ ಸೋಮ್ದೇವ್ ಪಂದ್ಯದಲ್ಲಿ ಗೆಲವು ದಾಖಲಿಸಿದರು.
ಕಳೆದ ವರ್ಷ ಇದೇ ಪಂದ್ಯಾವಳಿಯಲ್ಲಿ ಸೋಮ್ದೇವ್, ಪೊಟ್ರೊ ವಿರುದ್ಧ 4-6, 4-6 ನೇರ ಸೆಟ್ಗಳ ಅಂತರದಲ್ಲಿ ಸೋಲನುಭವಿಸಿದ್ದರು.
ಕ್ವಾರ್ಟರ್ಗೆ ಬೋಪಣ್ಣ-ಖುರೇಷಿ
ಭಾರತದ ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಪುರುಷರ ವಿಭಾಗದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಖುರೇಷಿ ಜೋಡಿ 6-1, 5-7, 10-8 ಸೆಟ್ಗಳಿಂದ ಅರ್ಹತಾ ಸುತ್ತಿನಿಂದ ಬಂದ ರಷ್ಯಾದ ನಿಕೋಲೆ ಡ್ಯಾವಿಡೆಂಕೊ ಮತ್ತು ರೊಮೇನಿಯಾದ ವಿಕ್ಟರ್ ಹನೆಸ್ಕು ವಿರುದ್ಧ ಜಯಗಳಿಸಿದರು.
ಎರಡನೇ ಶ್ರೇಯಾಂಕದ ಗೌರವ ಹೊಂದಿರುವ ಭಾರತ-ಪಾಕಿಸ್ತಾನ ಜೋಡಿ, ಮೂರೂ ಸೆಟ್ಗಳಲ್ಲಿ ಅತ್ಯುತ್ತಮ ಆಟ ಸಂಘಟಿಸಿ ಒಂದು ಗಂಟೆ 28 ನಿಮಿಷಗಳ ಹೋರಾಟದ ನಂತರ ಅಂತಿಮ ಗೆಲವು ತಮ್ಮದಾಗಿಸಿಕೊಂಡರು.
ಮುಂದಿನ ಸುತ್ತಿನಲ್ಲಿ ಬೋಪಣ್ಣ ಮತ್ತು ಖುರೇಷಿ ಅವರು ಓಲಿವರ್ ಮರಾಕ್-ಫ್ಲೋರಿಯನ್ ಮೆರ್ಗಿಯಾ ಮತ್ತು ಮಹೇಶ್ ಭೂಪತಿ-ಡ್ಯಾನಿಸ್ ಇಸ್ಟೊಮಿನ್ ಅವರ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಮೊದಲ ಸೆಟ್ನಲ್ಲಿ ಬೋಪಣ್ಣ ಮತ್ತು ಖುರೇಷಿ ಎದುರಾಳಿಯ ಸರ್ವ್ ಅನ್ನು ಎರಡು ಬಾರಿ ಬ್ರೇಕ್ ಮಾಡಿತು. ಆದರೆ, ಎರಡನೇ ಸೆಟ್ನಲ್ಲಿ ತಿರುಗಿಬಿದ್ದ ನಿಕೋಲೆ ಮತ್ತು ವಿಕ್ಟರ್, ಎರಡು ಬಾರಿ ಭಾರತ-ಪಾಕ್ ಜೋಡಿಯ ಸರ್ವ್ ಬ್ರೇಕ್ ಮಾಡುವ ಮೂಲಕ ಪಂದ್ಯದಲ್ಲಿ 1-1ರಿಂದ ಸಮಗೌರವ ಸಾಧಿಸಿದರು.
ಹಾಗಾಗಿ, ನಂತರದ ಸೂಪರ್ ಟೈಬ್ರೇಕರ್ ಹೋರಾಟ ಹೆಚ್ಚು ಕುತೂಹಲ ಕೆರಳಿಸಿತ್ತು. ಈ ಸುತ್ತಿನಲ್ಲಿ ಸಹ ಬೋಪಣ್ಣ ಮತ್ತು ಖುರೇಷಿ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿ ತಮ್ಮ ಪ್ರಭುತ್ವ ಸ್ಥಾಪಿಸುವುದರೊಂದಿಗೆ ಎಂಟರಘಟ್ಟಕ್ಕೆ ಪ್ರವೇಶಿಸುವಲ್ಲಿ ಸಫಲರಾದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.