ಕ್ರೀಡೆ

ಕರ್ನಾಟಕ ದಾಳಿಗೆ ಮರುಗಿದ ಆಂಧ್ರ

ಕರ್ನಾಟಕ ದಾಳಿಗೆ ಮರುಗಿದ ಆಂಧ್ರ
Published On :

ಬೆಂಗಳೂರು: ಪ್ರಸಕ್ತ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಪ್ರಭುತ್ವ ಮುಂದುವರಿಸಿರುವ ಕರ್ನಾಟಕ ತಂಡದ ಆಟಗಾರರು, ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ಆಂಧ್ರ ಪ್ರದೇಶ ವಿರುದ್ಧ ಸುಲಭ ಗೆಲವು ದಾಖಲಿಸಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಕರ್ನಾಟಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಆಂಧ್ರ ಪ್ರದೇಶ ಕೇವಲ 97 ರನ್ ಗಳಿಸಿ ತನ್ನ ಇನಿಂಗ್ಸ್‌ಗೆ ತೆರೆ ಎಳೆದುಕೊಂಡಿತು.
ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ ಉತ್ತಮ ಆರಂಭದ ಹೊರತಾಗಿಯೂ ನಾಲ್ಕು ವಿಕೆಟ್ ಕಳೆದುಕೊಂಡು 23.4 ಓವರ್‌ಗಳಲ್ಲಿ 103 ರನ್ ದಾಖಲಿಸುವ ಮೂಲಕ ಗೆಲವಿನ ನಗೆ ಬೀರಿತು. ಈ ಗೆಲವಿನೊಂದಿಗೆ ರಾಜ್ಯ ತಂಡ 4 ಅಂಕ ಪಡೆಯಿತು.
ಮಾರಕವಾದ ಬೌಲರ್‌ಗಳು: ಎಂದಿನಂತೆ ಚಿನ್ನಸ್ವಾಮಿ ಅಂಗಣ ಪಿಚ್ ಬೌಲರ್‌ಗಳಿಗೆ ನೆರವಾಗುವ ನಿಟ್ಟಿನಲ್ಲಿ ಟಾಸ್ ಗೆದ್ದ ವಿನಯ್ ಕುಮಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹಸಿರಿನಿಂದ ಕೂಡಿದ ಪಿಚ್‌ನಲ್ಲಿ ರಾಜ್ಯದ ಬೌಲರ್‌ಗಳು ಆಂಧ್ರ ಪ್ರದೇಶ ಬ್ಯಾಟ್ಸ್‌ಮನ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರು. ಪರಿಣಾಮ ಆಂಧ್ರ ಪ್ರದೇಶ ಪರ ಆರಂಭಿಕ ಶ್ರೀಕರ್ ಭರತ್ (25) ಹಾಗೂ ಸ್ವರೂಪ್ ಕುಮಾರ್(26) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ರನ್ ದಾಖಲಿಸಲಿಲ್ಲ. ಹಾಗಾಗಿ ಆಂಧ್ರ ನೂರರ ಗಡಿ ಸಮೀಪಕ್ಕೆ ಸಾಗಲು ನೆರವಾಯಿತು.
ವಿನಯ್, ಮನೀಷ್ ತಲಾ 3, ಮಿಥುನ್ 2 ಹಾಗೂ ಅಬ್ರಾರ್ ಖಾಜಿ, ರೋನಿತ್ ಮೊರೆ ತಲಾ 1 ವಿಕೆಟ್ ಪಡೆದರು.
ಭದ್ರ ಅಡಿಪಾಯ: ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ರಾಬಿನ್ ಉತ್ತಪ್ಪ(54) ಹಾಗೂ ಕೆ.ಎಲ್ ರಾಹುಲ್ (21) ಭದ್ರ ಅಡಿಪಾಯ ಹಾಕಿ ಕೊಟ್ಟರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 81 ರನ್ ಪೇರಿಸಿ ತಂಡವನ್ನು ಗೆಲವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಉತ್ತಪ್ಪ 69 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 54 ರನ್ ದಾಖಲಿಸಿದರು. ಕೆ.ಎಲ್ ರಾಹುಲ್ 43 ಎಸೆತಗಳಲ್ಲಿ 21 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.
ಕರ್ನಾಟಕ ಒಂದು ಹಂತದಲ್ಲಿ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ದಾಖಲಿಸಿದ್ದ ಕರ್ನಾಟಕ  ವಿಕೆಟ್ ಕಳೆದುಕೊಳ್ಳದೇ ಗೆಲವು ದಾಖಲಿಸುವಂತೆ ಕಂಡು ಬಂದಿತು. ಈ ವೇಳೆ 16ನೇ ಓವರ್‌ನಿಂದ ಬ್ಯಾಟಿಂಗ್ ಪವರ್‌ಪ್ಲೇ ತೆಗೆದುಕೊಂಡ ರಾಜ್ಯ ತಂಡ, 5 ಓವರ್‌ಗಳಲ್ಲಿ 14 ರನ್‌ಗಳಿಸಿ 3 ವಿಕೆಟ್ ಕಳೆದುಕೊಂಡಿತು. 81ರ ಮೊತ್ತದಲ್ಲಿ ಉತ್ತಪ್ಪ, ರಾಹುಲ್, ಮನೀಷ್ ಪಾಂಡೆ ನಿರ್ಗಮಿಸಿದರು. ನಂತರ ಗಣೇಶ್ ಸತೀಶ್ 10 ರನ್ ದಾಖಲಿಸಿ ಔಟಾದರು. ಅಂತಿಮವಾಗಿ ಕರುಣ್ ನಾಯರ್ (11) ಹಾಗೂ ಸಿ.ಎಂ ಗೌತಮ್(1) ತಂಡವನ್ನು ದಡ ಸೇರಿಸಿದರು.


ಸ್ಕೋರ್ ವಿವರ
ಆಂಧ್ರ ಪ್ರದೇಶ 30.3 ಓವರ್‌ಗಳಲ್ಲಿ 97
ಶ್ರೀಕರ್ ಭರತ್ ಬಿ ವಿನಯ್ 25, ಪ್ರಶಾಂತ್ ಸಿ ಗೌತಮ್ ಬಿ ಮಿಥುನ್ 0, ಮುರುಮುಲ್ಲಾ ಶ್ರೀರಾಮ್ ಬಿ ರೋನಿತ್ ಮೊರೆ 3, ಸುಮಂತ್ ಸಿ ಗೌತಮ್ ಬಿ ಮಿಥುನ್ 6, ಪ್ರದೀಪ್ ಎಲ್‌ಬಿ ವಿನಯ್ 0, ಶಿವಕುಮಾರ್ ಸಿ ಸತೀಶ್ ಬಿ ಮನೀಷ್ 6, ಸ್ವರೂಪ್ ಕುಮಾರ್ ಸ್ಟಂಪ್ ಗೌತಮ್ ಬಿ ಮನೀಷ್ 26, ಅಚುತ್ ರಾವ್ ಸಿ ಸತೀಶ್ ಬಿ ಮನೀಷ್ 1, ಹರೀಶ್ ಬಿ ಖಾಜಿ 2, ಸುಧಾಕರ್ ಸಿ ರಾಹುಲ್ ಬಿ ವಿನಯ್ 6, ಪ್ರಸಾದ್ ಅಜೇಯ 3. ಇತರೆ: (ಎಲ್‌ಬಿ 4, ವೈಡ್ 15) 19.
ವಿಕೆಟ್ ಪತನ: 1-0, 2-24, 3-36, 4-36, 5-46, 6-67, 7-80, 8-84, 9-88, 10-97
ಬೌಲಿಂಗ್ ವಿವರ: ವಿನಯ್ ಕುಮಾರ್ 6.3-2-9-3, ಅಭಿಮನ್ಯು ಮಿಥುನ್ 7-0-31-2, ರೋನಿತ್ ಮೊರೆ 5-1-12-1, ಅಬ್ರಾರ್ ಖಾಜಿ 7-0-16-1, ಮನೀಷ್ ಪಾಂಡೆ 5-0-25-3
ಕರ್ನಾಟಕ 23.4 ಓವರ್‌ಗಳಲ್ಲಿ 4 ವಿಕೆಟ್‌ಗೆ 103
ರಾಬಿನ್ ಉತ್ತಪ್ಪ ಸಿ ಸುಮನ್ ಬಿ ಸುಧಾಕರ್ 54, ಕೆ.ಎಲ್ ರಾಹುಲ್ ಸಿ ಶಿವಕುಮಾರ್ ಬಿ ಹರೀಶ್ 21, ಗಣೇಶ್ ಸತೀಶ್ ಸಿ ಮತ್ತು ಬಿ ಸುಧಾಕರ್ 10, ಮನೀಷ್ ಪಾಂಡೆ ಸಿ ಜ್ಯೋತಿ ಸಾಯಿ ಬಿ ಹರೀಶ್ 0, ಕರುಣ್ ನಾಯರ್ ಅಜೇಯ 11, ಸಿ.ಎಂ ಗೌತಮ್ ಅಜೇಯ 1, ಇತರೆ (ಎಲ್‌ಬಿ 3, ವೈಡ್ 3) ಒಟ್ಟು 6.
ವಿಕೆಟ್ ಪತನ: 1-81, 2-81, 3-81, 4-95
ಬೌಲಿಂಗ್ ವಿವರ: ಶಿವಕುಮಾರ್ 5-0-19-0, ಅಚುತ್ ರಾವ್ 6-0-25-0, ಹರೀಶ್ 5-0-30-2, ಸುಧಾಕರ್ 6-2-14-2, ಪ್ರಸಾದ್ 1.2-0-7-0,
ಇತರೆ ಪಂದ್ಯಗಳ ಫಲಿತಾಂಶ:
- ಗೋವಾ ವಿರುದ್ಧ ತಮಿಳುನಾಡಿಗೆ 7 ವಿಕೆಟ್ ಜಯ
ಗೋವಾ 36.2 ಓವರ್‌ಗಳಲ್ಲಿ 122 (ಹನುಮಂತ ಗಡೇಕರ್ 26, ರಾಹಿಲ್ ಶಾ 19ಕ್ಕೆ3) ಮತ್ತು ತಮಿಳುನಾಡು 33.2 ಓವರ್‌ಗಳಲ್ಲಿ 3 ವಿಕೆಟ್‌ಗೆ 126 (ಮುರಳಿ ವಿಜಯ್ ಅಜೇಯ 66, ಮಂಗಲ್‌ದಾಸ್ 14ಕ್ಕೆ1)

- ಕೇರಳ ವಿರುದ್ಧ ಹೈದರಾಬಾದ್‌ಗೆ 9 ವಿಕೆಟ್ ಜಯ
ಕೇರಳ 33.5 ಓವರ್‌ಗಳಲ್ಲಿ 107 (ರೋಹನ್ ಪ್ರೇಮ್ 47, ಪ್ರಗ್ಯಾನ್ ಓಜಾ 15ಕ್ಕೆ4) ಮತ್ತು  ಹೈದರಾಬಾದ್ 30 ಓವರ್‌ಗಳಲ್ಲಿ 1 ವಿಕೆಟ್‌ಗೆ 108 (ಟಿ.ಸುಮನ್ ಅಜೇಯ 61, ಮನೋಹರನ್ 24ಕ್ಕೆ1).

ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.