ಕ್ರೀಡೆ

ಪರದಾಡಿದ ಪಾಕ್‌ಗೆ ಉಮರ್ ಉಸಿರು

Published On :

ಫಾತುಲ್ಲಾ: ಇದೇ ಮೊದಲ ಬಾರಿಗೆ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅಫ್ಘಾನಿಸ್ತಾನದ ವಿರುದ್ಧ ತಕ್ಕ ಬ್ಯಾಟಿಂಗ್ ಮಾಡುವಲ್ಲಿ ಪ್ರಯಾಸಪಟ್ಟ ಪಾಕಿಸ್ತಾನ, ಉಮರ್ ಅಕ್ಮಲ್ ಶತಕದ ನೆರವಿನೊಂದಿಗೆ 249 ರನ್‌ಗಳ ಗುರಿ ನೀಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನದ ಪರ ದವ್ಲಾತ್ ಜದ್ರಾನ್, ಮಿರ್ವಾಯಿಸ್ ಅಶ್ರಫ್ ಹಾಗೂ ಸಮಿವುಲ್ಲಾ ಶೆನ್ವಾರಿ ತಲಾ ಎರಡು ವಿಕೆಟ್ ಪಡೆದು, ಪಾಕ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಫಲವಾಗಿ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು.
89 ಎಸೆತಗಳನ್ನು ಎದುರಿಸಿದ ಯುವ ವಿಕೆಟ್ ಕೀಪರ್ ಉಮರ್ ಅಕ್ಮಲ್ (ಅಜೇಯ 102) ಅವರ ಶತಕದಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು. ಇದು ಒಂದು ಹಂತದಲ್ಲಿ 30 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 117 ರನ್ ಗಳಿಸಿ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ನೆರವಾಯಿತು. ಅಕ್ಮಲ್ ಪಾಕ್ ಇನಿಂಗ್ಸ್‌ನ ಅಂತಿಮ ಓವರ್‌ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.ಅರ್ಧ ಶತಕ ಪೂರೈಸಿದ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ (50) ಪಾಕಿಸ್ತಾನದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮತ್ತೊಬ್ಬ ಬ್ಯಾಟ್ಸ್‌ಮನ್ ಎನಿಸಿದರು.
ಅವರ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು.ಇನ್ನೊಬ್ಬ ಆರಂಭಿಕ ಆಟಗಾರ ಶರ್ಜಿಲ್ ಖಾನ್ (25) 13ನೇ ಓವರ್‌ನಲ್ಲಿ ಹಮ್ಜಾ ಹೋಟಕ್ ಎಸೆತದಲ್ಲಿ ನೂರ್ ಅಲಿ ಜದ್ರಾನ್ ಅವರಿಗೆ ವಿಕೆಟ್ ಒಪ್ಪಿಸಿದ ನಂತರ ಬಂದ, ಮೊಹ್ಮದ್ ಹಫೀಜ್ (10) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಹಫೀಜ್‌ಗೆ ವಿಕೆಟ್ ಒಪ್ಪಿಸಿದ ನಂತರ ಬಂದ ಸೋಹೈಬ್ ಮಖ್ಸೂದ್ (13) ಅವರೊಂದಿಗೆ ಹೊಂದಿಕೊಂಡು ಆಡುವಷ್ಟರಲ್ಲೇ ಶಹಜಾದ್ ವಿಕೆಟ್ ಒಪ್ಪಿಸಿದರು. ಆಗ ನಾಯಕ ಮಿಸ್ಬಾ ಉಲ್ ಹಕ್ (0) ಹಾಗೂ ಆಲ್ರೌಂಡ್ ಆಟಗಾರ ಶಾಹಿದ್ ಅಫ್ರಿದಿ (6) ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಆಫ್ಘಾನ್ ಬೌಲರ್‌ಗಳು ಯಶಸ್ವಿಯಾದರು.
ಕಾರಣ, ಈ ಹಂತದಲ್ಲಿ ಕೇವಲ 28 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದು ಪಾಕಿಸ್ತಾನಕ್ಕೆ ದೊಡ್ಡ ಆಘಾತ ಉಂಟುಮಾಡಿತು.ದುರದೃಷ್ಟವಶಾತ್ ಮಿಸ್ಬಾ ಉಲ್ ಹಕ್ ಅವರು ಯಾವುದೇ ಎಸೆತಗಳನ್ನು ಎದುರಿಸದೇ ರನೌಟ್ ಆದರು.
ಅಫ್ರಿದಿ ಅವರು ವೇಗಿ ದಾವ್ಲಾತ್ ಜದ್ರಾನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಇದು ಪಾಕ್ ಪಾಳೆಯದಲ್ಲಿ ಆತಂಕ ಉಂಟುಮಾಡುವುದರೊಂದಿಗೆ, ಆಫ್ಘಾನಿಸ್ತಾನ ತಂಡದಲ್ಲಿ ಸಂಭ್ರಮ ಉಂಟುಮಾಡಿತ್ತು.ಆದರೆ, ನಂತರ ಬಂದ ಅಕ್ಮಲ್ ಬ್ಯಾಟ್‌ನೊಂದಿಗೆ ಅಬ್ಬರಿಸುವುದರೊಂದಿಗೆ ಪಾಕ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 8 ವಿಕೆಟ್‌ಗೆ 248
ಉಮರ್ ಅಕ್ಮಲ್ ಅ. 102, ಅಹ್ಮದ್ ಶಹಜಾದ್ 50, ಶೆನ್ವಾರಿ 2/34, ದಾವ್ಲಾತ್ ಜದ್ರಾನ್ 2/73

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.