ಕ್ರೀಡೆ

ಸಿಂಹಳೀಯರ ಜಯದಲ್ಲಿ ಕುಮಾರಾವತಾರ ಲಂಕಾ ಸ್ಪಿನ್ ದಾಳಿಗೆ ಭಯಗೊಂಡ ಭಾರತ

Published On :

ಫಾತುಲ್ಹಾ: ಒಂದೆಡೆ ವಿಕೆಟ್ ಉರುಳುತ್ತ ತಂಡ ಸೋಲುವ ಆತಂಕದಲ್ಲಿದ್ದರೂ ಸಹ ಎದೆಗುಂದದೆ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಕುಮಾರ ಸಂಗಕ್ಕಾರ ಶತಕದ ನೆರವಿನಿಂದ ಶ್ರೀಲಂಕಾ ತಂಡ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧವೂ 2 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 265 ರನ್‌ಗಳು ಗುರಿ ಪಡೆದಿದ್ದ ಶ್ರೀಲಂಕಾ ಇನ್ನೂ 4 ಎಸೆತಗಳು ಉಳಿದಿರುವಂತೆ 8 ವಿಕೆಟ್ ನಷ್ಟಕ್ಕೆ 265 ರನ್‌ಗಳಿಸಿ ಸಂಭ್ರಮಿಸಿತು.
ಕುಮಾರ ಸಂಗಕ್ಕಾರ ಕೇವಲ 84 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಹೊಂದಿದ್ದ 103 ರನ್‌ಗಳಿಸಿ ಲಂಕಾ ತಂಡಕ್ಕೆ ಗೆಲವು ತಂದುಕೊಟ್ಟರು. ಇದರೊಂದಿಗೆ ಶ್ರೀಲಂಕಾ ಸತತ ಎರಡನೇ ಪಂದ್ಯದಲ್ಲೂ ಗೆಲವಿನ ನಗೆ ಬೀರುವ ಮೂಲಕ ಅಗ್ರಸ್ಥಾನದಲ್ಲಿ ಮುನ್ನಡೆಯಿತು. ಭಾರತದ ಪರ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಉತ್ತಮ ದಾಳಿ ನಡೆಸಿದರು. ಈ ಮಧ್ಯೆ  ಜಯವರ್ದನೆ ಮತ್ತು ಚಂಡಿಮಲ್‌ರನ್ನು ಕ್ರಮವಾಗಿ ಔಟ್ ಮಾಡಿದ್ದ ಜಡೇಜಾ ಹ್ಯಾಟ್ರಿಕ್ ಅವಕಾಶ ಹೊಂದಿದ್ದರು. ಆದರೆ, ಮ್ಯಾಥ್ಯೂಸ್ ಅದಕ್ಕೆ ಅವಕಾಶ ನೀಡಲಿಲ್ಲ.
ಭಾರತಕ್ಕೆ ಧವನ್ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್‌ಗಳಿಸಿತು. ನಿಧಾನಗತಿಯ ಪಿಚ್ ಮೇಲೆ ತೀರ ಕೆಳಹಂತದಲ್ಲಿ ತೇಲಿ ಬರುತ್ತಿದ್ದ ಚೆಂಡನ್ನು ದಿಟ್ಟತನದಿಂದ ಎದುರಿಸಲು ಸಾಧ್ಯವಾಗದೇ ನಿಧಾನಗತಿಯ ಆರಂಭ ಪಡೆದಿದ್ದರಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಮತ್ತೊಂದೆಡೆ ಟಾಸ್ ಗೆದ್ದ ಅದೃಷ್ಟದ ಜೊತೆಗೆ ಮೂವರು ಸ್ಪಿನ್ನರುಗಳ ನೆರವಿನಿಂದ ಭಾರತೀಯರನ್ನು ಕಟ್ಟಿಹಾಕುವಲ್ಲಿ ಶ್ರೀಲಂಕಾ ಪಡೆ ಯಶಸ್ವಿಯಾಯಿತು.
ಮತ್ತೊಮ್ಮೆ ಶತಕದ ಹಾದಿಯಲ್ಲಿ ಎಡವಿದ ಆರಂಭಿಕ ಶಿಖರ್ ಧವನ್ (94ರನ್, 114ಎಸೆತ, 7 ಬೌಂಡರಿ, 1 ಸಿಕ್ಸರ್) ) ಹಾಗೂ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ವಿರಾಟ್ ಕೊಹ್ಲಿ (48ರನ್, 51 ಎಸೆತ, 4 ಬೌಂಡರಿ, 1 ಸಿಕ್ಸರ್) ಅಂತಿಮವಾಗಿ ತಂಡ ಗೌರವ ಮೊತ್ತ ಸಂಪಾದಿಸಲು ಕಾರಣರಾದರು.
ಧವನ್ ಮತ್ತು ಕೊಹ್ಲಿ ಜೋಡಿ ಎರಡನೇ ವಿಕೆಟ್‌ಗೆ 97 ರನ್ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಮಧ್ಯಮ ಕ್ರಮಾಂಕದ ಯುವಪಡೆಗೆ ಗರ್ಜಿಸಲಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್‌ರಂತಹ ಹಿರಿಯರ ಅನುಪಸ್ಥಿತಿಯಿಂದಾಗಿ ಮಧ್ಯಮ ಕ್ರಮಾಂಕದ ಯುವ ಆಟಗಾರರು ಮೊದಲ ಬಾರಿಗೆ ಕಠಿಣ ಪರೀಕ್ಷೆಗೆ ಒಳಗಾಗಿದಂತಾಗಿತ್ತು. ಆದರೆ ಯಾರೊಬ್ಬರೂ ಸ್ಫೋಟಿಸಲಿಲ್ಲ.
ಸ್ಟುವರ್ಟ್ ಬಿನ್ನಿ ಶೂನ್ಯ
ನ್ಯೂಜಿಲೆಂಡ್ ಪ್ರವಾಸದಲ್ಲಿ ಒಂದೇ ಪಂದ್ಯ ಆಡಿದ್ದ ಕರ್ನಾಟಕದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿಗೆ ಅಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಪದಾರ್ಪಣೆ ಮಾಡಿದ ಆ ಪಂದ್ಯದಲ್ಲಿ ಅವರು ಕೇವಲ 1 ಓವರ್ ಬೌಲ್ ಮಾಡಿದ್ದರು.
ಈ ಪಂದ್ಯದಲ್ಲಿ ಬಿನ್ನಿಗೆ ಬ್ಯಾಟಿಂಗ್ ಅವಕಾಶ ದೊರೆಯಿತು. ರಾಯುಡು 42.3 ಓವರಿನಲ್ಲಿ 6ನೇ ವಿಕೆಟ್ ಆಗಿ ನಿರ್ಗಮಿಸಿದ ನಂತರ ಅಂತಾರಾಷ್ಟೀಯ ಪಂದ್ಯದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಆಗಮಿಸಿದ ಕರ್ನಾಟಕದ ಆಟಗಾರ 4 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯದೇ ನಿರ್ಗಮಿಸಿದ್ದು ಭಾರಿ ನಿರಾಸೆ ಉಂಟುಮಾಡಿತು. ಸೇನಾನಾಯಕೆ ಎಸೆದ ಚೆಂಡಿನ ದಿಕ್ಕು ಗುರುತಿಸುವಲ್ಲಿ ವಿಫಲರಾದ ಬಿನ್ನಿ ಎಲ್‌ಬಿ ಬಲೆಗೆ ಬಿದ್ದರು.
ಮೆಂಡಿಸ್, ಸಚಿತ್ರ ಮಿಂಚಿನ ದಾಳಿ
ಶ್ರೀಲಂಕಾ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಸ್ಪಿನ್ನರ್‌ಗಳಾದ ಅಜಂತ ಮೆಂಡಿಸ್ 4 ಮತ್ತು ಸಚಿತ್ರ ಸೇನಾನಾಯಕೆ 3 ವಿಕೆಟ್ ಉರುಳಿಸಿದರು. ಲಂಕಾದ ಬೌಲರ್‌ಗಳು ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡಿದರು. ಪರಿಣಾಮವಾಗಿ ಮೊದಲ 3 ಓವರುಗಳಲ್ಲಿ ಭಾರತದ ಜೋಡಿಗೆ 3 ರನ್‌ಗಳಿಸಲಷ್ಟೇ ಸಾಧ್ಯವಾಗಿತ್ತು.

ಸ್ಕೋರ್ ವಿವರ
ಭಾರತ 50 ಓವರುಗಳಲ್ಲಿ 9 ವಿಕೆಟ್‌ಗೆ 264
ರೋಹಿತ್ ಶರ್ಮಾ ಎಲ್‌ಬಿ ಬಿ ಸೇನಾನಾಯಕೆ 13, ಶಿಖರ್ ಧವನ್ ಬಿ ಮೆಂಡಿಸ್ 94, ವಿರಾಟ್ ಕೊಹ್ಲಿ ಬಿ ಮೆಂಡಿಸ್ 48, ಅಜಿಂಕ್ಯ ರಹಾನೆ ಸಿ ತಿರಿಮಾನೆ ಬಿ ಸೇನಾನಾಯಕೆ 22, ಅಂಬಟಿ ರಾಯುಡು ಸಿ ಕುಶಾಲ್ ಪೆರೇರಾ ಬಿ ಡಿಸಿಲ್ವಾ 18, ದಿನೇಶ್ ಕಾರ್ತಿಕ್ ಸಿ ಡಿಸಿಲ್ವಾ ಬಿ ಮೆಂಡಿಸ್ 4, ರವೀಂದ್ರ ಜಡೇಜಾ ಅಜೇಯ 22, ಸ್ಟುವರ್ಟ್ ಬಿನ್ನಿ ಎಲ್‌ಬಿ ಬಿ ಸೇನಾನಾಯಕೆ 0, ರವಿಚಂದ್ರನ್ ಅಶ್ವಿನ್ ಬಿ ಮಾಲಿಂಗ 18, ಭುವನೇಶ್ವರಕುಮಾರ್ ಸ್ಟಂಪ್ ಸಂಗಕ್ಕಾರ ಬಿ ಮೆಂಡಿಸ್ 0, ಶಮಿ ಅಜೇಯ 14.
ಇತರೆ: (ಬೈ-4, ಲೆಗ್‌ಬೈ-1, ವೈ-6) 11
ವಿಕೆಟ್ ಪತನ: 1-33, 2-130, 3-175, 4-196, 5-200, 6-214, 7-215, 8-245, 9-247, 10-264.
ಬೌಲಿಂಗ್ ವಿವರ: ಲಸಿತ್ ಮಾಲಿಂಗ 10-0-58-1, ಆ್ಯಂಜೆಲೊ ಮ್ಯಾಥ್ಯೂಸ್ 3.2-1-9-0, ಸಚಿತ್ರ ಸೇನಾನಾಯಕೆ 10-0-41-3, ತಿಸಾರ ಪೆರೇರಾ 6.4-0-40-0, ಅಜಂತ ಮೆಂಡಿಸ್ 10-0-60-4, ಚತುರಂಗ ಡಿಸಿಲ್ವಾ 10-0-51-1
ಶ್ರೀಲಂಕಾ 49.2 ಓವರುಗಳಲ್ಲಿ 8 ವಿಕೆಟ್‌ಗೆ 265
ಕುಶಾಲ್ ಪೆರೇರಾ ಸಿ ಕಾರ್ತಿಕ್ ಬಿ ಅಶ್ವಿನ್ 64, ಲಹಿರು ತಿರಿಮಾನೆ ಎಲ್‌ಬಿ ಬಿ ಅಶ್ವಿನ್ 38, ಕುಮಾರ ಸಂಗಕ್ಕಾರ ಸಿ ಅಶ್ವಿನ್ ಬಿ ಶಮಿ 103, ಮಹೇಲ ಜಯವರ್ದನೆ ಸಿ ಶರ್ಮಾ ಬಿ ಜಡೇಜಾ 9, ದಿನೇಶ್ ಚಂಡಿಮಲ್ ಬಿ ಜಡೇಜಾ 0, ಆ್ಯಂಜೆಲೊ ಮ್ಯಾಥ್ಯೂಸ್ ಎಲ್‌ಬಿ ಬಿ ಶಮಿ 6, ಸಚಿತ್ರ ಸೇನಾನಾಯಕೆ ಸಿ ಶರ್ಮಾ ಬಿ ಶಮಿ 12, ಚತುರಂಗ ಡಿಸಿಲ್ವಾ ಎಲ್‌ಬಿ ಬಿ ಜಡೇಜಾ 9, ತಿಸಾರ ಪೆರೇರಾ ಅಜೇಯ 11, ಅಜಂತಾ ಮೆಂಡಿಸ್ ಅಜೇಯ 5.
ಇತರೆ: (ಲೆಗ್‌ಬೈ-7, ವೈ-1) 8.
ವಿಕೆಟ್ ಪತನ: 1-80, 2-134, 3-148, 4-148, 5-165, 6-183, 7-216, 8-258
ಬೌಲಿಂಗ್ ವಿವರ: ಭುವನೇಶ್ವರಕುಮಾರ 9.2-1-45-0, ಮೊಹಮ್ಮದ್ ಶಮಿ 10-0-81-3, ಆರ್. ಅಶ್ವಿನ್ 10-0-42-2, ಸ್ಟುವರ್ಟ್ ಬಿನ್ನಿ 4-0-22-0, ಜಡೇಜಾ 10-1-30-3, ರಾಯುಡು 1-0-9-0, ರೋಹಿತ್ ಶರ್ಮಾ 5-0-29-0.
ಇಂದಿನ ಪಂದ್ಯ
ಬಾಂಗ್ಲಾದೇಶ- ಆಫ್ಘಾನಿಸ್ತಾನ್
ಸಮಯ ಮಧ್ಯಾಹ್ನ 1.30

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.