ಕ್ರೀಡೆ

ರಾಜ್ಯ ಕ್ರಿಕೆಟ್ ತಂಡಕ್ಕೆ ಸುರೇಶ ಕರಣಿ

Published On :

ದಾವಣಗೆರೆ: ದಾವಣಗೆರೆ ಕ್ರಿಕೆಟ್ ಕ್ಲಬ್‌ನ ನಾಯಕ, ಪ್ರತಿಭಾವಂತ ಆಲ್‌ರೌಂಡರ್ ಸುರೇಶ್ ಎಚ್. ಕರಣಿ ಕೆ.ಎಸ್.ಸಿ.ಎ. ಇಲೆವೆನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ನಗರದ ಎಚ್.ವಿ. ಕರಣಿ ಹಾಗೂ ಪ್ರೇಮಾ ಕರಣಿ ದಂಪತಿಯ ದ್ವಿತೀಯ ಪುತ್ರನಾದ ಸುರೇಶ ಕರಣಿ ಇಲ್ಲಿನ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿಯಾಗಿದ್ದಾರೆ. 13 ವರ್ಷದ ಒಳಗಿನವರ ರಾಜ್ಯ ತಂಡ ಪ್ರತಿನಿಧಿಸಿದ್ದ ಸುರೇಶ 17 ವರ್ಷದೊಳಗಿನವರ ತಂಡ ಹಾಗೂ 19 ವರ್ಷದೊಳಗಿನ ತುಮಕೂರು ವಲಯ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದ ಉದಯೋನ್ಮುಖ ಕ್ರಿಕೆಟ್ ಪಟು.
ಎಡಗೈ ಸ್ಪಿನ್ ಬೌಲಿಂಗ್, ಎಡಗೈ ಬ್ಯಾಟ್ಸ್‌ಮನ್ ಆದ ಸುರೇಶ ಕರಣಿ ಅತ್ಯುತ್ತಮ ಫೀಲ್ಡರ್ ಸಹ ಆಗಿದ್ದಾರೆ.  ಅವರು ದಾವಣಗೆರೆ ಕ್ರಿಕೆಟ್ ಕ್ಲಬ್ ಡಿವಿಜನ್ ಪಂದ್ಯಾವಳಿಯಲ್ಲೂ ಅಗ್ರ ಸ್ಥಾನ ಪಡೆಯುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ.
37 ವಿಕೆಟ್: ಕೆ.ಎಸ್.ಸಿ.ಎ. ತುಮಕೂರು ವಲಯ ಲೀಗ್ ಪಂದ್ಯಾವಳಿಯಲ್ಲಿ 37 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಬೆಂಗಳೂರಿನಲ್ಲಿ ನಡೆದ 2ನೇ ಡಿವಿಜನ್ ಪಂದ್ಯದಲ್ಲಿ 33 ವಿಕೆಟ್ ಗಳಿಸುವ ಮೂಲಕ ತನ್ನ ಪ್ರಾಬಲ್ಯ ಮುಂದುವರಿಸಿದ ಸುರೇಶ ಸಾಧನೆ ಕೊನೆಗೂ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಗ್ರಾಮಾಂತರ ವಲಯದ ಪಂದ್ಯಗಳಲ್ಲೂ 17 ವಿಕೆಟ್ ಪಡೆದು ಸಾಧನೆ ಮೆರೆದಿದ್ದಾರೆ.
ಅಂತರ ವಲಯದ ಕ್ರಿಕೆಟ್ ಪಂದ್ಯಾಳಿಯಲ್ಲಿ 14 ವಿಕೆಟ್ ಪಡೆದಿದ್ದ ಸುರೇಶ ಷಫೀದಾರಾಶಾ ಪಂದ್ಯದಲ್ಲಿ ಮತ್ತೆ 7 ವಿಕೆಟ್ ಪಡೆದ ಸುರೇಶನ ಬೌಲಿಂಗ್ ಸಾಮರ್ಥ್ಯ ಅವರನ್ನು ಇದೀಗ ರಾಜ್ಯ ತಂಡ ಪ್ರತಿನಿಧಿಸುವಂತೆ ಮಾಡಿದೆ. ಇದೀಗ ಕ್ಯಾಪ್ಟನ್ ಜನರಲ್ ತಿಮ್ಮಪ್ಪಯ್ಯ ಸ್ಮರಣಾರ್ಥ ಅಖಿಲ ಭಾರತ ವಜ್ರ ಮಹೋತ್ಸವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಕ್ಕೆ ಸುರೇಶ ಕರಣಿ ಆಯ್ಕೆಯಾಗಿ ತನ್ನ ಕ್ರಿಕೆಟ್ ಜೀವನದ ಮಹತ್ವದ ಮೈಲುಗಲ್ಲಿಗೆ ಅಡಿ ಇಟ್ಟಿದ್ದಾನೆ.
ಚಿನ್ನಸ್ವಾಮಿಯಲ್ಲಿ ಪದಾರ್ಪಣೆ: ವಿನಯ್ ಹಾದಿಯಲ್ಲೇ ಸಾಗಿರುವ ಸುರೇಶ ಕರಣಿ, ಜು. 20ರಿಂದ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.
ಭವಿಷ್ಯ ನುಡಿದಿದ್ದ ಶ್ರೀಪತಿ: ದಾವಣಗೆರೆ ಜಿಲ್ಲಾ ಕ್ರೀಡಾಂಗಣಕ್ಕೆ ಆರಂಭದಲ್ಲಿ ಬಂದಿದ್ದ ಸುರೇಶ ಕರಣಿ ಆಟ, ಆತನ ಬೌಲಿಂಗ್ ಶೈಲಿ, ಬ್ಯಾಟ್ಸಮನ್‌ಗಳನ್ನು ತನ್ನ ಬೌಲಿಂಗ್‌ನಿಂದ ವಂಚಿಸುತ್ತಿದ್ದ ಪರಿ ಕಂಡಿದ್ದ ಹಿರಿಯ ಕ್ರೀಡಾಪಟು ಸಿ.ಜಿ. ಶ್ರೀಪತಿ ಈಗ್ಗೆ ಕೆಲವು ವರ್ಷಗಳ ಹಿಂದೆಯೇ ಸುರೇಶ ಕರಣಿ ರಾಜ್ಯ ತಂಡಕ್ಕೆ ಆಯ್ಕೆಯಾಗುವುದಾಗಿ ಭವಿಷ್ಯ ನುಡಿದಿದ್ದರು. ಅದಾಗಿ ಕೆಲವೇ ವರ್ಷಗಳಲ್ಲಿ ಶ್ರೀಪತಿ ಮಾತಿನಂತೆ ಸುರೇಶ ಕರಣಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ ಎನ್ನುತ್ತಾರೆ ಕ್ರಿಕೆಟ್ ಕ್ಲಬ್‌ನ ಹಿರಿಯ, ಕಿರಿಯ ಕ್ರೀಡಾಪಟುಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.