ಸ್ವರ್ಣ ಡೇ
ಗ್ಲಾಸ್ಗೋ: ಇಪ್ಪತ್ತನೇ ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ದಿನವೇ ಪದಕದ ಬೇಟೆಯಲ್ಲಿ ಕಾವು ಹಚ್ಚಿದ ಭಾರತೀಯ ಕ್ರೀಡಾಪಟುಗಳು ಒಂದರ ಮೇಲೊಂದರಂತೆ ಪದಕಗಳನ್ನು ಖಾತೆಗೆ ಸೇರಿಸಿಕೊಳ್ಳುತ್ತ ಯಶಸ್ವಿ ಪಯಣ ಮುಂದುವರಿಸಿದ್ದಾರೆ.
ನಿರೀಕ್ಷೆಯಂತೆ ನಮ್ಮ ಶಕ್ತಿ ಎನಿಸಿರುವ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೊದಲ ದಿನವೇ ಎರಡು ಚಿನ್ನದ ಪದಕಗಳು ಸಂಪಾದನೆಯಾಗಿವೆ. ಕೆ. ಸಂಜೀತಾ ಚಾನು ತವರಿನ ಮೊದಲ ಬಂಗಾರದ ಪದಕ ಗೆದ್ದುಕೊಟ್ಟರೆ, ಸುಖೇನ್ ಡೇ ಎರಡನೇ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡು ತವರಿನ ಹಿರಿಮೆ ಮೆರೆದಿದ್ದಾರೆ.
25ರ ಸುಖೇನ್ ಡೇ, ಪುರುಷರ 56 ಕೆ.ಜಿ. ತೂಕದ ವಿಭಾಗದಲ್ಲಿ ಒಟ್ಟು 248 ಕೆ.ಜಿ. ಭಾರ ಎತ್ತುವ ಮೂಲಕ (ಸ್ನ್ಯಾಚ್‌ನಲ್ಲಿ 109+ಕ್ಲೀನ್-ಜರ್ಕ್‌ನಲ್ಲಿ 139ಕೆ.ಜಿ.) ಚಿನ್ನದ ಪದಕಕ್ಕೆ ಭಾಜನರಾದರು. 2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 252 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದ್ದ ಸುಖೇನ್ ಇಲ್ಲಿ ಅದಕ್ಕಿಂತ ಕೊಂಚ ಕಡಿಮೆ ಸಾಧನೆ ಮಾಡಿದರೂ ಸಹ ಚಿನ್ನದ ಹಾರ ಸಂಪಾದಿಸಿದರು. ಅಚ್ಚರಿ ಎಂದರೆ ದೆಹಲಿ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀನಿವಾಸ್ ರಾವ್ ಕೂಡ 248 ಕೆ.ಜಿ. ಭಾರ ಎತ್ತಿದ್ದರು. ಇದನ್ನು ನೋಡಿದರೆ, ದೆಹಲಿ ಕೂಟದಲ್ಲಿ ಲಿಫ್ಟಿಂಗ್‌ನಲ್ಲಿನ ಸ್ಪರ್ಧೆ ತೀವ್ರವಾಗಿತ್ತು ಎಂಬುದು ನೆನಪಿಗೆ ಬರುತ್ತದೆ.
ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತವರಿನ ಮತ್ತೊಬ್ಬ ಲಿಫ್ಟರ್ 21ರ ಗಣೇಶ್ ಮಾಲಿ ಕಂಚಿನ ಪದಕಕ್ಕೆ ಸಮಾಧಾನಗೊಂಡರು. ಅವರು ಒಟ್ಟು 244 ಕೆ.ಜಿ. ಭಾರ ಎತ್ತುವುದರೊಂದಿಗೆ (111+133) ಈ ಸಾಧನೆ ಮಾಡಿದರು.
ಸುಖೇನ್ ಡೇಗೆ ಕಠಿಣ ಸ್ಪರ್ಧೆಯೊಡ್ಡಿದ್ದ ಮಲೇಷಿಯಾದ ಮೊಹ್ಮದ್ ಪಿಸೋಲ್ ಝುಲೇಮಿ ಒಟ್ಟು 245 ಕೆ.ಜಿ. ಭಾರ ಎತ್ತುವ ಮೂಲಕ (108+137) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ನಾಲ್ಕು ವರ್ಷಗಳ ಹಿಂದೆ ತವರಿನಲ್ಲಿ ತಾಂತ್ರಿಕ ತಪ್ಪುಗಳಿಂದಾಗಿ ಚಿನ್ನದ ಪದಕ ಕೈಜಾರಿ ಹೋಗಿ ಬೆಳ್ಳಿ ಸಂಪಾದನೆಯಾಗಿತ್ತು. ಇಲ್ಲಿ ಚಿನ್ನದ ಪದಕದ ಸಾಧನೆ ಹೊರಹೊಮ್ಮಿದ್ದು ಸಾಕಷ್ಟು ಖುಷಿ ತಂದಿದೆ. ಈ ಸಾಧನೆಯನ್ನು ನನ್ನ ರಾಷ್ಟ್ರ, ಒಕ್ಕೂಟದ ಅಧಿಕಾರಿಗಳು ಮತ್ತು ಕೋಚ್‌ಗಳಿಗೆ ಅರ್ಪಿಸಲು ಬಯಸುತ್ತೇನೆ.
- ಸುಖೇನ್ ಡೇ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

